IND vs ENG: ಕರುಣ್ ಕಣ್ಣೀರು… ಸಮಾಧಾನ ಮಾಡಿದ ಕೆಎಲ್ ರಾಹುಲ್
Karun Nair: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಕರುಣ್ ನಾಯರ್ ಟೀಮ್ ಇಂಡಿಯಾ ಪರ 6 ಟೆಸ್ಟ್ ಪಂದ್ಯಗಳನ್ನಾಡಿದ್ದರು. ಈ ವೇಳೆ 7 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದ ಅವರು ತ್ರಿಶತಕ ಸಿಡಿಸುವ ಮೂಲಕ ಮಿಂಚಿದ್ದರು. ಆದರೆ ಈ ತ್ರಿಪಲ್ ಸೆಂಚುರಿ ಬಳಿಕ ವಿಫಲರಾದ ಕಾರಣ ಅವರನ್ನು ಆ ಬಳಿಕ ಭಾರತ ತಂಡಕ್ಕೆ ಆಯ್ಕೆ ಮಾಡಿರಲಿಲ್ಲ. ಇದೀಗ 8 ವರ್ಷಗಳ ಬಳಿಕ ಭಾರತ ತಂಡದಲ್ಲಿ ಕಾಣಿಸಿಕೊಂಡರೂ ಭರ್ಜರಿ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.

ಡಿಯರ್ ಕ್ರಿಕೆಟ್… ಇನ್ನೊಂದು ಅವಕಾಶ ನೀಡು ಎಂದು ಬೇಡಿಕೊಂಡಿದ್ದ ಕರುಣ್ ನಾಯರ್ಗೆ 8 ವರ್ಷಗಳ ಬಳಿಕ ಭಾರತ ತಂಡದಲ್ಲಿ ಮರಳಿ ಸ್ಥಾನ ಲಭಿಸಿತ್ತು. ಹೀಗೆ ಲಭಿಸಿದ ಅವಕಾಶದೊಂದಿಗೆ ಪ್ಲೇಯಿಂಗ್ ಇಲೆವೆನ್ನಲ್ಲೂ ಕಾಣಿಸಿಕೊಂಡರು. ಆದರೆ ಈ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಕರುಣ್ ನಾಯರ್ ಸಂಪೂರ್ಣ ವಿಫಲರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧ ಆಡಿದ 6 ಇನಿಂಗ್ಸ್ಗಳಲ್ಲಿ ಕರುಣ್ ಕಲೆಹಾಕಿದ ಒಟ್ಟು ಸ್ಕೋರ್ 131 ರನ್ಗಳು ಮಾತ್ರ. ಹೀಗಾಗಿಯೇ ನಾಲ್ಕನೇ ಟೆಸ್ಟ್ನಿಂದ ಕನ್ನಡಿಗನನ್ನು ಕೈ ಬಿಡಲಾಗಿತ್ತು.
ಇತ್ತ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಕರುಣ್ ನಾಯರ್ ಅಳುತ್ತಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಫೋಟೋದಲ್ಲಿ ಕರುಣ್ ಕಣ್ಣೀರು ಹಾಕುತ್ತಿದ್ದರೆ, ಅತ್ತ ಕೆಎಲ್ ರಾಹುಲ್ ತನ್ನ ಸಹಪಾಠಿಯನ್ನು ಸಮಾಧಾನಪಡಿಸುತ್ತಿರುವುದು ಕಾಣಬಹುದು.
ವೈರಲ್ ಫೋಟೋ ಅಸಲಿಯತ್ತೇನು?
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಫೋಟೋ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದ ವೇಳೆ ತೆಗೆದಿದ್ದಲ್ಲ. ಬದಲಾಗಿ ಲಾರ್ಡ್ಸ್ ಟೆಸ್ಟ್ ಪಂದ್ಯದ ವೇಳೆ ಕಂಡು ಬಂದ ದೃಶ್ಯ. ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಕರುಣ್ ಕೇವಲ 14 ರನ್ಗಳಿಸಿ ಔಟಾಗಿದ್ದರು. ತನ್ನ ಕೆರಿಯರ್ಗೆ ನಿರ್ಣಾಯಕವಾಗಿದ್ದ ಈ ಇನಿಂಗ್ಸ್ನಲ್ಲಿ ಉತ್ತಮ ಪ್ರದರ್ಶನ ನೀಡದೇ ಔಟಾಗಿದ್ದರಿಂದ ಅವರು ನಿರಾಸೆಗೊಂಡಿದ್ದರು.
ಹೀಗಾಗಿಯೇ ಔಟಾದ ಬಳಿಕ ಲಾರ್ಡ್ಸ್ ಬಾಲ್ಕನಿಯಲ್ಲಿ ಬೇಸರದಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಕರ್ನಾಟಕದ ಮತ್ತೋರ್ವ ಆಟಗಾರನಾಗಿರುವ ಕೆಎಲ್ ರಾಹುಲ್ ಅವರನ್ನು ಸಮಾಧಾನ ಮಾಡುತ್ತಿರುವುದು ಕಂಡು ಬಂದಿದೆ. ಇದೇ ಫೋಟೋ ಇದೀಗ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಕಂಡು ಬಂದ ಸನ್ನಿವೇಶ ಎಂಬ ಟ್ಯಾಗ್ ಲೈನ್ನೊಂದಿಗೆ ಹರಿಬಿಡಲಾಗಿದೆ.
ಒಟ್ಟಿನಲ್ಲಿ ಎಂಟು ವರ್ಷಗಳ ಬಳಿಕ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿದ ಕರುಣ್ ನಾಯರ್ ನಿರೀಕ್ಷಿತ ರೀತಿಯಲ್ಲಿ ಪ್ರದರ್ಶನ ನೀಡಿಲ್ಲ ಎಂಬುದೇ ಸತ್ಯ. ಆಡಿದ 6 ಇನಿಂಗ್ಸ್ಗಳಲ್ಲಿ ಅವರು ಒಂದೇ ಒಂದು ಅರ್ಧಶತಕ ಬಾರಿಸಿಲ್ಲ. ಅತ್ತ ಸಿಕ್ಕ 2ನೇ ಅವಕಾಶದಲ್ಲಿ 61 ರನ್ಗಳಿಸುವ ಮೂಲಕ ಸಾಯಿ ಸುದರ್ಶನ್ ಮುಂದಿನ ಪಂದ್ಯಕ್ಕೂ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಹೀಗಾಗಿ 5ನೇ ಟೆಸ್ಟ್ ಪಂದ್ಯದಲ್ಲೂ ಕರುಣ್ ನಾಯರ್ಗೆ ಅವಕಾಶ ಸಿಗುವುದಿಲ್ಲ ಎಂದೇ ಹೇಳಬಹುದು.
ಇದನ್ನೂ ಓದಿ: 11 ಭರ್ಜರಿ ಸಿಕ್ಸ್, 6 ಫೋರ್: ಶರವೇಗದ ಶತಕ ಸಿಡಿಸಿ ಭರ್ಜರಿ ದಾಖಲೆ ಬರೆದ ಟಿಮ್ ಡೇವಿಡ್
ಅಲ್ಲದೆ ಮುಂಬರುವ ಸರಣಿಗಳಿಂದಲೂ ಕರುಣ್ ನಾಯರ್ ಹೊರಬೀಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಏಕೆಂದರೆ ಅತ್ತ ಸರ್ಫರಾಝ್ ಖಾನ್, ತಿಲಕ್ ವರ್ಮಾ ಸೇರಿದಂತೆ ಕೆಲ ಯುವ ದಾಂಡಿಗರು ಅವಕಾಶವನ್ನು ಎದುರು ನೋಡುತ್ತಿದ್ದು, ಹೀಗಾಗಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಬಳಿಕ ಕರುಣ್ ನಾಯರ್ ತಂಡದಿಂದ ಹೊರಬಿದ್ದರೂ ಅಚ್ಚರಿಪಡಬೇಕಿಲ್ಲ.
