ಅಡಿಲೇಡ್ನ ಓವಲ್ ಮೈದಾನದಲ್ಲಿ ಇಂದು ಭಾರತ ಹಾಗೂ ಬಾಂಗ್ಲಾದೇಶ (India vs Bangladesh) ನಡುವೆ ಐಸಿಸಿ ಟಿ20 ವಿಶ್ವಕಪ್ 2022ರ (T20 World Cup) ಮಹತ್ವದ ಪಂದ್ಯ ನಡೆಯಲಿದೆ. ಸೆಮಿ ಫೈನಲ್ಗೆ ಪ್ರವೇಶ ಪಡೆಯಲು ಉಭಯ ತಂಡಗಳಿಗೆ ಈ ಪಂದ್ಯ ಪ್ರಮುಖವಾಗಿದ್ದು ಗೆಲ್ಲಬೇಕಾದ ಒತ್ತಡದಲ್ಲಿದೆ. ಭಾರತ ಎರಡು ಪಂದ್ಯ ಗೆದ್ದು ನಾಲ್ಕು ಸಂಪಾದಿಸಿ ದ್ವಿತೀಯ ಸ್ಥಾನದಲ್ಲಿದ್ದರೆ ಅತ್ತ ಬಾಂಗ್ಲಾ ಕೂಡ ಎರಡು ಪಂದ್ಯ ಗೆದ್ದು ನಾಲ್ಕು ಪಾಯಿಂಟ್ನೊಂದಿಗೆ ರನ್ರೇಟ್ ಆಧಾರದ ಮೇಲೆ ಮೂರನೇ ಸ್ಥಾನದಲ್ಲಿದೆ. ಹೀಗಾಗಿ ಅಡಿಲೇಡ್ನಲ್ಲಿ ಹೈವೋಲ್ಟೇಜ್ ಪಂದ್ಯ ನಡೆಯುವುದರಲ್ಲಿ ಅನುಮಾನವಿಲ್ಲ. ಆದರೆ, ಪಂದ್ಯಕ್ಕೆ ಮಳೆ ಅಡ್ಡಿಪಡಿಸುತ್ತಾ? (Adelaide Weather).
ಭಾರತ ಹಾಗೂ ಬಾಂಗ್ಲಾದೇಶ ಎರಡೂ ತಂಡಕ್ಕೆ ಇಂದಿನ ಪಂದ್ಯ ಸಾಕಷ್ಟು ಮಹತ್ವದ್ದಾಗಿದೆ. ಇಂದು ಗೆದ್ದ ತಂಡ ಸೆಮಿ ಫೈನಲ್ ರೇಸ್ನಲ್ಲಿ ಉಳಿದುಕೊಳ್ಳಲಿದೆ. ಸೋತ ತಂಡ ಸಂಕಷ್ಟಕ್ಕೆ ಸಿಲುಕಲಿದ್ದು ಉಳಿದ ಪಂದ್ಯ ಗೆಲ್ಲುವುದರ ಜೊತೆಗೆ ಇತರೆ ತಂಡಗಳ ಸೋಲು-ಗೆಲುವಿನ ಲೆಕ್ಕಚಾರದ ಮೇಲೆ ಸೆಮೀಸ್ ಹಾದಿ ನಿರ್ಧಾರವಾಗಲಿದೆ. ಆದರೆ, ಈ ರೋಚಕ ಪಂದ್ಯಕ್ಕೆ ವರುಣ ಅಡ್ಡಿ ಪಡಿಸುತ್ತಾನ ಎಂಬುದೇ ಕುತೂಹಲದ ಸಂಗತಿ. ನಿನ್ನೆಯ ವರೆಗೆ ಕೂಡ ಪಂದ್ಯದ ದಿನ ಶೇ. 60 ರಷ್ಟು ಮಳೆ ಆಗುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೀಗ ಖುಷಿಯ ವಿಚಾರ ಹೊರಬಿದ್ದಿದೆ.
ಭಾರತೀಯ ಕಾಲಮಾನದ ಪ್ರಕಾರ ಭಾರತ- ಬಾಂಗ್ಲಾ ಪಂದ್ಯ ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದೆ. ಅದೇ ಆಸ್ಟ್ರೇಲಿಯಾದಲ್ಲಿ ಪಂದ್ಯ ಸಂಜೆ 7:30ಕ್ಕೆ ಶುರುವಾಗಲಿದೆ. ಶುಭ ಸುದ್ದಿ ಎಂದರೆ ಬುಧವಾರ ಬೆಳಗ್ಗಿನಿಂದ ಅಡಿಲೇಡ್ನಲ್ಲಿ ಮಳೆ ಆಗಿಲ್ಲ. ಹವಾಮಾನ ಬದಲಾಗುತ್ತಿದ್ದು ಮೋಡ ಕವಿದ ವಾತಾವರಣ ಇದೆಯಷ್ಟೆ. ಬುಧವಾರ ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ಅಡಿಲೇಡ್ನಲ್ಲಿ ಮಳೆ ಸದ್ದು ಇಲ್ಲ ಎಂದು ಇನ್ಸೈಡ್ ಸ್ಫೋರ್ಟ್ಸ್ ವರದಿ ಮಾಡಿದೆ. ಪಂದ್ಯ ನಡೆಯುವ ಸಮಯದಲ್ಲಿ ಕೂಡ ಇದೇರೀತಿ ಇದ್ದರೆ ರೋಚಕ ಮ್ಯಾಚ್ ನಿರೀಕ್ಷಿಸಬಹುದು.
The ground where all the fireworks started in Australia. First in 2019 and then off course after the spectacular 36 all out @TheAdelaideOval #ZIMvNED #INDvBAN @cricketworldcup @ICC pic.twitter.com/36pAkJoG2B
— Ravi Shastri (@RaviShastriOfc) November 2, 2022
ಅಡಿಲೇಡ್ನಲ್ಲಿ ಮಂಗಳವಾರ ನಿರಂತರವಾಗಿ ಮಳೆಯಾಗಿದ್ದು ಬುಧವಾರವೂ ಸಹ ಮಳೆಯಾಗಬಹುದು ಎಂದು ಹೇಳಲಾಗಿತ್ತು. ಆಸ್ಟ್ರೇಲಿಯಾದ ಹವಾಮಾನ ಇಲಾಖೆಯ ವರದಿಯ ಪ್ರಕಾರ, ಬುಧವಾರ ಸಂಜೆ ಶೇಕಡ 60 ರಷ್ಟು ಮಳೆಯಾಗುವ ಸಾಧ್ಯತೆಯಿದೆಯಂತೆ. ಅಷ್ಟೇ ಅಲ್ಲದೆ ದಿನವಿಡೀ ಮೋಡ ಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿತ್ತು. ಗಾಳಿ ಕೂಡ 20ರಿಂದ 30 ಕಿ.ಮೀ ವೇಗದಲ್ಲಿ ಬೀಸಲಿದೆಯಂತೆ. ಆದರೆ, ಬುಧವಾರ ಬೆಳಗ್ಗಿನಿಂದ ಮೋಡ ಕವಿದ ವಾತಾವರಣವಿದ್ದರೂ ಮಳೆಯ ಸೂಚನೆ ಇಲ್ಲ ಎಂದು ತಿಳಿದುಬಂದಿದೆ.
ಭಾರತ ತಂಡ ಈ ಬಾರಿಯ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದುಕೊಳ್ಳಲು ಎಡವುತ್ತಿದೆ. ಕೆಎಲ್ ರಾಹುಲ್ ಸತತ ವೈಫಲ್ಯ ಅನುಭವಿಸುತ್ತಿದ್ದರೆ ನಾಯಕ ರೋಹಿತ್ ಶರ್ಮಾ ಬ್ಯಾಟ್ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿಲ್ಲ. ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಕಡೆಯಿಂದ ನೈಜ್ಯ ಇನ್ನಿಂಗ್ಸ್ ನಿರೀಕ್ಷಿಸಲಾಗಿದೆ. ದಿನೇಶ್ ಕಾರ್ತಿಕ್ ಇಂಜುರಿಗೆ ತುತ್ತಾಗಿರುವ ಪರಿಣಾಮ ಇಂದು ರಿಷಭ್ ಪಂತ್ ಆಡಬಹುದು. ಅಕ್ಷರ್ ಪಟೇಲ್ ಕೂಡ ಪ್ಲೇಯಿಂಗ್ ಇಲೆವೆನ್ ಆಡುವ ಸಂಭವವಿದೆ. ಇತ್ತ ಬಾಂಗ್ಲಾದೇಶ ತಂಡವನ್ನು ಕಡೆಗಣಿಸುವಂತಿಲ್ಲ. ಅಂಕಿ-ಅಂಶ ಗಮನಿಸಿದರೆ ಭಾರತ ಮೇಲುಗೈ ಸಾಧಿಸಿರಬಹುದು. ಆದರೆ, ಬಹುತೇಕ ಎಲ್ಲ ಪಂದ್ಯಗಳಲ್ಲಿ ಟೀಮ್ ಇಂಡಿಯಾಕ್ಕೆ ಬಾಂಗ್ಲಾ ಕಠಿಣ ಪೈಪೋಟಿ ನೀಡಿದೆ.