ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಬೆಂಗಳೂರಿನಲ್ಲಿ ಒಂದೇ ಒಂದು ಮ್ಯಾಚ್ ಇಲ್ಲ
ಉತ್ಸಾಹಭರಿತ ಕ್ರಿಕೆಟ್ ಪ್ರೇಮಿಗಳ ಫೇವರೆಟ್ ತಾಣಗಳಲ್ಲಿ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವು ಒಂದು. ಈ ಕ್ರೀಡಾಂಗಣವು 35,000 ಕ್ಕೂ ಹೆಚ್ಚು ಆಸನ ಸಾಮರ್ಥ್ಯವನ್ನು ಹೊಂದಿದ್ದು, ಐಕಾನಿಕ್ ಸ್ಟೇಡಿಯಂ ಎಂಬ ಪಟ್ಟವನ್ನು ಹೊಂದಿದೆ. ಈ ಸುಂದರವಾದ ಕ್ರೀಡಾಂಗಣದಲ್ಲಿ ಅನೇಕ ಕ್ರಿಕೆಟ್ ಪಂದ್ಯಗಳು ನಡೆದಿವೆ. ಅವುಗಳು ಅನೇಕ ಸಂತೋಷದಾಯಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಆದ್ರೆ, ಇದೀಗ ಆ ಒಂದು ದುರಂತದಿಂದ ಚಿನ್ನಸ್ವಾಮಿ ಸ್ಟೇಡಿಯಂ ಅಪಖ್ಯಾತಿಗೆ ಒಳಗಾಗಿದೆ.

ಬಹು ನಿರೀಕ್ಷಿತ 2026ರ ಟಿ20 ವಿಶ್ವಕಪ್ ಕ್ರಿಕೆಟ್ಗೆ ವೇದಿಕೆ ಸಜ್ಜಾಗಿದ್ದು, ಇಂದು (ನವೆಂಬರ್ 25) ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) 2026ರ ಟಿ20 ವಿಶ್ವಕಪ್‌ನ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಟಿ20 ವಿಶ್ವಕಪ್ ಟೂರ್ನಿಯನ್ನು ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿದ್ದು, ಶ್ರೀಲಂಕಾದ ಕೊಲಂಬೋ ಹಾಗೂ ಭಾರತದ ವಿವಿಧ ಸ್ಟೇಡಿಯಂಗಳಲ್ಲಿ ಪಂದ್ಯಗಳು ನಡೆಯಲಿವೆ. ಆದ್ರೆ ಕಾಲ್ತುಳಿತ ದುರಂತದಿಂದಾಗಿ ಐಸಿಸಿ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವನ್ನು ಪರಿಗಣಿಸಿಲ್ಲ,
ಫೆಬ್ರವರಿ 7 ರಿಂದ ಮಾರ್ಚ್ 8 ರವರೆಗೆ ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. ಭಾರತ, ಶ್ರೀಲಂಕಾದಲ್ಲಿ ವಿಶ್ವಕಪ್ ಪಂದ್ಯಗಳ ಆಯೋಜನೆ ಮಾಡಲಾಗಿದೆ. ಆದ್ರೆ, ಬೆಂಗಳೂರು ಹೊರತುಪಡಿಸಿ ಅಹಮದಾಬಾದ್, ಕೋಲ್ಕತ್ತಾ, ಮುಂಬೈ, ದೆಹಲಿ, ಚೆನ್ನೈ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯಲಿವೆ. ಆರ್ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಸಂಬಂಧ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಒಂದೇ ಒಂದು ಮ್ಯಾಚ್ ಆಯೋಜನೆ ಮಾಡಿಲ್ಲ. ಹೀಗಾಗಿ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳಲ್ಲಿ ಬೇಸರ ತರಿಸಿದೆ.
ಇದನ್ನೂ ಓದಿ: IPL 2026: ಚಿನ್ನಸ್ವಾಮಿ ಸ್ಟೇಡಿಯಂ ನಿಷೇಧ: RCB ಕಣಕ್ಕಿಳಿಯುವುದು ಎಲ್ಲಿ?
ಸ್ಟೇಡಿಯಂನಲ್ಲಿ ಸಬ್ ಏರ್ ಸಿಸ್ಟಂ ತಂತ್ರಜ್ಞಾನ
ಪಂದ್ಯ ನಡೆಯುವ ಸಮಯದಲ್ಲಿ ಎಷ್ಟೇ ಮಳೆ ಬಂದರೂ ಸಹ ಕೇವಲ ಹತ್ತು ಹದಿನೈದು ನಿಮಿಷದಲ್ಲಿ ಮತ್ತೆ ಮ್ಯಾಚ್ ಆರಂಭಿಸುವ ಅವಕಾಶ ಮಾಡಿಕೊಡುವ ಅತ್ಯಾಧುನಿಕ ಸೌಲಭ್ಯ ಈ ಚಿನ್ನಸ್ವಾಮಿ ಕ್ರೀಡಾಂಗಣ ಒಳಗೊಂಡಿದೆ..ಹೌದು.. ಸ್ಟೇಡಿಯಂನಲ್ಲಿ ಸಬ್ ಏರ್ ಸಿಸ್ಟಂ ತಂತ್ರಜ್ಞಾನ ಇದ್ದು, ಇದರ ಸಹಾಯದಿಂದ ಮೈದಾನದಲ್ಲಿ ತುಂಬಿಕೊಂಡ ನೀರನ್ನು ಬೇಗನೇ ಹಾರಹಾಕುವ ವ್ಯವಸ್ಥೆ ಇದೆ. ಹೀಗಾಗಿ ಈ ಮೈದಾನದಲ್ಲಿ ಮಳೆಯಿಂದಾಗಿ ಪಂದ್ಯ ರದ್ದಾಗಿರುವುದು ವಿರಳ.
ಅಪಖ್ಯಾತಿ ಒಳಗಾದ ಚಿನ್ನಸ್ವಾಮಿ ಸ್ಟೇಡಿಯಂ
ಬೆಂಗಳೂರಿನ ಈ ಸುಂದರ, ಸುರ್ಜಿತ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನ್ಯಾಷಲ್, ಇಂಟರ್ನ್ಯಾಷನಲ್ ಕ್ರಿಕೆಟ್ ಪಂದ್ಯಗಳು ನಡೆದಿದ್ದು, ಅನೇಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್‌ನಿಂದ ಹಿಡಿದು ರಿಕಿ ಪಾಂಟಿಂಗ್‌ವರೆಗೆ ಅನೇಕ ಹೆಸರಾಂತ ಆಟಗಾರರು ಇಲ್ಲಿ ಸ್ಮರಣೀಯ ಶತಕಗಳನ್ನು ಸಿಡಿಸಿದ್ದಾರೆ. ಈ ಸ್ಟೇಡಿಯಂನಲ್ಲಿ ಅನೇಕ ದಾಖಲೆಗಳು ನಿರ್ಮಾಣಗೊಂಡಿದ್ದು, ಅನೇಕ ರೆಕಾರ್ಡ್ ಬ್ರೇಕ್ ಆಗಿವೆ. ಹಾಗೇ ಅತ್ಯಾಧುನಿಕ ಸೌಲಭ್ಯ ಈ ಚಿನ್ನಸ್ವಾಮಿ ಕ್ರೀಡಾಂಗಣ ಒಂದೇ ಒಂದು ದುರಂತಕ್ಕೆ ಅಪಖ್ಯಾತಿ ಪಡೆದುಕೊಂಡಿದೆ.
ಜೂನ್ 4 ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಆರ್ಸಿಬಿ ಅಭಿಮಾನಿಗಳು ಮೃತಪಟ್ಟಿದ್ದರು. ಈ ತನಿಖೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿನ ಲೋಪದೋಷಗಳು ಬಹಿರಂಗವಾಗಿದ್ದವು. ಅಲ್ಲದೆ ಕ್ರೀಡಾಂಗಣದ ಭದ್ರತೆ ಮತ್ತು ಸುರಕ್ಷತೆಯ ಬಗ್ಗೆ ಪ್ರಶ್ನೆಗಳೆದ್ದಿದ್ದವು. ಈ ದುರಂತದ ಬಳಿಕ ಬಿಸಿಸಿಐ ಬೆಂಗಳೂರಿನಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಿಲ್ಲ. ಇದೀಗ ಐಸಿಸಿ ಸಹ ಟಿ20 ವಿಶ್ವಕಪ್ ಟೂರ್ನಿಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವನ್ನು ಗಣನೆಗೆ ತೆಗೆದುಕೊಂಡಿಲ್ಲ. ಟಿ20 ವಿಶ್ವಕಪ್ ಮಾತ್ರವಲ್ಲದೇ ಮುಂಬರುವ ಐಪಿಎಲ್ ಪಂದ್ಯಗಳೂ ಸಹ ಬೆಂಗಳೂರಿನಲ್ಲಿ ನಡೆಯುವುದು ಅನುಮಾನವಾಗಿದೆ.
Published On - 10:24 pm, Tue, 25 November 25




