IND vs ENG: ಟೀಮ್ ಇಂಡಿಯಾ ಮುಂದಿರುವುದು ಇದೊಂದೇ ಆಯ್ಕೆ
India vs England 4th Test: ಮ್ಯಾಂಚೆಸ್ಟರ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲಿ 358 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಇಂಗ್ಲೆಂಡ್ ತಂಡವು ಜೋ ರೂಟ್ ಅವರ ಭರ್ಜರಿ ಶತಕದೊಂದಿಗೆ 3ನೇ ದಿನದಾಟದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 544 ರನ್ಗಳಿಸಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಣ 4ನೇ ಟೆಸ್ಟ್ ಪಂದ್ಯವು 4ನೇ ದಿನದಾಟಕ್ಕೆ ಕಾಲಿಟ್ಟಿದೆ. ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಬೆನ್ ಸ್ಟೋಕ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ (58), ಸಾಯಿ ಸುದರ್ಶನ್ (61) ಹಾಗೂ ರಿಷಭ್ ಪಂತ್ (54) ಅರ್ಧಶತಕ ಬಾರಿಸಿದ್ದರು. ಈ ಅರ್ಧಶತಕಗಳ ನೆರವಿನೊಂದಿಗೆ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲಿ 358 ರನ್ ಕಲೆಹಾಕಿತು.
ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಶುರು ಮಾಡಿದ ಇಂಗ್ಲೆಂಡ್ ಪರ ಝಾಕ್ ಕ್ರಾಲಿ (84), ಬೆನ್ ಡಕೆಟ್ (94) ಭರ್ಜರಿ ಬ್ಯಾಟಿಂಗ್ ಬ್ಯಾಟಿಂಗ್ ಪ್ರದರ್ಶಿಸಿದರು. ಆ ಬಳಿಕ ಬಂದ ಒಲೀ ಪೋಪ್ 71 ರನ್ಗಳ ಕೊಡುಗೆ ನೀಡಿದರು. ಇನ್ನು ಜೋ ರೂಟ್ 150 ರನ್ಗಳ ಭರ್ಜರಿ ಇನಿಂಗ್ಸ್ ಆಡಿದರು. ಪರಿಣಾಮ ಇಂಗ್ಲೆಂಡ್ ತಂಡದ ಪ್ರಥಮ ಇನಿಂಗ್ಸ್ ಸ್ಕೋರ್ 500 ರನ್ಗಳ ಗಡಿದಾಟಿದೆ.
ಅಲ್ಲದೆ ಮೂರನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ತಂಡವು 7 ವಿಕೆಟ್ ಕಳೆದುಕೊಂಡು 544 ರನ್ಗಳಿಸಿದೆ. ಅತ್ತ ಕ್ರೀಸ್ನಲ್ಲಿ 77 ರನ್ ಬಾರಿಸಿರುವ ಬೆನ್ ಸ್ಟೋಕ್ಸ್ ಹಾಗೂ ಆಲ್ರೌಂಡರ್ ಲಿಯಾನ್ ಡಾಸನ್ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಅದರಂತೆ ನಾಲ್ಕನೇ ದಿನದಾಟದಲ್ಲಿ ಸ್ಟೋಕ್ಸ್ ಹಾಗೂ ಡಾಸನ್ ಇನಿಂಗ್ಸ್ ಮುಂದುವರೆಸಲಿದ್ದಾರೆ.
3 ವಿಕೆಟ್ಗಳ ಇನಿಂಗ್ಸ್:
ಇಂಗ್ಲೆಂಡ್ ತಂಡದ ಮೊದಲ ಇನಿಂಗ್ಸ್ ಕೊನೆಗೊಳಿಸಲು ಟೀಮ್ ಇಂಡಿಯಾ ಇನ್ನೂ ಮೂರು ವಿಕೆಟ್ಗಳನ್ನು ಪಡೆಯಲೇಬೇಕು. ಅದರಲ್ಲೂ ಬೆನ್ ಸ್ಟೋಕ್ಸ್ ಹಾಗೂ ಲಿಯಾಮ್ ಡಾಸನ್ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದಾರೆ. ಹೀಗಾಗಿ ಇಂಗ್ಲೆಂಡ್ ತಂಡವು ಮೊದಲೆರಡು ಸೆಷನ್ಗಳ ಮೂಲಕ ಬೃಹತ್ ಮೊತ್ತ ಕಲೆಹಾಕಲು ಯತ್ನಿಸುವುದು ಖಚಿತ.
ಈ ಮೂಲಕ 186 ರನ್ಗಳ ಮುನ್ನಡೆ ಹೊಂದಿರುವ ಇಂಗ್ಲೆಂಡ್ ತಂಡವು ಕನಿಷ್ಠ 250 ರನ್ಗಳ ಮುನ್ನಡೆ ಪಡೆಯುವ ಗುರಿಯೊಂದಿಗೆ ಕಣಕ್ಕಿಳಿಯಲಿದೆ. ಅಂದರೆ ಇಂಗ್ಲೆಂಡ್ 600 ರನ್ ಕಲೆಹಾಕದೇ ಡಿಕ್ಲೇರ್ ಘೋಷಿಸುವ ಸಾಧ್ಯತೆಯಿಲ್ಲ.
ಟೀಮ್ ಇಂಡಿಯಾ ಮುಂದಿರುವುದು ಒಂದೇ ಆಯ್ಕೆ:
ಇಂಗ್ಲೆಂಡ್ ತಂಡವು ಕನಿಷ್ಠ 200 ರನ್ಗಳ ಮುನ್ನಡೆ ಸಾಧಿಸಿದರೆ, ಟೀಮ್ ಇಂಡಿಯಾ ಮುಂದಿರುವುದು ಡ್ರಾ ಆಯ್ಕೆ ಮಾತ್ರ. ಏಕೆಂದರೆ ದ್ವಿತೀಯ ಇನಿಂಗ್ಸ್ನ ಕೊನೆಯ 2 ಸೆಷನ್ನಲ್ಲಿ ಟೀಮ್ ಇಂಡಿಯಾ ಬ್ಯಾಟ್ ಬೀಸಿದರೂ 200 ರಿಂದ 300 ರನ್ಗಳಿಸಲಷ್ಟೇ ಶಕ್ತರಾಗಲಿದ್ದಾರೆ. ಅಲ್ಲದೆ ಐದನೇ ದಿನದಾಟದಲ್ಲೂ ಬ್ಯಾಟಿಂಗ್ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಲಿದೆ.
ಒಂದು ವೇಳೆ ಟೀಮ್ ಇಂಡಿಯಾ ಆಕ್ರಮಣಕಾರಿ ಆಟಕ್ಕೆ ಮುಂದಾಗಿ ದ್ವಿತೀಯ ಇನಿಂಗ್ಸ್ನಲ್ಲಿ 350 ರನ್ಗಳಿಸಿದರೂ, ಇಂಗ್ಲೆಂಡ್ ತಂಡಕ್ಕೆ ಸಿಗುವ ಗುರಿ ಕೇವಲ 150 ರನ್ಗಳು ಮಾತ್ರ. ಅಂದರೆ ಮೊದಲ ಇನಿಂಗ್ಸ್ನಲ್ಲಿ ಇಂಗ್ಲೆಂಡ್ 200 ರನ್ ಮುನ್ನಡೆ ಪಡೆದರೆ, ದ್ವಿತೀಯ ಇನಿಂಗ್ಸ್ನಲ್ಲಿ ಭಾರತ ತಂಡವು 350 ರನ್ಗಳಿಸಿದರೂ ಆತಿಥೇಯ ಪಡೆ ಕಡಿಮೆ ಮೊತ್ತದ ಟಾರ್ಗೆಟ್ ಪಡೆಯಲಿದೆ. ಹೀಗಾಗಿ ಭಾರತ ತಂಡವು ಈ ಪಂದ್ಯವನ್ನು ಡ್ರಾನತ್ತ ಕೊಂಡೊಯ್ಯಬೇಕಿರುವುದು ಅನಿವಾರ್ಯ.
ಇತಿಹಾಸದ ಅಂಕಿ ಅಂಶಗಳು:
ಭಾರತ ತಂಡವು ಟೆಸ್ಟ್ ಕ್ರಿಕೆಟ್ನ ಮೊದಲ ಇನಿಂಗ್ಸ್ನಲ್ಲಿ 127 ಬಾರಿ 150+ ರನ್ಗಳ ಹಿನ್ನಡೆ ಅನುಭವಿಸಿದೆ. ಈ ವೇಳೆ ಟೀಮ್ ಇಂಡಿಯಾ 93 ಬಾರಿ ಸೋಲನುಭವಿಸಿದೆ. ಇನ್ನು 32 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಹಾಗೆಯೇ ಗೆದ್ದಿರುವುದು ಕೇವಲ 2 ಮ್ಯಾಚ್ಗಳಲ್ಲಿ ಮಾತ್ರ. ಅಂದರೆ 150+ ರನ್ಗಳ ಹಿನ್ನಡೆ ಅನುಭವಿಸಿ ಟೀಮ್ ಇಂಡಿಯಾ ಸೋತಿದ್ದೇ ಹೆಚ್ಚು.
ಇದನ್ನೂ ಓದಿ: 37 ಎಸೆತಗಳಲ್ಲಿ ಶತಕ: ಟಿಮ್ ಡೇವಿಡ್ ಆರ್ಭಟದ ವಿಡಿಯೋ ಇಲ್ಲಿದೆ
ಈಗಾಗಲೇ ಇಂಗ್ಲೆಂಡ್ ತಂಡ 186 ರನ್ಗಳ ಮುನ್ನಡೆ ಹೊಂದಿದೆ. ಹೀಗಾಗಿ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲುವ ಸಾಧ್ಯತೆ ತುಂಬಾ ಕ್ಷೀಣ. ಇದೇ ಕಾರಣದಿಂದಾಗಿ ಭಾರತ ತಂಡವು ಗೆಲ್ಲುವ ಪ್ರಯತ್ನಕ್ಕಿಂತ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಯತ್ನಿಸಬೇಕಿದೆ. ಈ ಮೂಲಕ ಕೊನೆಯ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸಿ ಸರಣಿಯನ್ನು ಡ್ರಾನಲ್ಲಿ ಅಂತ್ಯಗೊಳಿಸಬಹುದು.
