
ಚೊಚ್ಚಲ ಐಸಿಸಿ ಮಹಿಳಾ ಚಾಂಪಿಯನ್ಸ್ ಟ್ರೋಫಿ 2027ರ ಟೂರ್ನಿಗೆ ಐಸಿಸಿ ಗ್ರೀನ್ ಸಿಗ್ನಲ್ ನೀಡಿದೆ. ಇದೇ ಮೊದಲ ಬಾರಿಗೆ ನಡೆಯಲಿರುವ ಈ ಟೂರ್ನಿಗೆ ಭಾರತ ಆತಿಥ್ಯವಹಿಸುತ್ತಿರುವುದು ವಿಶೇಷ. ಈ ಮೊದಲು ಐತಿಹಾಸಿಕ ಟೂರ್ನಿಯನ್ನು ಶ್ರೀಲಂಕಾದಲ್ಲಿ ನಡೆಸಲು ಉದ್ದೇಶಿಸಲಾಗಿತ್ತಾದರೂ, ಅಲ್ಲಿನ ಕ್ರಿಕೆಟ್ ಮಂಡಳಿಯ ಆಡಳಿತಾತ್ಮಕ ಸುಧಾರಣೆಗಳ ವಿಳಂಬದಿಂದಾಗಿ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಆತಿಥ್ಯದ ಹಕ್ಕನ್ನು ಭಾರತಕ್ಕೆ ಹಸ್ತಾಂತರಿಸಿದೆ.
ಶ್ರೀಲಂಕಾ ಕ್ರಿಕೆಟ್ ಮಂಡಳಿಯಲ್ಲಿನ ಆಡಳಿತಾತ್ಮಕ ಸಮಸ್ಯೆಗಳು ಹಾಗೂ ಸರ್ಕಾರದ ಹಸ್ತಕ್ಷೇಪದ ಹಿನ್ನೆಲೆಯಲ್ಲಿ ಐಸಿಸಿ ಈ ಮಹತ್ವದ ತೀರ್ಮಾನ ಕೈಗೊಂಡಿದೆ. ಆತಿಥ್ಯದ ರೇಸ್‌ನಲ್ಲಿ ಬಾಂಗ್ಲಾದೇಶ್ ಮತ್ತು ಸೌತ್ ಆಫ್ರಿಕಾ ಪೈಪೋಟಿಯಲ್ಲಿದ್ದರೂ, ಅಂತಿಮವಾಗಿ ಬಿಸಿಸಿಐ ಬಿಡ್ ಅನ್ನು ಐಸಿಸಿ ಮಂಡಳಿ ಅಂಗೀಕರಿಸಿದೆ. ಈ ಕುರಿತು ಮಾತನಾಡಿದ ಐಸಿಸಿ ಅಧ್ಯಕ್ಷ ಜಯ್ ಶಾ, “ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಇದು ಹೊಸ ಅಧ್ಯಾಯವಾಗಿದ್ದು, ಜಗತ್ತಿನ ಅತ್ಯುತ್ತಮ ತಂಡಗಳು ಇಲ್ಲಿ ಕಾದಾಡಲಿವೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಐಸಿಸಿ ಮಹಿಳಾ ಚಾಂಪಿಯನ್ಸ್ ಟ್ರೋಫಿಯು ಮುಂದಿನ ವರ್ಷ ಫೆಬ್ರವರಿ 14 ರಿಂದ ಶುರುವಾಗಲಿದೆ. ಇನ್ನು ಫೈನಲ್ ಪಂದ್ಯವು ಫೆಬ್ರವರಿ 28 ರಂದು ಆಯೋಜಿಸಲು ನಿರ್ಧರಿಸಲಾಗಿದೆ. ಅಂದರೆ ಐಪಿಎಲ್ ಆರಂಭಕ್ಕೂ ಮುನ್ನ ಟೂರ್ನಿಯನ್ನು ಅಂತ್ಯಗೊಳಿಸಲು ಬಿಸಿಸಿಐ ಪ್ಲಾನ್ ರೂಪಿಸಿದೆ.
ಚೊಚ್ಚಲ ಐಸಿಸಿ ಮಹಿಳಾ ಚಾಂಪಿಯನ್ಸ್ ಟೂರ್ನಿಯು ಸಂಪೂರ್ಣವಾಗಿ ಟಿ20 ಮಾದರಿಯಲ್ಲಿ ನಡೆಯಲಿದ್ದು, ಅಲ್ಲದೆ ಒಟ್ಟು 16 ಪಂದ್ಯಗಳು ಜರುಗಲಿವೆ.
ಮುಂಬೈನ ಬ್ರಬೋರ್ನ್ ಸ್ಟೇಡಿಯಂ ಮತ್ತು ಗುಜರಾತ್‌ನ ವಡೋದರಾ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯಗಳು ಆಯೋಜನೆಗೊಳ್ಳಲಿವೆ.
ಐಸಿಸಿ ಟಿ20ಐ ರ‍್ಯಾಂಕಿಂಗ್ ಕಟ್-ಆಫ್ ದಿನಾಂಕದ ಆಧಾರದ ಮೇಲೆ ವಿಶ್ವದ ಅಗ್ರಮಾನ್ಯ ಆರು ತಂಡಗಳು ಈ ಟೂರ್ನಿಗೆ ಲಗ್ಗೆ ಇಟ್ಟಿವೆ. ಆ ತಂಡಗಳೆಂದರೆ…
ಇದನ್ನೂ ಓದಿ: 4 ರಿಂದ 6 ಪಂದ್ಯ… ಏಕದಿನ ವಿಶ್ವಕಪ್ಗಾಗಿ ಬಿಸಿಸಿಐ ರಣತಂತ್ರ!
ಇತ್ತೀಚೆಗಷ್ಟೇ ತವರಿನಲ್ಲಿ ಏಕದಿನ ವಿಶ್ವಕಪ್ ಗೆದ್ದು ಬೀಗಿರುವ ಭಾರತೀಯ ಮಹಿಳಾ ತಂಡಕ್ಕೆ ಇದೀಗ ತವರಿನ ಪ್ರೇಕ್ಷಕರ ಸಮ್ಮುಖದಲ್ಲೇ ಮತ್ತೊಂದು ಚೊಚ್ಚಲ ಐಸಿಸಿ ಟ್ರೋಫಿ ಎತ್ತಿ ಹಿಡಿಯುವ ಸುವರ್ಣ ಅವಕಾಶ ಒದಗಿ ಬಂದಿದೆ. ಈ ಅವಕಾಶವನ್ನು ಬಳಸಿಕೊಂಡು ಟೀಮ್ ಇಂಡಿಯಾ ಚೊಚ್ಚಲ ಮಹಿಳಾ ಚಾಂಪಿಯನ್ಸ್ ಟ್ರೋಫಿಯ ಚಾಂಪಿಯನ್ ಆಗಲಿದೆಯಾ ಕಾದು ನೋಡಬೇಕಿದೆ.
Published On - 8:07 am, Thu, 3 September 26