IND vs ZIM: ಜಿಂಬಾಬ್ವೆ ಮಣಿಸಿದ ಭಾರತ; ಮೊದಲ ಏಕದಿನ ಪಂದ್ಯದಲ್ಲಿ ಸೃಷ್ಟಿಯಾದ ದಾಖಲೆಗಳಿವು

| Updated By: ಪೃಥ್ವಿಶಂಕರ

Updated on: Aug 19, 2022 | 7:24 AM

IND vs ZIM: ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಇದು ಸತತ 13ನೇ ಗೆಲುವು. ಜಿಂಬಾಬ್ವೆಯನ್ನು ಹೊರತುಪಡಿಸಿ ಭಾರತ ಯಾವುದೇ ಒಂದು ತಂಡದ ವಿರುದ್ಧ ಇಷ್ಟು ಸತತ ಗೆಲುವುಗಳನ್ನು ಸಾಧಿಸಿಲ್ಲ.

IND vs ZIM: ಜಿಂಬಾಬ್ವೆ ಮಣಿಸಿದ ಭಾರತ; ಮೊದಲ ಏಕದಿನ ಪಂದ್ಯದಲ್ಲಿ ಸೃಷ್ಟಿಯಾದ ದಾಖಲೆಗಳಿವು
Follow us on

ನಿರೀಕ್ಷೆಯಂತೆ ಜಿಂಬಾಬ್ವೆ (Zimbabwe) ಸರಣಿಯಲ್ಲಿ ಭಾರತ ತಂಡ ಭರ್ಜರಿ ಆರಂಭ ಮಾಡಿದೆ. ಹರಾರೆಯಲ್ಲಿ (Harare) ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 10 ವಿಕೆಟ್‌ಗಳಿಂದ ಆತಿಥೇಯರನ್ನು ಸೋಲಿಸಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಭಾರತ ಟಾಸ್ ಗೆದ್ದು ಫೀಲ್ಡಿಂಗ್ ಮಾಡಲು ನಿರ್ಧರಿಸಿತ್ತು. ಭಾರತದ ಬೌಲರ್‌ಗಳ ಮುಂದೆ ಜಿಂಬಾಬ್ವೆ ಮಂಡಿಯೂರಿ 189 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗುರಿಯನ್ನು ಭಾರತ ಯಾವುದೇ ವಿಕೆಟ್ ನಷ್ಟವಿಲ್ಲದೆ ಸಾಧಿಸಿತು.

ಭಾರತದ ಅತ್ಯುತ್ತಮ ಬೌಲಿಂಗ್

ಗಾಯದ ಸಮಸ್ಯೆಯಿಂದ ಸುಮಾರು ಆರು ತಿಂಗಳ ನಂತರ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುತ್ತಿದ್ದ ಚಹಾರ್ (27ಕ್ಕೆ 3), ಅಕ್ಷರ್ ಪಟೇಲ್ (24ಕ್ಕೆ 3) ಮತ್ತು ಪ್ರಸಿದ್ಧ್ ಕೃಷ್ಣ (50ಕ್ಕೆ 3) ತಲಾ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಜಿಂಬಾಬ್ವೆ ಕೇವಲ 189 ರನ್‌ಗಳಿಗೆ ಆಲೌಟ್ ಆಗುವಂತೆ ಮಾಡಿದರು. ಜಿಂಬಾಬ್ವೆ ನೀಡಿದ 190 ರನ್ ಗಳ ಗುರಿ ಬೆನ್ನತ್ತಿದ ಭಾರತದ ಗಿಲ್ (72 ಎಸೆತ, 10 ಬೌಂಡರಿ, ಒಂದು ಸಿಕ್ಸರ್ 82) ಮತ್ತು ಧವನ್ (113 ಎಸೆತಗಳಲ್ಲಿ ಔಟಾಗದೆ 81, 9 ಬೌಂಡರಿ) ಮುರಿಯಾದ ಜೊತೆಯಾಟದೊಂದಿಗೆ ಇನ್ನು 19.1 ಓವರ್‌ಗಳು ಬಾಕಿ ಇರುವಾಗ ಯಾವುದೇ ವಿಕೆಟ್ ನಷ್ಟವಿಲ್ಲದೆ 192 ರನ್ ಗಳಿಸಿದರು.

ಇದನ್ನೂ ಓದಿ
IND vs ZIM: 7 ಓವರ್ 3 ವಿಕೆಟ್; 188 ದಿನಗಳ ನಂತರ ತಂಡಕ್ಕೆ ಭರ್ಜರಿ ಎಂಟ್ರಿಕೊಟ್ಟ ದೀಪಕ್ ಚಹಾರ್..!
IND vs ZIM: ಜಿಂಬಾಬ್ವೆ ನೆಲದಲ್ಲಿ ಟೀಂ ಇಂಡಿಯಾದ ಅತ್ಯಂತ ಯಶಸ್ವಿ ಬ್ಯಾಟರ್- ಬೌಲರ್ ಯಾರು?
IND vs ZIM: ಭಾರತವನ್ನು ಸೋಲಿಸಿ ಏಕದಿನ ಸರಣಿ ಗೆದ್ದೇ ಗೆಲ್ಲುತ್ತೇವೆ ಎಂದ ಜಿಂಬಾಬ್ವೆ ತಂಡದ ಯುವ ಬ್ಯಾಟರ್

ಮೊದಲ ಏಕದಿನ ಪಂದ್ಯದಲ್ಲಿ ದಾಖಲಾದ ದಾಖಲೆಗಳಿವು

– ಈ ಪಂದ್ಯದಲ್ಲಿ ನಾಯಕ ಕೆಎಲ್ ರಾಹುಲ್ ಬ್ಯಾಟಿಂಗ್ ಮಾಡಲು ಬರಲಿಲ್ಲ ಆದರೆ ಈ ಪಂದ್ಯ ಅವರಿಗೆ ಸ್ಮರಣೀಯವಾಯಿತು. ಏಕೆಂದರೆ ಟೀಂ ಇಂಡಿಯಾ ನಾಯಕನಾಗಿ ರಾಹುಲ್​ಗೆ ಇದು ಮೊದಲ ಗೆಲುವಾಗಿದೆ.

– ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಇದು ಸತತ 13ನೇ ಗೆಲುವು. ಜಿಂಬಾಬ್ವೆಯನ್ನು ಹೊರತುಪಡಿಸಿ ಭಾರತ ಯಾವುದೇ ಒಂದು ತಂಡದ ವಿರುದ್ಧ ಇಷ್ಟು ಸತತ ಗೆಲುವುಗಳನ್ನು ಸಾಧಿಸಿಲ್ಲ. ಜಿಂಬಾಬ್ವೆ ವಿರುದ್ಧ 2013 ಮತ್ತು 2022 ರ ನಡುವೆ ಆಡಿರುವ ಎಲ್ಲಾ ಪಂದ್ಯಗಳನ್ನು ಭಾರತ ಗೆದ್ದಿದೆ. ಜಿಂಬಾಬ್ವೆ ಬಳಿಕ ಭಾರತ ಬಾಂಗ್ಲಾ ದೇಶದೆದುರು ಈ ಸಾಧನೆ ಮಾಡಿದೆ. ಭಾರತ 1988 ರಿಂದ 2004 ರವರೆಗೆ ಸತತ 12 ಪಂದ್ಯಗಳನ್ನು ಬಾಂಗ್ಲಾ ವಿರುದ್ಧ ಗೆದ್ದಿದೆ.

– ಭಾರತದ ಆರಂಭಿಕ ಜೋಡಿ ಶುಭಮನ್ ಗಿಲ್ ಮತ್ತು ಶಿಖರ್ ಧವನ್ ಅಜೇಯ 192 ರನ್ ಜೊತೆಯಾಟವನ್ನು ಹಂಚಿಕೊಂಡರು. ಈ ಇಬ್ಬರೂ ಆಟಗಾರರು ನಾಲ್ಕು ಬಾರಿ ಓಪನ್ ಮಾಡಿದ್ದಾರೆ. ನಾಲ್ಕರಲ್ಲಿ ಮೂರು ಬಾರಿ ಈ ಜೋಡಿ ಶತಕದ ಜೊತೆಯಾಟವಾಡುವಲ್ಲಿ ಯಶಸ್ವಿಯಾಗಿದೆ.

– ಸುಮಾರು ಆರು ತಿಂಗಳ ನಂತರ ತಂಡಕ್ಕೆ ಮರಳಿದ ದೀಪಕ್ ಚಹಾರ್ ಈ ಗೆಲುವಿನ ಹೀರೋ ಆಗಿದ್ದರು. ಗಾಯದ ಸಮಸ್ಯೆಯಿಂದಾಗಿ ಚಹಾರ್ ಐಪಿಎಲ್‌ನಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಈ ಪಂದ್ಯದಲ್ಲಿ ಚಹರ್, ಏಳು ಓವರ್​ ಬೌಲ್ ಮಾಡಿ 27 ರನ್ ನೀಡಿ ಮೂರು ವಿಕೆಟ್ ಪಡೆದರು. ಜೊತೆಗೆ ಚಹಾರ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಲಭಿಸಿತು.

– ನಾಗರ್ವಾ ಮತ್ತು ಬ್ರಾಡ್ ಇವಾನ್ಸ್ ಒಂಬತ್ತನೇ ವಿಕೆಟ್‌ಗೆ 65 ಎಸೆತಗಳಲ್ಲಿ 70 ರನ್‌ಗಳ ಜೊತೆಯಾಟವನ್ನು ಹಂಚಿಕೊಳ್ಳದಿದ್ದರೆ ಭಾರತವು ಜಿಂಬಾಬ್ವೆಯನ್ನು ಇನ್ನಷ್ಟು ಬೇಗ ಆಲೌಟ್ ಮಾಡುತ್ತಿತ್ತು. ಇದು ಒಂಬತ್ತನೇ ವಿಕೆಟ್‌ಗೆ ಜಿಂಬಾಬ್ವೆಯ ಗರಿಷ್ಠ ಜೊತೆಯಾಟವಾಗಿದೆ. ಈ ಜೊತೆಯಾಟದಿಂದಾಗಿ ಆತಿಥೇಯರು 189 ರನ್ ತಲುಪಲು ಸಾಧ್ಯವಾಯಿತು.