
ಬೌಂಡರಿಗಳ ಸುರಿಮಳೆ, ಬ್ಯಾಟರ್‌ಗಳ ಅಬ್ಬರ ಹಾಗೂ ಕೊನೆಯ ಓವರ್‌ವರೆಗೂ ಮುಂದುವರಿದ ತೀವ್ರ ಪೈಪೋಟಿ! ಹೌದು, ಅಕ್ಟೋಬರ್ 11ರ ಭಾನುವಾರ ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನೆರೆದಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಪಕ್ಕಾ ಪೈಸಾ ವಸೂಲ್ ಮನರಂಜನೆ ಸಿಕ್ಕಿತು. ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡವು 14 ರನ್‌ಗಳ ಜಯ ಸಾಧಿಸಿದೆ. ಈ ಅದ್ಭುತ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 2-1 ಮುನ್ನಡೆ ಪಡೆದುಕೊಂಡಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ನಾಯಕ ಶಾ ಹೋಪ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಇಂದೋರ್ ಮೈದಾನದ ಸಣ್ಣ ಬೌಂಡರಿಗಳ ಲಾಭ ಪಡೆದು ಬೃಹತ್ ಮೊತ್ತ ಬೆನ್ನಟ್ಟುವ ವಿಂಡೀಸ್ ತಂತ್ರಕ್ಕೆ ಭಾರತದ ಆರಂಭಿಕ ಆಟಗಾರರು ಆರಂಭದಲ್ಲೇ ತಣ್ಣೀರೆರಚಿದರು. ಸಂಜು ಸ್ಯಾಮ್ಸನ್ ಬೇಗನೆ ಔಟಾದರೂ, ಸ್ಫೋಟಕ ಫಾರ್ಮ್‌ನಲ್ಲಿದ್ದ ಅಭಿಷೇಕ್ ಶರ್ಮಾ ಕೇವಲ 30 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 6 ಬೌಂಡರಿಗಳ ನೆರವಿನಿಂದ 69 ರನ್ ಚಚ್ಚಿದರು. ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು ಇನಿಂಗ್ಸ್‌ಗೆ ಭರ್ಜರಿ ವೇಗ ನೀಡಿದರು. ಅವರಿಗೆ ಉತ್ತಮ ಸಾಥ್ ನೀಡಿದ ಇಶಾನ್ ಕಿಶನ್ 37 ರನ್ ಗಳಿಸಿದರು.
ಆದರೆ, ಮಧ್ಯಂತರ ಓವರ್‌ಗಳಲ್ಲಿ ವಿಂಡೀಸ್ ಸ್ಪಿನ್ನರ್ ರೋಸ್ಟನ್ ಚೇಸ್ (38ಕ್ಕೆ 2 ವಿಕೆಟ್) ಭಾರತದ ರನ್ ವೇಗಕ್ಕೆ ಬ್ರೇಕ್ ಹಾಕಿದರು. ಭಾರತ ತಂಡ ಒಂದು ಹಂತದಲ್ಲಿ 115ಕ್ಕೆ 1 ವಿಕೆಟ್ ಕಳೆದುಕೊಂಡಿದ್ದ ಸ್ಥಿತಿಯಿಂದ 135ಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದಾಗ್ಯೂ, ಕೊನೆಯ ಓವರ್‌ನಲ್ಲಿ 10ನೇ ಕ್ರಮಾಂಕದ ಬ್ಯಾಟರ್ ಪ್ರಿನ್ಸ್ ಯಾದವ್ ಮೂರು ಪ್ರಮುಖ ಬೌಂಡರಿಗಳನ್ನು ಬಾರಿಸಿ ತಂಡದ ಮೊತ್ತವನ್ನು 223 ರನ್‌ಗಳಿಗೆ (20 ಓವರ್‌ಗಳಲ್ಲಿ ಆಲೌಟ್) ತಲುಪಿಸಿದರು. ಕೊನೆಯಲ್ಲಿ ಗಳಿಸಿದ ಈ ರನ್‌ಗಳೇ ಭಾರತದ ಗೆಲುವಿನಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸಿದವು.
224 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡಕ್ಕೆ ಭಾರತದ ವೇಗಿ ಅರ್ಷ್‌ದೀಪ್ ಸಿಂಗ್ ಆರಂಭದಲ್ಲೇ ಆಘಾತ ನೀಡಿದರು. ಅಪಾಯಕಾರಿ ಬ್ಯಾಟರ್ ಶಾ ಹೋಪ್ ಅವರನ್ನು ಕೇವಲ 5 ರನ್‌ಗಳಿಗೆ ಕ್ಲೀನ್ ಬೌಲ್ಡ್ ಮಾಡಿದರು. ಆದರೆ, ನಂತರ ಜೊತೆಯಾದ ಕಾಮಿಲ್ ಪೂರನ್ (42 ರನ್) ಮತ್ತು ಶಿಮ್ರಾನ್ ಹೆಟ್ಮೆಯರ್ (43 ರನ್) ಭಾರತೀಯ ಬೌಲರ್‌ಗಳ ಮೇಲೆ ಮುಗಿಬಿದ್ದು ಪಂದ್ಯವನ್ನು ರೋಚಕ ಹಂತಕ್ಕೆ ತಂದರು.
ಈ ಹಂತದಲ್ಲಿ ದಾಳಿಗಿಳಿದ ಪಾರ್ಟ್-ಟೈಮ್ ಬೌಲರ್ ನಮನ್ ಧೀರ್ 2 ಪ್ರಮುಖ ವಿಕೆಟ್ ಪಡೆದು ಭಾರತಕ್ಕೆ ಬ್ರೇಕ್ ನೀಡಿದರು. ಕೊನೆಯಲ್ಲಿ ಶೆರ್ಫೇನ್ ರದರ್‌ಫೋರ್ಡ್ (32 ರನ್) ಸಿಕ್ಸರ್‌ಗಳನ್ನು ಸಿಡಿಸಿ ಆತಂಕ ಮೂಡಿಸಿದಾಗ, ಮತ್ತೆ ಕಮಾಲ್ ಮಾಡಿದ ಅರ್ಷ್‌ದೀಪ್ ಸಿಂಗ್ ಅದ್ಭುತ ಯಾರ್ಕರ್ ಮೂಲಕ ರದರ್‌ಫೋರ್ಡ್ ವಿಕೆಟ್ ಉರುಳಿಸಿದರು. ಪರಿಣಾಮ ವೆಸ್ಟ್ ಇಂಡೀಸ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಲಷ್ಟೇ ಶಕ್ತವಾಯಿತು. 4 ಓವರ್‌ಗಳಲ್ಲಿ 44 ರನ್ ನೀಡಿ 3 ಪ್ರಮುಖ ವಿಕೆಟ್ ಪಡೆದ ಅರ್ಷ್‌ದೀಪ್ ಸಿಂಗ್ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು.
ಈ ಸರಣಿಯಲ್ಲಿ ಸತತವಾಗಿ ಚೇಸಿಂಗ್ ಮಾಡುತ್ತಿದ್ದ ತಂಡಗಳೇ ಗೆಲ್ಲುತ್ತಿದ್ದ ಟ್ರೆಂಡ್‌ಗೆ ಭಾರತದ ಬೌಲರ್‌ಗಳು ಕೊನೆಗೂ ಬ್ರೇಕ್ ಹಾಕಿದ್ದಾರೆ. ಮೊದಲು ನಡೆದ ಏಕದಿನ ಸರಣಿಯಲ್ಲಿ ಚೇಸ್ ಮಾಡಿದ ತಂಡಗಳೇ ಗೆಲುವು ದಾಖಲಿಸಿದ್ದವು. ಅದರಂತೆ ಭಾರತ ಎರಡು ಪಂದ್ಯಗಳಲ್ಲಿ ಚೇಸ್ ಮಾಡಿ ಗೆದ್ದರೆ, ವೆಸ್ಟ್ ಇಂಡೀಸ್ 1 ಮ್ಯಾಚ್ನಲ್ಲಿ ಚೇಸಿಂಗ್ ಮೂಲಕ ಗೆಲುವು ದಾಖಲಿಸಿತ್ತು.
ಇನ್ನು ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಗುರಿ ಬೆನ್ನತ್ತಿ ಗೆಲುವು ಸಾಧಿಸಿತ್ತು. ಆದರೆ, ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ ನೀಡಿದ್ದ 250 ರನ್‌ಗಳ ಬೃಹತ್ ಟಾರ್ಗೆಟ್ ಚೇಸ್ ಮಾಡಿದ ವೆಸ್ಟ್ ಇಂಡೀಸ್ ಐತಿಹಾಸಿಕ ಸಾಧನೆ ಮಾಡಿತ್ತು. ಇದೀಗ ಮೂರನೇ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಭಾರತದ ಬೌಲರ್‌ಗಳು, ಈ ಚೇಸಿಂಗ್ ಟ್ರೆಂಡ್‌ಗೆ ಬ್ರೇಕ್ ಹಾಕುವ ಮೂಲಕ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟಿದ್ದಾರೆ.
ಈ ಗೆಲುವಿನ ಉತ್ಸಾಹದಲ್ಲಿರುವ ಭಾರತ ತಂಡವು ಅಕ್ಟೋಬರ್ 14ರ ಬುಧವಾರ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ 4ನೇ ಟಿ20 ಪಂದ್ಯದಲ್ಲಿ ಸರಣಿ ಕೈವಶ ಮಾಡಿಕೊಳ್ಳುವ ಇರಾದೆಯೊಂದಿಗೆ ಕಣಕ್ಕಿಳಿಯಲಿದೆ.
ಭಾರತ ಪ್ಲೇಯಿಂಗ್ 11: ಅಭಿಷೇಕ್ ಶರ್ಮಾ , ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್) , ಇಶಾನ್ ಕಿಶನ್ , ಶ್ರೇಯಸ್ ಅಯ್ಯರ್ (ನಾಯಕ) , ತಿಲಕ್ ವರ್ಮಾ , ನಿತೀಶ್ ಕುಮಾರ್ ರೆಡ್ಡಿ , ನಮನ್ ಧೀರ್ , ಅಕ್ಷರ್ ಪಟೇಲ್ , ಮಾಯಾಂಕ್ ಯಾದವ್ , ಅರ್ಷದೀಪ್ ಸಿಂಗ್ , ಪ್ರಿನ್ಸ್ ಯಾದವ್.
ಇದನ್ನೂ ಓದಿ: ಈ ಬುಮ್ರಾ-ಗಿಮ್ರಾ ಏನು ಮಾಡ್ತಾನೆ? RCB ಮಾಡಿದ ಅತೀ ದೊಡ್ಡ ಎಡವಟ್ಟು ಇದು!
ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಶಾಯ್ ಹೋಪ್ (ನಾಯಕ) , ಕಾಮಿಲ್ ಪೂರನ್ , ಶಿಮ್ರಾನ್ ಹೆಟ್ಮಿಯರ್ , ರೋವ್ಮನ್ ಪೊವೆಲ್ , ಶೆರ್ಫೇನ್ ರದರ್ಫೋರ್ಡ್ , ಕ್ವೆಂಟಿನ್ ಸ್ಯಾಂಪ್ಸನ್ , ಕೀಮೊ ಪೌಲ್ , ರೋಸ್ಟನ್ ಚೇಸ್ , ಶಮರ್ ಸ್ಪ್ರಿಂಗರ್ , ಶಮರ್ ಜೋಸೆಫ್ , ಗುಡಕೇಶ್ ಮೋತಿ.
Published On - 7:33 am, Mon, 12 October 26