
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅನುಭವಿಸಿದ ಹೀನಾಯ ಸೋಲಿನ ಬೆನ್ನಲ್ಲೇ, ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಇಬ್ಬರು ಸ್ಟಾರ್ ಆಟಗಾರರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಆರಂಭಿಕ ಬ್ಯಾಟರ್ ಇಮಾಮ್-ಉಲ್-ಹಕ್ ಸುಳ್ಳು ಗಾಯದ ನೆಪ ಹೇಳಿ ಪಂದ್ಯದಿಂದ ಹಿಂದೆ ಸರಿದ ಆರೋಪದ ಮೇಲೆ 2 ವರ್ಷಗಳ ನಿಷೇಧ ಎದುರಿಸುತ್ತಿದ್ದರೆ, ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಝ್ವಾನ್ ಅವರ ಅಂತಾರಾಷ್ಟ್ರೀಯ ವೃತ್ತಿಜೀವನವೇ ಅಂತ್ಯಗೊಳ್ಳುವ ಹಂತಕ್ಕೆ ಬಂದು ನಿಂತಿದೆ ಎಂದು ವರದಿಯಾಗಿದೆ.
ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನವೇ ಇಮಾಮ್-ಉಲ್-ಹಕ್ ತಮಗೆ ಕಾಲಿನ ಸ್ನಾಯು ಸೆಳೆತಆಗಿದೆ ಎಂದು ಹೇಳಿ ಮೈದಾನದಿಂದ ಹೊರನಡೆದಿದ್ದರು. ಗಾಯದ ತೀವ್ರತೆಯ ನೆಪ ಒಡ್ಡಿ ಅವರು ಎರಡು ಇನ್ನಿಂಗ್ಸ್‌ಗಳಲ್ಲೂ ಬ್ಯಾಟಿಂಗ್ ಮಾಡಲು ಬರಲಿಲ್ಲ. ಇದರಿಂದಾಗಿ ಪಾಕಿಸ್ತಾನf ತಂಡ ಬ್ಯಾಟಿಂಗ್‌ನಲ್ಲಿ ತೀವ್ರ ಹಿನ್ನಡೆ ಅನುಭವಿಸಿ, 194 ರನ್‌ಗಳ ದೊಡ್ಡ ಸೋಲು ಕಂಡಿತು.
ಆದರೆ, ಪಂದ್ಯದ 4ನೇ ದಿನದಂದು ಇಮಾಮ್ ಕಾಲಿಗೆ ಪಟ್ಟಿ ಕಟ್ಟಿಕೊಂಡು ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವುದು ಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಇದು ಮಾಜಿ ಕ್ರಿಕೆಟಿಗರು ಮತ್ತು ಕಮೆಂಟ್‌ಟೇಟರ್‌ಗಳ ಆಕ್ರೋಶಕ್ಕೆ ಕಾರಣವಾಯಿತು.
ಆಯ್ಕೆಗಾರ ಆಕಿಬ್ ಜಾವೇದ್ ಕೂಡ, “ಬ್ಯಾಟಿಂಗ್ ಮಾಡಲು ಸಾಧ್ಯವಾಗದ ವ್ಯಕ್ತಿ ನೆಟ್ಸ್‌ನಲ್ಲಿ ಹೇಗೆ ಅಭ್ಯಾಸ ಮಾಡಲು ಸಾಧ್ಯ?” ಎಂದು ಬಹಿರಂಗವಾಗಿ ಪ್ರಶ್ನಿಸಿದ್ದಾರೆ. ಈ ಹಿಂದೆ 2025ರ ನ್ಯೂಝಿಲೆಂಡ್ ಪ್ರವಾಸದಲ್ಲೂ ಇಮಾಮ್ ಇದೇ ರೀತಿ ಗಾಯದ ನಾಟಕ ಆಡಿದ್ದರು ಎಂಬ ಆರೋಪ ಕೇಳಿಬಂದಿರುವುದರಿಂದ, ಪಿಸಿಬಿ ಈ ಬಾರಿ ಅವರ ವಿರುದ್ಧ 2 ವರ್ಷಗಳ ನಿಷೇಧ ಹೇರಲು ಮುಂದಾಗಿದೆ ಎಂದು ವರದಿಯಾಗಿದೆ.
ಇನ್ನೊಂದೆಡೆ, ಪಾಕಿಸ್ತಾನ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಝ್ವಾನ್ ಅವರ ಶಿಸ್ತು ಮತ್ತು ಇತ್ತೀಚಿನ ಕಳಪೆ ಫಾರ್ಮ್ ಬಗ್ಗೆ ಪಿಸಿಬಿ ಮ್ಯಾನೇಜ್‌ಮೆಂಟ್ ತೀವ್ರ ಅಸಮಾಧಾನಗೊಂಡಿದೆ. ರಿಝ್ವಾನ್ ಅವರ ನಡವಳಿಕೆ ಮತ್ತು ತಂಡದ ಒಳಗಿನ ಭಿನ್ನಾಭಿಪ್ರಾಯಗಳು ಕೂಡ ಈಗ ಮುನ್ನಲೆಗೆ ಬಂದಿದೆ.
ಮೂಲಗಳ ಪ್ರಕಾರ, ಮುಂಬರುವ ಸರಣಿಗಳಿಗೆ ರಿಝ್ವಾನ್ ಅವರನ್ನು ಪಾಕಿಸ್ತಾನ್ ತಂಡದಿಂದ ಸಂಪೂರ್ಣವಾಗಿ ಕೈಬಿಡಲು ನಿರ್ಧರಿಸಲಾಗಿದೆ. ಈಗಾಗಲೇ 34 ವರ್ಷ ವಯಸ್ಸಾಗಿರುವ ರಿಝ್ವಾನ್, ಶಿಸ್ತು ಕ್ರಮದ ಹಿನ್ನೆಲೆಯಲ್ಲಿ ತಂಡದಿಂದ ಹೊರಬಿದ್ದರೆ ಮತ್ತೆ ಕಂಬ್ಯಾಕ್ ಮಾಡುವುದು ಅಸಾಧ್ಯ ಎನ್ನಲಾಗುತ್ತಿದೆ.
ಸರಣಿಯಲ್ಲಿ 0-2 ಅಂತರದ ಹಿನ್ನಡೆ ಹಾಗೂ ಈ ವಿವಾದಗಳ ಬೆನ್ನಲ್ಲೇ, ಕೋಚ್ ಮೈಕ್ ಹೆಸ್ಸನ್ ನೇತೃತ್ವದ ಮ್ಯಾನೇಜ್‌ಮೆಂಟ್ ಇಮಾಮ್ ಮತ್ತು ರಿಝ್ವಾನ್ ಸೇರಿದಂತೆ ಒಟ್ಟು 7 ಆಟಗಾರರನ್ನು ಇಂಗ್ಲೆಂಡ್ ಪ್ರವಾಸದ ಮಧ್ಯದಲ್ಲೇ ತವರಿಗೆ ವಾಪಸ್ ಕಳುಹಿಸಿದೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕೊನೆಯ ಟೆಸ್ಟ್ ಪಂದ್ಯಕ್ಕಾಗಿ ಇಡೀ ತಂಡವನ್ನೇ ಸದ್ಯ ಪುನರ್ರಚಿಸಲಾಗುತ್ತಿದೆ.
ಇದನ್ನೂ ಓದಿ: ರೋಹಿತ್ ಶರ್ಮಾ ಏಕದಿನ ವಿಶ್ವಕಪ್ ಭವಿಷ್ಯ ಇಂದು ನಿರ್ಧಾರ!
ಒಟ್ಟಾರೆಯಾಗಿ, ಇಂಗ್ಲೆಂಡ್ ವಿರುದ್ಧದ ಸರಣಿ ಸೋಲು ಪಾಕಿಸ್ತಾನ್ ಕ್ರಿಕೆಟ್‌ನಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಶಿಸ್ತು ಮತ್ತು ತಂಡದ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಿರುವ ಪಿಸಿಬಿ, ಸ್ಟಾರ್ ಆಟಗಾರರನ್ನೂ ಬಿಡದೆ ಕಠಿಣ ಸಂದೇಶ ರವಾನಿಸಿದೆ. ಅದರಂತೆ ಇಮಾಮ್ ಮತ್ತು ರಿಝ್ವಾನ್ ಭವಿಷ್ಯದ ಕುರಿತು ಪಾಕ್ ಕ್ರಿಕೆಟ್ ಮಂಡಳಿ ಅಧಿಕೃತವಾಗಿ ಯಾವ ನಿರ್ಧಾರ ಪ್ರಕಟಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.
Published On - 8:58 am, Thu, 3 September 26