ಬೆಂಗಳೂರಿನಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಟೀಂ ಇಂಡಿಯಾದ ವಿಕೆಟ್ಕೀಪರ್ ಬ್ಯಾಟ್ಸ್ಮನ್ ರಿಷಬ್ ಪಂತ್ ಕೇವಲ 1 ರನ್ನಿಂದ ಶತಕ ವಂಚಿತರಾಗಿದ್ದಾರೆ. 99 ರನ್ಗಳಿಸಿ ಆಡುತ್ತಿದ್ದ ಪಂತ್, ಕಿವೀಸ್ ವೇಗಿ ವಿಲಿಯಂ ಓ’ರೂರ್ಕ್ ಅವರ ಎಸೆತವನ್ನು ಡಿಫೆಂಡ್ ಮಾಡುವ ಯತ್ನದಲ್ಲಿ ಬೌಲ್ಡ್ ಆದರು. ಮೊದಲು ಚೆಂಡು ಪಂತ್ ಅವರ ಬ್ಯಾಟ್ನ ಅಂಚಿಗೆ ತಾಗಿ ಆ ಬಳಿಕ ವಿಕೆಟ್ಗೆ ಬಡಿಯಿತು. ಈ ಮೂಲಕ ಪಂತ್ ಕೇವಲ ಒಂದೇ ಒಂದು ರನ್ನಿಂದ ಸ್ಮರಣೀಯ ಶತಕವನ್ನು ಮಿಸ್ ಮಾಡಿಕೊಂಡರು. ಪಂತ್ ಔಟಾಗುತ್ತಿದ್ದಂತೆ ಇಡೀ ಕ್ರೀಡಾಂಗಣದಲ್ಲಿ ಮೌನ ಆವರಿಸಿತು. ನಾನ್ ಸ್ಟ್ರೈಕ್ನಲ್ಲಿದ್ದ ಕೆಎಲ್ ರಾಹುಲ್ ಕೂಡ ಈ ಆಘಾತವನ್ನು ನಂಬಲು ಸಾಧ್ಯವಾಗದೆ ಹಾಗೆ ಕೆಳಗೆ ಕುಳಿತುಬಿಟ್ಟರು. ಡಗೌಟ್ನಲ್ಲಿ ಕುಳಿತಿದ್ದ ತಂಡದ ಸಹ ಆಟಗಾರರು ಕೆಲ ಸಮಯ ಶಾಕ್ಗೆ ಒಳಗಾಗಿ ಕೆಲವರು ಬಾಯ್ ಮೇಲೆ ಕೈ ಇಟ್ಟುಕೊಂಡರೆ, ಇನ್ನು ಕೆವಲರು ಹತಾಶೆಯಿಂದ ತಲೆ ತಗ್ಗಿಸಿ ಕುಳಿತರು. ಅಂತಿಮವಾಗಿ ಪಂತ್ ಭಾರದ ನೋವಿನಿಂದಲೇ ಮೈದಾನದಿಂದ ಪೆವಿಲಿಯನ್ತ್ತ ಹೆಜ್ಜೆ ಹಾಕಿದರು.
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರಿಗೆ ಅವರ ವೃತ್ತಿಜೀವನದುದ್ದಕ್ಕೂ ಕಾಡಿದ್ದ ನರ್ವಸ್ 90 ಎಂಬ ಭೂತ ಇದೀಗ ರಿಷಬ್ ಪಂತ್ ಅವರ ಹೆಗಲೆರಿದೆ. ಸಚಿನ್ ಅವರು ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿಜೀನವದಲ್ಲಿ ಒಟ್ಟು 10 ಬಾರಿ ನರ್ವಸ್ 90ಗೆ ಬಲಿಯಾಗಿದ್ದರೆ, ರಿಷಬ್ ಪಂತ್ ಈಗಾಗಲೇ 7 ಬಾರಿ ಶತಕದಂಚಿನಲ್ಲಿ ಎಡವಿದ್ದಾರೆ. ಇದಕ್ಕೂ ಮುನ್ನ ಪಂತ್ 97 ರನ್, 96 ರನ್, 93 ರನ್, 92 ರನ್, 92 ರನ್ ಮತ್ತು 91 ರನ್ಗಳಿಗೆ ಔಟಾಗಿದ್ದರು.
Wtf man 💔💔 pic.twitter.com/D7emlvgsbV
— Naeem (@Naeemception) October 19, 2024
Nervous ninties and Rishabh Pant never ending story. The reaction says it all 💔 pic.twitter.com/klNRKAlpNx
— Pari (@BluntIndianGal) October 19, 2024
ರಿಷಬ್ ಪಂತ್ ಟೆಸ್ಟ್ ವೃತ್ತಿಜೀವನದಲ್ಲಿ 99 ರನ್ ಗಳಿಸಿ ಔಟಾಗಿರುವುದು ಇದೇ ಮೊದಲು. ಅದೇ ಸಮಯದಲ್ಲಿ, ಭಾರತೀಯ ಟೆಸ್ಟ್ ಕ್ರಿಕೆಟ್ನಲ್ಲಿ 12 ವರ್ಷಗಳ ನಂತರ, ವಿಕೆಟ್ಕೀಪರ್ ಬ್ಯಾಟ್ಸ್ಮನ್ ಒಬ್ಬ 99 ರನ್ ಗಳಿಸಿ ಔಟಾಗಿರುವ ಘಟನೆ ನಡೆದಿದೆ. ಇದಕ್ಕೂ ಮುನ್ನ 2012 ರಲ್ಲಿ ಎಂಎಸ್ ಧೋನಿ 99 ರನ್ ಗಳಿಸಿ ಔಟಾಗಿದ್ದರು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಧೋನಿ 99 ರನ್ ಗಳಿಸಿ ರನೌಟ್ ಆಗಿದ್ದರು. ಈಗ 12 ವರ್ಷಗಳ ನಂತರ ಪಂತ್ ವಿಷಯದಲ್ಲಿ ಇದು ಸಂಭವಿಸಿದೆ. ಇದಲ್ಲದೇ ಟೆಸ್ಟ್ನಲ್ಲಿ 99 ರನ್ಗಳಿಗೆ ಔಟಾದ ಭಾರತದ 5ನೇ ಬ್ಯಾಟ್ಸ್ಮನ್ ಎಂಬ ಬೇಡದ ದಾಖಲೆ ರಿಷಬ್ ಪಂತ್ ಪಾಲಾಗಿದೆ. ಪಂತ್ ಮತ್ತು ಧೋನಿ ಹೊರತುಪಡಿಸಿ, ಮುರಳಿ ವಿಜಯ್, ವೀರೇಂದ್ರ ಸೆಹ್ವಾಗ್ ಮತ್ತು ಸೌರವ್ ಗಂಗೂಲಿ ಕೂಡ 99 ರನ್ಗೆ ಔಟಾಗಿ ಕೇವಲ 1 ರನ್ನಿಂದ ಶತಕವಂಚಿತರಾಗಿದ್ದರು.
ಈ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ಕೇವಲ 46 ರನ್ಗಳಿಗೆ ಆಲೌಟ್ ಆಗಿತ್ತು. ಆದರೆ ಎರಡನೇ ಇನ್ನಿಂಗ್ಸ್ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ರೋಹಿತ್ ಪಡೆ, ನಾಲ್ಕನೇ ದಿನದ ಚಹಾ ವಿರಾಮದ ವೇಳೆಗೆ 6 ವಿಕೆಟ್ ಕಳೆದುಕೊಂಡು 438 ರನ್ ಗಳಿಸಿ 82 ರನ್ ಮುನ್ನಡೆ ಸಾಧಿಸಿದೆ. ದೊಡ್ಡ ಮೊತ್ತ ಕಲೆ ಹಾಕುವಲ್ಲಿ ಟೀಂ ಇಂಡಿಯಾ ಯಶಸ್ವಿಯಾದರೆ ಪಂದ್ಯವನ್ನೂ ಗೆಲ್ಲಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:32 pm, Sat, 19 October 24