IND vs IRE: ವಿರಾಟ್ ಕೊಹ್ಲಿ 741 ರನ್‌ಗಳನ್ನು ಮರೆತು ಬಿಡುವುದು ಒಳಿತು..!
India vs Ireland: ಭಾರತ ಮತ್ತು ಐರ್ಲೆಂಡ್ ನಡುವಣ ಮುಖಾಮುಖಿಯಲ್ಲಿ ಟೀಮ್ ಇಂಡಿಯಾ ತಂಡದ್ದೇ ಮೇಲುಗೈ. ಅಂದರೆ ಉಭಯ ತಂಡಗಳು 7 ಬಾರಿ ಮುಖಾಮುಖಿಯಾಗಿದ್ದು, ಈ ವೇಳೆ ಟೀಮ್ ಇಂಡಿಯಾ ಎಲ್ಲಾ ಪಂದ್ಯಗಳಲ್ಲೂ ಜಯ ಸಾಧಿಸಿದೆ. ಆದರೆ ಈ ಬಾರಿ ನ್ಯೂಯಾರ್ಕ್ನ ನಸ್ಸೌ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಅನಿರೀಕ್ಷಿತ ಫಲಿತಾಂಶವನ್ನು ಎದುರು ನೋಡಲಾಗುತ್ತಿದೆ.
ಇಂದಿನಿಂದ ಟೀಮ್ ಇಂಡಿಯಾದ ಟಿ20 ವಿಶ್ವಕಪ್ (T20 World Cup 2024) ಅಭಿಯಾನ ಆರಂಭವಾಗಲಿದೆ. ಜೂನ್ 5 ರಂದು ನ್ಯೂಯಾರ್ಕ್ನ ನಸ್ಸೌ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭಾರತ ಮತ್ತು ಐರ್ಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಉಭಯ ತಂಡಗಳ ಮುಖಾಮುಖಿಯಲ್ಲಿ ಭಾರತ ತಂಡವೇ ಮೇಲುಗೈ ಹೊಂದಿದ್ದರೂ, ಈ ಬಾರಿ ಎಚ್ಚರಿಕೆಯಿಂದ ಆಡಬೇಕಾಗುತ್ತದೆ. ವಿಶೇಷವಾಗಿ 22-ಯಾರ್ಡ್ ಸ್ಟ್ರಿಪ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ತೊಂದರೆ ಎದುರಿಸುತ್ತಿರುವಾಗ ಮತ್ತಷ್ಟು ಎಚ್ಚರಿಕೆಯಿಂದ ಬ್ಯಾಟ್ ಬೀಸಬೇಕಾಗುತ್ತದೆ.
ಏಕೆಂದರೆ ನಸ್ಸೌ ಸ್ಟೇಡಿಯಂನ ಪಿಚ್ನಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಲ್ಲ. ಇಲ್ಲಿ ಶ್ರೀಲಂಕಾ ತಂಡ 77 ರನ್‌ಗಳಿಗೆ ಕುಸಿದರೆ, ಅತ್ತ 78 ರನ್‌ಗಳ ಗುರಿಯನ್ನು ಬೆನ್ನಟ್ಟಲು ಸೌತ್ ಆಫ್ರಿಕಾ ತಂಡ 16 ಓವರ್‌ಗಳನ್ನು ತೆಗೆದುಕೊಂಡಿತು ಎಂಬುದನ್ನು ಗಮನಿಸಬೇಕು.
ಹಾಗೆಯೇ ಇದೇ ಮೈದಾನದಲ್ಲಿ ಆಡಲಾದ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟರ್ಗಳಿಂದ ಅಮೋಘ ಎನ್ನುವಂತಹ ಆಟವೇನು ಮೂಡಿಬಂದಿರಲಿಲ್ಲ. ಅಲ್ಲದೆ ಅಭ್ಯಾಸ ಪಂದ್ಯದಲ್ಲಿ ಕಲೆಹಾಕಿದ್ದು ಕೇವಲ 182 ರನ್ಗಳು ಮಾತ್ರ. ಇದಕ್ಕೆ ಕಾರಣ ನಸ್ಸೌ ಪಿಚ್ನಲ್ಲಿನ ಅನಿರೀಕ್ಷಿತ ತಿರುವುಗಳು ಮತ್ತು ಬೌನ್ಸ್ಗಳು.
ಅಂದರೆ ಈ ಪಿಚ್ನಲ್ಲಿ ಬ್ಯಾಟರ್ಗಳು ಎಷ್ಟು ಲಾಭ ಪಡೆಯಲಿದ್ದಾರೋ, ಅಷ್ಟೇ ಬೌಲರ್ಗಳಿಗೂ ಸಹಕಾರಿ. ಹೀಗಾಗಿ ಯಾವುದೇ ಹಂತದಲ್ಲೂ ಪಂದ್ಯದ ಗತಿ ಬದಲಾಗಬಲ್ಲದು. ಅದರಲ್ಲೂ ಈ ಪಿಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ಯಾವುದೇ ತಂಡ ಪವರ್ಪ್ಲೇನಲ್ಲಿ ಪವರ್ ತೋರಿಸಿಲ್ಲ. ಹೀಗಾಗಿಯೇ ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಬೀಸಬೇಕಾದ ಅನಿವಾರ್ಯತೆ ಇದೆ.
ಇಂತಹ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾದ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ಅವರ ಇನಿಂಗ್ಸ್ ಮುಖ್ಯವಾಗುತ್ತದೆ. ಏಕೆಂದರೆ ಪರಿಸ್ಥಿತಿ ಕಷ್ಟಕರವಾದಾಗ, ವಿರಾಟ್ ಕೊಹ್ಲಿ ಭಾರತ ಪಾಲಿಗೆ ಆಸರೆಯಾಗಿ ನಿಂತ ಉದಾಹರಣೆಗಳಿವೆ. ಹೀಗಾಗಿ ನ್ಯೂಯಾರ್ಕ್ನಲ್ಲೂ ಕೊಹ್ಲಿಯೇ ಭಾರತದ ಆಧಾರ ಸ್ತಂಭ ಎಂದರೆ ತಪ್ಪಾಗಲಾರದು. ಇದಕ್ಕಾಗಿ ವಿರಾಟ್ ಕೊಹ್ಲಿ ತಮ್ಮ 741 ರನ್‌ಗಳನ್ನು ಮರೆಯಬೇಕಾಗಿದೆ.
741 ರನ್‌ಗಳ ಸರದಾರ:
ಈ ಬಾರಿಯ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅದರಲ್ಲೂ ಸ್ಪೋಟಕ ಬ್ಯಾಟಿಂಗ್ಗೆ ಒತ್ತು ನೀಡಿದ್ದರು. ಹೀಗಾಗಿ 15 ಪಂದ್ಯಗಳಲ್ಲಿ 154 ರ ಸ್ಟ್ರೈಕರ್ ರೇಟ್ನಲ್ಲಿ ರನ್ ಕಲೆಹಾಕಿದ್ದರು. ಹೀಗೆ ಬಿರುಸಿನ ಬ್ಯಾಟಿಂಗ್ನೊಂದಿಗೆ 741 ರನ್ ಕಲೆಹಾಕಿರುವ ಕೊಹ್ಲಿ ನ್ಯೂಯಾರ್ಕ್ ಪಿಚ್ನಲ್ಲಿ ಗೇರ್ ಬದಲಿಸಲೇಬೇಕು.
ಏಕೆಂದರೆ ಟೀಮ್ ಇಂಡಿಯಾದಲ್ಲಿ ಹೊಡಿಬಡಿ ದಾಂಡಿಗರ ದಂಡೇ ಇದೆ. ಆದರೆ ಪರಿಸ್ಥಿತಿಗೆ ತಕ್ಕಂತೆ ಕ್ರೀಸ್ ಕಚ್ಚಿ ನಿಲ್ಲುವ ಬ್ಯಾಟರ್ಗಳ ಕೊರತೆಯಿದೆ. ಈ ಕೊರತೆಯನ್ನು ನೀಗಿಸಿಕೊಳ್ಳಬೇಕಿದ್ದರೆ ವಿರಾಟ್ ಕೊಹ್ಲಿ ಎಚ್ಚರಿಕೆಯ ಬ್ಯಾಟಿಂಗ್ಗೆ ಒತ್ತು ನೀಡಬೇಕು.
ಹೀಗಾಗಿಯೇ ವಿರಾಟ್ ಕೊಹ್ಲಿ ತಮ್ಮ ಐಪಿಎಲ್ ಇನಿಂಗ್ಸ್ಗಳನ್ನು ಮರೆತು ನ್ಯೂಯಾರ್ಕ್‌ನಲ್ಲಿ ಕಣಕ್ಕಿಳಿಯಬೇಕಿದೆ. ಏಕೆಂದರೆ ಈ ಬಾರಿಯ ಐಪಿಎಲ್ನಲ್ಲಿ ಪಿಚ್ ಸಾಕಷ್ಟು ಸಮತಟ್ಟಾಗಿತ್ತು. ಅಲ್ಲದೆ ವಿರಾಟ್ ಕೊಹ್ಲಿ ಆ ಪಿಚ್‌ಗಳಲ್ಲಿ ನಿರ್ಭೀತಿಯಿಂದ ಬ್ಯಾಟ್ ಬೀಸಿದ್ದರು. ಅಲ್ಲದೆ 38 ಸಿಕ್ಸರ್ಗಳನ್ನು ಸಿಡಿಸುವ ಮೂಲಕ ಅಬ್ಬರಿಸಿದ್ದರು.
ಆದರೆ ವಿರಾಟ್ ಕೊಹ್ಲಿ ನ್ಯೂಯಾರ್ಕ್‌ನಲ್ಲಿ ಐಪಿಎಲ್ ಶೈಲಿಯಲ್ಲಿ ಆಡಲು ಪ್ರಯತ್ನಿಸಿದರೆ, ಖಂಡಿತವಾಗಿಯೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ ವಿಕೆಟ್ ಕಳೆದುಕೊಳ್ಳುವ ಸಾಧ್ಯತೆ ಇದೆ.
ಹೀಗಾಗಿ ವಿರಾಟ್ ಕೊಹ್ಲಿ ತಮ್ಮ ಸಾಂಪ್ರದಾಯಿಕ ಶೈಲಿಗೆ ಮರಳಬೇಕಾದ ಅನಿವಾರ್ಯತೆ ಇದೆ. ಅಂದರೆ ಕಿಂಗ್ ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ ಫೋರ್ಗಳೊಂದಿಗೆ ಸಿಂಗಲ್ಸ್ಗಳ ಮೂಲಕ ಇನಿಂಗ್ಸ್ ಕಟ್ಟುವಲ್ಲಿ ನಿಪುಣರು. ಇದೇ ಮಾದರಿಯಲ್ಲಿ ವಿರಾಟ್ ಕೊಹ್ಲಿ ಇನಿಂಗ್ಸ್ ಆಡಬೇಕಾಗುತ್ತದೆ.
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿಗಾಗಿ ಕಾಯುತ್ತಿದೆ ವಿಶ್ವ ದಾಖಲೆಗಳು..!
ಮತ್ತೊಂದೆಡೆ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ನಂತಹ ಹೊಡಿಬಡಿ ದಾಂಡಿಗರ ದಂಡೇ ಇದೆ. ಅವರಿಂದ ಬಿರುಸಿನ ಇನಿಂಗ್ಸ್ ಮೂಡಿಬಂದರೂ ತಂಡದ ಮೊತ್ತವು ಹೆಚ್ಚಾಗಲಿದೆ. ಅಲ್ಲದೆ ಒಂದೆಡೆ ವಿರಾಟ್ ಕೊಹ್ಲಿ ಕ್ರೀಸ್ ಕಚ್ಚಿ ನಿಂತಿದ್ದರೆ, ಉಳಿದ ಬ್ಯಾಟರ್ಗಳಿಗೂ ಒತ್ತಡವಿಲ್ಲದೆ ಸ್ಪೋಟಕ ಇನಿಂಗ್ಸ್ ಆಡಲು ಸಾಧ್ಯವಾಗುತ್ತದೆ. ಹೀಗಾಗಿಯೇ ನ್ಯೂಯಾರ್ಕ್ನ ನಸ್ಸೌ ಪಿಚ್ನಲ್ಲಿ ವಿರಾಟ್ ಕೊಹ್ಲಿ ತಮ್ಮ ಅನುಭವವನ್ನು ಧಾರೆಯೆರೆಯುವುದು ಟೀಮ್ ಇಂಡಿಯಾ ಪಾಲಿಗೆ ಅನಿವಾರ್ಯ ಎಂದೇ ಹೇಳಬಹುದು.