ಆಂಗ್ಲರ ವೇಗಕ್ಕೆ ಹೆದರಿ ಗಾಯದ ನಾಟಕವಾಡಿದ್ದ ಇಮಾಮ್ ವಿರುದ್ಧ ತನಿಖೆಗಿಳಿದ ಪಿಸಿಬಿ

Pak Tour Drama: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ ಹೀನಾಯ ಸೋಲು ಕಂಡಿದೆ. ಈ ನಡುವೆ ಪಾಕ್ ಬ್ಯಾಟ್ಸ್‌ಮನ್ ಇಮಾಮ್-ಉಲ್-ಹಕ್ ವೇಗದ ಬೌಲರ್‌ಗಳಿಗೆ ಹೆದರಿ ಗಾಯದ ನಾಟಕವಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಈ ಬಗ್ಗೆ ತನಿಖೆ ಆರಂಭಿಸಿದೆ. ಇಮಾಮ್ ಜೊತೆ ಮೊಹಮ್ಮದ್ ರಿಜ್ವಾನ್ ಅವರನ್ನು ಸಹ ತವರಿಗೆ ವಾಪಸ್ ಕರೆಸಿಕೊಳ್ಳಲಾಗಿದೆ. ವೈಟ್ ವಾಶ್ ತಪ್ಪಿಸಲು ಪಾಕಿಸ್ತಾನ ಕೊನೆಯ ಟೆಸ್ಟ್‌ಗೆ ಪ್ರಮುಖ ಬದಲಾವಣೆಗಳನ್ನು ಮಾಡಲಿದೆ.

ಆಂಗ್ಲರ ವೇಗಕ್ಕೆ ಹೆದರಿ ಗಾಯದ ನಾಟಕವಾಡಿದ್ದ ಇಮಾಮ್ ವಿರುದ್ಧ ತನಿಖೆಗಿಳಿದ ಪಿಸಿಬಿ
Imam Ul Haq

Updated on: Aug 31, 2026 | 6:42 PM

ಮೂರು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ ಪ್ರವಾಸ ಮಾಡಿರುವ ಪಾಕಿಸ್ತಾನ (England vs Pakistan) ತಂಡಕ್ಕೆ ಇಂಗ್ಲೆಂಡ್‌ ವೇಗಿಗಳ ಎದುರು ನಿಂತು ದಿಟ್ಟ ಪ್ರದರ್ಶನ ನೀಡಲು ಸಾಧ್ಯವಾಗುತ್ತುಲ್ಲ ಇದರ ಪರಿಣಾಮವಾಗಿ ಆಡಿರುವ ಎರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋತಿರುವ ಪಾಕಿಸ್ತಾನ ಈಗಾಗಲೇ ಸರಣಿಯನ್ನು ಕಳೆದುಕೊಂಡಿದೆ. ಆದಾಗ್ಯೂ ಕೊನೆಯ ಟೆಸ್ಟ್ ಪಂದ್ಯವನ್ನು ವೈಟ್ ವಾಶ್​​ನಿಂದ ಪಾರಾಗಲು ನೋಡುತ್ತಿರುವ ಪಾಕಿಸ್ತಾನ ತಂಡದಲ್ಲಿ ಕೋಲಾಹಲ ಉಂಟಾಗಿದೆ. ತಂಡದ ಆಟಗಾರನ ವಿರುದ್ಧವೇ ಪಾಕ್ ಕ್ರಿಕೆಟ್ ಮಂಡಳಿ ತನಿಖೆ ಮಾಡಲು ಮುಂದಾಗಿದೆ. ಇಂಗ್ಲೆಂಡ್‌ ವೇಗಿಗಳ ಘಾತುಕ ವೇಗಕ್ಕೆ ಹೆದರಿ ಗಾಯದ ನಾಟಕವಾಡಿದ್ದಾರೆ ಎಂಬ ಆರೋಪ ಪಾಕ್ ತಂಡದ ಹಿರಿಯ ಬ್ಯಾಟ್ಸ್‌ಮನ್ ಇಮಾಮ್-ಉಲ್-ಹಕ್ (Imam-ul-Haq) ಅವರ ಮೇಲೆ ಕೇಳಿಬಂದಿದೆ. ಈ ಸಲುವಾಗಿ ಪಾಕ್ ಮಂಡಳಿ ಈ ಬಗ್ಗೆ ತನಿಖೆ ನಡೆಸಲು ಮುಂದಾಗಿದೆ ಎಂದು ವರದಿಯಾಗಿದೆ.

ಇಬ್ಬರು ಪಾಕಿಸ್ತಾನಕ್ಕೆ ವಾಪಸ್

ವರದಿಗಳ ಪ್ರಕಾರ, ಇಂಗ್ಲೆಂಡ್‌ ಪಿಚ್‌ಗಳಲ್ಲಿ ವೇಗದ ಬೌಲರ್‌ಗಳನ್ನು ಎದುರಿಸುವುದನ್ನು ತಪ್ಪಿಸುವ ಸಲುವಾಗಿ ಇಮಾಮ್ ಗಾಯಗೊಂಡಿರುವುದಾಗಿ ಸುಳ್ಳು ಹೇಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆದೇಶಿಸಿದೆ. ಅಲ್ಲದೆ ಇಂಗ್ಲೆಂಡ್​ನಲ್ಲಿ ತಂಡದ ಜೊತೆಗಿರುವ ಇಮಾಮ್ ಅವರನ್ನು ಕೂಡಲೇ ತವರಿಗೆ ಮರಳುವಂತೆ ಆದೇಶಿಸಲಾಗಿದೆ. ಅವರೊಂದಿಗೆ, ಫಾರ್ಮ್‌ನಲ್ಲಿಲ್ಲದ ಅನುಭವಿ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಅವರನ್ನು ಸಹ ಪಾಕಿಸ್ತಾನಕ್ಕೆ ವಾಪಸ್ ಕರೆಸಿಕೊಳ್ಳಲಾಗುತ್ತಿದೆ.

ಇಮಾಮ್ ಗಾಯದ ನೆಪ ಹೇಳುತ್ತಿದ್ದಾರೆ

ವಾಸ್ತವವಾಗಿ ಲಾರ್ಡ್ಸ್​ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಆಡುವ ಹನ್ನೊಂದರ ಬಳಗದ ಭಾಗವಾಗಿದ್ದ ಇಮಾಮ್-ಉಲ್-ಹಕ್, ಮೊದಲ ದಿನದಂದು ಫೀಲ್ಡಿಂಗ್ ಮಾಡುವಾಗ ಎಡಗಾಲಿನಲ್ಲಿ ನೋವು ಕಾಣಿಸಿಕೊಂಡಿದೆ ಎಂದು ಹೇಳಿ ಮೈದಾನ ತೊರೆದಿದ್ದರು. ಹೀಗಾಗಿ ಅವರನ್ನು ಆಸ್ಪತ್ರೆಯಲ್ಲಿ ಸ್ಕ್ಯಾನ್‌ಗೆ ಒಳಪಡಿಸಿದಾಗ ಗಾಯ ಅಷ್ಟು ಗಂಭೀರವಾಗಿಲ್ಲ ಎಂದು ವರದಿ ಬಂದಿತ್ತು. ಆದರೆ ಗಾಯದ ನೆಪ ಹೇಳಿ ಇಮಾಮ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಲಿಲ್ಲ. ಕಠಿಣ ಪರಿಸ್ಥಿತಿಯಲ್ಲಿ ಇಂಗ್ಲಿಷ್ ಬೌಲರ್‌ಗಳನ್ನು ಎದುರಿಸುವುದನ್ನು ತಪ್ಪಿಸಲು ಇಮಾಮ್ ಗಾಯದ ನೆಪ ಹೇಳುತ್ತಿದ್ದಾರೆ ಎಂದು ಹಲವಾರು ಪಾಕಿಸ್ತಾನಿ ಕ್ರಿಕೆಟಿಗರು ಮತ್ತು ಮಾಧ್ಯಮಗಳು ಆರೋಪಿಸಿದ್ದರು. ಪರಿಣಾಮವಾಗಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈಗ ಅವರ ಗಾಯದ ಬಗ್ಗೆ ತನಿಖೆ ನಡೆಸಲಿದೆ.

ಕುಂಟುವ ನಾಟಕವಾಡುತ್ತಿದ್ದಾರೆ

ಇಮಾಮ್-ಉಲ್-ಹಕ್ ಅವರ ಗಾಯದ ಬಗ್ಗೆ ಪ್ರಶ್ನೆಗಳು ಕೇಳಿಬರುತ್ತಿರುವುದು ಇದೇ ಮೊದಲಲ್ಲ. ಮಾರ್ಚ್ 2025 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ನೇಪಿಯರ್ ಏಕದಿನ ಪಂದ್ಯಕ್ಕೂ ಮುನ್ನ ಇದೇ ರೀತಿಯ ವಿವಾದ ಭುಗಿಲೆದ್ದಿತು. ಆ ಪಂದ್ಯದಲ್ಲಿ ತನ್ನ ಕಾಲ್ಬೆರಳಿನಲ್ಲಿ ನೋವು ಕಾಣಿಸಿಕೊಂಡಿರುವುದಾಗಿ ಇಮಾಮ್ ಹೇಳಿಕೊಂಡಿದ್ದರು. ಆದರೆ ಎಕ್ಸ್-ರೇನಲ್ಲಿ ಇಮಾಮ್​ ಕಾಲ್ಬೆರಳಿನಲ್ಲಿ ಯಾವುದೇ ಮುರಿತ ಅಥವಾ ಗಾಯವಾಗಿಲ್ಲ ಎಂಬುದು ಬಹಿರಂಗವಾಗಿತ್ತು. ಅಲ್ಲದೆ ಇಮಾಮ್ ಅವರ ಕಾಲ್ಬೆರಳಿನಿಂದ ಹೊರಬಂದಿದ್ದು ನಿಜವಾದ ರಕ್ತವಲ್ಲ, ಬದಲಾಗಿ ಅದು ಪೆನ್ನಿನಿಂದ ಮಾಡಿದ್ದ ಗುರುತು ಎಂದು ವೈದ್ಯರ ವರದಿ ಹೇಳಿತ್ತು. ಹಾಗೆಯೇ ಕೆಲವು ತಂಡದ ಸದಸ್ಯರು ಮತ್ತು ತರಬೇತಿ ಸಿಬ್ಬಂದಿ ಇಮಾಮ್ ಕ್ಯಾಮೆರಾಗಳು ಮತ್ತು ಅಧಿಕಾರಿಗಳ ಮುಂದೆ ಕುಂಟುವ ನಾಟಕವಾಡುತ್ತಿದ್ದಾರೆ. ಆದರೆ ಅವರ್ಯಾರು ಇಲ್ಲದಾಗ ಇಮಾಮ್ ಸಾಮಾನ್ಯವಾಗಿ ನಡೆಯುತ್ತಿದ್ದರು ಎಂದು ಆರೋಪ ಹೊರಿಸಿದ್ದರು.

ಟೀಂ ಇಂಡಿಯಾ ಮುಂದಿನ ಟೆಸ್ಟ್ ಸರಣಿಯನ್ನು ಯಾವಾಗ, ಎಲ್ಲಿ ಆಡಲಿದೆ?

ಮೂರನೇ ಟೆಸ್ಟ್‌ಗೆ ಪ್ರಮುಖ ಬದಲಾವಣೆ

ವರದಿಗಳ ಪ್ರಕಾರ, ಪಿಸಿಬಿ ಆಯ್ಕೆ ಸಮಿತಿಯು ಬರ್ಮಿಂಗ್ಹ್ಯಾಮ್ ಟೆಸ್ಟ್‌ಗಾಗಿ ತಂಡದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಇಮಾಮ್ ಮತ್ತು ರಿಜ್ವಾನ್ ಅವರನ್ನು ಕೈಬಿಟ್ಟ ನಂತರ ಸೈಮ್ ಅಯೂಬ್ ಮತ್ತು ಅರಾಫತ್ ಮಿನ್ಹಾಸ್ ಸೇರಿದಂತೆ ಆರು ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಿದೆ. ಇದಕ್ಕೆ ದೊಡ್ಡ ಕಾರಣ ಪಾಕಿಸ್ತಾನದ ಕಳಪೆ ಬ್ಯಾಟಿಂಗ್, ಈ ಸರಣಿಯಲ್ಲಿ ಒಮ್ಮೆಯೂ 200 ರನ್‌ಗಳ ಗಡಿಯನ್ನು ತಲುಪಲು ವಿಫಲವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:41 pm, Mon, 31 August 26

Loading...
Unable to load recommendations.
Follow Us