AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೋಹಿತ್ ಶರ್ಮಾ ಏಕದಿನ ವಿಶ್ವಕಪ್ ಭವಿಷ್ಯ ಇಂದು ನಿರ್ಧಾರ!

ಟೀಮ್ ಇಂಡಿಯಾ ಅಭಿಮಾನಿಗಳ ಕಣ್ಣು ಇಂದು ಮುಂಬೈನಲ್ಲಿರುವ ಬಿಸಿಸಿಐ ಪ್ರಧಾನ ಕಚೇರಿಯತ್ತ ನೆಟ್ಟಿದೆ. ಇತ್ತೀಚಿನ ಸರಣಿಗಳಲ್ಲಿನ ಕಳಪೆ ಪ್ರದರ್ಶನದ ತನಿಖೆಗಾಗಿ ಬಿಸಿಸಿಐ ಪರಾಮರ್ಶನಾ ಸಭೆ ಕರೆದಿದ್ದು, ಇದೇ ವೇದಿಕೆಯಲ್ಲಿ ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಏಕದಿನ ಕ್ರಿಕೆಟ್ ಭವಿಷ್ಯದ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ.

ರೋಹಿತ್ ಶರ್ಮಾ ಏಕದಿನ ವಿಶ್ವಕಪ್ ಭವಿಷ್ಯ ಇಂದು ನಿರ್ಧಾರ!
Rohit Sharma Image Credit source: BCCI
ಝಾಹಿರ್ ಯೂಸುಫ್
|

Updated on: Sep 03, 2026 | 8:35 AM

Share

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇಂದು (ಸೆಪ್ಟೆಂಬರ್ 3, 2026) ಮುಂಬೈನಲ್ಲಿ ಪರಾಮರ್ಶನಾ ಸಭೆಯನ್ನು ಆಯೋಜಿಸಿದೆ. ಭಾರತ ತಂಡದ ಇತ್ತೀಚಿನ ಪ್ರದರ್ಶನಗಳು ಹಾಗೂ ಮುಂಬರುವ ಪ್ರಮುಖ ಸರಣಿಗಳ ರೋಡ್‌ಮ್ಯಾಪ್ ಸಿದ್ಧಪಡಿಸುವುದು ಈ ಸಭೆಯ ಮುಖ್ಯ ಉದ್ದೇಶವಾಗಿದ್ದರೂ, ಎಲ್ಲರ ಕಣ್ಣು ಮಾತ್ರ ಇದೀಗ ರೋಹಿತ್ ಶರ್ಮಾ ಅವರ ಏಕದಿನ ವಿಶ್ವಕಪ್​​ ಭವಿಷ್ಯದ ಮೇಲೆ ನಿಂತಿದೆ. ಇದಕ್ಕೆ ಮುಖ್ಯ ಕಾರಣ ಈ ಸಭೆಯಲ್ಲಿ ಹಿಟ್​ಮ್ಯಾನ್ ಅವರ ಏಕದಿನ ಕ್ರಿಕೆಟ್ ಭವಿಷ್ಯದ ಬಗ್ಗೆ ಕೂಡ ಚರ್ಚಿಸಲಾಗುತ್ತದೆ.

ವಿಶೇಷವಾಗಿ, ಆಯ್ಕೆ ಸಮಿತಿ ಮತ್ತು ಬಿಸಿಸಿಐ ಉನ್ನತ ಮಂಡಳಿಯ ನಡುವೆ ರೋಹಿತ್ ಶರ್ಮಾ ವಿಚಾರವಾಗಿ ಭಿನ್ನಾಭಿಪ್ರಾಯಗಳು ಮೂಡಿರುವ ಬೆನ್ನಲ್ಲೇ ಈ ಸಭೆ ನಡೆಯುತ್ತಿರುವುದು ತೀವ್ರ ಕುತೂಹಲ ಕೆರಳಿಸಿದೆ. ಹೀಗಾಗಿಯೇ, 2027ರ ಏಕದಿನ ವಿಶ್ವಕಪ್‌ನಲ್ಲಿ ‘ಹಿಟ್‌ಮ್ಯಾನ್’ ಆಡಲಿದ್ದಾರೋ ಇಲ್ಲವೋ ಎಂಬುದು ಈ ಸಭೆಯ ಬಳಿಕ ಸಂಪೂರ್ಣವಾಗಿ ಸ್ಪಷ್ಟವಾಗಲಿದೆ.

ಆಯ್ಕೆಗಾರರ ಲೆಕ್ಕಾಚಾರವೇನು?

ಪ್ರಸ್ತುತ 39 ವರ್ಷ ವಯಸ್ಸಿನ ರೋಹಿತ್ ಶರ್ಮಾ ಅವರ ಆಫ್ರಿಕಾದಲ್ಲಿ ನಡೆಯಲಿರುವ 2027ರ ಏಕದಿನ ವಿಶ್ವಕಪ್‌ನಲ್ಲಿ ಆಡಲು ತೀವ್ರ ಆಸಕ್ತಿ ಹೊಂದಿದ್ದಾರೆ. ಆದರೆ, ಅಜಿತ್ ಅಗರ್ಕರ್ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿಯು ಭವಿಷ್ಯದ ದೃಷ್ಟಿಯಿಂದ ಯುವ ಆಟಗಾರರಿಗೆ (ಉದಾಹರಣೆಗೆ ಯಶಸ್ವಿ ಜೈಸ್ವಾಲ್) ಹೆಚ್ಚಿನ ಮಣೆ ಹಾಕಲು ಬಯಸಿದೆ. ಕಳೆದ ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯ ಬಳಿಕ ರೋಹಿತ್ ಅವರಿಗೆ ನಿವೃತ್ತಿ ಪಡೆಯುವಂತೆ ಆಯ್ಕೆಗಾರರೊಬ್ಬರು ಸೂಚಿಸಿದ್ದರು ಎಂಬ ವರದಿಗಳು ಬಿರುಗಾಳಿ ಎಬ್ಬಿಸಿದ್ದವು.

ಆದಾಗ್ಯೂ, ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ (138 ರನ್) ಬಾರಿಸುವ ಮೂಲಕ ತಾವು ಇನ್ನೂ ಫಾರ್ಮ್‌ನಲ್ಲಿದ್ದೇವೆ ಎಂಬ ಬಲವಾದ ಸಂದೇಶ ರವಾನಿಸಿದ್ದಾರೆ.

ಬಿಸಿಸಿಐ ಬೆಂಬಲ:

ಆಯ್ಕೆ ಸಮಿತಿಯು ಯುವ ಪಡೆಗೆ ಆದ್ಯತೆ ನೀಡಲು ಯೋಚಿಸುತ್ತಿದ್ದರೆ, ಬಿಸಿಸಿಐನ ಉನ್ನತ ಪದಾಧಿಕಾರಿಗಳು (ಕಾರ್ಯದರ್ಶಿ ದೇವಜಿತ್ ಸೈಕಿಯಾ ಸೇರಿದಂತೆ) ರೋಹಿತ್ ಶರ್ಮಾ ಬೆನ್ನಿಗೆ ನಿಂತಿದ್ದಾರೆ. ಹೀಗಾಗಿಯೇ ಇಂಗ್ಲೆಂಡ್ ವಿರುದ್ಧದ ಸರಣಿಯ ಬಳಿಕ ಹಿಟ್​ಮ್ಯಾನ್ ನಿವೃತ್ತಿ ಘೋಷಿಸಿರಲಿಲ್ಲ.

ಈಗ ನಡೆಯುತ್ತಿರುವ ಪರಾಮರ್ಶನಾ ಸಭೆಯಲ್ಲಿ ರೋಹಿತ್ ಶರ್ಮಾ ಅವರ ನಿವೃತ್ತಿ ಅಥವಾ ಏಕದಿನ ವಿಶ್ವಕಪ್ ಭವಿಷ್ಯದ ಕುರಿತು ಸುದೀರ್ಘವಾಗಿ ಚರ್ಚಿಸಲಾಗುತ್ತಿದ್ದು, ಇಂದೇ ಈ ಬಗ್ಗೆ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.

ಅಜಿತ್ ಅಗರ್ಕರ್ ಒಪ್ಪಂದ ವಿಸ್ತರಣೆ?

ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರ 3 ವರ್ಷಗಳ ಅವಧಿ ಮುಕ್ತಾಯದ ಹಂತದಲ್ಲಿದ್ದು, ನಿಯಮಾವಳಿಗಳ ಪ್ರಕಾರ ಅವರಿಗೆ ಮತ್ತೊಂದು ವರ್ಷದ ಒಪ್ಪಂದ ವಿಸ್ತರಣೆ ಸಿಗಬೇಕಿದೆ. ಆದರೆ ರೋಹಿತ್ ಶರ್ಮಾ ವಿಚಾರದಲ್ಲಿ ಬಿಸಿಸಿಐ ಮತ್ತು ಆಯ್ಕೆ ಸಮಿತಿಯ ನಡುವೆ ಇರುವ ಭಿನ್ನಾಭಿಪ್ರಾಯಗಳಿಂದಾಗಿ ಅಗರ್ಕರ್ ಅವರ ಒಪ್ಪಂದ ವಿಸ್ತರಣೆಯ ನಿರ್ಧಾರವೂ ಈ ಸಭೆಯಲ್ಲೇ ಅಂತಿಮಗೊಳ್ಳಲಿದೆ.

ಇದನ್ನೂ ಓದಿ: ಮಹಿಳಾ ಚಾಂಪಿಯನ್ಸ್​ ಟ್ರೋಫಿಗೆ 6 ತಂಡಗಳು ಫೈನಲ್!

ಸಭೆಯಲ್ಲಿ ಭಾಗವಹಿಸುತ್ತಿರುವ ಯಾರು?

ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಮುಖ್ಯ ಕೋಚ್ ಗೌತಮ್ ಗಂಭೀರ್, ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್, ಮತ್ತು ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (CoE) ಮುಖ್ಯಸ್ಥ ವಿ.ವಿ.ಎಸ್. ಲಕ್ಷ್ಮಣ್ ಈ ಸಭೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಟೀಮ್ ಇಂಡಿಯಾ ನಾಯಕರಾದ ಶುಭ್​ಮನ್ ಗಿಲ್, ಶ್ರೇಯಸ್ ಅಯ್ಯರ್ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Follow Us