
2025 ರ ವರ್ಷವನ್ನು ಸಿಹಿ-ಕಹಿಯೊಂದಿಗೆ ಮುಗಿಸಿರುವ ಟೀಂ ಇಂಡಿಯಾಗೆ (Team India) 2026 ರಲ್ಲಿ ಸಾಲು ಸಾಲು ಸವಾಲುಗಳು ಎದುರಾಗಲಿವೆ. ಅದರಲ್ಲಿ ಪ್ರಮುಖವಾಗಿ ಫೆಬ್ರವರಿ ತಿಂಗಳಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್ (T20 World Cup 2026). ಟಿ20 ಮಾದರಿಯಲ್ಲಿ ಹಾಲಿ ಚಾಂಪಿಯನ್ ಆಗಿರುವ ಟೀಂ ಇಂಡಿಯಾ ತನ್ನ ಪಟ್ಟವನ್ನು ಉಳಿಸಿಕೊಳ್ಳುವ ಒತ್ತಡದಲ್ಲಿದೆ. ಇದು ಮಾತ್ರವಲ್ಲದೆ 2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಕೂಡ ಟೀಂ ಇಂಡಿಯಾಗೆ ಬಹಳ ಮುಖ್ಯವಾಗಿದೆ. ಏಕೆಂದರೆ 2023 ರಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್ನಲ್ಲಿ ಸೋತಿದ್ದ ಭಾರತ ತಂಡ, ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಇರಾದೆಯಲಿದೆ. ಈ ಮೂಲಕ ಭಾರತದ ಇಬ್ಬರು ದಿಗ್ಗಜರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಗೆಲುವಿನ ವಿದಾಯ ಹೇಳಲು ಬಯಸುತ್ತಿದೆ.
ಈ ಎರಡು ಐಸಿಸಿ ಟೂರ್ನಿಗಳಿಗೆ ಇನ್ನು ಸಮಯ ಉಳಿದಿದೆ. ಆದರೆ ಅದಕ್ಕೂ ಮುನ್ನ ಅಂದರೆ ಜನವರಿ ತಿಂಗಳಲ್ಲಿ ಟೀಂ ಇಂಡಿಯಾದ ವೇಳಾಪಟ್ಟಿ ಹೇಗಿದೆ? ಯಾವ ಯಾವ ತಂಡದ ವಿರುದ್ಧ ಯಾವ ಮಾದರಿಯ ಸರಣಿಯನ್ನು ಆಡಲಿದೆ ಎಂಬುದನ್ನು ನೋಡುವುದಾದರೆ.. ಜನವರಿ ತಿಂಗಳಲ್ಲಿ ಭಾರತ ತಂಡ ಬರೋಬ್ಬರಿ 8 ಪಂದ್ಯಗಳನ್ನು ಆಡಲಿದೆ. ಅಂದರೆ ಈ ತಿಂಗಳಲ್ಲಿ ಅಭಿಮಾನಿಗಳಿಗೆ ಮನರಂಜನೆಯ ರಸದೌತಣವೇ ಸಿಗಲಿದೆ.
ಟೀಂ ಇಂಡಿಯಾದ ಈ ವರ್ಷದ ವೇಳಾಪಟ್ಟಿ ಏಕದಿನ ಸರಣಿಯೊಂದಿಗೆ ಆರಂಭವಾಗಲಿದೆ. ಕಳೆದ ಡಿಸೆಂಬರ್ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು ಗೆಲುವಿನೊಂದಿಗೆ ಅಂತ್ಯಗೊಳಿಸಿದ್ದ ಭಾರತ ತಂಡ, ಇದೀಗ ಈ ವರ್ಷವನ್ನು ಸರಣಿ ಗೆಲುವಿನೊಂದಿಗೆ ಆರಂಭಿಸಲು ನೋಡುತ್ತಿದೆ. ಅದರಂತೆ ಗಿಲ್ ಪಡೆಗೆ ಎದುರಾಗುತ್ತಿರುವ ಮೊದಲ ತಂಡವೆಂದರೆ ಅದು ನ್ಯೂಜಿಲೆಂಡ್. ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.
ವಾಸ್ತವವಾಗಿ ಈ ಸರಣಿಗೆ ಇನ್ನು ತಂಡವನ್ನು ಪ್ರಕಟಿಸಲಾಗಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಬಿಸಿಸಿಐ ಶುಭ್ಮನ್ ಗಿಲ್ ನಾಯಕತ್ವದ ತಂಡವನ್ನು ಪ್ರಕಟಿಸಲಿದೆ. ಈ ತಂಡದಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಆಡುವುದರಿಂದ ಅಭಿಮಾನಿಗಳು ಇವರಿಬ್ಬರ ಮೇಲೆ ಸಾಕಷ್ಟು ನಿರೀಕ್ಷೆಗನ್ನು ಇಟ್ಟಿದ್ದಾರೆ.
ಏಕದಿನ ಸರಣಿ ಮುಗಿದ ಬಳಿಕ ಉಭಯ ತಂಡಗಳ ನಡುವೆ ಐದು ಪಂದ್ಯಗಳ ಟಿ20 ಸರಣಿಯೂ ನಡೆಯಲಿದೆ. ಈ ಸರಣಿ ಮುಗಿದ ಬಳಿಕ ಟಿ20 ವಿಶ್ವಕಪ್ ಆರಂಭವಾಗುವುದರಿಂದ ವಿಶ್ವಕಪ್ ತಯಾರಿ ದೃಷ್ಟಿಯಿಂದ ಟೀಂ ಇಂಡಿಯಾಕ್ಕೆ ಈ ಸರಣಿ ನಿರ್ಣಾಯಕವಾಗಿದೆ. ಅಲ್ಲದೆ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ನಾಯಕ ಸೂರ್ಯಕುಮಾರ್ ಯಾದವ್ ಈ ಸರಣಿಯಲ್ಲಿ ಶತಾಯಗತಾಯವಾಗಿ ತಮ್ಮ ಹಳೆಯ ಫಾರ್ಮ್ ಕಂಡುಕೊಳ್ಳಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ