ದಾಖಲೆಯ ದ್ವಿಶತಕ, ತಂಡದಲ್ಲಿ ಸಂಚಲನ; ದುರಂತ ಅಂತ್ಯದತ್ತ ಟೀಂ ಇಂಡಿಯಾ ಆರಂಭಿಕನ ವೃತ್ತಿ ಬದುಕು!
Team India: ಮುಂಬರುವ ಶ್ರೀಲಂಕಾ ಸರಣಿಯು ಧವನ್‌ಗೆ ನಿರ್ಣಾಯಕವಾಗಿದೆ. ಆದರೆ ಇನ್ಫಾರ್ಮ್ ಇಶಾನ್ ಕಿಶನ್ ಅವರನ್ನು ಟೀಮ್ ಮ್ಯಾನೇಜ್‌ಮೆಂಟ್ ಹೇಗೆ ತಂಡದಿಂದ ಕೈಬಿಡುತ್ತದೆ ಎಂಬುದು ಕುತೂಹಲಕಾರಿಯಾಗಿದೆ ಎಂದು ಕಾರ್ತಿಕ್ ಹೇಳಿದ್ದಾರೆ.
ಬಾಂಗ್ಲಾದೇಶ ವಿರುದ್ಧದ (India and Bangladesh) ಮೂರನೇ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ (Ishan Kishan) 210 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದ್ದೆ ಬಂತು. ಟೀಂ ಇಂಡಿಯಾದಲ್ಲಿ ಬದಲಾವಣೆಯ ಪರ್ವ ಆರಂಭವಾಗಿದೆ ಎಂಬ ಮಾತು ಕೇಳಲಾರಂಭಿಸಿದೆ. ಏಷ್ಯಾಕಪ್ನಿಂದ ಹಿಡಿದು, ಟಿ20 ವಿಶ್ವಕಪ್ನಲ್ಲೂ ಕಳಪೆ ಪ್ರದರ್ಶನ ನೀಡಿದ ಟೀಂ ಇಂಡಿಯಾದಲ್ಲಿ (Team India) ಹಲವು ಬದಲಾವಣೆ ಮಾಡಬೇಕೆಂಬ ಕೂಗು ಜೋರಾಗಿ ಕೇಳಲಾರಂಭಿಸಿದೆ. ಇದಕ್ಕೆ ಪೂರಕವೆಂಬಂತೆ ಮೂರನೇ ಏಕದಿನ ಪಂದ್ಯದಲ್ಲಿ ನಾಯಕ ರೋಹಿತ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ಕಿಶನ್ ಯಾರೂ ಕೂಡ ನಿರೀಕ್ಷಿಸದ ಪ್ರದರ್ಶನ ನೀಡಿದ್ದರು. ಇದರೊಂದಿಗೆ ಕಿಶನ್ ಆರಂಭಿಕ ಸ್ಥಾನಕ್ಕೆ ನಾನು ಸಿದ್ದ ಎಂಬುದನ್ನು ಸಾಭಿತುಪಡಿಸಿದ್ದರು. ಇದೀಗ ವರ್ಷಗಳಿಂದ ಕಳಪೆ ಪ್ರದರ್ಶನದಿಂದ ಬಳಲುತ್ತಿರುವ ಶಿಖರ್ ಧವನ್‌ಗೆ (Shikhar Dhawan) ಟೀಂ ಇಂಡಿಯಾದ ಕದ ಮುಚ್ಚುವ ಕಾಲ ಸನಿಹವಾಗಿದೆ ಎಂಬ ಮಾತು ಕೇಳಲಾರಂಭಿಸಿದೆ. ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ಸಂಪೂರ್ಣ ವಿಫಲರಾಗಿದ್ದ ಧವನ್ ಮೂರು ಪಂದ್ಯಗಳಲ್ಲಿ ಕೇವಲ 18 ರನ್ ಗಳಿಸಿದರು. ಹೀಗಾಗಿ ಧವನ್ರನ್ನು ಏಕದಿನ ತಂಡದಿಂದ ಕೈಬಿಡಬಿಟ್ಟು ಯುವ ಆಟಗಾರರಿಗೆ ಅವಕಾಶ ನೀಡಿ ಎಂದು ಕ್ರಿಕೆಟ್ ಪಂಡಿತರು ಬಿಸಿಸಿಐಗೆ ಗುದ್ದು ನೀಡಿದ್ದರು. ಈ ವಾದಕ್ಕೆ ಬಲ ತುಂಬಿರುವ ಟೀಂ ಇಂಡಿಯಾ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ (Dinesh Karthik), ಧವನ್‌ಗೆ ಟೀಂ ಇಂಡಿಯಾದಿಂದ ಗೇಟ್ಪಾಸ್ ಸಿಗುವ ಕಾಲ ದೂರದಲ್ಲಿಲ್ಲ ಎಂದಿದ್ದಾರೆ.
2023ರಲ್ಲಿ ನಡೆಯಲ್ಲಿರುವ ಏಕದಿನ ವಿಶ್ವಕಪ್ ಆಡುವುದೊಂದೇ ನನ್ನ ಗುರಿ ಎಂದು ಶಿಖರ್ ಧವನ್ ಈ ಹಿಂದೆ ಹಲವು ಬಾರಿ ಹೇಳಿದ್ದರು. ಆದರೆ, ಬಾಂಗ್ಲಾ ವಿರುದ್ಧದ ಏಕದಿನ ಸರಣಿಯಲ್ಲಿ ಧವನ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಆಡಿದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 7 ರನ್, ಎರಡನೇ ಪಂದ್ಯದಲ್ಲಿ 8 ರನ್ ಮತ್ತು ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ 3 ರನ್ ಗಳಿಸಿದರು. ಹೀಗಾಗಿ ವಿಶ್ವಕಪ್ ಆಡುವ ಧವನ್ ಬಯಕೆಯೊಂದಿಗೆ ಅವರಿಗೆ ತಂಡದಿಂದ ಗೇಟ್ಪಾಸ್ ಸಿಗುವುದು ಖಚಿತವಾಗಿದೆ. ಏಕೆಂದರೆ ಈಗಾಗಲೇ ಆರಂಭಿಕರ ರೂಪದಲ್ಲಿ ಇಶಾನ್ ಕಿಶನ್ ಹಾಗೂ ಶುಭಮನ್ ಗಿಲ್ ಅದ್ಭುತ ಫಾರ್ಮ್ನಲ್ಲಿದ್ದಾರೆ. ಹೀಗಾಗಿ ಈ ಆಟಗಾರರನ್ನು ತಂಡದಿಂದ ಕೈಬಿಟ್ಟು ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡುವುದು ಟೀಮ್ ಮ್ಯಾನೇಜ್ಮೆಂಟ್ಗೆ ಸುಲಭದ ಮಾತಲ್ಲ.
IND vs BAN: ಪಂತ್ ತಂಡದಲ್ಲಿದ್ದರೂ ಪೂಜಾರಗೆ ಉಪನಾಯಕತ್ವ ಪಟ್ಟ ಕಟ್ಟಿದ್ಯಾಕೆ? ರಾಹುಲ್ ಹೇಳಿದ್ದಿದು
ಲಂಕಾ ಸರಣಿಯಲ್ಲಿ ಧವನ್ ಭವಿಷ್ಯ
ಧವನ್ ಭವಿಷ್ಯದ ಬಗ್ಗೆ ಮಾತಾನಾಡಿರುವ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್, ಮುಂಬರುವ ಶ್ರೀಲಂಕಾ ಸರಣಿಯು ಧವನ್‌ಗೆ ನಿರ್ಣಾಯಕವಾಗಿದೆ. ಆದರೆ ಇನ್ಫಾರ್ಮ್ ಇಶಾನ್ ಕಿಶನ್ ಅವರನ್ನು ಟೀಮ್ ಮ್ಯಾನೇಜ್‌ಮೆಂಟ್ ಹೇಗೆ ತಂಡದಿಂದ ಕೈಬಿಡುತ್ತದೆ ಎಂಬುದು ಕುತೂಹಲಕಾರಿಯಾಗಿದೆ. ಸದ್ಯ ಶುಭಮನ್ ಗಿಲ್ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ರೋಹಿತ್ ಶರ್ಮಾ ಬಂದರೆ ಅವರಲ್ಲಿ ಒಬ್ಬರು ಬೆಂಚ್ ಮೇಲೆ ಕುಳಿತುಕೊಳ್ಳಬೇಕು. ಆದ್ದರಿಂದ ಧವನ್ ತಂಡದಿಂದ ಹೊರಹೋಗುವ ಸಾಧ್ಯತೆಗಳಿವೆ. ಹೀಗಾಗಿ ಧವನ್ ವೃತ್ತಿ ಜೀವನಕ್ಕೆ ದುಃಖಕ್ಕರ ವಿದಾಯ ಸಿಗಬಹುದು. ಆದರೆ ಹೊಸ ಆಯ್ಕೆದಾರರು ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ ಎಂದು ಕಾರ್ತಿಕ್ ಹೇಳಿದ್ದಾರೆ.
ಆರಂಭಿಕ ಸ್ಥಾನದಲ್ಲಿ ಹೆಚ್ಚಿದ ಪೈಪೋಟಿ
ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ಕಳೆದ ಕೆಲವು ತಿಂಗಳುಗಳಿಂದ ಏಕದಿನ ತಂಡದಲ್ಲಿ ಖಾಯಂ ಸ್ಥಾನ ಪಡೆದುಕೊಂಡಿರುವ ಶುಭಮನ್ ಗಿಲ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅಲ್ಲದೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿರುವ ಅನುಭವ ಇರುವ ಕಾರಣ ಅವರೇ ಆರಂಭಿಕರಾಗುವ ಸಾಧ್ಯತೆಗಳಿವೆ. ಅಲ್ಲದೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿರುವ ಇಶಾನ್ ಕಿಶನ್ಗೂ ತಂಡದಲ್ಲಿ ಆದ್ಯತೆ ಸಿಗಲಿದೆ. ಹೀಗಾಗಿ ಸದ್ಯ ಶಿಖರ್ ಧವನ್ ಮತ್ತೆ ತಂಡಕ್ಕೆ ಎಂಟ್ರಿಕೊಡುವುದು ತುಸು ಕಷ್ಟ ಎನಿಸುತ್ತಿದೆ.
ಟೀಂ ಇಂಡಿಯಾ ಮುಂದಿನ ಮೂರು ತಿಂಗಳ ಕಾಲ ಬಿಡುವಿಲ್ಲದ ವೇಳಾಪಟ್ಟಿಯನ್ನು ಹೊಂದಿದೆ. ತಂಡವು ಶ್ರೀಲಂಕಾದೊಂದಿಗಿನ ಸರಣಿಯೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಳ್ಳಲಿದ್ದು, ನಂತರ ನ್ಯೂಜಿಲೆಂಡ್, ಅಂತಿಮವಾಗಿ ಐಪಿಎಲ್‌ಗೂ ಮುನ್ನ ಆಸ್ಟ್ರೇಲಿಯಾ ವಿರುದ್ಧ ಸ್ವದೇಶಿ ಸರಣಿಯನ್ನು ಆಡಲಿದೆ. ಹೀಗಾಗಿ ಈ ಸರಣಿಗಳಲ್ಲಿ ಟೀಂ ಇಂಡಿಯಾದ ಏಕದಿನ ತಂಡದ ಆರಂಭಿಕರು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗುವುದಂತೂ ಖಚಿತ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:20 pm, Mon, 12 December 22