IND vs SA: ಹೀಗಾದ್ರೆ ಭಾರತ ತಂಡ ಗೆಲ್ಲಬಹುದು..!
India vs South Africa 2nd Test: ಭಾರತ ಮತ್ತು ಸೌತ್ ಆಫ್ರಿಕಾ ನಡುವಣ 2 ಪಂದ್ಯಗಳ ಟೆಸ್ಟ್ ಸರಣಿಯು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈ ಸರಣಿಯ ಮೊದಲ ಮ್ಯಾಚ್ನಲ್ಲಿ ಸೌತ್ ಆಫ್ರಿಕಾ ತಂಡ ಜಯ ಸಾಧಿಸಿತ್ತು. ಇದೀಗ ದ್ವಿತೀಯ ಪಂದ್ಯದ 4 ದಿನದಾಟಗಳು ಮುಗಿದಿದ್ದು, ಬುಧವಾರ ಕೊನೆಯ ದಿನದಾಟ ನಡೆಯಲಿದೆ.

ಭಾರತ ಮತ್ತು ಸೌತ್ ಆಫ್ರಿಕಾ ನಡುವಣ 2ನೇ ಟೆಸ್ಟ್ ಪಂದ್ಯದ ನಾಲ್ಕು ದಿನದಾಟಗಳು ಮುಗಿದಿವೆ. ಈ ನಾಲ್ಕು ದಿನದಾಟಗಳಲ್ಲಿ ಮೂಡಿಬಂದ ಒಟ್ಟು ಸ್ಕೋರ್ ಬರೋಬ್ಬರಿ 977 ರನ್ಗಳು. ಇದರಲ್ಲಿ ಸೌತ್ ಆಫ್ರಿಕಾ ತಂಡದ ಪಾಲು 489 ಮತ್ತು 260. ಅಂದರೆ ಮೊದಲ ಇನಿಂಗ್ಸ್ನಲ್ಲಿ ಸೌತ್ ಆಫ್ರಿಕಾ ತಂಡ 489 ರನ್ ಕಲೆಹಾಕಿದರೆ, ಟೀಮ್ ಇಂಡಿಯಾ ಗಳಿಸಿದ್ದು ಕೇವಲ 201 ರನ್ಗಳು ಮಾತ್ರ. ಇದರ ಬೆನ್ನಲ್ಲೇ ದ್ವಿತೀಯ ಇನಿಂಗ್ಸ್ ಶುರು ಮಾಡಿದ ಸೌತ್ ಆಫ್ರಿಕಾ ತಂಡ 5 ವಿಕೆಟ್ ಕಳೆದುಕೊಂಡು 260 ರನ್ಗಳಿಸಿ ಡಿಕ್ಲೇರ್ ಘೋಷಿಸಿದೆ.
ಇತ್ತ ಮೊದಲ ಇನಿಂಗ್ಸ್ನಲ್ಲಿನ 288 ರನ್ಗಳ ಹಿನ್ನಡೆಯೊಂದಿಗೆ ಟೀಮ್ ಇಂಡಿಯಾ ಕೊನೆಯ ಇನಿಂಗ್ಸ್ನಲ್ಲಿ ಬರೋಬ್ಬರಿ 549 ರನ್ಗಳ ಗುರಿ ಪಡೆದಿದೆ. ಈ ಗುರಿ ಬೆನ್ನತ್ತಲಾರಂಭಿಸಿದ ಭಾರತ ತಂಡವು ನಾಲ್ಕನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು ಕೇವಲ 27 ರನ್ ಕಲೆಹಾಕಿದೆ. ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯಗಳಿಸಲು ಕೊನೆಯ ದಿನದಾಟದಲ್ಲಿ ಬರೋಬ್ಬರಿ 522 ರನ್ ಗಳಿಸಬೇಕು.
ಹೀಗಾದ್ರೆ ಟೀಮ್ ಇಂಡಿಯಾಗೆ ಗೆಲುವು ನಿಶ್ಚಿತ:
ಭಾರತ ತಂಡವು ಕೊನೆಯ ದಿನದಾಟದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ನೊಂದಿಗೆ ಪ್ರತಿ ಓವರ್ಗೆ 5.8ರ ಸರಾಸರಿಯಲ್ಲಿ ರನ್ಗಳಿಸಿದರೆ ಈ ಪಂದ್ಯವನ್ನು ಗೆಲ್ಲಬಹುದು. ಏಕೆಂದರೆ ದಿನದಾಟದ ಲೆಕ್ಕಾಚಾರದಲ್ಲಿ ಟೀಮ್ ಇಂಡಿಯಾ ಮುಂದೆ ಇನ್ನು 90 ಓವರ್ಗಳು ಬಾಕಿಯಿದೆ.
ಈ 90 ಓವರ್ಗಳಲ್ಲಿ 522 ರನ್ಗಳ ಗುರಿ ಬೆನ್ನತ್ತಬೇಕಿದ್ದರೆ ಪ್ರತಿ ಓವರ್ಗೆ 5.8 ರ ಸರಾಸರಿಯಲ್ಲಿ ರನ್ಗಳಿಸಲೇಬೇಕು. ಮೇಲ್ನೋಟಕ್ಕೆ ಇಂತಹದೊಂದು ಚೇಸಿಂಗ್ ಅಸಾಧ್ಯ.
ಇದಾಗ್ಯೂ ಆ್ಯಶಸ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ತಂಡ 205 ರನ್ಗಳನ್ನು ಚೇಸ್ ಮಾಡಿರುವುದು ಕೇವಲ 28.5 ಓವರ್ಗಳಲ್ಲಿ ಎಂಬುದು ಇಲ್ಲಿ ಉಲ್ಲೇಖಾರ್ಹ.
ಅಂದರೆ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಪ್ರತಿ ಓವರ್ಗೆ 7.23 ಸರಾಸರಿಯಲ್ಲಿ ರನ್ಗಳಿಸಿ ದಾಖಲೆಯ ಚೇಸಿಂಗ್ ಮಾಡಿದ್ದರು. ಇಂತಹದೊಂದು ಪ್ರದರ್ಶನ ಟೀಮ್ ಇಂಡಿಯಾ ಬ್ಯಾಟರ್ಗಳಿಂದ ಮೂಡಿಬಂದರೆ 522 ರನ್ಗಳನ್ನು ಸಹ ಬೆನ್ನತ್ತಬಹುದು.
ಒಂದು ವೇಳೆ ಇಂತಹದೊಂದು ಚೇಸಿಂಗ್ ಮೂಡಿಬಂದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಕೊನೆಯ ಇನಿಂಗ್ಸ್ನಲ್ಲಿ 500+ ರನ್ಗಳನ್ನು ಬೆನ್ನತ್ತಿ ಗೆದ್ದ ವಿಶ್ವದ ಮೊದಲ ತಂಡವೆಂಬ ವಿಶ್ವ ದಾಖಲೆ ಟೀಮ್ ಇಂಡಿಯಾ ಪಾಲಾಗಲಿದೆ.
ಅದರಂತೆ ಬುಧವಾರ (ನ.26) ಬರ್ಸಪಾರ ಪಿಚ್ನಲ್ಲಿ ಟೀಮ್ ಇಂಡಿಯಾ ಬ್ಯಾಟರ್ಗಳಿಂದ ಪವಾಡ ಸದೃಶ ಚೇಸಿಂಗ್ ಮೂಡಿಬಂದರೆ ಭಾರತ ತಂಡ ಐತಿಹಾಸಿಕ ಗೆಲುವು ದಾಖಲಿಸಬಹುದು. ಇದರ ನಡುವೆ ಸೌತ್ ಆಫ್ರಿಕಾ ತಂಡ 8 ವಿಕೆಟ್ ಕಬಳಿಸಿದರೆ ಅಮೋಘ ಜಯ ಸಾಧಿಸಲಿದೆ.
ಇನ್ನು ಈ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡರೆ ಸೌತ್ ಆಫ್ರಿಕಾ ತಂಡ 1-0 ಅಂತರದಿಂದ ಸರಣಿಯನ್ನು ವಶಪಡಿಸಿಕೊಳ್ಳಲಿದೆ. ಈ ಮೂಲಕ ದಶಕಗಳ ಬಳಿಕ ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದ ಐತಿಹಾಸಿಕ ಸಾಧನೆ ಮಾಡಲಿದೆ.
ಸೌತ್ ಆಫ್ರಿಕಾ ಪ್ಲೇಯಿಂಗ್ 11: ಐಡೆನ್ ಮಾರ್ಕ್ರಾಮ್, ರಯಾನ್ ರಿಕೆಲ್ಟನ್, ವಿಯಾನ್ ಮುಲ್ಡರ್, ಟೆಂಬಾ ಬವುಮಾ (ನಾಯಕ), ಟೋನಿ ಡಿ ಝೋರ್ಝಿ, ಟ್ರಿಸ್ಟನ್ ಸ್ಟಬ್ಸ್, ಕೈಲ್ ವೆರ್ರೆನ್ (ವಿಕೆಟ್ ಕೀಪರ್), ಮಾರ್ಕೊ ಯಾನ್ಸೆನ್, ಸೆನುರಾನ್ ಮುತ್ತುಸಾಮಿ, ಸೈಮನ್ ಹಾರ್ಮರ್, ಕೇಶವ್ ಮಹಾರಾಜ್.
ಇದನ್ನೂ ಓದಿ: ಟ್ರಾವಿಸ್ ಹೆಡ್ ಸಿಡಿಲಬ್ಬರದಿಂದ ಆಸ್ಟ್ರೇಲಿಯಾಗೆ 17 ಕೋಟಿ ರೂ. ನಷ್ಟ!
ಭಾರತ ಪ್ಲೇಯಿಂಗ್ 11: ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಧ್ರುವ ಜುರೆಲ್, ರಿಷಭ್ ಪಂತ್ (ನಾಯಕ), ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
Published On - 4:53 pm, Tue, 25 November 25
