ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿ ಇದೇ ಜನವರಿ 22 ರಿಂದ ಆರಂಭವಾಗಲಿದೆ. ಈ ಸರಣಿಗಾಗಿ ಈಗಾಗಲೇ ಉಭಯ ತಂಡಗಳನ್ನು ಪ್ರಕಟಿಸಲಾಗಿದೆ. ಆತಿಥೇಯ ಭಾರತ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸುತ್ತಿದ್ದರೆ, ಅತ್ತ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಜೋಸ್ ಬಟ್ಲರ್ ಮುನ್ನಡೆಸಲಿದ್ದಾರೆ. ಎರಡು ತಂಡಗಳ ನಡುವಿನ ಮೊದಲ ಟಿ20 ಪಂದ್ಯ ಜನವರಿ 22 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಈ ಪಂದ್ಯಕ್ಕಾಗಿ ಇದೀಗ ಉಭಯ ತಂಡಗಳು ಶನಿವಾರ ಕೋಲ್ಕತ್ತಾಗೆ ಬಂದಿಳಿದಿವೆ.
ಮೂರು ವರ್ಷಗಳ ನಂತರ ಐತಿಹಾಸಿಕ ಈಡನ್ ಗಾರ್ಡನ್ನಲ್ಲಿ ಮೊದಲ ಟಿ20 ಪಂದ್ಯ ನಡೆಯುತ್ತಿರುವ ಕಾರಣ ಈ ಪಂದ್ಯ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಇದಕ್ಕೆ ಪೂರಕವಾಗಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾದ ಟಿ20 ದಾಖಲೆ ಅದ್ಭುತವಾಗಿದೆ. ಉಭಯ ತಂಡಗಳ ನಡುವೆ ಇದುವರೆಗೆ ಒಟ್ಟು 24 ಪಂದ್ಯಗಳು ನಡೆದಿವೆ. ಈ ಪೈಕಿ ಭಾರತ ತಂಡ 13 ಪಂದ್ಯಗಳನ್ನು ಗೆದ್ದಿದ್ದರೆ, 11 ಪಂದ್ಯಗಳಲ್ಲಿ ಸೋಲು ಕಂಡಿದೆ.
ಪ್ರಸ್ತುತ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ SA20 ಲೀಗ್ನಲ್ಲಿ ಪಾಲ್ಗೊಂಡಿದ್ದ ಇಂಗ್ಲೆಂಡ್‌ನ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಇದಾದ ಬಳಿಕ ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡದ ಉಳಿದ ಸದಸ್ಯರು ದುಬೈನಿಂದ ಸಂಜೆ ಕೋಲ್ಕತ್ತಾಗೆ ಆಗಮಿಸಿದ್ದಾರೆ.
🚨 England Cricket Team have Reached India for the 5 T20s and 3 ODIs.#INDvsENG pic.twitter.com/OPoiem5GYg
— Sheeza Khan (@Pmln_gulf92) January 18, 2025
ಇತ್ತ ಟೀಂ ಇಂಡಿಯಾ ಕೂಡ ಕೋಲ್ಕತ್ತಾಗೆ ಪ್ರಯಾಣ ಬೆಳೆಸಿದ್ದು, ಯುವ ಆಟಗಾರರಾದ ನಿತೀಶ್ ಕುಮಾರ್ ರೆಡ್ಡಿ ಮತ್ತು ರಿಂಕು ಸಿಂಗ್, ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಮೊದಲ ಬ್ಯಾಚ್ನಲ್ಲಿ ಆಗಮನಿಸಿದರೆ, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಉಳಿದ ಆಟಗಾರರು ಸಂಜೆ ಕೋಲ್ಕತ್ತಾಗೆ ಬಂದಿಳಿದಿದ್ದಾರೆ.
ಪಿಟಿಐ ಪ್ರಕಾರ, ಸುಮಾರು 14 ತಿಂಗಳ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳುತ್ತಿರುವ ಮೊಹಮ್ಮದ್ ಶಮಿ ತಡರಾತ್ರಿ ಆಗಮಿಸಲಿದ್ದು, ಅವರ ಜೊತೆ ಹಾರ್ದಿಕ್ ಪಾಂಡ್ಯ ಕೂಡ ಬರಲಿದ್ದಾರೆ. ಮೊದಲ ಪಂದ್ಯಕ್ಕೂ ಮುನ್ನ ಉಭಯ ತಂಡಗಳು ಮೂರು ಅಭ್ಯಾಸ ಸೆಷನ್ಗಳಲ್ಲಿ ಭಾಗವಹಿಸಲಿವೆ. ಎರಡನೇ ಟಿ20 ಜನವರಿ 25 ರಂದು ಚೆನ್ನೈನಲ್ಲಿ ಮತ್ತು ಮೂರನೇ ಟಿ20 ಫೆಬ್ರವರಿ 2 ರಂದು ಮುಂಬೈನಲ್ಲಿ ನಡೆಯಲಿದೆ.
ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್ (ಉಪನಾಯಕ), ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್ , ವಾಷಿಂಗ್ಟನ್ ಸುಂದರ್, ಧ್ರುವ್ ಜುರೆಲ್ (ವಿಕೆಟ್ ಕೀಪರ್).
ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್ (ನಾಯಕ), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಜಾಕೋಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸೆ, ಬೆನ್ ಡಕೆಟ್, ಜೇಮೀ ಓವರ್ಟನ್, ಜೇಮಿ ಸ್ಮಿತ್, ಲಿಯಾಮ್ ಲಿವಿಂಗ್ಸ್ಟೋನ್, ಆದಿಲ್ ರಶೀದ್, ಸಾಕಿಬ್ ಮಹಮೂದ್, ಫಿಲ್ ಸಾಲ್ಟ್, ಮಾರ್ಕ್ ವುಡ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ