
ಇಂದೋರ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಿನ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ಕೇವಲ 109 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಇನ್ನಿಂಗ್ಸ್ ಹಿನ್ನಡೆಯ ಭೀತಿಯಲ್ಲಿದೆ. ಕಾಂಗರೂಗಳ ಸ್ಪಿನ್ ದಾಳಿಗೆ ತತ್ತರಿಸಿದ ರೋಹಿತ್ ಬಳಗದ ಯಾವ ಬ್ಯಾಟರ್ ಕೂಡ ಹೆಚ್ಚು ಹೊತ್ತು ಮೈದಾನದಲ್ಲಿರಲಿಲ್ಲ. ಹೀಗಾಗಿ 34 ಓವರ್ಗಳ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ (Team India) 109 ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿತು. ಈ ಅಲ್ಪ ರನ್‌ಗಳಿಗೆ ಆಲ್ಔಟ್ ಆಗುವ ಮೂಲಕ ತವರು ನೆಲದಲ್ಲಿ ಇದುವರೆಗೆ ಆಸ್ಟ್ರೇಲಿಯಾ ವಿರುದ್ಧ ಆಡಿದ ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾ ಗಳಿಸಿದ ನಾಲ್ಕನೇ ಅತಿ ಕಡಿಮೆ ಸ್ಕೋರ್ ಇದಾಗಿದೆ. ಕಳೆದ 20 ವರ್ಷಗಳಲ್ಲಿ ಮೂರು ಬಾರಿ ಟೀಂ ಇಂಡಿಯಾ 109ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಬೇಡದ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದೆ.
ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಮಾಡಿದ ಅತಿ ಕಡಿಮೆ ಸ್ಕೋರ್ 104 ರನ್. 2004ರಲ್ಲಿ ಮುಂಬೈನಲ್ಲಿ ನಡೆದ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಕೇವಲ 104 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಆ ಬಳಿಕ 2017ರಲ್ಲಿ ಪುಣೆಯಲ್ಲಿ ನಡೆದ ಟೆಸ್ಟ್‌ನಲ್ಲಿ ಮೊದಲ ಇನಿಂಗ್ಸ್ನಲ್ಲಿ 105 ರನ್‌ಗಳಿಗೆ ಸೀಮಿತವಾಗಿದ್ದ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 107 ರನ್‌ಗಳಿಗೆ ಆಲೌಟ್ ಆಗಿತ್ತು.
ಇದರೊಂದಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿ 2023 ರ ಮೂರನೇ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಹೆಸರಿನಲ್ಲಿ ಮತ್ತೊಂದು ಕೆಟ್ಟ ದಾಖಲೆ ದಾಖಲಾಗಿದೆ. ಮೂರನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಕೇವಲ 33.2 ಓವರ್ ಮಾತ್ರ ಬ್ಯಾಟಿಂಗ್ ಮಾಡಿತು. ಈ ಮೂಲಕ ಟೀಂ ಇಂಡಿಯಾ ತವರಿನಲ್ಲಿ ಆಡಿದ ಟೆಸ್ಟ್ ಸರಣಿಯಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಇಷ್ಟು ಕಡಿಮೆ ಓವರ್ ಬ್ಯಾಟಿಂಗ್ ಮಾಡಿದ್ದು, ಇದು ನಾಲ್ಕನೇ ಬಾರಿ.
IND vs AUS: ಜಡೇಜಾ ವಿಕೆಟ್ ಉರುಳಿಸಿ ಶೇನ್ ವಾರ್ನ್ ದಾಖಲೆ ಮುರಿದ ನಾಥನ್ ಲಿಯಾನ್
ನಾಗ್ಪುರ ಮತ್ತು ದೆಹಲಿ ಟೆಸ್ಟ್‌ನಲ್ಲಿ ಆಸೀಸ್ ಬೌಲರ್ಗಳನ್ನು ಬೆಂಡೆತ್ತಿದ್ದ ಟೀಂ ಇಂಡಿಯಾ ಇಂದೋರ್ ಟೆಸ್ಟ್‌ನಲ್ಲಿ ಅಟ್ಟರ್ ಫ್ಲಾಪ್ ಆಯಿತು. ಪಂದ್ಯದ ಮೊದಲ ದಿನದ ಎರಡನೇ ಸೆಷನ್‌ನಲ್ಲಿ ಟೀಂ ಇಂಡಿಯಾ ಆಲೌಟ್ ಆಯಿತು. ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಹೊತ್ತು ನಿಲ್ಲಲು ಅವಕಾಶ ನೀಡದ ಆಸ್ಟ್ರೇಲಿಯಾದ ಸ್ಪಿನ್ನರ್‌ಗಳು ಪರಾಕ್ರಮ ತೊರಿದರು. ಇಲ್ಲಿ ಮ್ಯಾಥ್ಯೂ ಕುಹ್ನೆಮನ್ ಐದು ವಿಕೆಟ್ ಪಡೆದು ಮಿಂಚಿದರೆ, ನಾಥನ್ ಲಿಯಾನ್ ಮೂರು ಮತ್ತು ಟಾಡ್ ಮರ್ಫಿ ಒಂದು ವಿಕೆಟ್ ಪಡೆದರು.
ಬಾರ್ಡರ್ ಗವಾಸ್ಕರ್ ಟ್ರೋಫಿ 2023 ರ ಭಾಗವಾಗಿ ಮೂರನೇ ಟೆಸ್ಟ್‌ನಲ್ಲಿ ಭಾರತದ ಆರಂಭಿಕ ಜೋಡಿ ಮೊದಲ ವಿಕೆಟ್‌ಗೆ 27 ರನ್ ಸೇರಿಸಿತು. ಆದರೆ ಮೊದಲ ವಿಕೆಟ್ ಪತನವಾದ ತಕ್ಷಣ, ಬ್ಯಾಕ್ ಟು ಬ್ಯಾಕ್ ವಿಕೆಟ್‌ಗಳನ್ನು ಕಳೆದುಕೊಂಡಿತು. 18 ರನ್‌ಗಳ ಅಂತರದಲ್ಲಿ ಐವರು ಬ್ಯಾಟ್ಸ್‌ಮನ್‌ಗಳು ಔಟಾದರು. 45 ರನ್‌ಗಳಿಗೆ ತಂಡದ ಅರ್ಧದಷ್ಟು ಮಂದಿ ಪೆವಿಲಿಯನ್ ತಲುಪಿದರು. ಆ ಬಳಿಕ ಕೆಳ ಕ್ರಮಾಂಕದ ಆಟಗಾರರು ಕೆಲಕಾಲ ಹೋರಾಟ ನಡೆಸಿದರೂ ಅಂತಿಮವಾಗಿ ಭಾರತ ತಂಡ 109 ರನ್ ಗಳಿಸಲಷ್ಟೇ ಶಕ್ತವಾಯಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ