IND vs BAN: ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ ಏಕಪಕ್ಷೀಯ ಗೆಲುವು

Women's T20 World Cup 2026: ಮ್ಯಾಂಚೆಸ್ಟರ್‌ನಲ್ಲಿ ನಡೆದ 2026ರ ಮಹಿಳಾ ಟಿ20 ವಿಶ್ವಕಪ್‌ನ ನಿರ್ಣಾಯಕ ಪಂದ್ಯದಲ್ಲಿ ಭಾರತ ಬಾಂಗ್ಲಾದೇಶವನ್ನು ಸೋಲಿಸಿ ಸೆಮಿಫೈನಲ್ ರೇಸ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಬಾಂಗ್ಲಾ 136 ರನ್‌ಗಳ ಗುರಿ ನೀಡಿತು. ಟೀಂ ಇಂಡಿಯಾ 17ನೇ ಓವರ್‌ನಲ್ಲಿ 5 ವಿಕೆಟ್‌ಗಳಿಂದ ಗೆಲುವು ಸಾಧಿಸಿತು. ರಾಧಾ ಯಾದವ್ 3 ವಿಕೆಟ್ ಪಡೆದರು. ಕಳಪೆ ಫೀಲ್ಡಿಂಗ್ ಹೊರತಾಗಿಯೂ ಭಾರತದ ಗೆಲುವು ಸೆಮಿಫೈನಲ್ ಆಸೆಯನ್ನು ಜೀವಂತವಾಗಿಟ್ಟಿದೆ.

IND vs BAN: ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ ಏಕಪಕ್ಷೀಯ ಗೆಲುವು
Ind Vs Ban Women

Updated on: Jun 25, 2026 | 10:50 PM

ಮ್ಯಾಂಚೆಸ್ಟರ್‌ನಲ್ಲಿ ನಡೆದ 2026 ರ ಮಹಿಳಾ ಟಿ20 ವಿಶ್ವಕಪ್‌ನ (Women’s T20 World Cup 2026) 23ನೇ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ (Bangladesh vs India) ತಂಡಗಳು ಮುಖಾಮುಖಿಯಾಗಿದ್ದವು. ಸೆಮಿಫೈನಲ್‌ ದೃಷ್ಟಿಯಿಂದ ಈ ಪಂದ್ಯ ಉಭಯ ತಂಡಗಳಿಗೂ ನಿರ್ಣಾಯಕವಾಗಿತ್ತು. ಅದರಂತೆ ಈ ಗೆಲ್ಲಲೇಬೇಕಾದ ಪಂದ್ಯದಲ್ಲಿ ಟೀಂ ಇಂಡಿಯಾ ಏಕಪಕ್ಷೀಯ ಗೆಲುವು ದಾಖಲಿಸಿ ಸೆಮಿಫೈನಲ್​ ರೇಸ್​ನಲ್ಲಿ ಜೀವಂತವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶ ತಂಡ 20 ಓವರ್​ಗಳಲ್ಲಿ 8 ವಿಕೆಟ್​ಗಳ ನಷ್ಟಕ್ಕೆ 136 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 17ನೇ ಓವರ್​ನಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು ಜಯದ ನಗೆಬೀರಿತು. ಇತ್ತ ಈ ಸೋಲಿನೊಂದಿಗೆ ಬಾಂಗ್ಲಾ ತಂಡ ಸೆಮಿಫೈನಲ್‌ ರೇಸ್​ನಿಂದ ಭಾಗಶಃ ಹೊರಬಿದ್ದಿದೆ.

ಬಾಂಗ್ಲಾದೇಶದ ಬ್ಯಾಟಿಂಗ್ ವೈಫಲ್ಯ

ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಮಾಡಲು ನಿರ್ಧರಿಸಿತ್ತಾದರೂ ಕೇವಲ 5 ಬ್ಯಾಟರ್​ಗಳಿಗೆ ಮಾತ್ರ ಎರಡಂಕಿ ತಲುಪಲು ಸಾಧ್ಯವಾಯಿತು. ಈ 5 ಬ್ಯಾಟರ್​ಗಳು ಉತ್ತಮ ಆರಂಭವನ್ನು ಪಡೆದರಾದರೂ ಯಾರಿಗೂ ಈ ಇನ್ನಿಂಗ್ಸ್ ಅನ್ನು ದೊಡ್ಡ ಸ್ಕೋರ್‌ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಬಾಂಗ್ಲಾದೇಶ ಪರ ಜುವೈರಿಯಾ ಫಿರ್ದೌಸ್ ಅತ್ಯಧಿಕ 33 ರನ್​ಗಳ ಇನ್ನಿಂಗ್ಸ್ ಆಡಿದರೆ, ನಾಯಕಿ ನಿಗರ್ ಸುಲ್ತಾನ 27 ಎಸೆತಗಳಲ್ಲಿ 32 ರನ್ ಗಳಿಸಿದರು. ಶೋಭನಾ ಕೂಡ 22 ರನ್​ಗಳ ಕಾಣಿಕೆ ನೀಡಿದರು.

ಭಾರತದ ಕಳಪೆ ಫಿಲ್ಡಿಂಗ್

ಟೀಂ ಇಂಡಿಯಾ ಪರ ಬೌಲಿಂಗ್‌ನಲ್ಲಿ ಮಿಂಚಿದ ರಾಧಾ ಯಾದವ್ 3 ವಿಕೆಟ್ ಪಡೆದರೆ ಶ್ರೀ ಚರಣಿ 2 ವಿಕೆಟ್ ಕಬಳಿಸಿದರು. ರೇಣುಕಾ ಸಿಂಗ್ ಠಾಕೂರ್ ಮತ್ತು ನಂದಿನಿ ಶರ್ಮಾ ತಲಾ 1 ವಿಕೆಟ್ ಪಡೆದರು. ಆದಾಗ್ಯೂ ಈ ಪಂದ್ಯದಲ್ಲಿ ಬಾಂಗ್ಲಾ ತಂಡ 100 ರನ್​ಗಳ ಗಡಿ ದಾಟಲು ಟೀಂ ಇಂಡಿಯಾದ ಕಳಪೆ ಫಿಲ್ಡಿಂಗ್ ಪ್ರಮುಖ ಕಾರಣವಾಯಿತು. ಎಂದಿನಂತೆ ಈ ಪಂದ್ಯದಲ್ಲೂ ಟೀಂ ಇಂಡಿಯಾ ಆಟಗಾರ್ತಿಯರು 4 ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿದರು. ಹೀಗಾಗಿ ಬಾಂಗ್ಲಾ ತಂಡ 136 ರನ್ ಕಲೆಹಾಕಿತು. ಇಲ್ಲದಿದ್ದರೆ ತಂಡದ ಸ್ಕೋರ್ 100 ರ ಗಡಿ ಕೂಡ ದಾಟುತ್ತಿರಲಿಲ್ಲ.

ಅರ್ಧಶತಕ ಬಾರಿಸಿದ ಶೆಫಾಲಿ

ಈ ಗುರಿ ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭ ಸಿಕ್ಕಿತ್ತಾದರೂ ಸ್ಮೃತಿ ಮಂಧಾನ ಬೇಗನೇ ಔಟಾದರು. ಆದರೆ ಶೆಫಾಲಿ ವರ್ಮಾ ಬೌಂಡರಿಗಳ ಮಳೆ ಸುರಿಸಿ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ 9 ನೇ ಓವರ್‌ನಲ್ಲಿ ಶೆಫಾಲಿ 53 ರನ್‌ಗಳಿಗೆ ಔಟಾದರು. ಶೆಫಾಲಿ ಔಟಾಗುತ್ತಿದ್ದಂತೆ ಭಾರತದ ಇನ್ನಿಂಗ್ಸ್ ಇದ್ದಕ್ಕಿದ್ದಂತೆ ಕುಸಿಯಿತು. ಪರಿಣಾಮವಾಗಿ 98 ರ ಹೊತ್ತಿಗೆ ತಂಡವು ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು.

IND vs BAN: ಟಿ20 ವಿಶ್ವಕಪ್​ನಲ್ಲಿ ಅತ್ಯಧಿಕ ವಿಕೆಟ್; ದಾಖಲೆ ಬರೆದ ಶ್ರೀ ಚರಣಿ

17ನೇ ಓವರ್​ನಲ್ಲಿ ಗೆದ್ದ ಭಾರತ

ಇದರ ಜೊತೆಗೆ ಕ್ರೀಸ್‌ನಲ್ಲಿ ಬ್ಯಾಟರ್​ಗಳ ನಡುವೆ ಸಮನ್ವಯದ ಕೊರತೆಯೂ ಸ್ಪಷ್ಟವಾಗಿ ಕಾಣುತ್ತಿತ್ತು. ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಜೆಮಿಮಾ ರೊಡ್ರಿಗಸ್ ರನ್ನಿಂಗ್ ವಿಚಾರದಲ್ಲಿ ಹಲವು ಬಾರಿ ಗೊಂದಲಕ್ಕೀಡಾದರು. ಇದು ರನ್-ಔಟ್‌ ಅವಕಾಶವನ್ನು ಸೃಷ್ಟಿಸಿತು. ಆದರೆ ಬಾಂಗ್ಲಾದೇಶದ ಫೀಲ್ಡಿಂಗ್ ಕಳಪೆಯಾಗಿದ್ದ ಕಾರಣ ಇವರಿಬ್ಬರು ಔಟಾಗುವುದರಿಂದ ಪಾರಾದರು. ಅಂತಿಮವಾಗಿ, ಟೀಂ ಇಂಡಿಯಾ 16.5 ಓವರ್‌ಗಳಲ್ಲಿ ಗುರಿ ಸಾಧಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:32 pm, Thu, 25 June 26

Follow Us