Jarvo 2.0: ಟೀಮ್ ಇಂಡಿಯಾ ಪರ ಕಣಕ್ಕಿಳಿದ ಹೊಸ ಆಟಗಾರ..!

| Updated By: ಝಾಹಿರ್ ಯೂಸುಫ್

Updated on: Jul 03, 2022 | 3:42 PM

IND vs ENG, 5th Test: ಟೀಮ್ ಇಂಡಿಯಾ ರಿಷಭ್ ಪಂತ್ (146) ಹಾಗೂ ರವೀಂದ್ರ ಜಡೇಜಾ (104) ಅವರ ಶತಕದ ನೆರವಿನಿಂದ ಮೊದಲ ಇನಿಂಗ್ಸ್​ನಲ್ಲಿ 416 ರನ್​ ಕಲೆಹಾಕಿದೆ.

Jarvo 2.0: ಟೀಮ್ ಇಂಡಿಯಾ ಪರ ಕಣಕ್ಕಿಳಿದ ಹೊಸ ಆಟಗಾರ..!
Jarvo 2.0
Follow us on

2021 ರಲ್ಲಿ ನಡೆದ ಭಾರತ-ಇಂಗ್ಲೆಂಡ್ (IND vs ENG, 5th Test) ನಡುವಣ ಟೆಸ್ಟ್​ ಸರಣಿಯ ಪಂದ್ಯಗಳ ವೇಳೆ ಜಾರ್ವೊ (Jarvo) ಹೆಸರಿನ ಆಟಗಾರನೊಬ್ಬ ಮೈದಾನಕ್ಕೆ ಎಂಟ್ರಿ ಕೊಡುತ್ತಿದ್ದದ್ದು ನಿಮಗೆ ನೆನಪಿರಬಹುದು. ಹೀಗೆ ಏಕಾಏಕಿ ಮೈದಾನದಲ್ಲಿ ಟೀಮ್ ಇಂಡಿಯಾ ಜೆರ್ಸಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಜಾರ್ವೊ ಈ ಬಾರಿ ಎಲ್ಲೂ ಕಂಡು ಬಂದಿರಲಿಲ್ಲ. ಇತ್ತ ಭಾರತ-ಇಂಗ್ಲೆಂಡ್ ನಡುವಣ ಸರಣಿಯ ಕೊನೆಯ ಪಂದ್ಯದಲ್ಲಿ ಜಾರ್ವೊರನ್ನು ಅಭಿಮಾನಿಗಳು ಸಹ ಎದುರು ನೋಡುತ್ತಿದ್ದರು. ಆದರೆ ಅದಾಗಲೇ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಜಾರ್ವೊ ಮೇಲೆ ಪ್ರಕರಣಗಳು ದಾಖಲಾಗಿತ್ತು. ಹೀಗಾಗಿ 5ನೇ ಟೆಸ್ಟ್ ಪಂದ್ಯದ ಮೊದಲೆರಡು ದಿನದಾಟದ ವೇಳೆ ಜಾರ್ವೊ ಕಾಣಿಸಿಕೊಂಡಿರಲಿಲ್ಲ. ಆದರೆ ಬದಲಿ ಆಟಗಾರನಾಗಿ ಮತ್ತೋರ್ವ ಕಾಣಿಸಿಕೊಂಡಿದ್ದು ವಿಶೇಷ.

ಭಾರತ ತಂಡದ ಮೊದಲ ಇನಿಂಗ್ಸ್​ ವೇಳೆ ವ್ಯಕ್ತಿಯೊಬ್ಬರು ಬ್ಯಾಟ್ ಹಿಡಿದು ಮೈದಾನಕ್ಕೆ ನುಗ್ಗಿದ್ದರು. ಅದು ಕೂಡ ಟೀಮ್ ಇಂಡಿಯಾ ಜೆರ್ಸಿ ತೊಟ್ಟು ಎಂಬುದು ವಿಶೇಷ. ಪಂದ್ಯದ 28ನೇ ಓವರ್‌ನ ಐದನೇ ಎಸೆತದಲ್ಲಿ ಜೇಮ್ಸ್ ಅ್ಯಂಡರ್ಸ್​ನ್ ಎಸೆತದಲ್ಲಿ ಶ್ರೇಯಸ್ ಅಯ್ಯರ್ ವಿಕೆಟ್ ಒಪ್ಪಿಸಿದ್ದರು. ಈ ವೇಳೆ ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದ ವ್ಯಕ್ತಿಯ ನೋಡಿ ಎಲ್ಲರೂ ತಬ್ಬಿಬ್ಬಾದರು. ಅಲ್ಲದೆ ನೇರವಾಗಿ ಕ್ರೀಸ್​ಗೆ ಹೋಗಿ ಬ್ಯಾಟ್ ಮಾಡಲು ಮುಂದಾದರು. ಅಷ್ಟರಲ್ಲಾಗಲೇ ಸ್ಟೇಡಿಯಂ ಭದ್ರತಾ ಸಿಬ್ಬಂದಿಗಳು ಸುತ್ತುವರೆದು ಆತನನ್ನು ವಶಕ್ಕೆ ಪಡೆದರು.

ವಿಶೇಷ ಎಂದರೆ ಅಪರಿಚಿತ ವ್ಯಕ್ತಿಯನ್ನು ಸೆಕ್ಯುರಿಟಿ ಗಾರ್ಡ್​ಗಳು ಬಂಧಿಸಿ ಕರೆತರುತ್ತಿದ್ದರೆ, ಇತ್ತ ಸ್ಟೇಡಿಯಂ ಗ್ಯಾಲರಿಯಲ್ಲಿ ಜಾರ್ವೊ ಹೆಸರಿನೊಂದಿಗೆ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಅಲ್ಲದೆ ಟೀಮ್ ಇಂಡಿಯಾದ ಈ ಎಕ್ಸ್​ಟ್ರಾ ಆಟಗಾರನಿಗೆ ಜಾರ್ವೊ 2.0 ಎಂದು ಸೋಷಿಯಲ್ ಮೀಡಿಯಾದಲ್ಲಿ ಹೆಸರಿಡಲಾಗಿದೆ. ಒಟ್ಟಿನಲ್ಲಿ ಜಾರ್ವೊ ವನ್ನು ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ಮನರಂಜನೆ ನೀಡಲು ಇದೀಗ ಜಾರ್ವೊ 2.0 ಎಂಟ್ರಿ ಕೊಟ್ಟಿದ್ದಾರೆ.

ಇನ್ನು ಈ ಪಂದ್ಯದ ಬಗ್ಗೆ ಮಾತನಾಡುವುದಾದರೆ, ಟೀಮ್ ಇಂಡಿಯಾ ರಿಷಭ್ ಪಂತ್ (146) ಹಾಗೂ ರವೀಂದ್ರ ಜಡೇಜಾ (104) ಅವರ ಶತಕದ ನೆರವಿನಿಂದ ಮೊದಲ ಇನಿಂಗ್ಸ್​ನಲ್ಲಿ 416 ರನ್​ ಕಲೆಹಾಕಿದೆ. ಇದಕ್ಕುತ್ತರವಾಗಿ ಬ್ಯಾಟ್ ಬೀಸಿರುವ ಇಂಗ್ಲೆಂಡ್ 2ನೇ ದಿನದಾಟದ ಅಂತ್ಯಕ್ಕೆ 84 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡಿದೆ. ಟೀಮ್ ಇಂಡಿಯಾ ಪರ ನಾಯಕ ಜಸ್​ಪ್ರೀತ್ ಬುಮ್ರಾ 3 ವಿಕೆಟ್ ಕಬಳಿಸಿದರೆ, ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್ ತಲಾ 1 ವಿಕೆಟ್ ಪಡೆದಿದ್ದಾರೆ.

 

Published On - 1:57 pm, Sun, 3 July 22