Shubman Gill Century: ಮೋದಿ ಮೈದಾನದಲ್ಲಿ ದಾಖಲೆಯ ಶತಕ ಸಿಡಿಸಿದ ಶುಭ್ಮನ್ ಗಿಲ್
Shubman Gill Century: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ರನ್ಗಳ ಶಿಖರ ಕಟ್ಟಿರುವ ಶುಭಮನ್ ಗಿಲ್, ಮೊದಲೆರಡು ಪಂದ್ಯಗಳಲ್ಲಿ ಸತತ ಎರಡು ಅರ್ಧಶತಕ ಬಾರಿಸಿದ್ದರು. ಈಗ ಅಹಮದಾಬಾದ್‌ನಲ್ಲಿ ಶತಕ ಗಳಿಸಿದ್ದಾರೆ. ಇದು ಅವರ ಏಕದಿನ ವೃತ್ತಿಜೀವನದ ಏಳನೇ ಶತಕವಾಗಿದ್ದು, ಈ ಮೂಲಕ ಗಿಲ್ 507 ದಿನಗಳ ನಂತರ ಈ ಸ್ವರೂಪದಲ್ಲಿ ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ.

ಭಾರತ ಏಕದಿನ ತಂಡದ ಉಪನಾಯಕತ್ವ ಸಿಕ್ಕ ಬಳಿಕ ಯುವ ಆರಂಭಿಕ ಆಟಗಾರ ಶುಭ್ಮನ್ ಗಿಲ್ ವೃತ್ತಿಜೀವನದ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೂರೂ ಏಕದಿನ ಪಂದ್ಯಗಳಲ್ಲೂ ಗಿಲ್ ಬ್ಯಾಟ್ ಅಬ್ಬರಿಸಿದೆ. ಮೊದಲೆರಡು ಪಂದ್ಯಗಳಲ್ಲಿ ಅರ್ಧಶತಕಗಳ ಇನ್ನಿಂಗ್ಸ್ ಆಡಿದ್ದ ಗಿಲ್, ಅದನ್ನು ಶತಕವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾಗಿದ್ದರು. ಆದರೆ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಹ್ಯಾಟ್ರಿಕ್ ಅರ್ಧಶತಕವನ್ನು ಪೂರೈಸಿದ ಗಿಲ್, ಅದನ್ನು ಶತಕವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಈ ಸ್ವರೂಪದಲ್ಲಿ 507 ದಿನಗಳ ನಂತರ ಗಿಲ್ ತಮ್ಮ ಏಕದಿನ ಶತಕದ ಒರವನ್ನು ನೀಗಿಸಿಕೊಂಡಿದ್ದಾರೆ. ಗಿಲ್ ಕೊನೆಯ ಬಾರಿಗೆ 2023 ರ ಸೆಪ್ಟೆಂಬರ್ 24 ರಂದು ಇಂದೋರ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿದ್ದರು.
ದಾಖಲೆಗಳ ಮಳೆಗರೆದ ಗಿಲ್
ಅಹಮದಾಬಾದ್‌ನಲ್ಲಿ ಏಕದಿನ ವೃತ್ತಿಜೀವನದ 7ನೇ ಶತಕ ಪೂರೈಸಿದ ಗಿಲ್, ಈ ಶತಕದೊಂದಿಗೆ ಅನೇಕ ದಾಖಲೆಗಳನ್ನು ನಿರ್ಮಿಸಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೂರು ಸ್ವರೂಪಗಳಲ್ಲಿ ಶತಕ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಶುಭಮನ್ ಗಿಲ್ ಪಾತ್ರರಾಗಿದ್ದಾರೆ. ಇದಲ್ಲದೆ, ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 7 ಶತಕಗಳನ್ನು ಬಾರಿಸಿದ ಭಾರತದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ. ಹಾಗೆಯೇ ಕೇವಲ 50 ಏಕದಿನ ಇನ್ನಿಂಗ್ಸ್‌ಗಳಲ್ಲಿ 7 ಶತಕಗಳನ್ನು ಸಿಡಿಸಿದ ಮತ್ತು ತಮ್ಮ 50 ನೇ ಏಕದಿನ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
Jubilation as @ShubmanGill gets to a fine CENTURY!
Keep at it, young man 🙌🙌
Live – https://t.co/S88KfhFzri… #INDvENG@IDFCFIRSTBank pic.twitter.com/Xbcy6uaO6J
— BCCI (@BCCI) February 12, 2025
ಗಿಲ್ ಶತಕದ ಇನ್ನಿಂಗ್ಸ್ ಹೀಗಿತ್ತು
ಅಹಮದಾಬಾದ್‌ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಆರಂಭ ಕಳಪೆಯಾಗಿತ್ತು. ನಾಯಕ ರೋಹಿತ್ ಕೇವಲ ಎರಡು ಎಸೆತಗಳನ್ನು ಆಡಿ ಪೆವಿಲಿಯನ್ ಸೇರಿಕೊಂಡರು. ಆದರೆ ಆ ನಂತರ ವಿರಾಟ್ ಹಾಗೂ ಗಿಲ್ ಜೊತೆಯಾಗಿ ವೇಗವಾಗಿ ರನ್ ಕಲೆಹಾಕಲು ಶುರು ಮಾಡಿದರು. ಈ ವೇಳೆ ಗಿಲ್ ಹೊಡಿಬಡಿ ಆಟದ ಮೂಲಕ ಇಂಗ್ಲೆಂಡ್ ಬೌಲರ್‌ಗಳ ಮೇಲೆ ಒತ್ತಡ ಹೇರಿದರು. ಹೀಗಾಗಿ ಗಿಲ್ 51 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದರ ಜೊತೆಗೆ ಕೊಹ್ಲಿಯೊಂದಿಗೆ ಶತಕದ ಜೊತೆಯಾಟವನ್ನೂ ಆಡಿದರು.
ಆದರೆ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಿ ಪೆವಿಲಿಯನ್ ಸೇರಿಕೊಂಡರು. ಆ ಬಳಿಕವೂ ತನ್ನ ಎಂದಿನ ಆಟವನ್ನು ಮುಂದುವರೆಸಿದ ಗಿಲ್ ಮುಂದಿನ ಐವತ್ತು ರನ್‌ಗಳನ್ನು 44 ಎಸೆತಗಳಲ್ಲಿ ಪೂರ್ಣಗೊಳಿಸಿದರು. ಅಹಮದಬಾದ್ನಲ್ಲಿ ಅಂತಿಮವಾಗಿ 102 ಎಸೆತಗಳನ್ನು ಎದುರಿಸಿದ ಗಿಲ್ 112 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:55 pm, Wed, 12 February 25
