
ಲಿಂಕನ್‌ನಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ಎ ವಿರುದ್ಧದ ಮೊದಲ ಅನ್‌ಅಫಿಶಿಯಲ್ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಕರ್ನಾಟಕದ ಪ್ರತಿಭೆ ದೇವದತ್ ಪಡಿಕ್ಕಲ್ ಅಮೋಘ ಅರ್ಧಶತಕದ (56) ಮೂಲಕ ಇಂಡಿಯಾ ಎ ತಂಡಕ್ಕೆ ಆಸರೆಯಾಗಿದ್ದಾರೆ. ಮೊದಲ ಇನಿಂಗ್ಸ್‌ನ ಬ್ಯಾಟಿಂಗ್ ವೈಫಲ್ಯ ಹಾಗೂ ದ್ವಿತೀಯ ಇನಿಂಗ್ಸ್‌ನ ಆರಂಭಿಕ ಆಘಾತದಿಂದ ಕಂಗೆಟ್ಟಿದ್ದ ತಂಡವನ್ನು ಪಡಿಕ್ಕಲ್ ತಮ್ಮ ಜವಾಬ್ದಾರಿಯುತ ಆಟದ ಮೂಲಕ ಉತ್ತಮ ಸ್ಥಿತಿಗೆ ತಲುಪಿಸಿದ್ದಾರೆ.
ಮೊದಲ ಇನಿಂಗ್ಸ್‌ನಲ್ಲಿ ಕೇವಲ 113 ರನ್‌ಗಳಿಗೆ ಆಲೌಟ್ ಆಗಿದ್ದ ಇಂಡಿಯಾ ಎ ವಿರುದ್ಧ ನ್ಯೂಝಿಲೆಂಡ್ ಎ ತಂಡವು 317 ರನ್ ಗಳಿಸಿ, 204 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿತು. ಈ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತಕ್ಕೆ ಮತ್ತೆ ಆಘಾತ ಕಾದಿತ್ತು.
ಯುವ ದಾಂಡಿಗ ಯಶಸ್ವಿ ಜೈಸ್ವಾಲ್ (5) ಮತ್ತು ಅನುಭವಿ ಆಟಗಾರ ಕೆ.ಎಲ್. ರಾಹುಲ್ (4) ಮತ್ತೊಮ್ಮೆ ಅಲ್ಪ ರನ್ನಿಗೆ ವಿಕೆಟ್ ಒಪ್ಪಿಸಿದರು. ಇದರಿಂದಾಗಿ ಭಾರತ ಎ ತಂಡ 10 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು.
ಭಾರತ ಎ ತಂಡ ತೀವ್ರ ಒತ್ತಡದಲ್ಲಿದ್ದಾಗ ಕ್ರೀಸ್‌ಗಿಳಿದ ದೇವದತ್ ಪಡಿಕ್ಕಲ್, ಮತ್ತೊಬ್ಬ ಎಡಗೈ ಬ್ಯಾಟರ್ ಸಾಯಿ ಸುದರ್ಶನ್ (39)* ಅವರೊಂದಿಗೆ ಸೇರಿ ಪ್ರತಿರೋಧ ಒಡ್ಡಿದರು. ಕಿವೀಸ್ ಪಡೆಯ ಘಾತಕ ಬೌಲಿಂಗ್ ಅನ್ನು ಅತ್ಯಂತ ಸಂಯಮದಿಂದ ಎದುರಿಸಿದ ಈ ಜೋಡಿ, ಮೂರನೇ ವಿಕೆಟ್‌ಗೆ ಅಜೇಯ 96 ರನ್‌ಗಳ ಅತ್ಯಮೂಲ್ಯ ಜತೆಯಾಟವಾಡಿತು.
ಕೇವಲ ರಕ್ಷಣಾತ್ಮಕ ಆಟಕ್ಕೆ ಶರಣಾಗದ ಪಡಿಕ್ಕಲ್, ಸಿಕ್ಕ ಅವಕಾಶಗಳನ್ನೆಲ್ಲ ಬೌಂಡರಿಗಟ್ಟಿದರು. ತಮ್ಮ 89 ಎಸೆತಗಳ ಇನಿಂಗ್ಸ್‌ನಲ್ಲಿ 9 ಆಕರ್ಷಕ ಬೌಂಡರಿಗಳನ್ನು ಬಾರಿಸುವ ಮೂಲಕ ಕ್ರೀಡಾಂಗಣದಲ್ಲಿ ನೆರೆದಿದ್ದವರ ಗಮನ ಸೆಳೆದರು.
ಅದರಂತೆ ಎರಡನೇ ದಿನದಾಟದ ಮುಕ್ತಾಯಕ್ಕೆ ಇಂಡಿಯಾ ಎ ತಂಡವು 2 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿದೆ. ಭಾರತ ತಂಡವು ಈಗ ನ್ಯೂಝಿಲೆಂಡ್ ಎ ತಂಡದ ಮುನ್ನಡೆಗಿಂತ 98 ರನ್ ಹಿನ್ನಡೆಯಲ್ಲಿದ್ದು, ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.
ಭಾರತ ಎ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್ , ಕೆಎಲ್ ರಾಹುಲ್ , ದೇವದತ್ ಪಡಿಕ್ಕಲ್ , ಸಾಯಿ ಸುದರ್ಶನ್ , ಧ್ರುವ್ ಜುರೆಲ್ (ನಾಯಕ) , ಯಶ್ ರಾಥೋಡ್ , ವಾಷಿಂಗ್ಟನ್ ಸುಂದರ್ , ಅನ್ಶುಲ್ ಕಾಂಬೋಜ್ , ಆಖಿಬ್ ನಬಿ , ಆಕಾಶ್ ದೀಪ್ , ಮುಖೇಶ್ ಚೌಧರಿ.
ಇದನ್ನೂ ಓದಿ: ನಿರ್ಧಾರ ಬದಲಿಸಿದ ಟಿಮ್ ಡೇವಿಡ್: ಹೊಸ ತಂಡದ ಪರ ಕಣಕ್ಕೆ!
ನ್ಯೂಝಿಲೆಂಡ್ ಎ ಪ್ಲೇಯಿಂಗ್ 11: ರೈಸ್ ಮಾರಿಯು (ನಾಯಕ) , ಕರ್ಟಿಸ್ ಹೀಫಿ , ಟಿಮ್ ರಾಬಿನ್ಸನ್ , ಮ್ಯಾಥ್ಯೂ ಬಾಯ್ಲ್ , ಡೀನ್ ಫಾಕ್ಸ್‌ಕ್ರಾಫ್ಟ್ , ಮಿಚೆಲ್ ಹೇ (ವಿಕೆಟ್ ಕೀಪರ್), ಸೈಮನ್ ಕೀನ್ , ಕ್ರಿಶ್ಚಿಯನ್ ಕ್ಲಾರ್ಕ್ , ಫ್ರೇಸರ್ ಶೀಟ್ , ಜೇಡೆನ್ ಲೆನಾಕ್ಸ್ , ಜ್ಯಾಕ್ ಗಿಬ್ಸನ್.