IND vs IRE: ಮೊದಲ ಪಂದ್ಯ ಮಳೆಗಾಹುತಿ; ನಾಯಕನಾಗಿ ಮೊದಲ ಟಿ20 ಪಂದ್ಯ ಗೆದ್ದ ಜಸ್ಪ್ರೀತ್ ಬುಮ್ರಾ
IND vs IRE: ಭಾರತ ಹಾಗೂ ಐರ್ಲೆಂಡ್ ನಡುವಿನ ಟಿ20 ಸರಣಿಯ ಆರಂಭವೇ ಮಳೆಯ ಅಬ್ಬರಕ್ಕೆ ತುತ್ತಾಗಿದ್ದು, ಮೊದಲ ಪಂದ್ಯ ಅರ್ಧಕ್ಕೆ ರದ್ದಾಗಿದೆ. ಇದರ ಹೊರತಾಗಿಯೂ ಬಲಿಷ್ಠ ಬೌಲಿಂಗ್, ನಂತರ ಬ್ಯಾಟಿಂಗ್‌ನಲ್ಲಿ ವೇಗದ ಆರಂಭದ ಆಧಾರದ ಮೇಲೆ ಟೀಂ ಇಂಡಿಯಾ ಡಕ್‌ವರ್ತ್ ಲೂಯಿಸ್ ನಿಯಮದಡಿ ಮೊದಲ ಪಂದ್ಯವನ್ನು 2 ರನ್‌ಗಳಿಂದ ಗೆದ್ದುಕೊಂಡಿದೆ.
ಭಾರತ ಹಾಗೂ ಐರ್ಲೆಂಡ್ (India vs Ireland) ನಡುವಿನ ಟಿ20 ಸರಣಿಯ ಆರಂಭವೇ ಮಳೆಯ ಅಬ್ಬರಕ್ಕೆ ತುತ್ತಾಗಿದ್ದು, ಮೊದಲ ಪಂದ್ಯ ಅರ್ಧಕ್ಕೆ ರದ್ದಾಗಿದೆ. ಇದರ ಹೊರತಾಗಿಯೂ ಬಲಿಷ್ಠ ಬೌಲಿಂಗ್, ನಂತರ ಬ್ಯಾಟಿಂಗ್‌ನಲ್ಲಿ ವೇಗದ ಆರಂಭದ ಆಧಾರದ ಮೇಲೆ ಟೀಂ ಇಂಡಿಯಾ (Team India) ಡಕ್‌ವರ್ತ್ ಲೂಯಿಸ್ ನಿಯಮದಡಿ ಮೊದಲ ಪಂದ್ಯವನ್ನು 2 ರನ್‌ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 1-0 ಅಂತರದ ಮುನ್ನಡೆ ಸಾಧಿಸಿದೆ. ಅಲ್ಲದೆ 11 ತಿಂಗಳ ನಂತರ ಟೀಂ ಇಂಡಿಯಾಗೆ ಮರಳಿದ್ದ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ತಾವು ನಾಯಕತ್ವವಹಿಸಿದ ಮೊದಲ ಪಂದ್ಯದಲ್ಲೇ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಜಸ್ಪ್ರೀತ್ ಬುಮ್ರಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಹಾಗೆಯೇ ನಿರೀಕ್ಷೆಯಂತೆಯೇ ತಂಡದಲ್ಲಿ ಇಬ್ಬರಿಗೆ ಚೊಚ್ಚಲ ಟಿ20 ಪಂದ್ಯವನ್ನಾಡುವ ಅವಕಾಶ ಕೂಡ ಕೊಡಲಾಗಿತ್ತು. ತಂಡದ ಪರ ರಿಂಕು ಸಿಂಗ್ ಹಾಗೂ ಕನ್ನಡಿಗ ಪ್ರಸಿದ್ಧ್ ಕೃಷ್ಣ ಮೊದಲ ಟಿ20 ಪಂದ್ಯವನ್ನಾಡುವ ಅವಕಾಶ ಪಡೆದರು. ಆದರೆ ಇದರಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಪ್ರಸಿದ್ಧ್ ಕೃಷ್ಣ ಯಶಸ್ವಿಯಾದರೆ, ರಿಂಕು ಸಿಂಗ್ಗೆ ಬ್ಯಾಟಿಂಗ್ ಮಾಡುವ ಅವಕಾಶವೇ ಸಿಗಲಿಲ್ಲ.
The two captains shake hands as the play is called off due to incessant rains.#TeamIndia win by 2 runs on DLS.
Scorecard – https://t.co/G3HhbHPCuI…… #IREvIND pic.twitter.com/2v5isktP08
— BCCI (@BCCI) August 18, 2023
ಇನ್ನು ಬರೋಬ್ಬರಿ 1 ವರ್ಷಗಳ ಬಳಿಕ ಟೀಂ ಇಂಡಿಯಾಕ್ಕೆ ಮರಳಿದ ಬುಮ್ರಾ, ಆಡಿದ ಮೊದಲ ಪಂದ್ಯದಲ್ಲೇ ತಮ್ಮ ಹಳೆಯ ಲಯಕ್ಕೆ ಮರಳಿದರು. ಇನ್ನಿಂಗ್ಸ್ನ ಮೊದಲ ಓವರ್ ಬೌಲ್ ಮಾಡಿದ ಬುಮ್ರಾ ಎರಡು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಓವರ್ನ ಮೊದಲ ಎಸೆತದಲ್ಲಿ ಬೌಂಡರಿ ತಿಂದ ಬುಮ್ರಾ, ಮುಂದಿನ ಎಸೆತದಲ್ಲಿ ಆಂಡಿ ಬಲ್ಬಿರ್ನಿ ಅವರನ್ನು ಬೌಲ್ಡ್ ಮಾಡುವ ಮೂಲಕ ಬೌಂಡರಿಗೆ ಪ್ರತೀಕಾರ ತೀರಿಸಿಕೊಂಡರು. ಅಲ್ಲದೆ ಅದೇ ಓವರ್‌ನಲ್ಲಿ ಬುಮ್ರಾ ಲೋರ್ಕನ್ ಟಕರ್ ವಿಕೆಟ್ ಕೂಡ ಪಡೆದರು.
IND vs IRE: ಮೊದಲ ಓವರ್ನಲ್ಲೇ 2 ವಿಕೆಟ್ ಉರುಳಿಸಿದ ಬುಮ್ರಾ! ವಿಡಿಯೋ ನೋಡಿ
ಮೊದಲ ಪಂದ್ಯದಲ್ಲೇ ಮಿಂಚಿದ ಪ್ರಸಿದ್ಧ್ ಕೃಷ್ಣ
ಬುಮ್ರಾ ಅವರ ಈ ಅದ್ಭುತ ಆರಂಭದ ನಂತರ, ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಮತ್ತು ಪ್ರಸಿದ್ಧ್ ಕೃಷ್ಣ ವಿಕೆಟ್ಗಳ ಭೇಟೆಯಾಡಿದರು. ಟಿ20 ನಲ್ಲಿ ತಮ್ಮ ಮೊದಲ ಓವರ್ ಬೌಲ್ ಮಾಡಿದ ಪ್ರಸಿದ್ಧ್ ಕೃಷ್ಣ ಹ್ಯಾರಿ ಟೆಕ್ಟರ್ ಅವರ ವಿಕೆಟ್ ಪಡೆದರು. ಮುಂದಿನ ಓವರ್‌ನಲ್ಲಿ ಬಿಷ್ಣೋಯ್ ಐರಿಶ್ ನಾಯಕ ಪಾಲ್ ಸ್ಟಿರ್ಲಿಂಗ್ ಅವರನ್ನು ಬೌಲ್ಡ್ ಮಾಡಿದರು. ಮತ್ತೆ ಏಳನೇ ಓವರ್‌ನಲ್ಲಿ ದಾಳಿಗಿಳಿದ ಪ್ರಸಿದ್ಧ್ ಕೃಷ್ಣ, ಜಾರ್ಜ್ ಡಾಕ್ರೆಲ್ಗೆ ಪೆವಿಲಿಯನ್ ದಾರಿ ತೋರಿಸಿದರು. ಈ ಮೂಲಕ ಕೇವಲ 6.3 ಓವರ್ಗಳಲ್ಲಿ ಐರ್ಲೆಂಡ್ 31 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಬಳಿಕ ಬಿಷ್ಣೋಯ್ 11ನೇ ಓವರ್‌ನಲ್ಲಿ ಮಾರ್ಕ್ ಅದೈರ್ ಅವರನ್ನು ಬಲಿಪಶು ಮಾಡಿದರು.
33 ಎಸೆತಗಳಲ್ಲಿ ಅರ್ಧಶತಕ
ಇಲ್ಲಿಂದ ಕರ್ಟಿಸ್ ಕ್ಯಾಂಫರ್ ಮತ್ತು ಬ್ಯಾರಿ ಮೆಕಾರ್ಥಿ ಐರ್ಲೆಂಡ್ ಇನ್ನಿಂಗ್ಸ್ ನಿಭಾಯಿಸಿದ್ದು ಮಾತ್ರವಲ್ಲದೆ ಭಾರತದ ಬೌಲರ್ಗಳ ಎದುರು ಪ್ರತಿದಾಳಿ ನಡೆಸಿದರು. ಇವರಿಬ್ಬರ ನಡುವೆ 44 ಎಸೆತಗಳಲ್ಲಿ 57 ರನ್‌ಗಳ ಜೊತೆಯಾಟವಿದ್ದು, ಇದು ತಂಡವನ್ನು 100 ರನ್‌ಗಳ ಗಡಿ ದಾಟಿಸಿತು. ಆದರೆ ಜಸ್ಪ್ರೀತ್ ಬುಮ್ರಾ 19ನೇ ಓವರ್‌ನಲ್ಲಿ ರನ್ ವೇಗಕ್ಕೆ ಕಡಿವಾಣ ಹಾಕಿದಲ್ಲದೆ ಕೇವಲ 1 ರನ್ ನೀಡಿದರು. ಆದರೆ ಅರ್ಷದೀಪ್ ಬೌಲ್ ಮಾಡಿದ 20 ನೇ ಓವರ್‌ನಲ್ಲಿ ಮೆಕಾರ್ಥಿ ಕೊನೆಯ ಎರಡು ಎಸೆತಗಳಲ್ಲಿ ಸತತ ಸಿಕ್ಸರ್ ಸಿಡಿಸಿದಲ್ಲದೆ, ಕೇವಲ 33 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರು. ಇದರೊಂದಿಗೆ ಐರ್ಲೆಂಡ್ ತಂಡ 139 ರನ್‌ಗಳ ಟಾರ್ಗೆಟ್ ಸೆಟ್ ಮಾಡಿತು.
ಸ್ಥಿರ ಆರಂಭ ನೀಡಿದ ಆರಂಭಿಕರು
ಈ ಸಾಧಾರಣ ಗುರಿ ಬೆನ್ನಟ್ಟಿದ ಭಾರತಕ್ಕೆ ಯಶಸ್ವಿ ಜೈಸ್ವಾಲ್ ಹಾಗೂ ರುತುರಾಜ್ ಗಾಯಕ್ವಾಡ್ ಸ್ಥಿರ ಆರಂಭ ನೀಡಿದರು. ಆದಾರೆ ಇಬ್ಬರಿಗೂ ಬಿರುಸಿನ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಭಾರತ ಪವರ್‌ಪ್ಲೇನಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 45 ರನ್ ಕಲೆಹಾಕಿತು. ನಂತರ ಏಳನೇ ಓವರ್‌ನಲ್ಲಿ ತಿರುಗೇಟು ನೀಡಿದ ಐರ್ಲೆಂಡ್ ವೇಗಿ ಕ್ರೇಗ್ ಯಂಗ್ ಅವರು ಸತತ ಎರಡು ಎಸೆತಗಳಲ್ಲಿ ಜೈಸ್ವಾಲ್ ಮತ್ತು ತಿಲಕ್ ವರ್ಮಾ ಅವರನ್ನು ಪೆವಿಲಿಯನ್‌ಗಟ್ಟಿದರು.
ಭಾರತಕ್ಕೆ 2 ರನ್ ಜಯ
ವೆಸ್ಟ್ ಇಂಡೀಸ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ತಿಲಕ್, ಈ ಪಂದ್ಯದಲ್ಲಿ ಒಂದೇ ಒಂದು ಎಸೆತವನ್ನು ಆಡಿ ಖಾತೆ ತೆರೆಯದೆ ಮೊದಲ ಬಾರಿಗೆ ಡಕೌಟ್ ಔಟಾದರು. ಈ ವೇಳೆ ಮಳೆ ಅಡ್ಡಿಪಡಿಸಿ ಪಂದ್ಯವನ್ನು ನಿಲ್ಲಿಸಬೇಕಾಯಿತು. ಕ್ರಮೇಣ ಮಳೆ ಜೋರಾಗಿದ್ದು ಪಂದ್ಯವನ್ನು ಪುನರಾರಂಭಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಡಕ್ವರ್ತ್-ಲೂಯಿಸ್ ನಿಯಮದ ಅಡಿಯಲ್ಲಿ ಟೀಂ ಇಂಡಿಯಾ 2 ರನ್‌ಗಳ ಮುನ್ನಡೆ ಕಾಯ್ದುಕೊಂಡಿದ್ದರಿಂದ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು. ಸರಣಿಯ ಎರಡನೇ ಪಂದ್ಯ 20 ರಂದು ಮತ್ತು ಕೊನೆಯ ಪಂದ್ಯ ಆಗಸ್ಟ್ 23 ರಂದು ನಡೆಯಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:06 pm, Fri, 18 August 23