IND vs NZ: ದಾಖಲೆಯ ದ್ವಿಶತಕ ಸಿಡಿಸಿ ಶಿಖರ್ ಧವನ್ ವೃತ್ತಿ ಬದುಕಿಗೆ ಎಳ್ಳು ನೀರು ಬಿಟ್ಟ ಗಿಲ್..!
IND vs NZ: ಸುಮಾರು ಒಂದು ದಶಕದ ಕಾಲ ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಭಾರತದ ಅತ್ಯಂತ ಯಶಸ್ವಿ ಆರಂಭಿಕ ಮತ್ತು ಅಸಾಧಾರಣ ಪಾಲುದಾರರಾಗಿದ್ದ ಧವನ್ ಅವರನ್ನು ಕಳೆದ ವರ್ಷ ಬಾಂಗ್ಲಾದೇಶ ಪ್ರವಾಸದಲ್ಲಿ ಏಕದಿನ ಸರಣಿಯಿಂದ ಕೈಬಿಡಲಾಯಿತು.

2023ರ ಅಕ್ಟೋಬರ್-ನವೆಂಬರ್ ತಿಂಗಳು ಕ್ರಿಕೆಟ್ ಜಗತ್ತಿಗೆ ಬಹಳ ಮಹತ್ವದ್ದಾಗಿದೆ. ಕಾರಣ, ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ (World Cup 2023). ಎಲ್ಲಾ ತಂಡಗಳು ಈ ಬಾರಿಯ ವಿಶ್ವಕಪ್ ತಯಾರಿಯಲ್ಲಿ ನಿರತವಾಗಿದ್ದು, ಭಾರತ ತಂಡವೂ ಕಾರ್ಯಪ್ರವೃತ್ತವಾಗಿದೆ. ಏಕದಿನ ವಿಶ್ವಕಪ್ ಗೆಲ್ಲಲೇಬೇಕೆಂಬ ಗುರಿ ಇಟ್ಟುಕೊಂಡಿರುವ ಟೀಂ ಇಂಡಿಯಾ (Team India) ಕೂಡ ಈ ವರ್ಷ ಆಡಿರುವ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದೆ. ವಿಶೇಷವಾಗಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಶುಭ್‌ಮನ್ ಗಿಲ್ (Shubman Gill) ಅದ್ಭುತ ಪ್ರದರ್ಶನದೊಂದಿಗೆ ಏಕದಿನ ವಿಶ್ವಕಪ್‌ಗೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಲಂಕಾ ವಿರುದ್ಧ ಶತಕ ಸಿಡಿಸಿ ಮಿಂಚಿದ್ದ ಗಿಲ್, ಕಿವೀಸ್ ವಿರುದ್ಧ ಆರಂಭವಾಗಿರುವ ಏಕದಿನ ಸರಣಿಯಲ್ಲಿ ದಾಖಲೆಯ ದ್ವಿಶತಕ ಸಿಡಿಸುವುದರೊಂದಿಗೆ ಆರಂಭಿಕ ಸ್ಥಾನಕ್ಕೆ ನಾನೇ ಸೂಕ್ತ ಎಂಬ ಸಿಗ್ನಲ್ ಕೂಡ ನೀಡಿದ್ದಾರೆ. ಹೀಗೆ ಏಕದಿನ ಮಾದರಿಯಲ್ಲಿ ಆರಂಭಿಕರಾಗಿ ಅದ್ಭುತ ಫಾರ್ಮ್ನಲ್ಲಿರುವ ಗಿಲ್, ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ (Shikhar Dhawan) ವೃತ್ತಿ ಜೀವನಕ್ಕೆ ಬಹುತೇಕ ಅಂತ್ಯ ಹಾಡಿದ್ದಾರೆ.
ಬುಧವಾರ, ಜನವರಿ 18 ರಂದು ಹೈದರಾಬಾದ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ದಾಖಲೆಯ ದ್ವಿಶತಕ ಸಿಡಿಸಿದ ಗಿಲ್, ಹತ್ತು ಹಲವು ದಾಖಲೆಗಳನ್ನು ಬರೆದರು. ಈ ದ್ವಿಶತಕದೊಂದಿಗೆ ಗಿಲ್, ಈ ಹಿಂದೆ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ (ಇಬ್ಬರೂ 24 ಇನ್ನಿಂಗ್ಸ್‌ಗಳಲ್ಲಿ) ದಾಖಲಿಸಿದ್ದ ಅತಿ ವೇಗದ 1000 ಏಕದಿನ ರನ್‌ಗಳ ದಾಖಲೆಯನ್ನು ಮುರಿದರು.
ಧವನ್ ಭರವಸೆಗೆ ಕೊನೆಯ ಹೊಡೆತ
ಗಿಲ್, ಧವನ್ ಅವರ ದಾಖಲೆಗಳನ್ನು ಮುರಿಯುವುದು ಮಾತ್ರವಲ್ಲದೆ, ತನ್ನ ಅದ್ಭುತ ಫಾರ್ಮ್ನಿಂದ ಗಬ್ಬರ್ ಕನಸ್ಸಿಗೆ ಕೊಳ್ಳಿ ಇಡುತ್ತಿದ್ದಾರೆ. ವಾಸ್ತವವಾಗಿ ಶಿಖರ್ ಧವನ್ ಏಕದಿನ ವಿಶ್ವಕಪ್ ಆಡುವುದು ನನ್ನ ಮಹಾಕನಸು ಎಂದು ಹೇಳಿಕೊಂಡಿದ್ದರು. ಆದರೆ ಇದೀಗ ಆರಂಭಿಕರಾಗಿ ರೋಹಿತ್ ಜೊತೆ ಉತ್ತಮ ಜೊತೆಯಾಟ ನಡೆಸುತ್ತಿರುವುದಲ್ಲದೆ ಶತಕಗಳ ಮೇಲೆ ಶತಕ ಸಿಡಿಸುತ್ತಿರುವ ಗಿಲ್, ಧವನ್ ಸ್ಥಾನವನ್ನು ಆಕ್ರಮಿಸಿಕೊಳ್ಳಲು ಆರಂಭಿಸಿದ್ದಾರೆ. ಇತ್ತ ಕಳಪೆ ಫಾರ್ಮ್ನಿಂದಾಗಿ ಟೀಂ ಇಂಡಿಯಾದಿಂದ ಹೊರಬಿದ್ದಿರುವ ಧವನ್ ಮತ್ತೆ ತಂಡಕ್ಕೆ ಎಂಟ್ರಿಕೊಡುವುದು ಅನುಮಾನವೇ ಎನ್ನಲಾಗುತ್ತಿದೆ.
U19 World Cup: ಟಿ20 ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ಜಯ; ಸೂಪರ್-6 ಸುತ್ತಿಗೆ ಎಂಟ್ರಿಕೊಟ್ಟ ಭಾರತ..!
ಸುಮಾರು ಒಂದು ದಶಕದ ಕಾಲ ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಭಾರತದ ಅತ್ಯಂತ ಯಶಸ್ವಿ ಆರಂಭಿಕ ಮತ್ತು ಅಸಾಧಾರಣ ಪಾಲುದಾರರಾಗಿದ್ದ ಧವನ್ ಅವರನ್ನು ಕಳೆದ ವರ್ಷ ಬಾಂಗ್ಲಾದೇಶ ಪ್ರವಾಸದಲ್ಲಿ ಏಕದಿನ ಸರಣಿಯಿಂದ ಕೈಬಿಡಲಾಯಿತು. ಕಳೆದ ವರ್ಷ ಕಳಪೆ ಫಾರ್ಮ್ನಿಂದ ಬಳಲಿದ ಧವನ್ ರನ್ ಗಳಿಸುವಲ್ಲಿ ವಿಫಲರಾಗಿರುವುದು ಮಾತ್ರವಲ್ಲದೆ, ಬಂದ ರನ್ಗಳ ವೇಗವೂ ತುಂಬಾ ನಿಧಾನವಾಗಿತ್ತು.
2022 ರಲ್ಲಿ, 22 ಇನ್ನಿಂಗ್ಸ್‌ಗಳನ್ನು ಆಡಿರುವ ಧವನ್, 34 ರ ಸರಾಸರಿಯಲ್ಲಿ ಮತ್ತು 74 ರ ಸ್ಟ್ರೈಕ್ ರೇಟ್‌ನಲ್ಲಿ ಕೇವಲ 688 ರನ್ ಗಳಿಸಿದರು. ಧವನ್ಗೆ ಹೋಲಿಸಿದರೆ, ಗಿಲ್ ಜನವರಿ 2022 ಮತ್ತು ಜನವರಿ 2023 ರ ನಡುವೆ 16 ಇನ್ನಿಂಗ್ಸ್‌ಗಳಲ್ಲಿ 70 ರ ಸರಾಸರಿಯಲ್ಲಿ 1000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ ಕೂಡ 100ಕ್ಕಿಂತ ಹೆಚ್ಚಿದೆ.
ಧವನ್ ಸ್ಥಾನಕ್ಕೆ ಗಿಲ್ ಎಂಟ್ರಿ
2019 ರಲ್ಲಿ ತನ್ನ ಚೊಚ್ಚಲ ಏಕದಿನ ಪಂದ್ಯವನ್ನು ಆಡಿದ ಗಿಲ್‌ಗೆ ಕಳೆದ 6 ತಿಂಗಳುಗಳು ಅತ್ಯಂತ ಮಹತ್ವದ್ದಾಗಿವೆ. ಕಾಕತಾಳೀಯವೆಂಬಂತೆ ಧವನ್ ಅವರೊಂದಿಗೆ ಅನೇಕ ಏಕದಿನ ಸರಣಿಗಳಲ್ಲಿ ಆರಂಭಿಕ ಜವಾಬ್ದಾರಿಯನ್ನು ನಿರ್ವಹಿಸಿದ ಗಿಲ್ ಅದ್ಭುತ ಪ್ರದರ್ಶನದೊಂದಿಗೆ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡರೆ, ಇತ್ತ ಧವನ್ ಮಾತ್ರ ಸತತ ವೈಫಲ್ಯಗಳಿಂದ ಟೀಂ ಇಂಡಿಯಾದಿಂದ ಹೊರನಡೆದಿದ್ದಾರೆ. ಧವನ್ ಜೊತೆ ಆರಂಭಿಕರಾಗಿ ಕಣಕ್ಕಿಳಿದಿದ್ದ ಗಿಲ್ ಜಿಂಬಾಬ್ವೆ ಪ್ರವಾಸದಲ್ಲಿ ತಮ್ಮ ಮೊದಲ ಏಕದಿನ ಶತಕವನ್ನು ಸಿಡಿಸಿದರು. ಅಲ್ಲದೆ ಅದಕ್ಕೂ ಮೊದಲು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿಯೂ ಗಿಲ್ 98 ರನ್ ಗಳಿಸಿ ಔಟಾಗಿದ್ದರು. ಅಂದಿನಿಂದ ಗಿಲ್ ಸತತವಾಗಿ ರನ್ ಮಳೆ ಸುರಿಸುತ್ತಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:29 am, Thu, 19 January 23
