IND W vs IRE W: ಏಕದಿನದಲ್ಲಿ ದಾಖಲೆಯ 435 ರನ್ ಕಲೆಹಾಕಿದ ಟೀಂ ಇಂಡಿಯಾ

|

Updated on: Jan 15, 2025 | 2:55 PM

IND W vs IRE W: ಐರ್ಲೆಂಡ್ ವಿರುದ್ಧ ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ದಾಖಲೆಯ ಮೊತ್ತ ಕಲೆಹಾಕಿದೆ. ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸ್ಮೃತಿ ಮಂಧಾನ ಪಡೆ ನಿಗದಿತ 50 ಓವರ್​ಗಳಲ್ಲಿ 5 ವಿಕೆಟ್​ಗಳನ್ನು ಕಳೆದುಕೊಂಡು 435 ರನ್ ಕಲೆಹಾಕಿದೆ. ಇದು ಏಕದಿನ ಕ್ರಿಕೆಟ್​ನಲ್ಲಿ ಭಾರತ ಮಹಿಳಾ ತಂಡ ದಾಖಲಿಸಿರುವ ಅತ್ಯಧಿಕ ಸ್ಕೋರ್ ಆಗಿದೆ.

IND W vs IRE W: ಏಕದಿನದಲ್ಲಿ ದಾಖಲೆಯ 435 ರನ್ ಕಲೆಹಾಕಿದ ಟೀಂ ಇಂಡಿಯಾ
ಟೀಂ ಇಂಡಿಯಾ
Follow us on

ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಏಕದಿನ ಇತಿಹಾಸದಲ್ಲೇ ಬೃಹತ್ ಮೊತ್ತ ಕಲೆಹಾಕಿದ ದಾಖಲೆ ಬರೆದಿದೆ. ಆರಂಭಿಕ ಆಟಗಾರ್ತಿಯಾರದ ಸ್ಮೃತಿ ಮಂಧಾನ ಹಾಗೂ ಪ್ರತಿಕಾ ರಾವಲ್ ಅವರ ಸ್ಫೋಟಕ ಶತಕ ಹಾಗೂ ರಿಚಾ ಘೋಷ್ ಅವರ ಅರ್ಧಶತಕದ ನೆರವಿನಿಂದ ಭಾರತ ವನಿತಾ ಪಡೆ ನಿಗದಿತ 50 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 435 ರನ್ ಪೇರಿಸಿದೆ. ಇದು ಏಕದಿನ ಕ್ರಿಕೆಟ್​ನಲ್ಲಿ ಟೀಂ ಇಂಡಿಯಾ ಕಲೆಹಾಕಿರುವ ಅತ್ಯಧಿಕ ರನ್ ಆಗಿದೆ. ಈ ಮೂಲಕ ಮಹಿಳಾ ಏಕದಿನ ಕ್ರಿಕೆಟ್​ನ ಇನ್ನಿಂಗ್ಸ್​ವೊಂದರಲ್ಲಿ ಅತ್ಯಧಿಕ ರನ್ ಬಾರಿಸಿದ ನಾಲ್ಕನೇ ತಂಡ ಎಂಬ ಹೆಗ್ಗಳಿಕೆಗೂ ಸ್ಮೃತಿ ಮಂಧಾನ ಪಡೆ ಭಾಜನವಾಗಿದೆ.

ಪುರುಷ ಕ್ರಿಕೆಟ್​ನ ದಾಖಲೆ ಉಡೀಸ್

ವಾಸ್ತವವಾಗಿ ಇದೇ ಐರ್ಲೆಂಡ್ ವಿರುದ್ಧ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ 370 ರನ್ ಬಾರಿಸುವ ಮೂಲಕ ಏಕದಿನದಲ್ಲಿ ಅತ್ಯಧಿಕ ಮೊತ್ತ ದಾಖಲಿಸಿದ ದಾಖಲೆಯನ್ನು ಸೃಷ್ಟಿಸಿದ್ದ ಟೀಂ ಇಂಡಿಯಾ ಇದೀಗ ಕೇವಲ ಮೂರು ದಿನಗಳ ಅಂತರದಲ್ಲಿ ತನ್ನದೇ ದಾಖಲೆಯನ್ನು ಪುಡಿಗಟ್ಟಿದೆ. ಇಷ್ಟೇ ಅಲ್ಲದೆ ಏಕದಿನ ಕ್ರಿಕೆಟ್​ನಲ್ಲಿ ಪುರುಷರ ತಂಡ ದಾಖಲಿಸಿದ್ದ ಅತ್ಯಧಿಕ ಮೊತ್ತದ ದಾಖಲೆಯನ್ನು ಭಾರತ ಮಹಿಳಾ ತಂಡ ಮುರಿದಿದೆ. ವಾಸ್ತವವಾಗಿ ಭಾರತದ ಪುರುಷರ ತಂಡ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಕ್ರಿಕೆಟ್​ನಲ್ಲಿ 5 ವಿಕೆಟ್ ನಷ್ಟಕ್ಕೆ 418 ರನ್ ಕಲೆಹಾಕಿತ್ತು. ಇದೀಗ ಭಾರತ ವನಿತಾ ಪಡೆ 435 ರನ್ ಕಲೆಹಾಕುವುದರೊಂದಿಗೆ ಆ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ.

ಆರಂಭಿಕರಿಬ್ಬರ ಶತಕ

ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಸ್ಮೃತಿ ಮಂಧಾನ ಹಾಗೂ ಪ್ರತೀಕಾ ಮೊದಲ ವಿಕೆಟ್​ಗೆ 233 ರನ್​ಗಳ ದಾಖಲೆಯ ಜೊತೆಯಾಟ ನೀಡಿದರು. ಈ ವೇಳೆಗೆ ಇಬ್ಬರೂ ಕೂಡ ಶತಕ ಪೂರೈಸಿದರು. ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ಮಾಡಿದ ಮಂಧಾನ 80 ಎಸೆತಗಳಲ್ಲಿ 12 ಬೌಂಡರಿ ಹಾಗೂ 7 ಸಿಕ್ಸರ್​ಗಳ ಸಹಿತ 135 ರನ್ ಬಾರಿಸುವುದರೊಂದಿಗೆ ಏಕದಿನದಲ್ಲಿ ಅತೀ ವೇಗದ ಶತಕ ಸಿಡಿಸಿದ ದಾಖಲೆಯನ್ನು ನಿರ್ಮಿಸಿದರು. ಮಂಧಾನ ಔಟಾದ ಬಳಿಕ ಪ್ರತೀಕಾ ಜೊತೆಗೂಡಿದ ರಿಚಾ ಘೋಷ್ ಕೂಡ ತಮ್ಮ ಹೊಡಿಬಡಿ ಆಟದ ಮೂಲಕ ನೋಡು ನೋಡುತ್ತಲೇ ಅರ್ಧಶತಕ ಪೂರೈಸಿದರು.

154 ರನ್ ಸಿಡಿಸಿದ ಪ್ರತೀಕಾ

ರಿಚಾ 42 ಎಸೆತಗಳಲ್ಲಿ 10 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 59 ರನ್​ ಪೇರಿಸಿ ಪೆವಿಲಿಯನ್ ಸೇರಿಕೊಂಡರು. ಆದಾಗ್ಯೂ ಆರಂಭದಿಂದಲೂ ಜವಬ್ದಾರಿಯುತ ಬ್ಯಾಟಿಂಗ್ ಮಾಡಿದ ಪ್ರತೀಕಾ ತಮ್ಮ ಏಕದಿನ ವೃತ್ತಿಜೀವನದ ಐದನೇ ಏಕದಿನ ಪಂದ್ಯದಲ್ಲಿ ತಮ್ಮ ಚೊಚ್ಚಲ ಶತಕವನ್ನು ದಾಖಲಿಸಲ್ಲದೆ 154 ರನ್​ಗಳ ಇನ್ನಿಂಗ್ಸ್ ಆಡಿದರು. ಅಂತಿಮವಾಗಿ ಪ್ರತೀಕಾ 129 ಎಸೆತಗಳಲ್ಲಿ 20 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 154 ರನ್ ಸಿಡಿಸಿ ಔಟಾದರು. 4ನೇ ಕ್ರಮಾಂಕದಲ್ಲಿ ಬಂದ ತೇಜಲ್ 28 ರನ್ ಹಾಗೂ ಹರ್ಲೀನ್ 15 ರನ್​ಗಳ ಕಾಣಿಕೆ ನೀಡಿ ತಂಡವನ್ನು 435 ರನ್​ಗಳಿಗೆ ಕೊಂಡೊಯ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:37 pm, Wed, 15 January 25