
ಐಸಿಸಿ ಮಹಿಳಾ ವಿಶ್ವಕಪ್ 2025 (ICC Women’s World Cup 2025) ರ ಲೀಗ್ ಸುತ್ತಿನಲ್ಲಿ ಟೀಂ ಇಂಡಿಯಾ, ಪಾಕಿಸ್ತಾನದ (India vs Pakistan) ವಿರುದ್ಧ ತನ್ನ ಎರಡನೇ ಪಂದ್ಯವನ್ನು ಆಡುತ್ತಿದೆ. ಉಭಯ ತಂಡಗಳ ನಡುವಿನ ಈ ಪಂದ್ಯವು ಕೊಲಂಬೊದ ಆರ್. ಪ್ರೇಮದಾಸ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಭಾರತೀಯ ಮಹಿಳಾ ತಂಡವು ಟೂರ್ನಿಯಲ್ಲಿ ಸತತ ಎರಡನೇ ಗೆಲುವನ್ನು ಎದುರು ನೋಡುತ್ತಿದ್ದರೆ, ಪಾಕಿಸ್ತಾನ ತಂಡವು ತನ್ನ ಮೊದಲ ಗೆಲುವಿಗಾಗಿ ಹೋರಾಡಲಿದೆ. ಭಾರತ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿದರೆ, ಇತ್ತ ಪಾಕಿಸ್ತಾನ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಹೀನಾಯವಾಗಿ ಸೋತಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ.
ಇನ್ನು ಈ ಪಂದ್ಯದಲ್ಲಿ ಪಾಕಿಸ್ತಾನ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಪಂದ್ಯಕ್ಕೆ ಭಾರತ ತನ್ನ ಆಡುವ ಹನ್ನೊಂದರ ಬಳಗದಲ್ಲಿ ಒಂದು ಬದಲಾವಣೆ ಮಾಡಿದೆ. ಬದಲಾವಣೆಯ ಬಗ್ಗೆ ಮಾತನಾಡಿದ ನಾಯಕಿ ಹರ್ಮನ್‌ಪ್ರೀತ್ ಕೌರ್, ಅಮನ್‌ಜೋತ್ ಕೌರ್ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದಿನ ಪಂದ್ಯದಲ್ಲಿ ಆಡುತ್ತಿಲ್ಲ. ಹೀಗಾಗಿ ಅವರ ಸ್ಥಾನದಲ್ಲಿ ರೇಣುಕಾ ಸಿಂಗ್ ಆಡಲಿದ್ದಾರೆ ಎಂದರು.
ಮಹಿಳಾ ಕ್ರಿಕೆಟ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಇಲ್ಲಿಯವರೆಗೆ ಒಟ್ಟು 11 ಏಕದಿನ ಪಂದ್ಯಗಳು ನಡೆದಿವೆ. ಭಾರತೀಯ ಮಹಿಳಾ ತಂಡವು ಆಡಿರುವ ಎಲ್ಲಾ ಪಂದ್ಯಗಳನ್ನೂ ಗೆದ್ದಿದೆ. ಎರಡೂ ತಂಡಗಳು ಏಕದಿನ ವಿಶ್ವಕಪ್‌ನಲ್ಲಿ ನಾಲ್ಕು ಬಾರಿ ಮುಖಾಮುಖಿಯಾಗಿದ್ದು, ಇಲ್ಲಿಯೂ ಕೂಡ ಭಾರತ ಎಲ್ಲಾ ಪಂದ್ಯಗಳನ್ನು ಗೆದ್ದಿದೆ. ಕಳೆದ ಬಾರಿ ಅಂದರೆ 2022 ರ ವಿಶ್ವಕಪ್‌ನಲ್ಲಿ ಭಾರತ ತಂಡವು, ಪಾಕಿಸ್ತಾನವನ್ನು 107 ರನ್‌ಗಳಿಂದ ಸೋಲಿಸಿತು. ಇದರರ್ಥ, ಪುರುಷರ ಕ್ರಿಕೆಟ್‌ನಂತೆ, ಮಹಿಳಾ ಕ್ರಿಕೆಟ್‌ನಲ್ಲಿ ಭಾರತ ತಂಡವು ಯಾವಾಗಲೂ ಪಾಕಿಸ್ತಾನದ ಮೇಲೆ ಮೇಲುಗೈ ಸಾಧಿಸಿದೆ.
ಆಜಾದ್ ಕಾಶ್ಮೀರ್: ವಿಶ್ವಕಪ್‌ನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಪಾಕ್ ಮಾಜಿ ನಾಯಕಿ; ವಿಡಿಯೋ
ಭಾರತ ತಂಡ: ಪ್ರತೀಕಾ ರಾವಲ್, ಸ್ಮೃತಿ ಮಂಧಾನ, ಹರ್ಲೀನ್ ಡಿಯೋಲ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಸ್ನೇಹ ರಾಣಾ, ರೇಣುಕಾ ಸಿಂಗ್ ಠಾಕೂರ್, ಕ್ರಾಂತಿ ಗೌಡ್, ಶ್ರೀ ಚರಣಿ.
ಪಾಕಿಸ್ತಾನ: ಮುನೀಬಾ ಅಲಿ, ಸದಾಫ್ ಶಮ್ಸ್, ಸಿದ್ರಾ ಅಮೀನ್, ರಮೀನ್ ಶಮೀಮ್, ಅಲಿಯಾ ರಿಯಾಜ್, ಸಿದ್ರಾ ನವಾಜ್ (ವಿಕೆಟ್ ಕೀಪರ್), ಫಾತಿಮಾ ಸನಾ (ನಾಯಕಿ), ನತಾಲಿಯಾ ಪರ್ವೇಜ್, ಡಯಾನಾ ಬೇಗ್, ನಶ್ರಾ ಸಂಧು, ಸಾದಿಯಾ ಇಕ್ಬಾಲ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:02 pm, Sun, 5 October 25