IND vs SA: ಹೀಗಾದ್ರೆ ಭಾರತ ತಂಡ ಗೆಲ್ಲಬಹುದು..!

India vs South Africa 2nd Test: ಭಾರತ ಮತ್ತು ಸೌತ್ ಆಫ್ರಿಕಾ ನಡುವಣ 2 ಪಂದ್ಯಗಳ ಟೆಸ್ಟ್ ಸರಣಿಯು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈ ಸರಣಿಯ ಮೊದಲ ಮ್ಯಾಚ್​ನಲ್ಲಿ ಸೌತ್ ಆಫ್ರಿಕಾ ತಂಡ ಜಯ ಸಾಧಿಸಿತ್ತು. ಇದೀಗ ದ್ವಿತೀಯ ಪಂದ್ಯದ 4 ದಿನದಾಟಗಳು ಮುಗಿದಿದ್ದು, ಬುಧವಾರ ಕೊನೆಯ ದಿನದಾಟ ನಡೆಯಲಿದೆ.

IND vs SA: ಹೀಗಾದ್ರೆ ಭಾರತ ತಂಡ ಗೆಲ್ಲಬಹುದು..!
Team India

Updated on: Nov 25, 2025 | 4:57 PM

ಭಾರತ ಮತ್ತು ಸೌತ್ ಆಫ್ರಿಕಾ ನಡುವಣ 2ನೇ ಟೆಸ್ಟ್ ಪಂದ್ಯದ ನಾಲ್ಕು ದಿನದಾಟಗಳು ಮುಗಿದಿವೆ. ಈ ನಾಲ್ಕು ದಿನದಾಟಗಳಲ್ಲಿ ಮೂಡಿಬಂದ ಒಟ್ಟು ಸ್ಕೋರ್ ಬರೋಬ್ಬರಿ 977 ರನ್​​​ಗಳು. ಇದರಲ್ಲಿ ಸೌತ್ ಆಫ್ರಿಕಾ ತಂಡದ ಪಾಲು 489 ಮತ್ತು 260. ಅಂದರೆ ಮೊದಲ ಇನಿಂಗ್ಸ್​ನಲ್ಲಿ ಸೌತ್ ಆಫ್ರಿಕಾ ತಂಡ 489 ರನ್ ಕಲೆಹಾಕಿದರೆ, ಟೀಮ್ ಇಂಡಿಯಾ ಗಳಿಸಿದ್ದು ಕೇವಲ 201 ರನ್​​ಗಳು ಮಾತ್ರ. ಇದರ ಬೆನ್ನಲ್ಲೇ ದ್ವಿತೀಯ ಇನಿಂಗ್ಸ್ ಶುರು ಮಾಡಿದ ಸೌತ್ ಆಫ್ರಿಕಾ ತಂಡ 5 ವಿಕೆಟ್ ಕಳೆದುಕೊಂಡು 260 ರನ್​​ಗಳಿಸಿ ಡಿಕ್ಲೇರ್ ಘೋಷಿಸಿದೆ.

ಇತ್ತ ಮೊದಲ ಇನಿಂಗ್ಸ್​ನಲ್ಲಿನ 288 ರನ್​​ಗಳ ಹಿನ್ನಡೆಯೊಂದಿಗೆ ಟೀಮ್ ಇಂಡಿಯಾ ಕೊನೆಯ ಇನಿಂಗ್ಸ್​ನಲ್ಲಿ ಬರೋಬ್ಬರಿ 549 ರನ್​​ಗಳ ಗುರಿ ಪಡೆದಿದೆ. ಈ ಗುರಿ ಬೆನ್ನತ್ತಲಾರಂಭಿಸಿದ ಭಾರತ ತಂಡವು ನಾಲ್ಕನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು ಕೇವಲ 27 ರನ್​ ಕಲೆಹಾಕಿದೆ. ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯಗಳಿಸಲು ಕೊನೆಯ ದಿನದಾಟದಲ್ಲಿ ಬರೋಬ್ಬರಿ 522 ರನ್​​ ಗಳಿಸಬೇಕು.

ಹೀಗಾದ್ರೆ ಟೀಮ್ ಇಂಡಿಯಾಗೆ ಗೆಲುವು ನಿಶ್ಚಿತ:

ಭಾರತ ತಂಡವು ಕೊನೆಯ ದಿನದಾಟದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್​ನೊಂದಿಗೆ ಪ್ರತಿ ಓವರ್​ಗೆ 5.8ರ ಸರಾಸರಿಯಲ್ಲಿ ರನ್​​ಗಳಿಸಿದರೆ ಈ ಪಂದ್ಯವನ್ನು ಗೆಲ್ಲಬಹುದು. ಏಕೆಂದರೆ ದಿನದಾಟದ ಲೆಕ್ಕಾಚಾರದಲ್ಲಿ ಟೀಮ್ ಇಂಡಿಯಾ ಮುಂದೆ ಇನ್ನು 90 ಓವರ್​ಗಳು ಬಾಕಿಯಿದೆ.

ಈ 90 ಓವರ್​ಗಳಲ್ಲಿ 522 ರನ್​​ಗಳ ಗುರಿ ಬೆನ್ನತ್ತಬೇಕಿದ್ದರೆ ಪ್ರತಿ ಓವರ್​ಗೆ 5.8 ರ ಸರಾಸರಿಯಲ್ಲಿ ರನ್​ಗಳಿಸಲೇಬೇಕು. ಮೇಲ್ನೋಟಕ್ಕೆ ಇಂತಹದೊಂದು ಚೇಸಿಂಗ್ ಅಸಾಧ್ಯ.

ಇದಾಗ್ಯೂ ಆ್ಯಶಸ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ತಂಡ 205 ರನ್​​ಗಳನ್ನು ಚೇಸ್ ಮಾಡಿರುವುದು ಕೇವಲ 28.5 ಓವರ್​ಗಳಲ್ಲಿ ಎಂಬುದು ಇಲ್ಲಿ ಉಲ್ಲೇಖಾರ್ಹ.

ಅಂದರೆ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಪ್ರತಿ ಓವರ್​ಗೆ  7.23 ಸರಾಸರಿಯಲ್ಲಿ ರನ್​ಗಳಿಸಿ ದಾಖಲೆಯ ಚೇಸಿಂಗ್ ಮಾಡಿದ್ದರು. ಇಂತಹದೊಂದು ಪ್ರದರ್ಶನ ಟೀಮ್ ಇಂಡಿಯಾ ಬ್ಯಾಟರ್​ಗಳಿಂದ ಮೂಡಿಬಂದರೆ 522 ರನ್​​ಗಳನ್ನು ಸಹ ಬೆನ್ನತ್ತಬಹುದು.

ಒಂದು ವೇಳೆ ಇಂತಹದೊಂದು ಚೇಸಿಂಗ್ ಮೂಡಿಬಂದರೆ ಟೆಸ್ಟ್ ಕ್ರಿಕೆಟ್​ ಇತಿಹಾಸದಲ್ಲೇ ಕೊನೆಯ ಇನಿಂಗ್ಸ್​ನಲ್ಲಿ 500+ ರನ್​​ಗಳನ್ನು ಬೆನ್ನತ್ತಿ ಗೆದ್ದ ವಿಶ್ವದ ಮೊದಲ ತಂಡವೆಂಬ ವಿಶ್ವ ದಾಖಲೆ ಟೀಮ್ ಇಂಡಿಯಾ ಪಾಲಾಗಲಿದೆ.

ಅದರಂತೆ ಬುಧವಾರ (ನ.26) ಬರ್ಸಪಾರ ಪಿಚ್​ನಲ್ಲಿ ಟೀಮ್ ಇಂಡಿಯಾ ಬ್ಯಾಟರ್​ಗಳಿಂದ ಪವಾಡ ಸದೃಶ ಚೇಸಿಂಗ್ ಮೂಡಿಬಂದರೆ ಭಾರತ ತಂಡ ಐತಿಹಾಸಿಕ ಗೆಲುವು ದಾಖಲಿಸಬಹುದು. ಇದರ ನಡುವೆ ಸೌತ್ ಆಫ್ರಿಕಾ ತಂಡ 8 ವಿಕೆಟ್ ಕಬಳಿಸಿದರೆ ಅಮೋಘ ಜಯ ಸಾಧಿಸಲಿದೆ.

ಇನ್ನು ಈ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡರೆ ಸೌತ್ ಆಫ್ರಿಕಾ ತಂಡ 1-0 ಅಂತರದಿಂದ ಸರಣಿಯನ್ನು ವಶಪಡಿಸಿಕೊಳ್ಳಲಿದೆ. ಈ ಮೂಲಕ ದಶಕಗಳ ಬಳಿಕ ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದ ಐತಿಹಾಸಿಕ ಸಾಧನೆ ಮಾಡಲಿದೆ.

ಸೌತ್ ಆಫ್ರಿಕಾ ಪ್ಲೇಯಿಂಗ್ 11: ಐಡೆನ್ ಮಾರ್ಕ್ರಾಮ್, ರಯಾನ್ ರಿಕೆಲ್ಟನ್, ವಿಯಾನ್ ಮುಲ್ಡರ್, ಟೆಂಬಾ ಬವುಮಾ (ನಾಯಕ), ಟೋನಿ ಡಿ ಝೋರ್ಝಿ, ಟ್ರಿಸ್ಟನ್ ಸ್ಟಬ್ಸ್, ಕೈಲ್ ವೆರ್ರೆನ್ (ವಿಕೆಟ್ ಕೀಪರ್), ಮಾರ್ಕೊ ಯಾನ್ಸೆನ್, ಸೆನುರಾನ್ ಮುತ್ತುಸಾಮಿ, ಸೈಮನ್ ಹಾರ್ಮರ್, ಕೇಶವ್ ಮಹಾರಾಜ್.

ಇದನ್ನೂ ಓದಿ: ಟ್ರಾವಿಸ್ ಹೆಡ್ ಸಿಡಿಲಬ್ಬರದಿಂದ ಆಸ್ಟ್ರೇಲಿಯಾಗೆ 17 ಕೋಟಿ ರೂ. ನಷ್ಟ!

ಭಾರತ ಪ್ಲೇಯಿಂಗ್ 11: ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಧ್ರುವ ಜುರೆಲ್, ರಿಷಭ್ ಪಂತ್ (ನಾಯಕ), ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

 

Published On - 4:53 pm, Tue, 25 November 25