AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

500 ರನ್​ಗಳ ಮುನ್ನಡೆ… ಸರಣಿ ಸೋಲಿನತ್ತ ಟೀಮ್ ಇಂಡಿಯಾ

India vs South Africa 2nd Test: ಗುವಾಹಟಿಯ ಬರ್ಸಪಾರ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಸೌತ್ ಆಫ್ರಿಕಾ ತಂಡವು 489 ರನ್ ಕಲೆಹಾಕಿದರೆ, ಟೀಮ್ ಇಂಡಿಯಾ ಕೇವಲ 201 ರನ್​ಗಳಿಸಿ ಆಲೌಟ್ ಆಗಿದೆ. ಇದೀಗ 288 ರನ್​ಗಳ ಮುನ್ನಡೆಯೊಂದಿಗೆ ಸೌತ್ ಆಫ್ರಿಕಾ ತಂಡ ದ್ವಿತೀಯ ಇನಿಂಗ್ಸ್ ಮುಂದುವರೆಸಿದೆ.

500 ರನ್​ಗಳ ಮುನ್ನಡೆ... ಸರಣಿ ಸೋಲಿನತ್ತ ಟೀಮ್ ಇಂಡಿಯಾ
Team India
ಝಾಹಿರ್ ಯೂಸುಫ್
|

Updated on: Nov 25, 2025 | 1:24 PM

Share

ಗುವಾಹಟಿಯಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ ಸೌತ್ ಆಫ್ರಿಕಾ ತಂಡ ಒಟ್ಟು 508 ರನ್​ಗಳ ಮುನ್ನಡೆ ಸಾಧಿಸಿದೆ. ಈ ಮೂಲಕ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಪ್ರವಾಸಿ ತಂಡವು ಮೊದಲ ಇನಿಂಗ್ಸ್​ನಲ್ಲಿ 489 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಟೀಮ್ ಇಂಡಿಯಾ 201 ರನ್​ಗಳಿಸಲಷ್ಟೇ ಶಕ್ತರಾಗಿದ್ದರು.

ಅದರಂತೆ 288 ರನ್​ಗಳ ಮೊದಲ ಇನಿಂಗ್ಸ್​ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ತಂಡವು 4ನೇ ದಿನದಾಟದ ಬೋಜನಾ ವಿರಾಮದ ವೇಳೆಗೆ 4 ವಿಕೆಟ್ ಕಳೆದುಕೊಂಡು 220 ರನ್​ ಕಲೆಹಾಕಿದೆ. ಈ ಮೂಲಕ ಒಟ್ಟು 508 ರನ್​ಗಳ ಮುನ್ನಡೆ ಸಾಧಿಸಿದೆ.

ಸರಣಿ ಸೋಲಿನತ್ತ ಟೀಮ್ ಇಂಡಿಯಾ:

ಸೌತ್ ಆಫ್ರಿಕಾ ತಂಡವು 500 ರನ್​ಗಳ ಮುನ್ನಡೆ ಸಾಧಿಸುತ್ತಿದ್ದಂತೆ ಟೀಮ್ ಇಂಡಿಯಾಗೆ ಸರಣಿ ಸೋಲು ಖಚಿತವಾಗಿದೆ. ಏಕೆಂದರೆ ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಭಾರತ ತಂಡವು ಸರಣಿಯನ್ನು 1-1 ಅಂತರದಿಂದ ಸಮಗೊಳಿಸಬಹುದು.

ಆದರೆ ಅತ್ತ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿರುವ ಸೌತ್ ಆಫ್ರಿಕಾ ತಂಡವು ಈ ಪಂದ್ಯವನ್ನು ಡ್ರಾಗೊಳಿಸಿದರೂ 1-0 ಅಂತರದಿಂದ ಸರಣಿ ಜಯಿಸಬಹುದು. ಹೀಗಾಗಿಯೇ ಸೌತ್ ಆಫ್ರಿಕಾ ತಂಡದ 500 ರನ್​ಗಳ ಮುನ್ನಡೆ ಟೀಮ್ ಇಂಡಿಯಾವನ್ನು ಸರಣಿ ಸೋಲಿನತ್ತ ಕೊಂಡೊಯ್ಯಲಿದೆ.

ಏಕೆಂದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೊನೆಯ ಇನಿಂಗ್ಸ್​ನಲ್ಲಿ 500+ ಸ್ಕೋರ್ ಬೆನ್ನತ್ತಿರುವುದು ಕೇವಲ ಒಂದು ಬಾರಿ ಮಾತ್ರ. ಅದು ಕೂಡ 1939 ರಲ್ಲಿ. ಅಂದು ಸೌತ್ ಆಫ್ರಿಕಾ ನೀಡಿದ 696 ರನ್​​ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ 656 ರನ್​ಗಳಿಸಿ ಪಂದ್ಯವನ್ನು ಡ್ರಾಗೊಳಿಸಲಷ್ಟೇ ಶಕ್ತರಾಗಿದ್ದರು.

ಇದಾದ ಬಳಿಕ ಯಾವುದೇ ತಂಡ ನಾಲ್ಕನೇ ಇನಿಂಗ್ಸ್​ನಲ್ಲಿ 500 ರನ್​ಗಳನ್ನು ಕಲೆಹಾಕಿದ ಇತಿಹಾಸವಿಲ್ಲ. ಇದೀಗ ಸೌತ್ ಆಫ್ರಿಕಾ ತಂಡವು ಟೀಮ್ ಇಂಡಿಯಾಗೆ 508+ ರನ್​​ಗಳ ಗುರಿ ನೀಡುವುದು ಖಚಿತವಾಗಿದೆ. ಹೀಗಾಗಿ ಈ ಪಂದ್ಯವನ್ನು ಭಾರತ ತಂಡ ಡ್ರಾನಲ್ಲಿ ಅಂತ್ಯಗೊಳಿಸಬಹುದಷ್ಟೇ.

ಅತ್ತ ಪಂದ್ಯ ಡ್ರಾನಲ್ಲಿ ಅಂತ್ಯವಾದರೆ ಸೌತ್ ಆಫ್ರಿಕಾ ತಂಡವು 1-0 ಅಂತರದಿಂದ ಸರಣಿಯನ್ನು ಗೆಲ್ಲಲಿದೆ. ಈ ಮೂಲಕ ದೀರ್ಘಾಕಾಲದ ಬಳಿಕ ಭಾರತದಲ್ಲಿ ಸರಣಿ ಗೆದ್ದ ಐತಿಹಾಸಿಕ ಸಾಧನೆ ಮಾಡಲಿದೆ.

ಸೌತ್ ಆಫ್ರಿಕಾ ಪ್ಲೇಯಿಂಗ್ 11: ಐಡೆನ್ ಮಾರ್ಕ್ರಾಮ್, ರಯಾನ್ ರಿಕೆಲ್ಟನ್, ವಿಯಾನ್ ಮುಲ್ಡರ್, ಟೆಂಬಾ ಬವುಮಾ (ನಾಯಕ), ಟೋನಿ ಡಿ ಝೋರ್ಝಿ, ಟ್ರಿಸ್ಟನ್ ಸ್ಟಬ್ಸ್, ಕೈಲ್ ವೆರ್ರೆನ್ (ವಿಕೆಟ್ ಕೀಪರ್), ಮಾರ್ಕೊ ಯಾನ್ಸೆನ್, ಸೆನುರಾನ್ ಮುತ್ತುಸಾಮಿ, ಸೈಮನ್ ಹಾರ್ಮರ್, ಕೇಶವ್ ಮಹಾರಾಜ್.

ಇದನ್ನೂ ಓದಿ: ಟ್ರಾವಿಸ್ ಹೆಡ್ ಸಿಡಿಲಬ್ಬರದಿಂದ ಆಸ್ಟ್ರೇಲಿಯಾಗೆ 17 ಕೋಟಿ ರೂ. ನಷ್ಟ!

ಭಾರತ ಪ್ಲೇಯಿಂಗ್ 11: ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಧ್ರುವ ಜುರೆಲ್, ರಿಷಭ್ ಪಂತ್ (ನಾಯಕ), ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.