ಟೀಮ್ ಇಂಡಿಯಾ (IND) ಮತ್ತು ಬಾಂಗ್ಲಾದೇಶ (BAN) ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಡಿ.14ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯಕ್ಕಾಗಿ ಉಭಯ ತಂಡಗಳು ಸಕಲ ತಯಾರಿ ಮಾಡಿಕೊಂಡಿವೆ. ಈಗಾಗಲೇ ಏಕದಿನ ಸರಣಿ ಗೆದ್ದಿರುವ ಬಾಂಗ್ಲಾ ತಂಡ, ಟೆಸ್ಟ್ ಸರಣಿಯಲ್ಲೂ ಗೆಲುವಿನ ಶುಭಾರಂಭ ಮಾಡಲು ಯತ್ನಿಸಲಿದೆ. ಇನ್ನೊಂದೆಡೆ ಏಕದಿನ ಸರಣಿ ಸೋತಿರುವ ಟೀಂ ಇಂಡಿಯಾ (Team India) ಶತಾಯಗತಾಯ ಟೆಸ್ಟ್ ಸರಣಿ ಗೆಲ್ಲುವ ಪಣತೊಟ್ಟಿದೆ. ಟೀಂ ಇಂಡಿಯಾದ ಹಲವು ಆಟಗಾರರು ಗಾಯಗೊಂಡಿರುವುದರಿಂದ ಯುವ ಆಟಗಾರರಿಗೆ ಅವಕಾಶ ಸಿಗಲಿದೆ. ರೋಹಿತ್ ಶರ್ಮಾ (Rohit Sharma) ಗಾಯಗೊಂಡಿರುವುದರಿಂದ ಟೀಂ ಇಂಡಿಯಾ ನಾಯಕತ್ವವನ್ನು ಕೆಎಲ್ ರಾಹುಲ್‌ಗೆ (KL Rahul) ನೀಡಲಾಗಿದೆ.
ಆದರೆ ಈ ಹಿಂದೆ ಈ ಎರಡು ಟೆಸ್ಟ್ ಪಂದ್ಯಗಳಿಗೆ ನಿಗದಿ ಮಾಡಿದ ಸಮಯವನ್ನು ಕೊಂಚ ಬದಲಾವಣೆ ಮಾಡಲಾಗಿದೆ. ಈ ಮೊದಲು 3 ಏಕದಿನ ಪಂದ್ಯಗಳು ಹನ್ನೊಂದು ಗಂಟೆಗೆ ಆರಂಭವಾಗಿದ್ದವು. ಆದರೆ ಈ 2 ಟೆಸ್ಟ್ ಪಂದ್ಯಗಳ ಸರಣಿಯ ಸಮಯವನ್ನು ಬದಲಾಯಿಸಲಾಗಿದ್ದು, ಒಂಬತ್ತು ಗಂಟೆಗೆ ಪಂದ್ಯ ಆರಂಭವಾಗಲಿದೆ . ಇದರೊಂದಿಗೆ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದ್ದು, ಇಬ್ಬರು ಹೊಸ ಆಟಗಾರರಿಗೆ ತಂಡದಲ್ಲಿ ಅವಕಾಶ ಸಿಕ್ಕಿದೆ.
PAK vs ENG: ತವರಿನಲ್ಲೇ ಬಾಬರ್ ತಂಡಕ್ಕೆ ಮುಖಭಂಗ; ಪಾಕ್ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಆಂಗ್ಲರು..!
ಮೊದಲ ಟೆಸ್ಟ್‌ಗೆ ರೋಹಿತ್ ಅಲಭ್ಯ
ಎರಡನೇ ಏಕದಿನ ಪಂದ್ಯದ ವೇಳೆ ಗಾಯಗೊಂಡಿದ್ದ ನಾಯಕ ರೋಹಿತ್ ಶರ್ಮಾ, ಮೂರನೇ ಏಕದಿನ ಪಂದ್ಯದಿಂದ ಹೊರಗುಳಿದಿದ್ದರು. ಅಲ್ಲದೆ ಹೆಚ್ಚಿನ ಚಿಕಿತ್ಸೆಗೆಂದು ಮುಂಬೈಗೆ ವಾಪಸ್ಸಾಗಿದ್ದ ರೋಹಿತ್ ವೈದ್ಯರ ನಿರ್ದೇಶನದ ಮೇರೆಗೆ ಮೊದಲ ಟೆಸ್ಟ್ನಿಂದ ಹೊರುಗಳಿಯಲಿದ್ದಾರೆ. ಅಲ್ಲದೆ ಎರಡನೇ ಟೆಸ್ಟ್‌ಗೆ ರೋಹಿತ್ ಲಭ್ಯರಾಗುತ್ತಾರೋ, ಇಲ್ಲವೋ ಎಂಬುದು ವೈದ್ಯರು ನೀಡುವ ವರದಿ ಮೇಲೆ ಅವಲಂಭಿತವಾಗಿರುತ್ತದೆ. ಹೀಗಾಗಿ ಮೊದಲ ಟೆಸ್ಟ್‌ಗೆ ರೋಹಿತ್ ಬದಲು ಅಭಿಮನ್ಯು ಈಶ್ವರನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.
ರೋಹಿತ್ ಜೊತೆ ಮತ್ತಿಬ್ಬರಿಗೂ ಇಂಜುರಿ
ರೋಹಿತ್ ಮಾತ್ರವಲ್ಲ, ಭಾರತದ ಇನ್ನೂ ಇಬ್ಬರು ಅನುಭವಿ ಆಟಗಾರರು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಈ ಹಿಂದೆ ಇಂಜುರಿಯಿಂದ ತಂಡದಿಮದ ಹೊರಗುಳಿದಿದ್ದ ಮೊಹಮ್ಮದ್ ಶಮಿ ಮತ್ತು ರವೀಂದ್ರ ಜಡೇಜಾ ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಆದ್ದರಿಂದ ಅವರು ಪ್ರಸ್ತುತ ಟೆಸ್ಟ್ ಸರಣಿಯಲ್ಲಿ ಆಡಲು ಸಾಧ್ಯವಾಗುವುದಿಲ್ಲ. “ವೇಗದ ಬೌಲರ್ ಮೊಹಮ್ಮದ್ ಶಮಿ ಮತ್ತು ಆಲ್ ರೌಂಡರ್ ರವೀಂದ್ರ ಜಡೇಜಾ ಅವರು ತಮ್ಮ ಭುಜ ಮತ್ತು ಮೊಣಕಾಲಿನ ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ ಟೆಸ್ಟ್ ಸರಣಿಯಿಂದ ಈ ಇಬ್ಬರು ಹೊರಗುಳಿದಿದ್ದಾರೆ ಎಂದು ಬಿಸಿಸಿಐ ಹೇಳಿದೆ.
ಇವರಿಬ್ಬರ ಬದಲಿಗೆ ನವದೀಪ್ ಸೈನಿ ಮತ್ತು ಸೌರಭ್ ಕುಮಾರ್ ತಂಡಕ್ಕೆ ಸೇರ್ಪಡೆಗೊಂಡಿದ್ದು, ಇವರೊಂದಿಗೆ ಜಯದೇವ್ ಉನದ್ಕಟ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಮೊದಲ ಟೆಸ್ಟ್‌ಗೆ ಟೀಂ ಇಂಡಿಯಾ
ಕೆಎಲ್ ರಾಹುಲ್(ನಾಯಕ), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಕೆಎಸ್ ಭರತ್, ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಅಭಿಮನ್ಯು ಈಶ್ವರನ್, ನವದೀಪ್ ಸೈನಿ, ಸೌರಬ್ ಕುಮಾರ್, ಜಯದೇವ್ ಉನಾದ್ಕಟ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:35 pm, Mon, 12 December 22