IND vs ENG: ಭಾರತ ವಿರುದ್ಧದ ಮೊದಲ ಟೆಸ್ಟ್ಗೆ ಬಲಿಷ್ಠ ಪ್ಲೇಯಿಂಗ್ 11 ಪ್ರಕಟಿಸಿದ ಇಂಗ್ಲೆಂಡ್
England Announces Playing XI for Leeds Test: ಲೀಡ್ಸ್‌ನಲ್ಲಿ ನಡೆಯಲಿರುವ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತನ್ನ ಆಡುವ ಹನ್ನೊಂದರ ಬಳಗವನ್ನು ಘೋಷಿಸಿದೆ. ಬೆನ್ ಸ್ಟೋಕ್ಸ್ ನಾಯಕತ್ವದಲ್ಲಿ ನಾಲ್ಕು ಬೌಲರ್‌ಗಳನ್ನು (ಮೂವರು ವೇಗದ ಬೌಲರ್‌ಗಳು ಮತ್ತು ಒಬ್ಬ ಸ್ಪಿನ್ನರ್) ಆಯ್ಕೆ ಮಾಡಲಾಗಿದೆ. ಜಾಕೋಬ್ ಬೆಥೆಲ್, ಜೇಮೀ ಓವರ್ಟನ್ ಮತ್ತು ಸ್ಯಾಮ್ ಕುಕ್ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಇದು ಲೀಡ್ಸ್ ಪಿಚ್‌ನಲ್ಲಿ ಬೌಲರ್‌ಗಳಿಗೆ ಅನುಕೂಲಕರವಾಗಿದೆ ಎಂಬುದನ್ನು ಸೂಚಿಸುತ್ತದೆ.

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ಇದೇ ಜೂನ್ 20 ರಿಂದ ಆರಂಭವಾಗುತ್ತಿದೆ. ಈ ಸರಣಿಯೊಂದಿಗೆ ನಾಲ್ಕನೇ ಆವೃತ್ತಿಯ ಟೆಸ್ಟ್ ಚಾಂಪಿಯನ್ಶಿಪ್ ಕೂಡ ಶುರುವಾಗಲಿದೆ. ಹೀಗಾಗಿ ಎರಡೂ ತಂಡಗಳಿಗೆ ಈ ಸರಣಿ ಗೆಲುವು ಅತ್ಯಗತ್ಯವಾಗಿದೆ. ಉಭಯ ತಂಡಗಳ ನಡುವಿನ ಮೊದಲ ಪಂದ್ಯ ಲೀಡ್ಸ್‌ನಲ್ಲಿ ನಡೆಯಲಿದ್ದು, ಈ ಪಂದ್ಯಕ್ಕಾಗಿ ಇದೀಗ ಆತಿಥೇಯ ಇಂಗ್ಲೆಂಡ್ ತಂಡವು ತನ್ನ ಆಡುವ ಹನ್ನೊಂದರ ಬಳಗವನ್ನು ಘೋಷಿಸಿದೆ. ಆ ಪ್ರಕಾರ ಬೆನ್ ಸ್ಟೋಕ್ಸ್ (Ben Stokes) ನಾಯಕತ್ವದ ಇಂಗ್ಲೆಂಡ್ ತಂಡದಲ್ಲಿ ಮೂವರು ವೇಗದ ಬೌಲರ್‌ಗಳಿದ್ದರೆ, ಒಬ್ಬ ಸ್ಪೆಷಲಿಸ್ಟ್ ಸ್ಪಿನ್ನರ್ ಸ್ಥಾನ ಪಡೆದಿದ್ದಾರೆ. ಆದರೆ ಯುವ ಆಟಗಾರ ಜಾಕೋಬ್ ಬೆಥೆಲ್, ಜೇಮೀ ಓವರ್ಟನ್ ಮತ್ತು ಸ್ಯಾಮ್ ಕುಕ್ ಅವರನ್ನು ತಂಡದಿಂದ ಹೊರಗಿಡಲಾಗಿದೆ.
ಲೀಡ್ಸ್‌ನಲ್ಲಿ ಬೌಲರ್‌ಗಳಿಗೆ ಮೇಲುಗೈ
ಲೀಡ್ಸ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡವು ಹಸಿರು ಪಿಚ್ ಬದಲಿಗೆ ಉತ್ತಮ ಬ್ಯಾಟಿಂಗ್ ಪಿಚ್‌ಗೆ ಬೇಡಿಕೆ ಇಟ್ಟಿದೆ ಎಂದು ಹೇಳಲಾಗುತ್ತಿತ್ತು. ಆದರೆ ಇಂಗ್ಲೆಂಡ್‌ನ ಆಡುವ ಹನ್ನೊಂದರ ಬಳಗವನ್ನು ನೋಡಿದರೆ ಅದು ಹಾಗೆ ಕಾಣುತ್ತಿಲ್ಲ. ಏಕೆಂದರೆ ಇಂಗ್ಲೆಂಡ್ ತನ್ನ ತಂಡದಲ್ಲಿ ನಾಲ್ವರು ಬೌಲರ್‌ಗಳಿಗೆ ಅವಕಾಶ ನೀಡಿದ್ದು, ಅವರಲ್ಲಿ ಒಬ್ಬರು ಸ್ಪಿನ್ನರ್ ಶೋಯೆಬ್ ಬಶೀರ್ ಸೇರಿದ್ದಾರೆ. ಇವರನ್ನು ಹೊರತುಪಡಿಸಿ, ಮಧ್ಯಮ ವೇಗಿಯಾಗಿರುವ ನಾಯಕ ಬೆನ್ ಸ್ಟೋಕ್ಸ್ ಕೂಡ ಬೌಲಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ. ಅಂದರೆ ಇಂಗ್ಲೆಂಡ್ ನಾಲ್ಕು ವೇಗದ ಬೌಲರ್‌ಗಳೊಂದಿಗೆ ಫೀಲ್ಡಿಂಗ್ ಮಾಡಲಿದ್ದು, ಇದು ಲೀಡ್ಸ್ ಪಿಚ್‌ನಲ್ಲಿ ವೇಗದ ಬೌಲರ್‌ಗಳಿಗೆ ಸಹಾಯ ಸಿಗಬಹುದು ಎಂಬುದರ ಸೂಚನೆಯಾಗಿದೆ.
Team news from Leeds ahead of a BIG week 📋
Ready to face @BCCI 👊
— England Cricket (@englandcricket) June 18, 2025
ಅನಾನುಭವಿ ಬೌಲಿಂಗ್ ವಿಭಾಗ
ಆದಾಗ್ಯೂ ಇಂಗ್ಲೆಂಡ್ ಪ್ಲೇಯಿಂಗ್ 11 ನೋಡಿದರೆ, ಬೌಲಿಂಗ್ ವಿಭಾಗ ಕೊಂಚ ದುರ್ಬಲವಾಗಿ ಕಾಣುತ್ತಿದೆ. ಏಕೆಂದರೆ ಬೌಲಿಂಗ್ ವಿಭಾಗದಲ್ಲಿ ಅನುಭವದ ಕೊರತೆ ಎದ್ದು ಕಾಣಿಸುತ್ತಿದೆ. ಆಂಡರ್ಸನ್ ಮತ್ತು ಬ್ರಾಡ್ ಇಬ್ಬರೂ ಭಾರತದ ವಿರುದ್ಧದ ಕೊನೆಯ ಟೆಸ್ಟ್ ಸರಣಿಯಲ್ಲಿ ಇದ್ದರು ಆದರೆ ಈಗ ಇಬ್ಬರೂ ನಿವೃತ್ತರಾಗಿದ್ದಾರೆ. ಹೀಗಾಗಿ ಇಂಗ್ಲಿಷ್ ತಂಡವು ಬ್ರೈಡನ್ ಕಾರ್ಸೆ, ಜೋಶ್ ಟಂಗ್, ಶೋಯೆಬ್ ಬಶೀರ್ ಅವರ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇಂಗ್ಲೆಂಡ್ ತಂಡದಲ್ಲಿ ಕ್ರಿಸ್ ವೋಕ್ಸ್ ಮಾತ್ರ ಅನುಭವಿ ಬೌಲರ್ ಆಗಿದ್ದು, ಭಾರತದ ವಿರುದ್ಧ ಅವರ ಪ್ರದರ್ಶನ ಕೂಡ ಉತ್ತಮವಾಗಿದೆ. ಆದ್ದರಿಂದ ಭಾರತೀಯ ಬ್ಯಾಟ್ಸ್‌ಮನ್‌ಗಳು ಎಚ್ಚರಿಕೆಯ ಆಟವನ್ನಾಡಬೇಕಾಗುತ್ತದೆ. ಲೀಡ್ಸ್ ಟೆಸ್ಟ್‌ನಲ್ಲಿ ಯಾರ ಮೇಲುಗೈ ಇದೆ ಎಂಬುದನ್ನು ಈಗ ಕಾದು ನೋಡಬೇಕಾಗಿದೆ.
ಇಂಗ್ಲೆಂಡ್‌ನ ಪ್ಲೇಯಿಂಗ್ XI: ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮೀ ಸ್ಮಿತ್, ಕ್ರಿಸ್ ವೋಕ್ಸ್, ಬ್ರೈಡನ್ ಕಾರ್ಸೆ, ಜೋಶ್ ಟಂಗ್ ಮತ್ತು ಶೋಯೆಬ್ ಬಶೀರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:56 pm, Wed, 18 June 25
