
ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ದುಬೈನ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು (ಮಾ.9) ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಇದು ಐಸಿಸಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ-ನ್ಯೂಝಿಲೆಂಡ್ ನಡುವಣ ಮೂರನೇ ಮುಖಾಮುಖಿ. ಇದಕ್ಕೂ ಮುನ್ನ ಎರಡು ಬಾರಿ ಭಾರತ ಮತ್ತು ನ್ಯೂಝಿಲೆಂಡ್ ಫೈನಲ್ ಪಂದ್ಯಗಳನ್ನಾಡಿದೆ. ಈ ಎರಡು ಮ್ಯಾಚ್ಗಳಲ್ಲೂ ಕಿವೀಸ್ ಪಡೆ ಜಯಿಸಿರುವುದು ವಿಶೇಷ.
ಐಸಿಸಿ ಟೂರ್ನಿಗಳಲ್ಲಿ ನ್ಯೂಝಿಲೆಂಡ್ ತಂಡವು ಈವರೆಗೆ 6 ಬಾರಿ ಫೈನಲ್ ಆಡಿದೆ. ಈ ಆರು ಫೈನಲ್ಗಳಲ್ಲಿ ನ್ಯೂಝಿಲೆಂಡ್ ಗೆದ್ದಿರುವುದು ಕೇವಲ 2 ಬಾರಿ ಮಾತ್ರ. ಅದು ಕೂಡ ಭಾರತದ ವಿರುದ್ಧ ಎಂಬುದೇ ಅಚ್ಚರಿ.
ಅಂದರೆ ನ್ಯೂಝಿಲೆಂಡ್ ತಂಡವು ಈವರೆಗೆ ಆಡಿದ 6 ಐಸಿಸಿ ಟೂರ್ನಿ ಫೈನಲ್ಗಳಲ್ಲಿ 2 ಬಾರಿ ಮಾತ್ರ ಜಯ ಸಾಧಿಸಿದೆ. ಅದು ಕೂಡ ಭಾರತದ ವಿರುದ್ಧ ಮಾತ್ರ. ಇದೀಗ ಉಭಯ ತಂಡಗಳು ಮೂರನೇ ಬಾರಿ ಮುಖಾಮುಖಿಯಾಗಲು ಸಜ್ಜಾಗಿದೆ.
ಇದನ್ನೂ ಓದಿ: IPL 2026: ಐಪಿಎಲ್ಗೆ ಪಾಕಿಸ್ತಾನ್ ವೇಗಿ ಮೊಹಮ್ಮದ್ ಅಮೀರ್
ಟೀಮ್ ಇಂಡಿಯಾ ಕಳೆದ ಎರಡು ಫೈನಲ್ ಸೋಲಿನ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿದ್ದರೆ, ಅತ್ತ ನ್ಯೂಝಿಲೆಂಡ್ ತಂಡವು ಮೂರನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ವಿಶ್ವಾಸದಲ್ಲಿದೆ. ಹೀಗಾಗಿ ಇಂದು ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.