ಇಂಗ್ಲೆಂಡ್ ವೇಗಿಗಳಿಗೆ ಹೆದರಿ ‘ಗಾಯ’ದ ನಾಟಕವಾಡಿದ ಪಾಕ್ ಬ್ಯಾಟರ್: ಗಂಭೀರ ಆರೋಪ

ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಣ ಟೆಸ್ಟ್ ಸರಣಿಯು ಸದ್ಯ ವಿವಾದಗಳಿಂದಲೇ ಭಾರಿ ಸುದ್ದಿಯಲ್ಲಿದೆ. ಆರಂಭದಲ್ಲಿ ಮಾಜಿ ನಾಯಕ ಇಮ್ರಾನ್ ಖಾನ್ ಅವರ ಪುತ್ರರ ಸಂದರ್ಶನದ ವಿವಾದದಿಂದಾಗಿ ಮೈದಾನ ಹೊರಗೆ ತಲ್ಲಣ ಸೃಷ್ಟಿಸಿದ್ದ ಈ ಪಂದ್ಯವು, ಇದೀಗ ಆಟಗಾರನೊಬ್ಬನ ಗಾಯದ ಸಮಸ್ಯೆಯಿಂದಾಗಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ.

ಇಂಗ್ಲೆಂಡ್ ವೇಗಿಗಳಿಗೆ ಹೆದರಿ ಗಾಯದ ನಾಟಕವಾಡಿದ ಪಾಕ್ ಬ್ಯಾಟರ್: ಗಂಭೀರ ಆರೋಪ
Imam Ul Haq
Image Credit source: GettyImages

Updated on: Aug 31, 2026 | 8:45 AM

ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧದ ನಡೆದ ಎರಡನೇ ಟೆಸ್ಟ್ ಪಂದ್ಯದ ನಡುವೆಯೇ ಪಾಕಿಸ್ತಾನ್ ಕ್ರಿಕೆಟ್ ತಂಡ ಮತ್ತೊಂದು ದೊಡ್ಡ ವಿವಾದಕ್ಕೆ ಸಿಲುಕಿದೆ. ಪಾಕ್ ತಂಡದ ಆರಂಭಿಕ ಬ್ಯಾಟರ್ ಇಮಾಮ್-ಉಲ್-ಹಕ್ ಅವರು ಪಂದ್ಯದಿಂದ ನುಣುಚಿಕೊಳ್ಳಲು ‘ನಕಲಿ ಗಾಯ’ದ ನಾಟಕವಾಡಿದ್ದಾರೆ ಎಂದು ಇಂಗ್ಲೆಂಡ್‌ನ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್ ಮತ್ತು ಪಾಕಿಸ್ತಾನದ ಮಾಜಿ ಮುಖ್ಯ ಆಯ್ಕೆಗಾರ ಮೊಹಮ್ಮದ್ ವಾಸಿಮ್ ಗಂಭೀರ ಆರೋಪ ಮಾಡಿದ್ದಾರೆ.

ಬ್ರಾಡ್ ಅಸಮಾಧಾನ!

ನಾಲ್ಕನೇ ದಿನದಾಟದ ಮುನ್ನ ಇಮಾಮ್-ಉಲ್-ಹಕ್ ಅವರು ಕಾಲಿಗೆ ಭಾರಿ ಬ್ಯಾಂಡೇಜ್ ಕಟ್ಟಿಕೊಂಡು ಮೈದಾನದಲ್ಲಿ ಕುಂಟುತ್ತಾ ಸಾಗುತ್ತಿದ್ದ ದೃಶ್ಯ ಕಂಡುಬಂದಿತ್ತು. ಇದನ್ನು ಲೈವ್ ಟಿವಿಯಲ್ಲಿ ನೋಡಿದ ಇಂಗ್ಲೆಂಡ್‌ನ ಮಾಜಿ ದಿಗ್ಗಜ ಸ್ಟುವರ್ಟ್ ಬ್ರಾಡ್, ಇಮಾಮ್ ಅವರ ನಡವಳಿಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಅವರು ಕುಂಟುತ್ತಿರುವುದನ್ನು ನೋಡಿ ನನಗೇನು ಇಷ್ಟವಾಗಲಿಲ್ಲ. ಇದೆಲ್ಲವೂ ಕೇವಲ ಮಾಧ್ಯಮಗಳ ಟೀಕೆಯಿಂದ ಬೌಂಡರಿ ದಾಟಲು ಮಾಡುತ್ತಿರುವ ನಾಟಕದಂತೆ ಕಾಣುತ್ತಿದೆ” ಎಂದು ಬ್ರಾಡ್ ನೇರವಾಗಿ ಲೇವಡಿ ಮಾಡಿದ್ದಾರೆ.

ಹಳೆಯ ರಹಸ್ಯ ಬಿಚ್ಚಿಟ್ಟ ಮೊಹಮ್ಮದ್ ವಾಸಿಮ್!

ಈ ವಿವಾದಕ್ಕೆ ತುಪ್ಪ ಸುರಿದಿರುವುದು ಪಾಕಿಸ್ತಾನದ ಮಾಜಿ ಮುಖ್ಯ ಆಯ್ಕೆಗಾರ ಮೊಹಮ್ಮದ್ ವಾಸಿಮ್ ಅವರ ಹೇಳಿಕೆ. ಇಮಾಮ್ ಅವರಿಗೆ ಕಠಿಣವಾದ ಮತ್ತು ವೇಗದ ಬೌಲಿಂಗ್‌ಗೆ ಪೂರಕವಾಗಿರುವ ಪಿಚ್‌ಗಳಲ್ಲಿ ಆಡಲು ಇಷ್ಟವಿಲ್ಲ. ಹಾಗಾಗಿ ಅವರು ಇಂತಹ ಪಿಚ್‌ಗಳು ಎದುರಾದಾಗ ಗಾಯದ ನೆಪ ಹೇಳುತ್ತಾರೆ ಎಂದು ವಾಸಿಮ್ ಆರೋಪಿಸಿದ್ದಾರೆ.

2022ರ ಮುಲ್ತಾನ್ ಟೆಸ್ಟ್ ಪಂದ್ಯದ ಮುನ್ನವೇ ತಂಡದ ಫಿಸಿಯೋ ನನಗೆ ಫೋನ್ ಮಾಡಿ, ಇಮಾಮ್ ಶೀಘ್ರದಲ್ಲೇ ಗಾಯದ ನೆಪ ಹೇಳಲಿದ್ದಾರೆ ಎಂದು ಎಚ್ಚರಿಸಿದ್ದರು. ಮರುದಿನವೇ ಅವರು ಗಾಯದ ಕಾರಣ ನೀಡಿ ಪಂದ್ಯದಿಂದ ಹೊರಗುಳಿದರು” ಎಂದು ವಾಸಿಮ್ ಹಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಪಿಸಿಬಿ ಸಮರ್ಥನೆ!

ಮಾಜಿ ಕ್ರಿಕೆಟಿಗರ ಈ ಗಂಭೀರ ಆರೋಪಗಳನ್ನು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ (PCB) ತಳ್ಳಿಹಾಕಿದೆ. ಸ್ಕ್ಯಾನಿಂಗ್ ವರದಿಯಲ್ಲಿ ಇಮಾಮ್ ಅವರ ಎಡಗಾಲಿನ ಸ್ನಾಯು ಸೆಳೆತ ಇರುವುದು ನಿಜ ಎಂದು ಪಿಸಿಬಿ ಸ್ಪಷ್ಟಪಡಿಸಿದೆ. ಮಾಜಿ ಕ್ರಿಕೆಟಿಗ ಮಜಿದ್ ಮಜೀದ್ ಕೂಡ ಇಮಾಮ್ ಬೆಂಬಲಕ್ಕೆ ನಿಂತಿದ್ದು, ಅವರು ಹೋಟೆಲ್‌ನಲ್ಲಿ ತೀವ್ರ ನೋವಿನಿಂದ ಬಳಲುತ್ತಿದ್ದರು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಭಿಷೇಕ್ ಶರ್ಮಾರ ಸಿಡಿಲಬ್ಬರವನ್ನು ವ್ಯರ್ಥ ಮಾಡಿದ ಅನ್​ಮೋಲ್!

ಆದರೆ, ಇಮಾಮ್ ಉಲ್ ಹಕ್ ಗಾಯದ ಸಮಸ್ಯೆಯಿಂದಾಗಿ ಹೊರನಡೆದ ತಕ್ಷಣವೇ ಪಾಕಿಸ್ತಾನ್ ತಂಡ ತನ್ನ ಮೊದಲ ಇನಿಂಗ್ಸ್‌ನಲ್ಲಿ ಕೇವಲ 110 ರನ್‌ಗಳಿಗೆ ಆಲೌಟ್ ಆಗಿ ಭಾರಿ ಮುಖಭಂಗ ಅನುಭವಿಸಿತು. ಎರಡನೇ ಇನಿಂಗ್ಸ್‌ನಲ್ಲೂ ಅವರು ಕಣಕ್ಕಿಳಿಯಲು ಸಾಧ್ಯವಾಗಲಿಲ್ಲ. ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಇಮಾಮ್ ಉಲ್ ಹಕ್ ಅವರ ಗಾಯ ನಿಜವೇ ಅಥವಾ ಸುಳ್ಳೇ ಎಂಬ ಗಂಭೀರ ಚರ್ಚೆ ಮತ್ತು ವಿವಾದ ಶುರುವಾಗಿದೆ.

Published On - 8:43 am, Mon, 31 August 26

Loading...
Unable to load recommendations.
Follow Us