ಪದಕ ಖಚಿತ… ಫೈನಲ್​ನಲ್ಲಿ ಭಾರತ vs ಶ್ರೀಲಂಕಾ ಮುಖಾಮುಖಿ

ಏಷ್ಯನ್ ಗೇಮ್ಸ್ ಮಹಿಳಾ ಟಿ20 ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯಗಳು ಮುಗಿದಿವೆ. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ತಂಡವನ್ನು 8 ವಿಕೆಟ್​ಗಳಿಂದ ಮಣಿಸಿ ಶ್ರೀಲಂಕಾ ತಂಡ ಫೈನಲ್​ಗೆ ಪ್ರವೇಶಿಸಿದೆ. ಇನ್ನು ಬಾಂಗ್ಲಾದೇಶ್ ತಂಡಕ್ಕೆ ಸೋಲುಣಿಸುವ ಮೂಲಕ ಟೀಮ್ ಇಂಡಿಯಾ ಕೂಡ ಫೈನಲ್​ಗೆ ಲಗ್ಗೆಯಿಟ್ಟಿದೆ.

ಪದಕ ಖಚಿತ... ಫೈನಲ್​ನಲ್ಲಿ ಭಾರತ vs ಶ್ರೀಲಂಕಾ ಮುಖಾಮುಖಿ
Ind Vs Sl
Image Credit source: ACC

Updated on: Sep 21, 2026 | 1:30 PM

ಏಷ್ಯನ್ ಗೇಮ್ಸ್ 2026ರ ಮಹಿಳಾ ಟಿ20 ಟೂರ್ನಿಯ ಫೈನಲ್​ನಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ. ಸೆಪ್ಟೆಂಬರ್ 22ರ ಮಂಗಳವಾರದಂದು ಜಪಾನ್‌ನ ನಿಶ್ಶಿನ್‌ನಲ್ಲಿರುವ ಐಚಿ ಪ್ರಿಫೆಕ್ಚರಲ್ ಕೊರೊಗಿ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಹಣಾಹಣಿಯಲ್ಲಿ ಗೆಲ್ಲುವ ತಂಡ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರೆ, ಸೋಲುವ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಗುತ್ತದೆ. ಅಂದರೆ ಉಭಯ ತಂಡಗಳಿಗೂ ಏಷ್ಯನ್ ಗೇಮ್ಸ್​ ಪದಕ ಖಚಿತವಾದಂತಾಗಿದೆ. ಆದಾಗ್ಯೂ, ಎರಡೂ ತಂಡಗಳ ಆಟಗಾರ್ತಿಯರು ಜಿದ್ದಾಜಿದ್ದಿನ ಹೋರಾಟ ನಡೆಸಿ ಬಂಗಾರದ ಪದಕಕ್ಕೆ ಕೊರಳೊಡ್ಡಲು ತುದಿಗಾಲಲ್ಲಿ ನಿಂತಿದ್ದಾರೆ.

ಅದ್ಭುತ ಫಾರ್ಮ್‌ನಲ್ಲಿ ಟೀಮ್ ಇಂಡಿಯಾ:

ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ್ ವಿರುದ್ಧ 114 ರನ್‌ಗಳ ಬೃಹತ್ ಗೆಲುವು ದಾಖಲಿಸಿದ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ಪೂರ್ಣ ಆತ್ಮವಿಶ್ವಾಸದಲ್ಲಿದೆ. ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಕೇವಲ 49 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿ ಫಾರ್ಮ್‌ಗೆ ಮರಳಿರುವುದು ತಂಡದ ಬ್ಯಾಟಿಂಗ್ ಶಕ್ತಿಯನ್ನು ಹೆಚ್ಚಿಸಿದೆ. ಇನ್ನು ಬೌಲಿಂಗ್‌ನಲ್ಲಿ ದೀಪ್ತಿ ಶರ್ಮಾ ಮತ್ತು ನಂದಿನಿ ಶರ್ಮಾ ಕರಾರುವಾಕ್ ದಾಳಿ ಸಂಘಟಿಸುತ್ತಿದ್ದು, ಲಂಕಾ ಬ್ಯಾಟರ್‌ಗಳಿಗೆ ಕಡಿವಾಣ ಹಾಕಲು ಸಜ್ಜಾಗಿದ್ದಾರೆ. ಸ್ಮೃತಿ ಮಂಧಾನ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಅನುಭವ ತಂಡಕ್ಕೆ ದೊಡ್ಡ ಬಲವಾಗಿದೆ.

ಲಂಕಾ ಪಡೆಗೆ ಚಾಮರಿ ಆಸರೆ:

ಮತ್ತೊಂದೆಡೆ, ಪಾಕಿಸ್ತಾನ್ ತಂಡವನ್ನು 8 ವಿಕೆಟ್‌ಗಳಿಂದ ಸುಲಭವಾಗಿ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟಿರುವ ಶ್ರೀಲಂಕಾ ತಂಡವನ್ನು ಕಡಿಮೆ ಅಂದಾಜು ಮಾಡುವಂತಿಲ್ಲ. ಸೆಮಿಫೈನಲ್‌ನಲ್ಲಿ ನಾಯಕಿ ಚಾಮರಿ ಅಥಾಪತ್ತು ಕೇವಲ 50 ಎಸೆತಗಳಲ್ಲಿ ಅಜೇಯ 83 ರನ್ ಚಚ್ಚಿ ಏಕಾಂಗಿಯಾಗಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.

ಹರ್ಷಿತಾ ಸಮರವಿಕ್ರಮ ಮತ್ತು ಅನುಷ್ಕಾ ಸಂಜೀವನಿ ಕೂಡ ಉತ್ತಮ ಲಯದಲ್ಲಿದ್ದು, ಭಾರತದ ಬೌಲರ್‌ಗಳಿಗೆ ಕಠಿಣ ಸವಾಲೊಡ್ಡಲು ಸಿದ್ಧರಾಗಿದ್ದಾರೆ. ಚಾಮರಿ ಅಥಾಪತ್ತು ವಿಕೆಟ್ ಪಡೆಯುವುದು ಭಾರತೀಯ ಬೌಲರ್‌ಗಳ ಪ್ರಮುಖ ಗುರಿಯಾಗಿರಲಿದೆ.

ಪ್ರತಿಷ್ಠೆಯ ಹೋರಾಟ:

ಕಳೆದ ಏಷ್ಯನ್ ಗೇಮ್ಸ್ ಫೈನಲ್‌ನಲ್ಲಿ ಶ್ರೀಲಂಕಾವನ್ನು 19 ರನ್‌ಗಳಿಂದ ಸೋಲಿಸಿ ಭಾರತ ಚಿನ್ನದ ಪದಕ ಮುಡಿಗೇರಿಸಿಕೊಂಡಿತ್ತು. ಅಲ್ಲದೆ, ಇತ್ತೀಚಿನ ಏಷ್ಯಾ ಕಪ್ ಫೈನಲ್‌ನಲ್ಲೂ ಲಂಕಾವನ್ನು 72 ರನ್‌ಗಳಿಂದ ಮಣಿಸಿತ್ತು. ಹೀಗಾಗಿ, ಶ್ರೀಲಂಕಾ ತಂಡ ಹಳೆಯ ಸೋಲುಗಳಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದರೆ, ಭಾರತ ತಂಡ ತನ್ನ ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡು ಸತತ ಎರಡನೇ ಬಾರಿಗೆ ಬಂಗಾರದ ಪದಕ ಗೆಲ್ಲುವ ಇರಾದೆಯಲ್ಲಿದೆ.

ಇದನ್ನೂ ಓದಿ: ಸೆಂಚುರಿ ಮೇಲೆ ಸೆಂಚುರಿ: ಹೊಸ ಇತಿಹಾಸ ಬರೆದ ಮಾಝ್ ಸದಾಕತ್!

ಪಂದ್ಯದ ಸಮಯ ಮತ್ತು ನೇರ ಪ್ರಸಾರ:

ಭಾರತೀಯ ಕಾಲಮಾನ ಬೆಳಗ್ಗೆ 10:30ಕ್ಕೆ ಪಂದ್ಯ ಆರಂಭವಾಗಲಿದ್ದು, 10:00 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಭಾರತದಲ್ಲಿ ಈ ಹೈವೋಲ್ಟೇಜ್ ಪಂದ್ಯದ ನೇರ ಪ್ರಸಾರವನ್ನು ‘ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್’ ವಾಹಿನಿಗಳಲ್ಲಿ ವೀಕ್ಷಿಸಬಹುದು. ಮೊಬೈಲ್‌ನಲ್ಲಿ ಲೈವ್ ಸ್ಟ್ರೀಮಿಂಗ್ ನೋಡಲು ಬಯಸುವವರು ‘ಸೋನಿ ಲಿವ್’ (Sony LIV) ಆ್ಯಪ್​ ಬಳಸಬಹುದಾಗಿದೆ.

Loading...
Unable to load recommendations.
Follow Us