ಸತತ 2 ಸೋಲುಗಳ ನಂತರ ಭಾರತ ಎ ತಂಡದಲ್ಲಿ ಮಹತ್ವದ ಬದಲಾವಣೆ

Triangular Series: ಭಾರತ ಎ ತಂಡ ಶ್ರೀಲಂಕಾ ತ್ರಿಕೋನ ಸರಣಿಯಲ್ಲಿ ಸತತ ಎರಡು ಸೋಲುಗಳನ್ನು ಎದುರಿಸಿದೆ. ಅಫ್ಘಾನಿಸ್ತಾನ ಎ ಮತ್ತು ಶ್ರೀಲಂಕಾ ಎ ವಿರುದ್ಧದ ಪಂದ್ಯಗಳಲ್ಲಿ ಸೋತಿದೆ. ಈ ಮಧ್ಯೆ, ವೇಗಿ ಯುಧ್ವೀರ್ ಸಿಂಗ್ ಗಾಯಗೊಂಡಿದ್ದು, ಅವರ ಬದಲಿಗೆ ಐಪಿಎಲ್‌ನಲ್ಲಿ ಮಿಂಚಿದ್ದ ವೇಗದ ಬೌಲರ್ ಅಶೋಕ್ ಶರ್ಮಾ ಅವರನ್ನು ತಂಡಕ್ಕೆ ಸೇರಿಸಲಾಗಿದೆ. ಭಾರತ ಎ ತಂಡವು ಬಲಿಷ್ಠವಾಗಿ ಕಣಕ್ಕಿಳಿದಿದ್ದರೂ, ನಿರೀಕ್ಷಿತ ಪ್ರದರ್ಶನ ನೀಡಲು ಹೆಣಗಾಡುತ್ತಿದೆ.

ಸತತ 2 ಸೋಲುಗಳ ನಂತರ ಭಾರತ ಎ ತಂಡದಲ್ಲಿ ಮಹತ್ವದ ಬದಲಾವಣೆ
India A Squad

Updated on: Jun 16, 2026 | 3:41 PM

ತ್ರಿಕೋನ ಸರಣಿಗಾಗಿ ಶ್ರೀಲಂಕಾ ಪ್ರವಾಸ ಮಾಡಿರುವ ಭಾರತ ಎ ತಂಡಕ್ಕೆ (India A team ) ಸತತ ಎರಡು ಸೋಲುಗಳ ಆಘಾತ ಎದುರಾಗಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡವನ್ನು ಮಣಿಸಿದ್ದ ತಿಲಕ್ ವರ್ಮಾ ನಾಯಕತ್ವದ ಭಾರತ ಎ ತಂಡ ಪ್ರವಾಸವನ್ನು ಗೆಲುವಿನೊಂದಿಗೆ ಆರಂಭಿಸಿತ್ತು. ಆದರೆ ಆ ಬಳಿಕ ನಡೆದ ಎರಡು ಪಂದ್ಯಗಳಲ್ಲಿ ಭಾರತ ಎ ತಂಡಕ್ಕೆ ಸೋಲಿನ ಆಘಾತ ಎದುರಾಗಿದೆ. ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ಎ ತಂಡವನ್ನು ಎದುರಿಸಿದ್ದ ಭಾರತ ಎ ತಂಡ ಬೃಹತ್ ಮೊತ್ತವನ್ನ ಕಲೆಹಾಕಿತ್ತಾದರೂ ಕಳಪೆ ಬೌಲಿಂಗ್ ಹಾಗೂ ಮಳೆಯಿಂದಾಗಿ 5 ರನ್​ಗಳ ಸೋಲು ಕಂಡಿತ್ತು. ಅದಾದ ಬಳಿಕ ನಡೆದ ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ ಸೂಪರ್ ಓವರ್​ನಲ್ಲಿ ಲಂಕಾ ವಿರುದ್ಧ ಸೋಲು ಕಂಡಿದೆ. ಈ ಸತತ ಸೋಲುಗಳ ನಡುವೆ ತಂಡದಲ್ಲಿ ಒಂದು ಪ್ರಮುಖ ಬದಲಾವಣೆ ಮಾಡಲಾಗಿದೆ.

ಅಶೋಕ್ ಶರ್ಮಾಗೆ ಅವಕಾಶ

ಐಪಿಎಲ್​ನಲ್ಲಿ ಗುಜರಾತ್ ಟೈಟಾನ್ಸ್ ಪರ ಆಡುವ ಅಶೋಕ್ ಶರ್ಮಾ ತಮ್ಮ ವೇಗದ ಬೌಲಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದರು. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅಶೋಕ್ ಎರಡು ಬಾರಿ 150 ಕಿಮೀ ವೇಗವನ್ನು ದಾಟಿ ಬೌಲ್ ಮಾಡಿದ್ದರು. ಈ ಮೂಲಕ 2026 ರ ಐಪಿಎಲ್​ನಲ್ಲಿ ಅತಿ ವೇಗದ ಚೆಂಡನ್ನು ಬೌಲ್ ಮಾಡಿದ ವೇಗಿ ಎಂಬ ದಾಖಲೆಯನ್ನು ನಿರ್ಮಿಸಿದ್ದರು. ಈಗ ಆ ಪ್ರದರ್ಶನದ ಆಧಾರದ ಮೇಲೆ, ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಗಾಗಿ ಅಶೋಕ್ ಶರ್ಮಾ ಅವರನ್ನು ಭಾರತ ಎ ತಂಡದಲ್ಲಿ ಸೇರಿಸಲಾಗಿದೆ.

ಯುಧ್ವೀರ್ ಸಿಂಗ್​ಗೆ ಗಾಯ

ಇನ್ನು ಯುಧ್ವೀರ್ ಸಿಂಗ್ ಅವರನ್ನು ತಂಡದಿಂದ ಹೊರಗಿಟ್ಟಿರುವ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ, ಜೂನ್ 13 ರಂದು ಬೌಲಿಂಗ್ ಮಾಡುವಾಗ ಯುಧ್ವೀರ್ ಸಿಂಗ್ ಅವರ ಬಲ ಭುಜದಲ್ಲಿ ನೋವು ಕಾಣಿಸಿಕೊಂಡಿತು. ಇದಕ್ಕೂ ಮೊದಲು, ಜೂನ್ 11 ರಂದು ನಡೆದ ಫೀಲ್ಡಿಂಗ್ ಅವಧಿಯಲ್ಲಿಯೂ ಅವರು ಇದೇ ರೀತಿಯ ನೋವನ್ನು ಅನುಭವಿಸಿದ್ದರು. ಹೀಗಾಗಿ ಯುಧ್ವೀರ್ ಅವರಿಗೆ ಗಾಯದಿಂದ ಚೇತರಿಸಿಕೊಳ್ಳಲು ಸಮಯಬೇಕಾಗಿರುವುದರಿಂದ ಬಿಸಿಸಿಐ ವೈದ್ಯಕೀಯ ತಂಡವು ಅವರಿಗೆ ವಿಶ್ರಾಂತಿ ನೀಡಲು ಸೂಚಿಸಿದೆ ಎಂದಿದೆ.

ತ್ರಿಕೋನ ಸರಣಿಗೆ ಭಾರತ ಎ ತಂಡ ಪ್ರಕಟ; ವೈಭವ್ ಸೂರ್ಯವಂಶಿಗೆ ತಂಡದಲ್ಲಿ ಸ್ಥಾನ

ನವೀಕೃತ ಭಾರತ ಎ ತಂಡ: ತಿಲಕ್ ವರ್ಮಾ (ನಾಯಕ), ರುತುರಾಜ್ ಗಾಯಕ್‌ವಾಡ್ (ಉಪನಾಯಕ), ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ಆಯುಷ್ ಬಡೋನಿ, ನಿಶಾಂತ್ ಸಿಂಧು, ಸೂರ್ಯಾಂಶ್ ಶೆಡ್ಜ್, ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್‌ಕೀಪರ್), ಕುಮಾರ್ ಕುಶಾಗ್ರಾ (ವಿಕೆಟ್‌ಕೀಪರ್), ವಿಪ್ರಾಜ್ ನಿಗಂ, ಯಶ್ ಠಾಕೂರ್, ಅನ್ಶುಲ್ ಕಾಂಬೋಜ್, ಅರ್ಷದ್ ಖಾನ್, ಅನುಕೂಲ್ ರಾಯ್ ಮತ್ತು ಅಶೋಕ್ ಶರ್ಮಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us