IND vs AUS: ಟಿ20 ಕ್ರಿಕೆಟ್ ಇತಿಹಾಸದಲ್ಲಿ ವಿಶಿಷ್ಟ ದಾಖಲೆ ಬರೆದ ಭಾರತದ ಅಗ್ರ ಮೂವರು ಆಟಗಾರರು..!
IND vs AUS: ಟೀಂ ಇಂಡಿಯಾ ಪರ ಅಗ್ರ ಕ್ರಮಾಂಕದ ಅಂದರೆ ಆರಂಭಿಕರಿಬ್ಬರು ಹಾಗೂ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಬ್ಯಾಟ್ಸ್‌ಮನ್‌ಗಳು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅರ್ಧಶತಕ ಗಳಿಸಿದ್ದು ಇದೇ ಮೊದಲು.
ತಿರುವನಂತಪುರಂನಲ್ಲಿ (Trivandrum) ನಡೆದ ಎರಡನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 44 ರನ್‌ಗಳಿಂದ ಸೋಲಿಸಿದ ಟೀಂ ಇಂಡಿಯಾ (India vs Australia) ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾದ ನಾಯಕ ಮ್ಯಾಥ್ಯೂ ವೇಡ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಮೂವರ ಸ್ಫೋಟಕ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾಕ್ಕೆ 236 ರನ್‌ಗಳ ಗುರಿಯನ್ನು ನೀಡಿತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ಕೇವಲ 191 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಟಾಪ್ ಮೂವರು ಬ್ಯಾಟರ್ಗಳು ಅರ್ಧಶತಕ ಸಿಡಿಸಿದ್ದು, ಟಿ20 ಇತಿಹಾಸದಲ್ಲಿ ಹೊಸ ದಾಖಲೆಯಾಯಿತು.
ಮೂವರ ಅರ್ಧಶತಕ
ಈ ಪಂದ್ಯದಲ್ಲಿ ಭಾರತದ ಪರ ಯಶಸ್ವಿ ಜೈಸ್ವಾಲ್ ಮತ್ತು ರುತುರಾಜ್ ಗಾಯಕ್ವಾಡ್ ಸ್ಫೋಟಕ ಇನ್ನಿಂಗ್ಸ್ ಆಡಿದರು. ಪವರ್‌ಪ್ಲೇಯಲ್ಲಿ ಇಬ್ಬರೂ 71 ರನ್‌ಗಳ ಜೊತೆಯಾಟ ನಡೆಸಿದರು. ಅದರಲ್ಲೂ ಸೀನ್ ಅಬಾಟ್ ಬೌಲ್ ಮಾಡಿದ ನಾಲ್ಕನೇ ಓವರ್‌ನಲ್ಲಿ ಜೈಸ್ವಾಲ್ ಬರೋಬ್ಬರಿ 24 ರನ್ ಕಲೆಹಾಕಿದರು. ಇದಾದ ಬಳಿಕ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ ಬಿಗ್ ಶಾಟ್ ಆಡುವ ಯತ್ನದಲ್ಲಿ 53 ರನ್ ಗಳಿಸಿ ಔಟಾದರು. ನಂತರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ಇಶಾನ್ ಕಿಶನ್, ಬಂದ ಕೂಡಲೇ ಆಕ್ರಮಣಕಾರಿ ಬ್ಯಾಟಿಂಗ್ ಆರಂಭಿಸಿ 52 ರನ್ ಚಚ್ಚಿದರು. ಆರಂಭಿಕ ರುತುರಾಜ್ ಗಾಯಕ್ವಾಡ್ ಈ ಪಂದ್ಯದಲ್ಲಿ 58 ರನ್‌ಗಳ ಇನ್ನಿಂಗ್ಸ್ ಆಡಿದರು.
IND vs AUS 2nd T20 Highlights: ಆಸ್ಟ್ರೇಲಿಯಾ ವಿರುದ್ಧ ಸತತ 2ನೇ ಪಂದ್ಯ ಗೆದ್ದ ಭಾರತ
ಭಾರತದ ಪರ ಇದೇ ಮೊದಲು
ಇದರೊಂದಿಗೆ ಟೀಂ ಇಂಡಿಯಾ ಪರ ಅಗ್ರ ಕ್ರಮಾಂಕದ ಅಂದರೆ ಆರಂಭಿಕರಿಬ್ಬರು ಹಾಗೂ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಬ್ಯಾಟ್ಸ್‌ಮನ್‌ಗಳು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅರ್ಧಶತಕ ಗಳಿಸಿದ್ದು ಇದೇ ಮೊದಲು. ಮೂವರು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಅರ್ಧಶತಕಗಳನ್ನು ಬಾರಿಸಿದ್ದು ಒಟ್ಟಾರೆಯಾಗಿ ವಿಶ್ವ ಕ್ರಿಕೆಟ್ನಲ್ಲಿ ಐದನೇ ಬಾರಿಗೆ ಸಂಭವಿಸಿತು.
ಈ ಹಿಂದೆ ಮೂವರಿಂದ ಅರ್ಧಶತಕ, ಆದರೆ?
ಗಮನಾರ್ಹವಾಗಿ, ಭಾರತದ ಮೂವರು ಆಟಗಾರರು ಈ ಹಿಂದೆ ಟಿ20 ಮಾದರಿಯ ಒಂದು ಇನ್ನಿಂಗ್ಸ್‌ನಲ್ಲಿ ಐವತ್ತಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಆದರೆ ಅದು ಅಗ್ರ ಮೂರು ಆಟಗಾರರಿಂದ ಬಂದಿಲ್ಲ. 2007 ರಲ್ಲಿ ಡರ್ಬನ್‌ನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ ಮತ್ತು ಯುವರಾಜ್ ಸಿಂಗ್ ತಲಾ ಐವತ್ತು ಪ್ಲಸ್ ಸ್ಕೋರ್ ಸಿಡಿಸಿದ್ದರು. ಆದರೆ ಈ ಮೂವರು ಕ್ರಮವಾಗಿ ಟಾಪ್ ಮೂವರಾಗಿ ಕಣಕ್ಕಿಳಿದಿರಲಿಲ್ಲ. ಹಾಗೆಯೇ 2019 ರಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಐವತ್ತಕ್ಕೂ ಹೆಚ್ಚು ಸ್ಕೋರ್ ದಾಖಲಿಸಿದ್ದರು. ನಂತರ 2022 ರಲ್ಲಿ ನೆದರ್ಲೆಂಡ್ಸ್ ವಿರುದ್ಧ ರೋಹಿತ್, ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ತಲಾ ಅರ್ಧಶತಕ ಸಿಡಿಸಿದ್ದರು. ಆದರೆ ಈ ಮೂವರು ಟಾಪ್ ಮೂರು ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದು ಈ ಸಾಧನೆ ಮಾಡಿರಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.