
ಭಾರತ ಮತ್ತು ಇಂಗ್ಲೆಂಡ್ (India vs England) ನಡುವಣ ಟೆಸ್ಟ್ ಸರಣಿಯು ಜನವರಿ 25 ರಿಂದ ಶುರುವಾಗಲಿದೆ. ಹೈದರಾಬಾದ್ನ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಈ ಪಂದ್ಯದ 2ನೇ ದಿನ ಭಾರತೀಯ ಸಶಸ್ತ್ರ ಪಡೆಗಳ ಕುಟುಂಬಗಳಿಗೆ ಉಚಿತ ಪ್ರವೇಶ ನೀಡುವುದಾಗಿ ಹೈದರಾಬಾದ್ ಕ್ರಿಕೆಟ್ ಸಂಸ್ಥೆ (HCA) ಘೋಷಿಸಿದೆ.
2024 ರ ಗಣರಾಜ್ಯೋತ್ಸವದಂದು ನಡೆಯುವ ದಿನದಾಟವನ್ನು ವೀಕ್ಷಿಸಲು ಭಾರತೀಯ ಸಶಸ್ತ್ರ ಪಡೆಗಳ ಕುಟುಂಬಗಳಿಗೆ ಫ್ರೀ ಎಂಟ್ರಿ ನೀಡಲಿದ್ದೇವೆ. ಈ ಮೂಲಕ ಭಾರತೀಯ ಸೈನಿಕರ ಕುಟುಂಬದವರನ್ನು ಗೌರವಿಸಲು ಹೆಚ್ಸಿಎ ನಿರ್ಧರಿಸಿದೆ. ಹೀಗಾಗಿ ಗಣರಾಜ್ಯೋತ್ಸವದಂದು ಹೈದರಾಬಾದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಕುಟುಂಬಗಳಿಗೆ ಉಚಿತ ಪ್ರವೇಶ ಇರಲಿದೆ.
ಮೊದಲ ಟೆಸ್ಟ್ ಪಂದ್ಯದ ಟಿಕೆಟ್‌ಗಳು ಜನವರಿ 18 ರಿಂದ Paytm ಇನ್‌ಸೈಡರ್ ಅಪ್ಲಿಕೇಶನ್ ಮತ್ತು www.insider.in ಆನ್‌ಲೈನ್‌ನಲ್ಲಿ ಲಭ್ಯವಿರಲಿದೆ. ಆಫ್‌ಲೈನ್ ಟಿಕೆಟ್‌ಗಳ ಮಾರಾಟವು ಜಿಮ್ಖಾನಾ ಮೈದಾನದಲ್ಲಿ ಜನವರಿ 22 ರಿಂದ ಪ್ರಾರಂಭವಾಗಲಿದೆ. ಇಲ್ಲಿ ಪ್ರತಿ ದಿನದ ಟಿಕೆಟ್‌ಗಳ ಬೆಲೆ ₹200 ರಿಂದ ₹4,000 ವರೆಗೆ ಇರುತ್ತದೆ. ಇದೀಗ HCA ಭಾರತೀಯ ಸಶಸ್ತ್ರ ಪಡೆಗಳ ಕುಟುಂಬಗಳಿಗೆ ಒಂದು ದಿನ ಉಚಿತ ಪ್ರವೇಶ ನೀಡಲು ನಿರ್ಧರಿಸಿರುವುದು ವಿಶೇಷ.
ತೆಲಂಗಾಣ ಸರ್ಕಾರಿ ಶಾಲೆಯ VI ರಿಂದ XII ತರಗತಿಯ ವಿದ್ಯಾರ್ಥಿಗಳನ್ನು ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಹೈದಾರಾಬಾದ್ ಕ್ರಿಕೆಟ್ ಸಂಸ್ಥೆ ಆಹ್ವಾನಿಸಿದೆ. ತಮ್ಮ ಐಡಿ ಕಾರ್ಡ್ ತೋರಿಸಿ ಉಚಿತ ಪ್ರವೇಶ ಪಡೆಯಬಹುದು. ಹಾಗೆಯೇ ಶಾಲಾ ಸಮವಸ್ತ್ರವನ್ನು ಧರಿಸಿರುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟವನ್ನು ಒದಗಿಸಲಾಗುವುದು ಎಂದು ಹೆಚ್ಸಿಎ ತಿಳಿಸಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯು ಜನವರಿ 25 ರಿಂದ ಮಾರ್ಚ್ 7 ರವರೆಗೆ ನಡೆಯಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಭಾಗವಾಗಿರುವ ಈ 5 ಟೆಸ್ಟ್ ಪಂದ್ಯಗಳನ್ನು ಹೈದರಾಬಾದ್, ವಿಶಾಖಪಟ್ಟಣಂ, ರಾಜ್‌ಕೋಟ್, ರಾಂಚಿ ಮತ್ತು ಧರ್ಮಶಾಲಾದಲ್ಲಿ ಆಡಲಾಗುತ್ತದೆ.
ಇಂಗ್ಲೆಂಡ್ ಟೆಸ್ಟ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ರೆಹಾನ್ ಅಹ್ಮದ್, ಜೇಮ್ಸ್ ಅ್ಯಂರ್ಸನ್, ಗಸ್ ಅಟ್ಕಿನ್ಸನ್ , ಜಾನಿ ಬೈರ್‌ಸ್ಟೋವ್, ಶೋಯೆಬ್ ಬಶೀರ್, ಹ್ಯಾರಿ ಬ್ರೂಕ್, ಝಾಕ್ ಕ್ರಾಲಿ, ಬೆನ್ ಡಕೆಟ್, ಬೆನ್ ಫೋಕ್ಸ್, ಟಾಮ್ ಹಾರ್ಟ್ಲಿ, ಜ್ಯಾಕ್ ಲೀಚ್, ಒಲ್ಲಿ ಪೋಪ್, ಆಲಿ ರಾಬಿನ್ಸನ್ , ಜೋ ರೂಟ್ , ಮಾರ್ಕ್ ವುಡ್.
ಇದನ್ನೂ ಓದಿ: ಶಿವಂ ದುಬೆ ಅಲ್ಲ, ನನ್ನಂತೆ ಆಡುತ್ತಿರುವ ಆಟಗಾರ ಯಾರೆಂದು ತಿಳಿಸಿದ ಯುವರಾಜ್ ಸಿಂಗ್