6+2+3: ಮೊದಲ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ಲೇಯಿಂಗ್ 11 ಹೆಸರಿಸಿದ ರವಿ ಶಾಸ್ತ್ರಿ
IND vs ENG: ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯು ಜೂನ್ 20 ರಿಂದ ಶುರುವಾಗಲಿದೆ. ಲೀಡ್ಸ್ನಲ್ಲಿ ನಡೆಯಲಿರುವ ಈ ಸರಣಿ ಮೊದಲ ಪಂದ್ಯದ ಮೂಲಕ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯನ್ನು ಆರಂಭಿಸಲಿದೆ. ಅದರಲ್ಲೂ ಈ ಬಾರಿ ಶುಭ್ಮನ್ ಗಿಲ್ ನೇತೃತ್ವದಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿಯುತ್ತಿರುವುದರಿಂದ ಹೊಸ ನಿರೀಕ್ಷೆಗಳು ಹುಟ್ಟಿಕೊಂಡಿವೆ.

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯು ಶುಕ್ರವಾರದಿಂದ ಶುರುವಾಗಲಿದೆ. ಲೀಡ್ಸ್ನ ಹೆಡಿಂಗ್ಲೆಯಲ್ಲಿ ನಡೆಯಲಿರುವ ಈ ಸರಣಿಯ ಮೊದಲ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಹೇಗಿರಬೇಕೆಂದು ತಿಳಿಸಿದ್ದಾರೆ ಭಾರತ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ. ಟೀಮ್ ಇಂಡಿಯಾ ಮಾಜಿ ಕೋಚ್ ಪ್ರಕಾರ, ಭಾರತ ತಂಡವು ಮೊದಲ ಪಂದ್ಯದಲ್ಲಿ 6+2+3 ಸೂತ್ರದೊಂದಿಗೆ ಕಣಕ್ಕಿಳಿಯಬೇಕು.
ಅಂದರೆ ಇಂಗ್ಲೆಂಡ್ ಬೌಲರ್ಗಳನ್ನು ಬೌಲರ್ಗಳನ್ನು ಎದುರಿಸಲು ಟೀಮ್ ಇಂಡಿಯಾದಲ್ಲಿ 6 ಬ್ಯಾಟರ್ಗಳು ಇರಬೇಕಾಗಿರುವುದು ಅನಿವಾರ್ಯ. ಇನ್ನು ಇಬ್ಬರು ಆಲ್ರೌಂಡರ್ಗಳನ್ನು ಸಹ ಆಡಿಸಬೇಕು. ಇನ್ನುಳಿದಂತೆ ಮೂವರು ವೇಗಿಗಳು ತಂಡದಲ್ಲಿರಬೇಕೆಂದು ರವಿ ಶಾಸ್ತ್ರಿ ತಿಳಿಸಿದ್ದಾರೆ.
ಅದರಂತೆ ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಇನಿಂಗ್ಸ್ ಆರಂಭಿಸಬೇಕು. ಏಕೆಂದರೆ ಕೆಎಲ್ ರಾಹುಲ್ ಅನುಭವಿ ಬ್ಯಾಟರ್. ಇದರಿಂದ ಭಾರತ ತಂಡವು ಉತ್ತಮ ಆರಂಭ ಪಡೆಯಲು ಸಾಧ್ಯವಾಗುತ್ತದೆ.
ಇನ್ನು ಮೂರನೇ ಕ್ರಮಾಂಕದಲ್ಲಿ ಸಾಯಿ ಸುದರ್ಶನ್ ಅವರನ್ನು ಆಡಿಸುವುದು ಉತ್ತಮ. ಏಕೆಂದರೆ 23 ವರ್ಷದ ಯುವ ದಾಂಡಿಗ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಇತ್ತೀಚೆಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಯಶಸ್ವಿ ಪ್ರದರ್ಶನ ನೀಡಿದ್ದರು. ಇದರ ಜೊತೆಗೆ ಐಪಿಎಲ್ನಲ್ಲೂ 700+ ರನ್ ಕಲೆಹಾಕಿದ್ದರು. ಹೀಗಾಗಿ ಸಾಯಿ ಸುದರ್ಶನ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಬೇಕೆಂದು ಶಾಸ್ತ್ರಿ ಆಗ್ರಹಿಸಿದ್ದಾರೆ.
ಹಾಗೆಯೇ ನಾಯಕ ಶುಭ್ಮನ್ ಗಿಲ್ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬೇಕು ಎಂಬುದು ನನ್ನ ಆಶಯ. ಏಕೆಂದರೆ ವಿರಾಟ್ ಕೊಹ್ಲಿಯಿಂದ ತೆರವಾಗಿರುವ ಸ್ಥಾನವನ್ನು ಗಿಲ್ ತುಂಬಬಹುದು. ಈ ಮೂಲಕ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕವನ್ನು ಬಲಪಡಿಸಿಕೊಳ್ಳಬಹುದು ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.
ಅದ್ಭುತ ಫಾರ್ಮ್ನಲ್ಲಿರುವ ಕರುಣ್ ನಾಯರ್ಗೆ ಐದನೇ ಕ್ರಮಾಂಕ ಸೂಕ್ತ. ಅತ್ತ ಶುಭ್ಮನ್ ಗಿಲ್ 4ನೇ ಕ್ರಮಾಂಕದಲ್ಲಿ ಆಡುವುದರಿಂದ ಕರುಣ್ ಕೂಡ ಉತ್ತಮ ಜೊತೆಯಾಟವನ್ನು ರೂಪಿಸಿಕೊಳ್ಳಬಹುದು. ಇದರಿಂದ ಮಧ್ಯಮ ಕ್ರಮಾಂಕದ ಚಿಂತೆಯನ್ನು ದೂರ ಮಾಡಿಕೊಳ್ಳಬಹುದು.
ಇನ್ನು ವಿಕೆಟ್ ಕೀಪರ್ ಆಗಿ ರಿಷಭ್ ಪಂತ್ ಅವರನ್ನು ಎದುರು ನೋಡಬಹುದು. ಹಾಗೆಯೇ ಆಲ್ರೌಂಡರ್ಗಳಾಗಿ ರವೀಂದ್ರ ಜಡೇಜಾ ಅವರೊಂದಿಗೆ ಶಾರ್ದೂಲ್ ಠಾಕೂರ್ ಅಥವಾ ನಿತೀಶ್ ಕುಮಾರ್ ರೆಡ್ಡಿಗೆ ಚಾನ್ಸ್ ನೀಡಬೇಕು. ಇದರಿಂದ ಹೆಚ್ಚುವರಿ ವೇಗಿಯನ್ನು ಬಳಸಿಕೊಳ್ಳಬಹುದು. ಇನ್ನುಳಿದಂತೆ ವೇಗಿಗಳಾಗಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ನೀಡಬೇಕೆಂದು ರವಿ ಶಾಸ್ತ್ರಿ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ಗೆ ರವಿ ಶಾಸ್ತ್ರಿ ಹೆಸರಿಸಿದ ಟೀಮ್ ಇಂಡಿಯಾ ಪ್ಲೇಯಿಂಗ್ 11:
- ಕೆಎಲ್ ರಾಹುಲ್
- ಯಶಸ್ವಿ ಜೈಸ್ವಾಲ್
- ಸಾಯಿ ಸುದರ್ಶನ್
- ಶುಭ್ಮನ್ ಗಿಲ್ (ನಾಯಕ)
- ಕರುಣ್ ನಾಯರ್
- ರಿಷಭ್ ಪಂತ್ (ವಿಕೆಟ್ ಕೀಪರ್
- ರವೀಂದ್ರ ಜಡೇಜಾ
- ಶಾರ್ದೂಲ್ ಠಾಕೂರ್/ನಿತೀಶ್ ಕುಮಾರ್ ರೆಡ್ಡಿ
- ಮೊಹಮ್ಮದ್ ಸಿರಾಜ್
- ಪ್ರಸಿದ್ಧ್ ಕೃಷ್ಣ
- ಜಸ್ಪ್ರೀತ್ ಬುಮ್ರಾ
ಇದನ್ನೂ ಓದಿ: ಬರೋಬ್ಬರಿ 13 ಭರ್ಜರಿ ಸಿಕ್ಸ್… ಮ್ಯಾಕ್ಸ್ವೆಲ್ ಬ್ಯಾಟ್ನಿಂದ ತೂಫಾನ್ ಸೆಂಚುರಿ
