IND vs SL: ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ; ಅನುಭವಿಗಳಿಗಿಲ್ಲ ವಿಶ್ರಾಂತಿ!

India Squad for Sri Lanka tour: ಮೂರು ಟಿ20 ಹಾಗೂ ಮೂರು ಏಕದಿನ ಪಂದ್ಯಗಳ ಶ್ರೀಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾವನ್ನು ಬಿಸಿಸಿಐ ಇಂದು ಪ್ರಕಟಿಸಿದೆ. ನಿರೀಕ್ಷೆಯಂತೆ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ತಂಡದ ನಾಯಕರನ್ನಾಗಿ ನೇಮಿಸಲಾಗಿದ್ದರೆ, ಇತ್ತ ಏಕದಿನ ತಂಡದ ನಾಯಕತ್ವವನ್ನು ನಿಯಮಿತ ನಾಯಕ ರೋಹಿತ್ ಶರ್ಮಾ ಅವರೇ ನಿರ್ವಹಿಸಲಿದ್ದಾರೆ.

IND vs SL: ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ; ಅನುಭವಿಗಳಿಗಿಲ್ಲ ವಿಶ್ರಾಂತಿ!
ಟೀಂ ಇಂಡಿಯಾ
Follow us
ಪೃಥ್ವಿಶಂಕರ
|

Updated on:Jul 18, 2024 | 8:11 PM

ಮೂರು ಟಿ20 ಹಾಗೂ ಮೂರು ಏಕದಿನ ಪಂದ್ಯಗಳ ಶ್ರೀಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾವನ್ನು ಬಿಸಿಸಿಐ ಇಂದು ಪ್ರಕಟಿಸಿದೆ. ನಿರೀಕ್ಷೆಯಂತೆ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ತಂಡದ ನಾಯಕರನ್ನಾಗಿ ನೇಮಿಸಲಾಗಿದ್ದರೆ, ಟಿ20 ತಂಡದ ನಾಯಕತ್ವದ ರೇಸ್​ನಲ್ಲಿ ಮುಂಚೂಣಿಯಲ್ಲಿದ್ದ ಹಾರ್ದಿಕ್ ಪಾಂಡ್ಯಗೆ ಉಪನಾಯಕತ್ವವೂ ಸಿಕ್ಕಿಲ್ಲ ಎಂಬುದು ಅಚ್ಚರಿ ಮೂಡಿಸಿದೆ. ಇತ್ತ ಏಕದಿನ ತಂಡದ ನಾಯಕತ್ವವನ್ನು ನಿಯಮಿತ ನಾಯಕ ರೋಹಿತ್ ಶರ್ಮಾ ಅವರೇ ನಿರ್ವಹಿಸಲಿದ್ದಾರೆ. ವಾಸ್ತವವಾಗಿ ಈ ಪ್ರವಾಸದಿಂದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾಗೂ ಜಸ್ಪ್ರೀತ್ ಬುಮ್ರಾ ವಿಶ್ರಾಂತಿ ಪಡೆಯಲ್ಲಿದ್ದಾರೆ ಎಂಬ ಮಾಹಿತಿ ಇತ್ತು. ಹೀಗಾಗಿ ಕನ್ನಡಿಗ ಕೆಎಲ್ ರಾಹುಲ್​ಗೆ ಏಕದಿನ ತಂಡದ ನಾಯಕತ್ವ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿತ್ತು. ಆದರೆ ಏಕದಿನ ಸರಣಿಗೆ ಅನುಭವಿಗಳನ್ನೇಲ್ಲ ಆಯ್ಕೆ ಮಾಡಿರುವ ಕಾರಣ ರೋಹಿತ್ ಅವರೇ ಏಕದಿನ ತಂಡವನ್ನು ಮುನ್ನಡೆಸಲಿದ್ದಾರೆ.

ಅಯ್ಯರ್, ರಾಹುಲ್​ ಪುನರಾಗಮನ

ಗೌತಮ್ ಗಂಭೀರ್ ಮುಖ್ಯ ಕೋಚ್ ಆದ ಬಳಿಕ ಟೀಂ ಇಂಡಿಯಾದ ಮೊದಲ ಪ್ರವಾಸ ಇದಾಗಿದೆ. ಹೀಗಾಗಿ ಮೊದಲ ಸರಣಿಗಾಗಿ ವಿಭಿನ್ನ ತಂಡದೊಂದಿಗೆ ಗಂಭೀರ್ ಲಂಕಾ ನಾಡಿಗೆ ಕಾಲಿಡಲಿದ್ದಾರೆ. ಅಚ್ಚರಿಯೆಂದರೆ 2023 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನಾಡಿದ್ದ ಶ್ರೇಯಸ್ ಅಯ್ಯರ್ ಏಕದಿನ ತಂಡಕ್ಕೆ ಮರಳಿದ್ದಾರೆ. ಅವರೊಂದಿಗೆ ಕನ್ನಡಿಗ ಕೆಎಲ್ ರಾಹುಲ್​ಗೂ ಏಕದಿನ ತಂಡದಲ್ಲಿ ಸ್ಥಾನ ನೀಡಲಾಗಿದೆ. ಟಿ20 ಜೊತೆಗೆ ಏಕದಿನ ತಂಡದಲ್ಲೂ ವಿಕೆಟ್​ ಕೀಪರ್ ಬ್ಯಾಟ್ಸ್​ಮನ್ ರಿಷಬ್ ಪಂತ್​ಗೆ ಅವಕಾಶ ನೀಡಲಾಗಿದೆ.

ಎರಡೂ ತಂಡಗಳಲ್ಲಿ ದುಬೆಗೆ ಅವಕಾಶ

ಭವಿಷ್ಯದ ತಂಡ ಕಟ್ಟುವ ಸಲುವಾಗಿ ಈ ಪ್ರವಾಸಕ್ಕೆ ಹಲವು ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ. ಇದರಲ್ಲಿ  ಶಿವಂ ದುಬೆಗೆ ಎರಡೂ ತಂಡಗಳಲ್ಲಿ ಅವಕಾಶ ನೀಡಲಾಗಿದೆ. ಹಾಗೆಯೇ ಕೆಕೆಆರ್​ ತಂಡದ ಸ್ಟಾರ್ ಬೌಲರ್ ಹರ್ಷಿತ್ ರಾಣಾ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮೊಹಮ್ಮದ್ ಸಿರಾಜ್ ಕೂಡ ಉಭಯ ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ. ಸಂಜು ಸ್ಯಾಮ್ಸನ್ ಮತ್ತು ಹಾರ್ದಿಕ್ ಪಾಂಡ್ಯ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಏಕದಿನ ಸರಣಿಯಿಂದ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಲಾಗಿದೆ. ಉಳಿದಂತೆ ಈ ಪ್ರವಾಸದಿಂದ ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾಗೆ ವಿಶ್ರಾಂತಿ ನೀಡಲಾಗಿದೆ.

ಶ್ರೀಲಂಕಾ ಪ್ರವಾಸಕ್ಕೆ ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭ್​ಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್,ಅರ್ಷದೀಪ್ ಸಿಂಗ್, ಖಲೀಲ್ ಅಹಮದ್, ಮೊಹಮ್ಮದ್ ಸಿರಾಜ್

ಭಾರತ ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.

ಪ್ರವಾಸದ ವೇಳಾಪಟ್ಟಿ

ಟೀಂ ಇಂಡಿಯಾದ ಶ್ರೀಲಂಕಾ ಪ್ರವಾಸ ಜುಲೈ 27 ರಿಂದ ಆರಂಭವಾಗಲಿದ್ದು, ಅಲ್ಲಿ ಮೊದಲ 3 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಎರಡನೇ ಟಿ20 ಜುಲೈ 28 ರಂದು ಮತ್ತು ಮೂರನೇ ಟಿ20 ಜುಲೈ 30 ರಂದು ನಡೆಯಲಿದೆ. ಇದಾದ ಬಳಿಕ 3 ಪಂದ್ಯಗಳ ಏಕದಿನ ಸರಣಿಯೂ ನಡೆಯಲಿದ್ದು, ಆಗಸ್ಟ್ 2ರಿಂದ ಆರಂಭವಾಗಲಿದೆ. ಸರಣಿಯ ಎರಡನೇ ಏಕದಿನ ಪಂದ್ಯ ಆಗಸ್ಟ್ 4 ಮತ್ತು ಮೂರನೇ ಏಕದಿನ ಪಂದ್ಯ ಆಗಸ್ಟ್ 7 ರಂದು ನಡೆಯಲಿದೆ. ಇಡೀ ಪ್ರವಾಸ ಕೇವಲ 2 ಸ್ಥಳಗಳಲ್ಲಿ ನಡೆಯಲಿದೆ. ಟಿ20 ಸರಣಿಯ ಪಂದ್ಯಗಳು ಪಲ್ಲೆಕೆಲೆಯಲ್ಲಿ ನಡೆಯಲಿದ್ದು, ಏಕದಿನ ಸರಣಿ ಕೊಲಂಬೊದಲ್ಲಿ ನಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:56 pm, Thu, 18 July 24