1983ರಲ್ಲಿ ಚೊಚ್ಚಲ ವಿಶ್ವಕಪ್ ಗೆದ್ದಾಗ ಭಾರತ ತಂಡದ ಪಾಲಿಗೆ ಲಕ್ಷ್ಮೀಯಾಗಿ ಬಂದಿದ್ದ ಲತಾ ಮಂಗೇಶ್ಕರ್

ಐಸಿಸಿ ಟಿ20 ವಿಶ್ವಕಪ್ ಗೆದ್ದಿರುವ ಟೀಂ ಇಂಡಿಯಾಕ್ಕೆ ಬಿಸಿಸಿಐ ಬರೋಬ್ಬರಿ 125 ಕೋಟಿ ರೂಪಾಯಿ ಬಂಪರ್ ಗಿಫ್ಟ್​ ನೀಡಿದೆ. ಆದ್ರೆ, ಈ ಹಿಂದೆ 1983 ರಲ್ಲಿ ಭಾರತ ಚೊಚ್ಚಲ ವಿಶ್ವಕಪ್ ಗೆದ್ದಾಗ ಯಾವೊಬ್ಬ ಆಟಗಾರರಿಗೆ ಗೆಲುವಿನ ಗಿಫ್ಟ್ ನೀಡಲು ಬಿಸಿಸಿಐ ಬಳಿ ಹಣವೇ ಇರಲಿಲ್ಲ. ಆಗ ಆಟಗಾರರಿಗೆ ಹಣದ ಉಡುಗೊರೆಯಾಗಿ ನೀಡಿದ್ದು ಖ್ಯಾತ ಗಾಯಕಿ ಲತಾ ಮಂಗೇಶ್ಕರ್. ಹೌದು ಅಚ್ಚರಿ ಎನಿಸಿದರು

1983ರಲ್ಲಿ ಚೊಚ್ಚಲ ವಿಶ್ವಕಪ್ ಗೆದ್ದಾಗ ಭಾರತ ತಂಡದ ಪಾಲಿಗೆ ಲಕ್ಷ್ಮೀಯಾಗಿ ಬಂದಿದ್ದ ಲತಾ ಮಂಗೇಶ್ಕರ್
ಟೀಂ ಇಂಡಿಯಾ, ಲತಾ ಮಂಗೇಶ್ಕರ್
Follow us
ರಮೇಶ್ ಬಿ. ಜವಳಗೇರಾ
|

Updated on:Jul 04, 2024 | 5:51 PM

ಐಸಿಸಿ ಟಿ20 ವಿಶ್ವಕಪ್ ಗೆದ್ದು ಬೀಗಿರುವ ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡ ಇಂದು ಭಾರತಕ್ಕೆ ಬಂದಿಳಿದಿದೆ. ಟೀಮ್ ಇಂಡಿಯಾಕ್ಕೆ ದೇಶದಲ್ಲಿ ಅಭೂತಪೂರ್ವ ಸ್ವಾಗತ ಕೋರಲಾಯಿತು. ಬಳಿಕ ಆಟಗಾರರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಆದರು. ಇದೀಗ ನಾರಿಮನ್ ಪಾಯಿಂಟ್‌ನಿಂದ ಮುಂಬೈನ ವಾಂಖೆಡೆ ಕ್ರೀಡಾಂಗಣದವರೆಗೆ ತೆರೆದ ಚಾವಣಿಯ ಬಸ್‌ನಲ್ಲಿ ತಂಡದ ವಿಜಯೋತ್ಸವದ ಮೆರವಣಿಗೆಗೆ ಸಿದ್ಧತೆ ನಡೆಯುತ್ತಿದೆ. ಇದರ ನಡುವೆ ಮೊನ್ನೆಯಷ್ಟೆ ಬಿಸಿಸಿಐ ಪ್ರಶಸ್ತಿ ಗೆದ್ದ ಟೀಮ್ ಇಂಡಿಯಾಗೆ ಬರೋಬ್ಬರಿ 125 ಕೋಟಿ ರೂಪಾಯಿ ಬಹುಮಾನವನ್ನೂ ಘೋಷಿಸಿತು. ಆದರೆ, ಈ ಹಿಂದೆ ಭಾರತ ಚೊಚ್ಚಲ ವಿಶ್ವಕಪ್ ಪ್ರಶಸ್ತಿ ಗೆದ್ದಾಗ ಆಟಗಾರರನ್ನು ಸನ್ಮಾನಿಸಲು ಬಿಸಿಸಿಐ ಹಣವೇ ಇರಲಿಲ್ಲ.

41 ವರ್ಷಗಳ ಹಿಂದೆ 1983 ರಲ್ಲಿ ಭಾರತಕ್ಕೆ ಮೊದಲ ವಿಶ್ವಕಪ್ ದಕ್ಕಿತು. ಕಪಿಲ್ ದೇವ್ ನೇತೃತ್ವದಲ್ಲಿ ಭಾರತ ತಂಡ ಐಸಿಸಿ ಏಕದಿನ ವಿಶ್ವಕಪ್ ಗೆದ್ದು ಚಾಂಪಿಯನ್ ಆಯಿತು. ಆದರೆ, ಆಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಳಿ ತನ್ನ ಆಟಗಾರರನ್ನು ಸನ್ಮಾನಿಸಲು ಅಥವಾ ಅದ್ಧೂರಿ ಸ್ವಾಗತಕ್ಕೆ ಹಣವೇ ಇರಲಿಲ್ಲ. ಇಂಗ್ಲೆಂಡ್​ನಿಂದ ತವರಿಗೆ ಬಂದ ಆಟಗಾರರಿಗೆ ಭವ್ಯ ಸ್ವಾಗತ ಇರಲಿಲ್ಲ, ತೆರೆದ ಬಸ್​ನಲ್ಲಿ ಮೆರವಣಿಗೆ ಇರಲಿಲ್ಲ. ಅಂದು ಬಿಸಿಸಿಐನ ಮುಖ್ಯಸ್ಥರಾಗಿದ್ದ ಎನ್​ಕೆಪಿ ಸಲ್ವ್ ಆಟಗಾರರಿಗೆ ಕೇವಲ ಶುಭಕೋರಿದರಷ್ಟೆ.

ಇದನ್ನೂ ಓದಿ: Namo 1: ವಿಶ್ವಕಪ್ ಗೆದ್ದ ಖುಷಿಯಲ್ಲಿ ಪ್ರಧಾನಿ ಮೋದಿಗೆ ಬಂಪರ್ ಗಿಫ್ಟ್ ನೀಡಿದ ಬಿಸಿಸಿಐ

ಭಾರತೀಯ ಆಟಗಾರರಿಗೆ 1 ಲಕ್ಷ ನೀಡಿದ್ದರು ಲತಾ ಮಂಗೇಶ್ಕರ್:

ಕಪಿಲ್ ದೇವ್ ನೇತೃತ್ವದ ಭಾರತ ತಂಡವು 1983 ರಲ್ಲಿ ಎರಡು ಬಾರಿಯ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ಅನ್ನು 43 ರನ್​ಗಳಿಂದ ಸೋಲಿಸಿತು. ಆದರೆ, ಈ ವಿಜೇತ ತಂಡವನ್ನು ಬರಮಾಡಿಕೊಳ್ಳಲು ಬಿಸಿಸಿಐ ಬಳಿ ಹಣವಿರಲಿಲ್ಲ. ಇದರಿಂದಾಗಿ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ನಿಧಿ ಸಂಗ್ರಹಿಸಲು ಸಂಗೀತ ಕಾರ್ಯಕ್ರಮ ಆಯೋಜಿಸಿದ್ದರು. ಲತಾ ಅವರು ಟೀಮ್ ಇಂಡಿಯಾಕ್ಕಾಗಿ ಸಂಗೀತ ಕಛೇರಿ ಮಾಡಿ ದೇಣಿಗೆ ಸಂಗ್ರಹಿಸಿದ್ದರು. ಈ ಹಣದಿಂದಲೇ ಪ್ರತಿಯೊಬ್ಬ ಆಟಗಾರನಿಗೆ ತಲಾ ಒಂದು ಲಕ್ಷ ರೂಪಾಯಿಗಳನ್ನು ನೀಡಿದ್ದರು.

ಇಂದು ಕ್ರಿಕೆಟ್ ಜಗತ್ತಿನ ಬಿಗ್ ಬಾಸ್ ಬಿಸಿಸಿಐ

ಭಾರತ ಚೊಚ್ಚಲ ವಿಶ್ವಕಪ್ ಗೆದ್ದಾಗ ಹಣವಿಲ್ಲದೆ ಬರಿದಾಗಿದ್ದ ಬಿಸಿಸಿಐ ಖಜಾನೆಯಲ್ಲಿ ಇಂದು ಕೋಟಿ ಕೋಟಿ ಹಣವಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇಡೀ ವಿಶ್ವದಲ್ಲಿ ಎಲ್ಲ ಕ್ರೀಡಾ ಮಂಡಳಿಗಳ ಪೈಕಿ ಅತ್ಯಂತ ಶ್ರೀಮಂತ ಮಂಡಳಿ. ಕ್ರಿಕೆಟ್ ದುನಿಯಾಕ್ಕೆ ಬಿಗ್ ಬಾಸ್ ಎನಿಸಿಕೊಂಡಿರೋ ಐಸಿಸಿಗೂ ಸಹ ಸವಾಲು ಹಾಕುವ ಮಂಡಳಿ ಬಿಸಿಸಿಐ. 2023-2024ರ ಹಣಕಾಸು ವರ್ಷದಲ್ಲಿ, ಬಿಸಿಸಿಐ ₹ 16,875 ಕೋಟಿ (US$2.0 ಶತಕೋಟಿ) ಗಳಿಸಿದೆ. 2022-23 ಹಣಕಾಸು ವರ್ಷದಲ್ಲಿ ₹ 4,000 ಕೋಟಿ (US$480 ಮಿಲಿಯನ್) ತೆರಿಗೆಯನ್ನು ಪಾವತಿಸಿದೆ. ವರ್ಷದಿಂದ ವರ್ಷಕ್ಕೆ ಬಿಸಿಸಿಐಯ ವಾರ್ಷಿಕ ಆದಾಯ ಏರಿಕೆಯಾಗುತ್ತಲೇ ಇದೆ.

70, 80ರ ದಶಕದಲ್ಲಿ ಭಾರತೀಯ ಕ್ರಿಕೆಟ್‌ಗೆ ಇಷ್ಟು ಶಕ್ತಿಯೇ ಇರಲಿಲ್ಲ. 1980 ರ ಸಂದರ್ಭ, ಉನ್ನತ ತಂಡಗಳನ್ನು ಭಾರತಕ್ಕೆ ಕರೆಸಬೇಕು ಎಂದರೆ ದೊಡ್ಡ ಮೊತ್ತದ ಹಣವನ್ನು ಪಾವತಿಸಬೇಕಾಗಿತ್ತು. ಆದರೆ, 1997 ರಲ್ಲಿ ಜಗಮೋಹನ್ ದಾಲ್ಮಿಯಾ ನೇತೃತ್ವದಲ್ಲಿ ಭಾರತೀಯ ಕ್ರಿಕೆಟ್ ರಂಗದಲ್ಲಿ ಬದಲಾವಣೆ ಪ್ರಾರಂಭವಾಯಿತು. ಕ್ರಮೇಣ ಬಿಸಿಸಿಐ ಐಸಿಸಿಯ ಆರ್ಥಿಕ ಮೂಲಗಳ ಮೇಲೆ ಪ್ರಭಾವ ಬೀರುವ ಮಟ್ಟಕ್ಕೆ ಬೆಳೆಯಿತು. ಇಂದು ಇತರೆ ಯಾವುದೇ ದೇಶಗಳಲ್ಲಿ ಇಲ್ಲದಷ್ಟು ಕ್ರಿಕೆಟ್ ಅಭಿಮಾನಿಗಳು ಭಾರತದಲ್ಲಿದ್ದಾರೆ. ದೇಶದಲ್ಲಿ ಬಹುಪಾಲು ಜನರು ಕ್ರಿಕೆಟ್ ನೋಡುತ್ತಾರೆ. ಮೊಬೈಲ್ ಮತ್ತು ಟೀವಿಗಳಲ್ಲಿ ಪಂದ್ಯಗಳ ವೀಕ್ಷಕರ ಸಂಖ್ಯೆ ದೊಡ್ಡದಾಗಿದೆ. ಈ ಜನಪ್ರಿಯತೆಯೇ ಬಿಸಿಸಿಐ ಪ್ರಮುಖ ಮಾರುಕಟ್ಟೆಯನ್ನಾಗಿ ಮಾಡಿದೆ ಎನ್ನಬಹುದು.

ವರದಿ: ವಿನಯ್ ಭಟ್​

ಮತ್ತಷ್ಟು ಕ್ರಿಕೆಟ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:46 pm, Thu, 4 July 24