IND vs BAN: ‘ಫಿಟ್ ಇಲ್ಲದವರು ಆಡುತ್ತಿದ್ದಾರೆ’; ಎನ್​ಸಿಎ ವಿರುದ್ಧ ಗರಂ ಆದ ನಾಯಕ ರೋಹಿತ್

Rohit Sharma: ಒಬ್ಬ ಆಟಗಾರ ಭಾರತದ ಪರ ಆಡಬೇಕೆಂದರೆ ಆತ ಶೇಕಡಾ 100 ಕ್ಕಿಂತ ಹೆಚ್ಚು ಫಿಟ್ ಆಗಿರಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ರೋಹಿತ್ ಶರ್ಮಾ ಹೇಳಿದರು.

IND vs BAN: ‘ಫಿಟ್ ಇಲ್ಲದವರು ಆಡುತ್ತಿದ್ದಾರೆ’; ಎನ್​ಸಿಎ ವಿರುದ್ಧ ಗರಂ ಆದ ನಾಯಕ ರೋಹಿತ್
ಟೀಂ ಇಂಡಿಯಾ
Follow us
TV9 Web
| Updated By: ಪೃಥ್ವಿಶಂಕರ

Updated on:Dec 08, 2022 | 2:15 PM

ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯನ್ನು ಸೋತ ಬಳಿಕ ಟೀಂ ಇಂಡಿಯಾದಲ್ಲಿರುವ (Team India) ಲೋಪದೋಷಗಳು ಒಂದೊಂದಾಗಿಯೇ ಹೊರಬೀಳಲಾರಂಭಿಸಿವೆ. ತಂಡದ ಸೋಲಿಗೆ ಬ್ಯಾಟಿಂಗ್ ವೈಫಲ್ಯವೇ ಪ್ರಮುಖ ಕಾರಣ ಎನ್ನಲಾಗುತ್ತಿತ್ತು. ಆದರೆ ಇದೀಗ ತಂಡದ ನಾಯಕ ರೋಹಿತ್ ಶರ್ಮಾ ಬೇರೆಯದ್ದೇ ಕಥೆ ಹೇಳುತ್ತಿದ್ದು, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (NCA) ಮೇಲೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಎನ್​ಸಿಎ ಕಾರ್ಯತಂತ್ರದ ಬಗ್ಗೆ ಗಂಭೀರ ಆರೋಪ ಮಾಡಿರುವ ರೋಹಿತ್ ಶರ್ಮಾ (Rohit Sharma), ಅರ್ಧ ಫಿಟ್ ಇರುವ ಆಟಗಾರರೊಂದಿಗೆ ಪಂದ್ಯವನ್ನಾಡಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ. ಇದರರ್ಥ ಆಟಗಾರರ ಫಿಟ್​ನೆಸ್​ ಮೇಲೆ ಕೆಲಸ ಮಾಡುವ ಎನ್​ಸಿಎ ಬಗ್ಗೆ ರೋಹಿತ್ ಅಸಮಾಧಾನಗೊಂಡಿದ್ದಾರೆ.ಇದಕ್ಕೆ ಕಾರಣವೂ ಇದ್ದು, ಇಂಜುರಿ ಬಳಿಕ ಎನ್​ಸಿಎಯಲ್ಲಿ ಪೂರ್ಣ ತರಬೇತಿ ಪಡೆದು ತಂಡಕ್ಕೆ ಮರಳುವ ಆಟಗಾರರು ಕೆಲವೇ ಪಂದ್ಯಗಳ ಬಳಿಕ ಮತ್ತೆ ಇಂಜುರಿಗೆ ತುತ್ತಾಗುತ್ತಿರುವುದು ರೋಹಿತ್ ಆಕ್ರೋಶಕ್ಕೆ ಕಾರಣವಾಗಿದೆ.

ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯದ ಬಳಿಕ ಮಾತನಾಡಿದ ರೋಹಿತ್ ಶರ್ಮಾ, ‘ನಾವು ಎನ್‌ಸಿಎಯಲ್ಲಿ ಕುಳಿತು ಆಟಗಾರರ ಕೆಲಸದ ಹೊರೆಯ ಮೇಲೆ ನಿಗಾ ಇಡಬೇಕಾಗಿದೆ. ಅರ್ಧ ಫಿಟ್ ಇರುವ ಆಟಗಾರರನ್ನು ತಂಡದಲ್ಲಿ ಆಡಿಸುವುದು ಸಮಂಜಸವಲ್ಲ. ದೇಶವನ್ನು ಪ್ರತಿನಿಧಿಸುವುದು ಅತ್ಯಂತ ಹೆಮ್ಮೆ ಮತ್ತು ಗೌರವದ ವಿಷಯ. ಹೀಗಾಗಿ ಆಟಗಾರರು ಸಂಪೂರ್ಣವಾಗಿ ಫಿಟ್ ಆಗದಿದ್ದರೆ ಅದು ಆದರ್ಶ ಪರಿಸ್ಥಿತಿಯಲ್ಲ. ಹೀಗಾಗಿ ನಾವು ಈ ಸಮಸ್ಯೆಯನ್ನು ಆಳವಾಗಿ ಅಧ್ಯಾಯ ಮಾಡಿ, ಅದರ ಹಿಂದಿನ ಕಾರಣ ಏನು ಎಂದು ಕಂಡುಹಿಡಿಯಬೇಕು. ಒಬ್ಬ ಆಟಗಾರ ಭಾರತದ ಪರ ಆಡಬೇಕೆಂದರೆ ಆತ ಶೇಕಡಾ 100 ಕ್ಕಿಂತ ಹೆಚ್ಚು ಫಿಟ್ ಆಗಿರಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ರೋಹಿತ್ ಶರ್ಮಾ ಹೇಳಿದರು.

‘ಶೇಕಡ 100ಕ್ಕಿಂತ ಹೆಚ್ಚು ಫಿಟ್‌ನೆಸ್ ಅಗತ್ಯ’

ವಾಸ್ತವವಾಗಿ ಕಳೆದ ಏಷ್ಯಾಕಪ್​ನಿಂದಲೂ ಆಟಗಾರರ ಫಿಟ್​ನೆಸ್​ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಏಕೆಂದರೆ ಇಂಜುರಿಯಿಂದ ಎನ್​ಸಿಎ ಸೇರುವ ಆಟಗಾರರು ಸಾಕಷ್ಟು ತಿಂಗಳು ಚಿಕಿತ್ಸೆ ಪಡೆದ ನಂತರವೇ ತಂಡಕ್ಕೆ ಮರಳುತ್ತಾರೆ. ಆದರೆ ತಂಡದಲ್ಲಿ ಕೆಲವೇ ಕೆಲವು ಪಂದ್ಯಗಳನ್ನು ಆಡಿದ ಬಳಿಕ ಮತ್ತೆ ಇಂಜುರಿಗೆ ತುತ್ತಾಗುತ್ತಾರೆ. ಇದು ನಾಯಕ ರೋಹಿತ್ ಶರ್ಮಾ ಕೋಪಕ್ಕೆ ಕಾರಣವಾಗಿದೆ. ಪ್ರಸ್ತುತ ಬಾಂಗ್ಲಾ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲೂ ಟೀಂ ಇಂಡಿಯಾ ಆಟಗಾರರ ಇಂಜುರಿ ಸರಣಿ ಮುಂದುವರೆದಿದ್ದು, ಸ್ವತಃ ರೋಹಿತ್ ಶರ್ಮಾ ಅವರೇ ಗಾಯದ ಕಾರಣದಿಂದಾಗಿ ಕೊನೆಯ ಪಂದ್ಯದಿಂದ ಹೊರಗುಳಿದಿದ್ದಾರೆ. ಅವರಲ್ಲದೆ ದೀಪಕ್ ಚಹಾರ್ ಮತ್ತು ಕುಲದೀಪ್ ಸೇನ್ ಕೂಡ ಗಾಯದ ಕಾರಣದಿಂದ ಕೊನೆಯ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಅದರಲ್ಲೂ ಆಲ್​ರೌಂಡರ್ ದೀಪಕ್ ಚಹಾರ್ ನಿರಂತರವಾಗಿ ಗಾಯಗಳಿಗೆ ಬಲಿಯಾಗುತ್ತಿರುವುದು ತಂಡಕ್ಕೆ ಮತ್ತಷ್ಟು ಆತಂಕ ತಂದಿದೆ. ಐಪಿಎಲ್‌ಗೂ ಮುನ್ನ ಗಾಯಗೊಂಡಿದ್ದ ಚಾಹರ್ ಬಹಳ ಸಮಯದ ನಂತರ ತಂಡಕ್ಕೆ ಮರಳಿದ್ದರು. ಆದರೆ ಈಗ ಆಡಿದ ಕೆಲವೇ ಕೆಲವು ಪಂದ್ಯಗಳ ನಂತರ ಮತ್ತೆ ಇಂಜುರಿಗೆ ಒಳಗಾಗಿದ್ದಾರೆ. ಇದು ಎನ್​ಸಿಎ ಕಾರ್ಯಕ್ಷಮತೆಯ ಮೇಲೆ ಅನುಮಾನ ಹೆಚ್ಚಿಸಿದೆ.

ಇದನ್ನೂ ಓದಿ: India vs Bangladesh: ಭಾರತ-ಬಾಂಗ್ಲಾ ಕೊನೆಯ ಏಕದಿನ ಪಂದ್ಯ ಯಾವಾಗ?: ಟೀಮ್ ಇಂಡಿಯಾ ನಾಯಕ ಯಾರು..?

ಟೀಂ ಇಂಡಿಯಾದ ಅರ್ಧದಷ್ಟು ಮಂದಿ ಗಾಯಗೊಂಡಿದ್ದಾರೆ!

ಗಾಯಗೊಂಡಿರುವ ಟೀಂ ಇಂಡಿಯಾ ಆಟಗಾರರ ಪಟ್ಟಿ ಚಿಕ್ಕದೇನಲ್ಲ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ ಮುಂತಾದ ಆಟಗಾರರು ಗಾಯಗೊಂಡಿದ್ದಾರೆ. ಸುದೀರ್ಘ ವಿಶ್ರಾಂತಿಯ ನಂತರ ತಂಡಕ್ಕೆ ಮರಳಿದ್ದ ಬುಮ್ರಾ ಬೆರಳೆಣಿಕೆಯಷ್ಟು ಪಂದ್ಯಗಳನ್ನು ಆಡಿದ ನಂತರ ಮತ್ತೊಮ್ಮೆ ಇಂಜುರಿಗೊಂಡರು. ಇದರಿಂದ ಬುಮ್ರಾ ಟಿ20 ವಿಶ್ವಕಪ್​ ತಂಡದಿಂದಲೇ ಹೊರಬಿದ್ದರು. ಹಾಗೆಯೇ ಏಷ್ಯಾಕಪ್‌ನಲ್ಲಿ ಗಾಯಗೊಂಡಿದ್ದ ರವೀಂದ್ರ ಜಡೇಜಾ ಕೂಡ ಇನ್ನೂ ಫಿಟ್ ಆಗಲು ಸಾಧ್ಯವಾಗಿಲ್ಲ. ಕಳಪೆ ಫಿಟ್‌ನೆಸ್‌ನಿಂದಾಗಿ, ಭಾರತವು ತನ್ನ ಸಂಪೂರ್ಣ ಸಾಮರ್ಥ್ಯದ ತಂಡವನ್ನು ಕಣಕ್ಕಿಳಿಸಲು ಸಾಧ್ಯವಾಗುತ್ತಿಲ್ಲ. ಪ್ರಾಯಶಃ ಇದೂ ಕೂಡ ತಂಡದ ಪ್ರದರ್ಶನ ಕುಸಿಯಲು ಕಾರಣವಾಗಿರಬಹುದು.

ಹಾಗಾದರೆ ಎನ್​ಸಿಎ ಸರಿಯಾಗಿ ಕೆಲಸ ಮಾಡುತ್ತಿಲ್ಲವೇ?

ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಕೆಲಸವೇ ಆಟಗಾರರ ಫಿಟ್‌ನೆಸ್ ಮತ್ತು ಭವಿಷ್ಯದ ಆಟಗಾರರ ಆಟದ ಗುಣಮಟ್ಟವನ್ನು ಹೆಚ್ಚಿಸುವುದಾಗಿದೆ. ಯಾವುದೇ ಆಟಗಾರ ಗಾಯಗೊಂಡರೆ ಅವರು ಮೊದಲು ಹೋಗಬೇಕಿರುವುದೇ ಎನ್‌ಸಿಎಗೆ. ಕಳೆದ ಕೆಲವು ತಿಂಗಳುಗಳಲ್ಲಿ, ಬುಮ್ರಾ, ಚಹಾರ್, ಶಮಿಯಂತಹ ಆಟಗಾರರು ಎನ್‌ಸಿಎಯಲ್ಲಿ ಸಾಕಷ್ಟು ಸಮಯವನ್ನು ಕಳೆದಿದ್ದಾರೆ. ಅಲ್ಲಿ ಚಿಕಿತ್ಸೆ ಪಡೆದು, ಈ ಆಟಗಾರ ಸಂಪೂರ್ಣ ಫಿಟ್ ಎಂದು ಎನ್​ಸಿಎಯಿಂದ ಗ್ರೀನ್ ಸಿಗ್ನಲ್ ಸಿಕ್ಕ ನಂತರವೇ ಆತ ಟೀಂ ಇಂಡಿಯಾ ಸೇರಿಕೊಳ್ಳುತ್ತಾನೆ. ಆದರೆ ಹೀಗೆ ಎನ್​ಸಿಎಯಿಂದ ಚಿಕಿತ್ಸೆ ಪಡೆದು ಬಂದು ಆಡಿದ ಕೆಲವು ಪಂದ್ಯಗಳ ನಂತರ ಈ ಆಟಗಾರರು ಮತ್ತೆ ಗಾಯಗೊಳ್ಳುತ್ತಿರುವುದು ಎನ್​ಸಿಎ ಸರಿಯಾಗಿ ಕೆಲಸ ಮಾಡುತ್ತಿಲ್ಲವೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:12 pm, Thu, 8 December 22