IND vs BAN: ತಂಡದಿಂದ ಹೊರಗಿಟ್ಟಿದ್ದವರಿಗೆ ಮೊದಲ ಓವರ್‌ನಲ್ಲೇ ಉತ್ತರ ನೀಡಿದ ರೇಣುಕಾ
Renuka Singh Thakur: 2026ರ ಮಹಿಳಾ T20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಅನುಭವಿ ವೇಗದ ಬೌಲರ್ ರೇಣುಕಾ ಸಿಂಗ್ ಠಾಕೂರ್ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಹಿಂದಿನ ಮೂರು ಪಂದ್ಯಗಳಿಂದ ಹೊರಗುಳಿದಿದ್ದ ರೇಣುಕಾ, ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಮೊದಲ ಓವರ್‌ನಲ್ಲೇ ಪ್ರಮುಖ ವಿಕೆಟ್ ಪಡೆದರು. ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದರೂ, ತಂಡಕ್ಕೆ ವೇಗದ ಬೌಲರ್‌ಗಳ ಕೊರತೆಯನ್ನು ನೀಗಿಸಿದ ಅವರ ಪ್ರದರ್ಶನವು ತಂಡಕ್ಕೆ ಅನಿವಾರ್ಯ ಎಂಬುದನ್ನು ಸಾಬೀತುಪಡಿಸಿತು.

2026 ರ ಮಹಿಳಾ ಟಿ20 ವಿಶ್ವಕಪ್‌ನ ( Women’s T20 World Cup 2026) 23 ನೇ ಪಂದ್ಯದಲ್ಲಿ ಟೀಂ ಇಂಡಿಯಾ, ಬಾಂಗ್ಲಾದೇಶವನ್ನು (India vs Bangladesh) ಎದುರಿಸಿತ್ತು. ಈ ಪಂದ್ಯಾವಳಿಯಲ್ಲಿ ಎರಡೂ ತಂಡಗಳ ನಾಲ್ಕನೇ ಪಂದ್ಯ ಇದಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಮಾಡಲು ನಿರ್ಧರಿಸಿತ್ತು. ಇತ್ತ ಟಾಸ್ ಸೋತ ಟೀಂ ಇಂಡಿಯಾ ಈ ಪಂದ್ಯಕ್ಕೆ ಎರಡು ಬದಲಾವಣೆಗಳನ್ನು ಮಾಡಿತ್ತು. ಅದರಂತೆ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆದಿದ್ದ ಅನುಭವಿ ವೇಗದ ಬೌಲರ್ ರೇಣುಕಾ ಸಿಂಗ್ ಠಾಕೂರ್ (Renuka Singh Thakur) ಬೌಲ್ ಮಾಡಿದ ಮೊದಲ ಓವರ್‌ನಲ್ಲೇ ವಿಕೆಟ್ ಉರುಳಿಸಿ, ಮೊದಲ ಮೂರು ಪಂದ್ಯಗಳಲ್ಲಿ ತನ್ನನ್ನು ಬೆಂಚ್ ಕಾಯಿಸಿದವರಿಗೆ ತಕ್ಕ ತಿರುಗೇಟು ನೀಡಿದರು.
ಮೊದಲ ಓವರ್‌ನಲ್ಲೇ ವಿಕೆಟ್
ಈ ಪಂದ್ಯಾವಳಿಯಲ್ಲಿ ನಡೆದ ಮೂರು ಪಂದ್ಯಗಳಲ್ಲಿ ರೇಣುಕಾಗೆ ಅವಕಾಶ ನೀಡಿರಲಿಲ್ಲ. ಆದರೆ ಬಾಂಗ್ಲಾದೇಶ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದ ರೇಣುಕಾ ತಂಡದ ಪರ ಎರಡನೇ ಓವರ್ ಬೌಲ್ ಮಾಡಿದರು. ಈ ಓವರ್ನಲ್ಲಿ ಕಳಪೆ ಆರಂಭ ಪಡೆದಿದ್ದ ರೇಣುಕಾ ಮೂರು ವೈಡ್‌ಗಳನ್ನು ಎಸೆದಿದ್ದರು. ಆದಾಗ್ಯೂ ಓವರ್‌ನ ಕೊನೆಯ ಎಸೆತದಲ್ಲಿ ಬಾಂಗ್ಲಾದೇಶದ ಆರಂಭಿಕ ಆಟಗಾರ್ತಿ ದಿಲಾರಾ ಅಖ್ತರ್ ಅವರನ್ನು ಔಟ್ ಮಾಡಿ ಬಾಂಗ್ಲಾದೇಶಕ್ಕೆ ಮೊದಲ ಹೊಡೆತ ನೀಡಿದರು.
ವಾಸ್ತವವಾಗಿ ಕಳೆದ ಕೆಲವು ಸಮಯದಿಂದ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದ ರೇಣುಕಾ, ಆಡುವ ಹನ್ನೊಂದರಲ್ಲಿ ಸ್ಥಾನ ಕಳೆದುಕೊಂಡಿದ್ದರು. ಆದಾಗ್ಯೂ, ಅವರ ಬದಲಿಗೆ ಬಂದ ವೇಗದ ಬೌಲರ್‌ಗಳು ಸಹ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಇದರಿಂದಾಗಿ ರೇಣುಕಾ ತಂಡಕ್ಕೆ ಅನಿವಾರ್ಯವಾಗಿತ್ತು. ಏಕೆಂದರೆ, ಭಾರತ ತಂಡವು ಟೂರ್ನಮೆಂಟ್‌ನ ಕೊನೆಯ ಮೂರು ಪಂದ್ಯಗಳಲ್ಲಿ ತೆಗೆದುಕೊಂಡ 24 ವಿಕೆಟ್‌ಗಳಲ್ಲಿ ಕೇವಲ ಎರಡು ವಿಕೆಟ್‌ಗಳನ್ನು ವೇಗದ ಬೌಲರ್‌ಗಳು (ಎರಡೂ ನಂದಿನಿ ಶರ್ಮಾ) ಪಡೆದರೆ, 21 ವಿಕೆಟ್‌ಗಳನ್ನು ಸ್ಪಿನ್ನರ್‌ಗಳು ಪಡೆದಿದ್ದರು. ವೇಗದ ಬೌಲರ್ ಪಡೆದ ಈ ಎರಡು ವಿಕೆಟ್ಗಳು ಆರಂಭಿಕ ಓವರ್‌ಗಳಲ್ಲಿ ಬಿದ್ದಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ತಂಡದ ಪರ ಆಡುವ ಅವಕಾಶ ಸಿಕ್ಕ ಕೂಡಲೇ ತಮ್ಮ ಪ್ರಾಮುಖ್ಯತೆಯನ್ನು ಸಾಭೀತುಪಡಿಸಿದ ರೇಣುಕಾ ಆರು ಎಸೆತಗಳಲ್ಲಿ ವಿಕೆಟ್ ಪಡೆದರು.
IND vs BAN: ಇದೆಂಥಾ ಫಿಲ್ಡಿಂಗ್..? 10 ಎಸೆತಗಳಲ್ಲಿ 4 ಕ್ಯಾಚ್ ಕೈಚೆಲ್ಲಿದ ಟೀಂ ಇಂಡಿಯಾ..!
21 ರನ್ ನೀಡಿ 1 ವಿಕೆಟ್
ಇನ್ನು ಈ ಪಂದ್ಯದಲ್ಲಿ ಮೂರು ಓವರ್ಗಳನ್ನು ಬೌಲ್ ಮಾಡಿದ ರೇಣುಕಾ 21 ರನ್ ನೀಡಿ 1 ವಿಕೆಟ್ ಪಡೆದರು. ಉಳಿದಂತೆ ಈ ಪಂದ್ಯದಲ್ಲೂ ಸ್ಪಿನ್ನರ್‌ಗಳೇ ಪಾರುಪತ್ಯ ಮೆರೆದರು. ರಾಧಾ ಯಾದವ್ 3 ವಿಕೆಟ್ ಪಡೆದರೆ, ಶ್ರೀ ಚರಣಿ 2 ವಿಕೆಟ್ ಪಡೆದರು. ಆದಾಗ್ಯೂ ಶ್ರೀ ಚರಣಿ ಅವರ ಒಂದೇ ಓವರ್ನಲ್ಲಿ 3 ಕ್ಯಾಚ್‌ಗಳನ್ನು ಕೈಬಿಡಲಾಯಿತು. ಇಲ್ಲದಿದ್ದರೆ, ಈ ಪಂದ್ಯದಲ್ಲೂ ಅವರ ವಿಕೆಟ್ಗಳ ಸಂಖ್ಯೆ ಹೆಚ್ಚಿರುತ್ತಿದ್ದವು. ಇತ್ತ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ 8 ವಿಕೆಟ್‌ಗಳನ್ನು ಕಳೆದುಕೊಂಡು 136 ರನ್ ಕಲೆಹಾಕಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:54 pm, Thu, 25 June 26




