ENG vs NZ: 152 ಕಿ.ಮೀ ವೇಗದ ಎಸೆತವನ್ನು ಅಷ್ಟೇ ವೇಗವಾಗಿ ಸಿಕ್ಸರ್ಗಟ್ಟಿದ ಕಿವೀಸ್ ಬ್ಯಾಟರ್..! ವಿಡಿಯೋ
T20 World Cup 2022: 6ನೇ ಓವರ್‌ನ ಕೊನೆಯ ಎಸೆತದಲ್ಲಿ ಅದ್ಭುತ ದಾಖಲೆ ಬರೆದ ವುಡ್, ಈ ಎಸೆತವನ್ನು ಗಂಟೆಗೆ 155 ಕಿಲೋಮೀಟರ್ ವೇಗದಲ್ಲಿ ಬೌಲ್ ಮಾಡಿದರು. ಈ ಮೂಲಕ ಈ ಆವೃತ್ತಿಯ ಟಿ20 ವಿಶ್ವಕಪ್ನ ಅತ್ಯಂತ ವೇಗದ ಎಸೆತ ಎಂಬ ಖ್ಯಾತಿಗೆ ವುಡ್ ಎಸೆತ ಪಾತ್ರವಾಯಿತು.
ಟಿ20 ವಿಶ್ವಕಪ್ನ (T20 World Cup 2022) ಸೂಪರ್ 12 ಸುತ್ತಿನಲ್ಲಿ ಮುಖಾಮುಖಿಯಾಗಿದ್ದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಅಭಿಮಾನಿಗಳಿಗೆ ಮನರಂಜನೆ ರಸದೌತಣ ಉಣಬಡಿಸಿವೆ. ಈ ಪಂದ್ಯದಲ್ಲಿ ಬಟ್ಲರ್ ಪಡೆ ಕೇನ್ ಪಡೆಯನ್ನು ಮಣಿಸುವುದರೊಂದಿಗೆ ಸೆಮಿ ಫೈನಲ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಈ ಮೂಲಕ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾಕ್ಕೆ ಈ ಪಂದ್ಯದ ಫಲಿತಾಂಶ ನುಂಗಲಾರದ ತುತ್ತಾಗಿದೆ. ಈ ಎಲ್ಲದರ ನಡುವೆ ಇಂದು ನಡೆದ ಪಂದ್ಯದಲ್ಲಿ ಈ ಬಾರಿಯ ಟಿ20 ವಿಶ್ವಕಪ್ನ ದಾಖಲೆಗಳ ಪುಟಕ್ಕೆ ಮತ್ತೊಂದು ದಾಖಲೆ ಸೇರಿಕೊಂಡಿದೆ. ಇಂಗ್ಲೆಂಡ್ ವೇಗಿ ಮಾರ್ಕ್ವುಡ್ (Mark Wood) ಈ ಆವೃತ್ತಿಯ ವಿಶ್ವಕಪ್ನ ಅತ್ಯಂತ ವೇಗದ ಎಸೆತವನ್ನು ಬೌಲ್ ಮಾಡುವುದರೊಂದಿಗೆ ನೂತನ ದಾಖಲೆ ಬರೆದಿದ್ದಾರೆ. ಹಾಗೆಯೇ ಈ ವೇಗದ ಎಸೆತಕ್ಕೆ ಅಷ್ಟೇ ವೇಗವಾಗಿ ಬೌಂಡರಿ ಸಿಡಿಸುವ ಮೂಲಕ ಕಿವೀಸ್ ಬ್ಯಾಟರ್ ಗ್ಲೆನ್ ಫಿಲಿಫ್ಸ್ (Glenn Phillips) ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ನಾಯಕ ಬಟ್ಲರ್ ಹಾಗೂ ಹೆಲ್ಸ್ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಬ್ಯಾಟ್ಸ್ಮನ್ಗಳು ಆಂಗ್ಲರ ದಾಳಿಗೆ ಸಿಲುಕಿ ತತ್ತರಿಸಿ ಹೋದರು. ತಂಡದ ಪರ ಗ್ಲೆನ್ ಫಿಲಿಪ್ಸ್ ಬಿಟ್ಟರೆ ಮತ್ತ್ಯಾವ ಆಟಗಾರನೂ ಬೃಹತ್ ಇನ್ನಿಂಗ್ಸ್ ಕಟ್ಟಲಿಲ್ಲ. ನಾಯಕ ಕೇನ್ 40 ರನ್ಗಳ ಇನ್ನಿಂಗ್ಸ್ ಆಡಿದರು ಕೂಡ ಅವರ ಇನ್ನಿಂಗ್ಸ್ ಆಮೆ ವೇಗದಲ್ಲಿ ಸಾಗಿತ್ತು. ಹೀಗಾಗಿ ಅಂತಿಮವಾಗಿ ಕಿವೀಸ್ ತಂಡ ಆಂಗ್ಲರ ಎದುರು 20 ರನ್‌ಗಳಿಂದ ಸೋಲೊಪ್ಪಿಕೊಂಡಿತು.
ಪಂದ್ಯಾವಳಿಯ ಅತ್ಯಂತ ವೇಗದ ಎಸೆತ
ಈ ಪಂದ್ಯದಲ್ಲಿ ಇಂಗ್ಲೆಂಡ್ ವೇಗಿ ಮಾರ್ಕ್ವುಡ್ ನ್ಯೂಜಿಲೆಂಡ್ ಇನ್ನಿಂಗ್ಸ್‌ನ ಆರನೇ ಓವರ್ ಬೌಲ್ ಮಾಡಿದರು. ಈ ಓವರ್‌ನ ಕೊನೆಯ ಎಸೆತದಲ್ಲಿ ಅದ್ಭುತ ದಾಖಲೆ ಬರೆದ ವುಡ್, ಈ ಎಸೆತವನ್ನು ಗಂಟೆಗೆ 155 ಕಿಲೋಮೀಟರ್ ವೇಗದಲ್ಲಿ ಬೌಲ್ ಮಾಡಿದರು. ಈ ಮೂಲಕ ಈ ಆವೃತ್ತಿಯ ಟಿ20 ವಿಶ್ವಕಪ್ನ ಅತ್ಯಂತ ವೇಗದ ಎಸೆತ ಎಂಬ ಖ್ಯಾತಿಗೆ ವುಡ್ ಎಸೆತ ಪಾತ್ರವಾಯಿತು. ಆದರೆ ಈ ವೇಗದ ಎಸೆತವನ್ನು ಅಷ್ಟೇ ವೇಗವಾಗಿ ಬೌಂಡರಿಗಟ್ಟುವಲ್ಲಿ ಫಿಲಿಪ್ಸ್ ಯಶಸ್ವಿಯಾದರು.
152 ಕಿಮೀ ವೇಗದ ಎಸೆತಕ್ಕೆ ಭರ್ಜರಿ ಸಿಕ್ಸರ್
ಇದಾದ ನಂತರ ವುಡ್ ಇನಿಂಗ್ಸ್ನ 12ನೇ ಓವರ್ ಬೌಲ್ ಮಾಡಿದರು. ಈ ಓವರ್‌ನಲ್ಲೂ ತಮ್ಮ ವೇಗವನ್ನು ತೋರಿಸಿದ ವುಡ್, ಓವರ್‌ನ ಮೂರನೇ ಎಸೆತವನ್ನು 152 ಕಿಮೀ ವೇಗದಲ್ಲಿ ಬೌಲ್ ಮಾಡಿದರು. ಆದರೆ ಈ ಎಸೆತದಲ್ಲಿ ಫಿಲಿಪ್ಸ್ ಲಾಂಗ್ ಆನ್‌ನಲ್ಲಿ ಸಿಕ್ಸರ್ ಬಾರಿಸಿದರು.
ಈ ಪಂದ್ಯದಲ್ಲಿ ಕಿವೀಸ್ ಪರ ಏಕಾಂಗಿ ಹೋರಾಟ ನಡೆಸಿದ ಫಿಲಿಪ್ಸ್, ಕೇವಲ 36 ಎಸೆತಗಳನ್ನು ಎದುರಿಸಿ ನಾಲ್ಕು ಬೌಂಡರಿ, ಮೂರು ಸಿಕ್ಸರ್‌ಗಳ ನೆರವಿನಿಂದ 62 ರನ್ ಗಳಿಸಿದರು. 18ನೇ ಓವರ್‌ನ ಮೂರನೇ ಎಸೆತದಲ್ಲಿ ಸ್ಯಾಮ್ ಕರನ್ ಅವರನ್ನು ಔಟ್ ಮಾಡಿದರು. ಅಂತಿಮವಾಗಿ ನ್ಯೂಜಿಲೆಂಡ್ ತಂಡ 20 ಓವರ್ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಲಷ್ಟೇ ಶಕ್ತವಾಯಿತು.
Published On - 6:59 pm, Tue, 1 November 22