AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ILT20: ರಣರೋಚಕ ಹೋರಾಟದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ದುಬೈ ಕ್ಯಾಪಿಟಲ್ಸ್

ILT20 Final: ಟಿ20 ಲೀಗ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಟ್ರೋಫಿ ಖಾತೆ ತೆರೆದಿದೆ. ಈ ಹಿಂದೆ ಐಪಿಎಲ್​ನಲ್ಲಿ ಹಾಗೂ ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಫೈನಲ್​ಗೆ ಪ್ರವೇಶಿಸಿದರೂ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಇದೀಗ ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿ ಒಡೆತನ ದುಬೈ ಕ್ಯಾಪಿಟಲ್ಸ್ ಇಂಟರ್​ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ.

ILT20: ರಣರೋಚಕ ಹೋರಾಟದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ದುಬೈ ಕ್ಯಾಪಿಟಲ್ಸ್
Dubai Capitals
ಝಾಹಿರ್ ಯೂಸುಫ್
|

Updated on: Feb 10, 2025 | 7:08 AM

Share

ಇಂಟರ್​ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ದುಬೈ ಕ್ಯಾಪಿಟಲ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಡೆಸರ್ಟ್ ವೈಪರ್ಸ್ ತಂಡವನ್ನು 4 ವಿಕೆಟ್​ಗಳಿಂದ ಮಣಿಸಿ ದುಬೈ ಕ್ಯಾಪಿಟಲ್ಸ್ ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಂಡಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಜಯಿಸಿದ ದುಬೈ ಕ್ಯಾಪಿಟಲ್ಸ್ ತಂಡದ ನಾಯಕ ಸ್ಯಾಮ್ ಬಿಲ್ಲಿಂಗ್ಸ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಡೆಸರ್ಟ್ ವೈಪರ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರರಾದ ಅಲೆಕ್ಸ್ ಹೇಲ್ಸ್ (5) ಹಾಗೂ ರಹಮಾನುಲ್ಲಾ ಗುರ್ಬಾಝ್ (5) ಬೇಗನೆ ವಿಕೆಟ್ ಒಪ್ಪಿಸಿದ್ದರು. ಇನ್ನು ಡಾನ್ ಲಾರೆನ್ಸ್ 10 ರನ್​ಗಳಿಸಿ ಔಟಾದರು.

ಈ ಹಂತದಲ್ಲಿ ಜೊತೆಗೂಡಿದ ಮ್ಯಾಕ್ಸ್​ ಹೋಲ್ಡನ್ ಹಾಗೂ ಸ್ಯಾಮ್ ಕರನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. 51 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್​ 12 ಫೋರ್​ಗಳೊಂದಿಗೆ 76 ರನ್ ಬಾರಿಸಿದರೆ, ಸ್ಯಾಮ್ ಕರನ್ 33 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ ಅಜೇಯ 62 ರನ್ ಚಚ್ಚಿದರು. ಈ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಡೆಸರ್ಟ್ ವೈಪರ್ಸ್ ತಂಡವು 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 189 ರನ್ ಕಲೆಹಾಕಿತು.

190 ರನ್​ಗಳ ಗುರಿ:

20 ಓವರ್​ಗಳಲ್ಲಿ 190 ರನ್​ಗಳ ಗುರಿ ಪಡೆದ ದುಬೈ ಕ್ಯಾಪಿಟಲ್ಸ್ ತಂಡವು ಸ್ಪೋಟಕ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಶಾಯ್ ಹೋಪ್ 39 ಎಸೆತಗಳಲ್ಲಿ ಕಲೆಹಾಕಿದ್ದು ಕೇವಲ 43 ರನ್​ಗಳು ಮಾತ್ರ. ಇನ್ನು ಡೇವಿಡ್ ವಾರ್ನರ್ 4 ರನ್​ಗಳಿಸಿದರೆ, ಗುಲ್ಬದ್ದೀನ್ ನೈಬ್ 5 ರನ್​ ಬಾರಿಸಿ ಔಟಾದರು. ಆ ಬಳಿಕ ಬಂದ ನಾಯಕ ಸ್ಯಾಮ್ ಬಿಲ್ಲಿಂಗ್ಸ್ ಕೇವಲ 6 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ಅಂದರೆ 14 ಓವರ್​ ವೇಳೆಗೆ ದುಬೈ ಕ್ಯಾಪಿಟಲ್ಸ್ ಕಲೆಹಾಕಿದ್ದು ಕೇವಲ 113 ರನ್​ಗಳು ಮಾತ್ರ. ಈ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ರೋವ್​ಮನ್ ಪೊವೆಲ್ ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಅಲ್ಲದೆ 38 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ 63 ರನ್ ಬಾರಿಸಿ ದುಬೈ ಕ್ಯಾಪಿಟಲ್ಸ್ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರು.

ಇದಾಗ್ಯೂ ಕೊನೆಯ 3 ಓವರ್​ಗಳಲ್ಲಿ 37 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಕಣಕ್ಕಿಳಿದ ಸಿಕಂದರ್ ರಾಝ ಸಿಡಿಲಬ್ಬರದ ಪ್ರದರ್ಶಿಸಿದರು. ಅದರಲ್ಲೂ ನಿರ್ಣಾಯಕವಾಗಿದ್ದ ಮೊಹಮ್ಮದ್ ಅಮೀರ್ ಎಸೆದ 19ನೇ ಓವರ್​ನಲ್ಲಿ ರಾಝ ಬರೋಬ್ಬರಿ 15 ರನ್ ಚಚ್ಚಿದರು.

ಅದರಂತೆ ಕೊನೆಯ ಓವರ್​​ನಲ್ಲಿ 9 ರನ್​ಗಳು ಬೇಕಿತ್ತು. ಮೊದಲ ಎಸೆತದಲ್ಲೇ ಸಿಕಂದರ್ ರಾಝ ಭರ್ಜರಿ ಸಿಕ್ಸ್ ಸಿಡಿಸಿದರು. ಇನ್ನು ಎರಡನೇ ಎಸೆತದಲ್ಲಿ ಫೋರ್ ಬಾರಿಸುವ ಮೂಲಕ 19.2 ಓವರ್​ಗಳಲ್ಲಿ ತಂಡಕ್ಕೆ ಜಯ ತಂದುಕೊಟ್ಟರು. ಈ ಮೂಲಕ ರೋಚಕ ಹೋರಾಟದಲ್ಲಿ ದುಬೈ ಕ್ಯಾಪಿಟಲ್ಸ್ ತಂಡವು 4 ವಿಕೆಟ್​ಗಳ ಜಯ ಸಾಧಿಸಿ ಇಂಟರ್​ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಕ್ಯಾಪಿಟಲ್ಸ್ ಪಡೆ ಚಾಂಪಿಯನ್ಸ್:

ಡೆಸರ್ಟ್ ವೈಪರ್ಸ್ ಪ್ಲೇಯಿಂಗ್ 11: ರಹಮಾನುಲ್ಲಾ ಗುರ್ಬಾಝ್ , ಅಲೆಕ್ಸ್ ಹೇಲ್ಸ್ , ಮ್ಯಾಕ್ಸ್ ಹೋಲ್ಡನ್ , ಡೇನಿಯಲ್ ಲಾರೆನ್ಸ್ , ಸ್ಯಾಮ್ ಕರನ್ (ನಾಯಕ) , ಶೆರ್ಫೇನ್ ರುದರ್ಫೋರ್ಡ್ , ಆಝಂ ಖಾನ್ (ವಿಕೆಟ್ ಕೀಪರ್) , ಅಲಿ ನಾಸೀರ್ , ಖುಝೈಮಾ ತನ್ವೀರ್ , ಡೇವಿಡ್ ಪೇನ್ , ನಾಥನ್ ಸೌಟರ್.

ಇದನ್ನೂ ಓದಿ: ಕ್ಯಾಚ್ ಹಿಡಿದು ವಿಶ್ವ ದಾಖಲೆ ಬರೆದ ಸ್ಟೀವ್ ಸ್ಮಿತ್

ದುಬೈ ಕ್ಯಾಪಿಟಲ್ಸ್ ಪ್ಲೇಯಿಂಗ್ 11: ಶಾಯ್ ಹೋಪ್ (ವಿಕೆಟ್ ಕೀಪರ್) , ಗುಲ್ಬದಿನ್ ನೈಬ್ , ಸ್ಯಾಮ್ ಬಿಲ್ಲಿಂಗ್ಸ್ (ನಾಯಕ) , ರೋವ್‌ಮನ್ ಪೊವೆಲ್ , ದಸುನ್ ಶನಕಾ , ಸಿಕಂದರ್ ರಾಝ, ಫರ್ಹಾನ್ ಖಾನ್ , ಹೈದರ್ ಅಲಿ , ಒಬೆಡ್ ಮೆಕಾಯ್ , ಖೈಸ್ ಅಹ್ಮದ್ , ಸ್ಕಾಟ್ ಕುಗ್ಗೆಲಿನ್.