ಪೋರ್ಟ್ ಆಫ್ ಸ್ಪೇನ್ನ ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ಆರಂಭವಾಗಿರುವ ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ನಡುವಿನ ಐತಿಹಾಸಿಕ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಉಭಯ ತಂಡಗಳಿಂದ ಸಮಬಲದ ಹೋರಾಟ ಕಂಡು ಬಂದಿದೆ. ದಿನದಾಟದಂತ್ಯಕ್ಕೆ ಟೀಂ ಇಂಡಿಯಾ (Team India) 4 ವಿಕೆಟ್ ಕಳೆದುಕೊಂಡು 288 ರನ್ ಕಲೆಹಾಕಿದೆ. ತಂಡದ ಪರ ಆರಂಭಿಕರಾದ ನಾಯಕ ರೋಹಿತ್ ಶರ್ಮಾ (Rohit Sharma) ಹಾಗೂ ಯಶಸ್ವಿ ಜೈಸ್ವಾಲ್ (Yashasvi Jaiswal ) ತಲಾ ಅರ್ಧಶತಕ ಇನ್ನಿಂಗ್ಸ್ ಆಡಿದರೆ, ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿರುವ ವಿರಾಟ್ ಕೊಹ್ಲಿ (Virat Kohli) 87 ರನ್ ಬಾರಿಸಿದ್ದರೆ, ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) 36 ರನ್ ಕಲೆಹಾಕಿದ್ದಾರೆ. ಇನ್ನು ಡೊಮಿನಿಕಾ ಟೆಸ್ಟ್ನಲ್ಲಿ ಬ್ಯಾಟಿಂಗ್ ಜೊತೆಗೆ ಬೌಲಿಂಗ್ನಲ್ಲೂ ಟೀಂ ಇಂಡಿಯಾದೆದುರು ಶರಣಾಗಿದ್ದ ವಿಂಡೀಸ್ ತಂಡ, ಪೋರ್ಟ್ ಆಫ್ ಸ್ಪೇನ್ನಲ್ಲಿ ರೋಹಿತ್ ಬಳಗಕ್ಕೆ ಸವಾಲು ಮತ್ತು ಎಚ್ಚರಿಕೆ ಎರಡನ್ನೂ ನೀಡಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ಗೆ ಮತ್ತೊಮ್ಮೆ ಆರಂಭ ಉತ್ತಮವಾಗಿರಲಿಲ್ಲ. ಇದಕ್ಕೆ ಕಾರಣ ಆರಂಭಿಕ ಜೋಡಿ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್. ಮೊದಲ ಟೆಸ್ಟ್ನಲ್ಲಿ ಇಬ್ಬರೂ ಏಕಾಂಗಿಯಾಗಿ 221 ರನ್ಗಳ ಅದ್ಭುತ ಜೊತೆಯಾಟದೊಂದಿಗೆ ವೆಸ್ಟ್ ಇಂಡೀಸ್ ತಂಡವನ್ನು ಪಂದ್ಯದಿಂದ ಹೊರಗಟ್ಟಿದರು. ಈ ಬಾರಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿದರೂ ಇಬ್ಬರ ವರ್ತನೆ ಬದಲಾಗಿಲ್ಲ. ಇಬ್ಬರೂ ಮೊದಲ ಸೆಷನ್ನಲ್ಲಿಯೇ ತಮ್ಮ ಅರ್ಧಶತಕಗಳನ್ನು ಪೂರ್ಣಗೊಳಿಸಿ, 121 ರನ್ ಜೊತೆಯಾಟ ಹಂಚಿಕೊಂಡರು.
SL vs PAK: ಬರೋಬ್ಬರಿ 1 ವರ್ಷದ ಬಳಿಕ ಟೆಸ್ಟ್ ಪಂದ್ಯ ಗೆದ್ದ ಪಾಕಿಸ್ತಾನ..!
ನಾಯಕ ರೋಹಿತ್ ಮೊದಲು ಅರ್ಧಶತಕ ಪೂರೈಸಿದರೆ, ಹಿಂದಿನ ಪಂದ್ಯಕ್ಕಿಂತ ಈ ಬಾರಿ ವೇಗವಾಗಿ ಆಡಿದ ಜೈಸ್ವಾಲ್, 49 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು. ಆದರೆ ಊಟದ ವಿರಾಮದ ನಂತರ ಬ್ಯಾಟಿಂಗ್ಗೆ ಇಳಿದ ಇಬ್ಬರೂ ಮೈದಾನದಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ.
ಎರಡನೇ ಸೆಷನ್ ಸಂಪೂರ್ಣವಾಗಿ ವಿಂಡೀಸ್ ಬೌಲರ್ಗಳ ಹೆಸರಿನಲ್ಲಿತ್ತು. ಜೇಸನ್ ಹೋಲ್ಡರ್ಗೆ ಯಶಸ್ವಿ ಬಲಿಯಾದರೆ, ಶುಭ್ಮನ್ ಗಿಲ್ ಮತ್ತೊಮ್ಮೆ ಮೂರನೇ ಕ್ರಮಾಂಕದಲ್ಲಿ ವಿಫಲರಾದರು. ಈ ಬಾರಿ ಅವರು ಕೆಮರ್ ರೋಚ್ಗೆ ವಿಕೆಟ್ ಒಪ್ಪಿಸಿದರು. ನಾಯಕ ರೋಹಿತ್ ತಮ್ಮ ಸತತ ಎರಡನೇ ಶತಕದಿಂದ ವಂಚಿತರಾಗಿ, ಸ್ಪಿನ್ನರ್ ಜೋಮೆಲ್ ವಾರಿಕನ್ ಅವರ ಅದ್ಭುತ ಎಸೆತದಲ್ಲಿ ಬೌಲ್ಡ್ ಆದರು. ಆ ಬಳಿಕ ಬಂದ ಅಜಿಂಕ್ಯ ರಹಾನೆ ಕೂಡ ಎರಡನೇ ಸೆಷನ್ನ ಕೊನೆಯ ಓವರ್ನಲ್ಲಿ ಬೌಲ್ಡ್ ಆದರು. ಹೀಗಾಗಿ 2ನೇ ಸೆಷನ್ನಲ್ಲಿ ಟೀಂ ಇಂಡಿಯಾ ಕೇವಲ 61 ರನ್ ಕಲೆಹಾಕಿ 4 ವಿಕೆಟ್ ಕಳೆದುಕೊಂಡಿತು.
ಕಳೆದ ಪಂದ್ಯದಲ್ಲಿ ಅತ್ಯಂತ ಸಂಕಷ್ಟದ ಬ್ಯಾಟಿಂಗ್ ನಡುವೆಯೂ ಶತಕ ವಂಚಿತರಾಗಿದ್ದ ಕೊಹ್ಲಿ, ಈ ಬಾರಿ ದೊಡ್ಡ ಇನ್ನಿಂಗ್ಸ್ ಆಡುವ ನಿರೀಕ್ಷೆಯಷ್ಟೇ ಅಲ್ಲ, ಅಗತ್ಯವೂ ಇತ್ತು. 500ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿರುವ ಕೊಹ್ಲಿ ಮೊದಲ ರನ್ ಗಳಿಸಲು ಸಾಕಷ್ಟು ಸಮಯ ತೆಗೆದುಕೊಂಡರು. ಕೊಹ್ಲಿ ತಮ್ಮ 21ನೇ ಎಸೆತದಲ್ಲಿ ಬೌಂಡರಿ ಬಾರಿಸಿ ಖಾತೆ ತೆರೆದರು. ಆ ನಂತರ ಕೊಹ್ಲಿ ಸಂಪೂರ್ಣವಾಗಿ ನೆಲೆಯೂರಿ ರವೀಂದ್ರ ಜಡೇಜಾ ಅವರೊಂದಿಗೆ ಉತ್ತಮ ಜೊತೆಯಾಟ ಹಂಚಿಕೊಂಡರು.
ಕೆಲವು ಸುಂದರವಾದ ಕವರ್ ಡ್ರೈವ್ಗಳನ್ನು ಆಡುವ ಮೂಲಕ ಕೊಹ್ಲಿ ಬೌಂಡರಿಗಳನ್ನು ಕಲೆಹಾಕಿದರು. ಕಳೆದ ಪಂದ್ಯದಲ್ಲಿ ಕೊಹ್ಲಿ 147 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರೆ, ಈ ಬಾರಿ ಅವರು 97 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಇದು ಕೊಹ್ಲಿಯ 30 ನೇ ಅರ್ಧಶತಕವಾಗಿದ್ದು, ಇವರಿಬ್ಬರು ಮೂರನೇ ಸೆಷನ್ನಲ್ಲಿ ರನ್ ವೇಗ ಹೆಚ್ಚಿಸಿ ತಂಡವನ್ನು 288 ರನ್ಗಳಿಗೆ ಕೊಂಡೊಯ್ದರು. ಅಲ್ಲದೆ ಕೊಹ್ಲಿ (87) ಮತ್ತು ಜಡೇಜಾ (36) ನಡುವೆ ಶತಕದ ಜೊತೆಯಾಟವಿದ್ದು, ಇಬ್ಬರೂ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:39 am, Fri, 21 July 23