ಪಾಕಿಸ್ತಾನ್ ಜೊತೆ ಭಾರತ ಪಂದ್ಯವಾಡಬೇಕೇ? ಸಿರಾಜ್ ಉತ್ತರ ಹೀಗಿದೆ
India vs England 4th Test: ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ಮ್ಯಾಚ್ ಜುಲೈ 23 ರಿಂದ ಶುರುವಾಗಲಿದೆ. ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ. ಏಕೆಂದರೆ ಐದು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 2-1 ಅಂತರದಿಂದ ಮುನ್ನಡೆ ಸಾಧಿಸಿದ್ದು, ನಾಲ್ಕನೇ ಪಂದ್ಯದಲ್ಲಿ ಗೆದ್ದರೆ ಮಾತ್ರ ಭಾರತ ತಂಡಕ್ಕೆ ಸರಣಿ ಗೆಲ್ಲಲು ಅವಕಾಶ ಇರಲಿದೆ.

ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯ 4ನೇ ಪಂದ್ಯ ರದ್ದಾದ ನಂತರ, ಭಾರತ ಮತ್ತು ಪಾಕಿಸ್ತಾನ್ ನಡುವಿನ ಕ್ರಿಕೆಟ್ ಪಂದ್ಯ ಮತ್ತೆ ಸುದ್ದಿಯಲ್ಲಿದೆ. ಜುಲೈ 20 ರಂದು ಬರ್ಮಿಂಗ್ಹ್ಯಾಮ್‌ನಲ್ಲಿ ಇಂಡಿಯಾ ಚಾಂಪಿಯನ್ಸ್ ಹಾಗೂ ಪಾಕಿಸ್ತಾನ್ ಚಾಂಪಿಯನ್ಸ್ ತಂಡಗಳು ಮುಖಾಮುಖಿಯಾಗಬೇಕಿತ್ತು. ಆದರೆ ಈ ಪಂದ್ಯದಿಂದ ಟೀಮ್ ಇಂಡಿಯಾದ ಮಾಜಿ ಆಟಗಾರರು ಹಿಂದೆ ಸರಿದ ಕಾರಣ ಮ್ಯಾಚ್ ಕ್ಯಾನ್ಸಲ್ ಮಾಡಲಾಯಿತು. ಇದೇ ವಿಚಾರವನ್ನು ಜುಲೈ 21 ರಂದು ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಅವರ ಮುಂದಿಡಲಾಗಿತ್ತು.
ಮ್ಯಾಂಚೆಸ್ಟರ್‌ನಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದ ಮೊಹಮ್ಮದ್ ಸಿರಾಜ್ ಅವರಲ್ಲಿ ಭಾರತ ಪಾಕಿಸ್ತಾನದೊಂದಿಗೆ ಪಂದ್ಯ ಆಡಬೇಕೇ? ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇಂಗ್ಲೆಂಡ್ ವಿರುದ್ಧದ ಪಂದ್ಯದ ಸುದ್ದಿಗೋಷ್ಠಿಗೆ ಆಗಮಿಸಿದ್ದ ಸಿರಾಜ್ ಈ ಪ್ರಶ್ನೆ ಕೇಳಿ ಕೆಲ ಕ್ಷಣ ತಬ್ಬಿಬ್ಬಾದರು.
ಮೊಹಮ್ಮದ್ ಸಿರಾಜ್ ಉತ್ತರವೇನು?
ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಅವರಲ್ಲಿ ಭಾರತ ತಂಡವು ಪಾಕಿಸ್ತಾನ್ ವಿರುದ್ಧ ಪಂದ್ಯವನ್ನು ಆಡಬೇಕೇ ಅಥವಾ ಬೇಡವೇ? ಎಂದು ಪ್ರಶ್ನಿಸಲಾಗಿತ್ತು. ಅಲ್ಲದೆ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯ ಪಾಕಿಸ್ತಾನ್ ವಿರುದ್ಧದ ಪಂದ್ಯದಿಂದ ಐವರು ಭಾರತೀಯ ಆಟಗಾರರು ಹಿಂದೆ ಸರಿದಿದ್ದಾರೆ. ಇದೇ ಕಾರಣದಿಂದಾಗಿ WCL ನಲ್ಲಿ ಇಂಡಿಯಾ ಚಾಂಪಿಯನ್ಸ್ ಹಾಗೂ ಪಾಕಿಸ್ತಾನ್ ಚಾಂಪಿಯನ್ಸ್ ಪಂದ್ಯವನ್ನು ಪಂದ್ಯವನ್ನು ರದ್ದುಗೊಳಿಸಲಾಗಿದೆ ಎಂದು ಅವರಿಗೆ ತಿಳಿಸಲಾಯಿತು.
ಈ ಎಲ್ಲಾ ವಿಚಾರಗಳನ್ನು ಕೇಳಿದ ಬಳಿಕ ಮೊಹಮ್ಮದ್ ಸಿರಾಜ್ ಹೇಳಿದ ಉತ್ತರ… ಈ ಬಗ್ಗೆ ನಿಜಕ್ಕೂ ನನಗೇನು ಗೊತ್ತಿಲ್ಲ. ನಾನು ಏನು ಹೇಳಲಿ. ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯ ವಿಚಾರದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಹೀಗಾಗಿ ಈ ಬಗ್ಗೆ ಮಾತನಾಡುವುದು ಸರಿಯಲ್ಲ ಎಂಬುದನ್ನು ಸಿರಾಜ್ ಸ್ಪಷ್ಟಪಡಿಸಿದರು.
ಭಾರತ-ಇಂಗ್ಲೆಂಡ್ ನಾಲ್ಕನೇ ಟೆಸ್ಟ್:
ಬುಧವಾರದಿಂದ (ಜುಲೈ 23) ಶುರುವಾಗಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣ 4ನೇ ಟೆಸ್ಟ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಕಣಕ್ಕಿಳಿಯಲಿದ್ದಾರೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಕೂಡ ಆಡಲಿದ್ದಾರೆ ಎಂಬುದನ್ನು ಸಿರಾಜ್ ಖಚಿತಪಡಿಸಿದ್ದಾರೆ. ಇದಕ್ಕೂ ಮುನ್ನ ಬುಮ್ರಾ 4ನೇ ಟೆಸ್ಟ್ ಪಂದ್ಯದಿಂದ ವಿಶ್ರಾಂತಿ ಪಡೆಯಲಿದ್ದಾರೆ ಎನ್ನಲಾಗಿತ್ತು.
ಇದನ್ನೂ ಓದಿ: 186.34 … ಟಿ20 ಕ್ರಿಕೆಟ್ನಲ್ಲಿ ಮಿಚೆಲ್ ಓವನ್ ವಿಶ್ವ ದಾಖಲೆ
ಆದರೆ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಮೊಹಮ್ಮದ್ ಸಿರಾಜ್, ಮ್ಯಾಚೆಂಸ್ಟರ್ನಲ್ಲಿ ಜಸ್ಪ್ರೀತ್ ಬುಮ್ರಾ ಕೂಡ ಆಡಲಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಇದಾಗ್ಯೂ ಟೀಮ್ ಇಂಡಿಯಾ ಪರ ಕಣಕ್ಕಿಳಿಯಲಿರುವ ಮೂರನೇ ವೇಗಿ ಯಾರೆಂಬುದು ಇನ್ನೂ ಸಹ ಖಚಿತವಾಗಿಲ್ಲ. ಏಕೆಂದರೆ ಲಾರ್ಡ್ಸ್ ಟೆಸ್ಟ್ನಲ್ಲಿ ಕಣಕ್ಕಿಳಿದಿದ್ದ ಆಕಾಶ್ ದೀಪ್ ತೊಡೆಸಂದು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಅವರು ಸಂಪೂರ್ಣ ಫಿಟ್ ಆದರೆ ಮಾತ್ರ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಭಾರತದ ಪರ 4ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂರನೇ ವೇಗಿ ಯಾರೆಂಬುದು ಇಂದು ನಿರ್ಧಾರವಾಗಲಿದೆ.
