IND vs ENG: 5ನೇ ಟಿ20 ಪಂದ್ಯಕ್ಕೆ ಉಭಯ ತಂಡಗಳಲ್ಲಿ ಒಂದೊಂದು ಬದಲಾವಣೆ
IND vs ENG: ಭಾರತ ತಂಡವು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ T20 ಸರಣಿಯಲ್ಲಿ 3-1 ಅಂತರದ ಮುನ್ನಡೆ ಸಾಧಿಸಿದೆ. ಹೀಗಾಗಿ ಕೊನೆಯ ಪಂದ್ಯದಲ್ಲೂ ಗೆಲುವು ಸಾಧಿಸುವ ಗುರಿಯೊಂದಿಗೆ ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡ ಕಣಕ್ಕಿಳಿಯಲಿದೆ. ಇತ್ತ ಇಂಗ್ಲೆಂಡ್ ತಂಡವು ಸೋಲಿನ ಅಂತರವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತದೆ. ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ದುಕೊಂಡಿದೆ. ಭಾರತ ತಂಡದಲ್ಲಿ ಮೊಹಮ್ಮದ್ ಶಮಿ ಅವರನ್ನು ಆಯ್ಕೆ ಮಾಡಲಾಗಿದ್ದು, ಇಂಗ್ಲೆಂಡ್ ತಂಡದಲ್ಲಿ ಮಾರ್ಕ್ ವುಡ್ ಆಡುತ್ತಿದ್ದಾರೆ.

ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡವು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಈಗಾಗಲೇ 3-1 ಅಂತರದ ಮುನ್ನಡೆ ಸಾಧಿಸಿದ್ದು, ಈಗ ಗೆಲುವಿನೊಂದಿಗೆ ಸರಣಿಯನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿದೆ. ಇತ್ತ ಟಿ20 ಸರಣಿ ಸೋತಿರುವ ಇಂಗ್ಲೆಂಡ್ ತಂಡ ಕೊನೆಯ ಪಂದ್ಯವನ್ನು ಗೆದ್ದು ಸೋಲಿನ ಅಂತರವನ್ನು ತಗ್ಗಿಸಲು ಪ್ರಯತ್ನಿಸಲಿದೆ. ಇನ್ನು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐದನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಮೊದಲು ಬೌಲಿಂಗ್ ಆಯ್ದುಕೊಂಡಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಲಿದೆ. ಇದರೊಂದಿಗೆ ಉಭಯ ತಂಡಗಳ ಪ್ಲೇಯಿಂಗ್ 11 ಕೂಡ ಹೊರಬಿದ್ದಿದೆ.
ಈ ಸರಣಿಯ ಮೊದಲು ಮೂರು ಪಂದ್ಯಗಳಲ್ಲಿ ಟೀಂ ಇಂಡಿಯಾ ಟಾಸ್ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ವೇಳೆ ಟಾಸ್ ಗೆದ್ದ ಪ್ರತಿ ಬಾರಿಯೂ ಸೂರ್ಯಕುಮಾರ್ ಯಾದವ್ ಮೊದಲು ಬೌಲಿಂಗ್ ಆಯ್ದುಕೊಂಡಿದ್ದರು. ಇದೀಗ ಕೊನೆಯ ಎರಡು ಪಂದ್ಯಗಳಲ್ಲಿ ಟಾಸ್ ಗೆಲ್ಲುವಲ್ಲಿ ಇಂಗ್ಲೆಂಡ್ ತಂಡ ಯಶಸ್ವಿಯಾಗಿದೆ. ಇತ್ತ ಜೋಸ್ ಬಟ್ಲರ್ ಕೂಡ ಟಾಸ್ ಗೆದ್ದ ಎರಡೂ ಪಂದ್ಯಗಳಲ್ಲಿ ಮೊದಲು ಬೌಲಿಂಗ್ ಆಯ್ದುಕೊಂಡಿದ್ದಾರೆ.
ಉಭಯ ತಂಡಗಳಲ್ಲಿ ಒಂದೊಂದು ಬದಲಾವಣೆ
ಇನ್ನು ಉಭಯ ತಂಡಗಳ ಆಡುವ ಹನ್ನೊಂದರ ಬಳಗದ ಬಗ್ಗೆ ಹೇಳುವುದಾದರೆ.. ವಾಸ್ತವವಾಗಿ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿರುವ ಭಾರತ ತಂಡ ಕೊನೆಯ ಪಂದ್ಯಕ್ಕೆ ಸಾಕಷ್ಟು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ನಿರೀಕ್ಷೆ ಇತ್ತು. ಆದರೆ ಗೆಲುವಿನ ಸಂಯೋಜನೆಯನ್ನು ಬದಲಿಸುವ ಕೆಲಸಕ್ಕೆ ಸೂರ್ಯಕುಮಾರ್ ಯಾದವ್ ಕೈಹಾಕಿಲ್ಲ. ಆದಾಗ್ಯೂ ತಂಡದಲ್ಲಿ ಒಂದು ಬದಲಾವಣೆ ಮಾಡಿರುವ ಸೂರ್ಯ, ಅರ್ಷದೀಪ್ ಸಿಂಗ್ ಬದಲಿಗೆ ಮೊಹಮ್ಮದ್ ಶಮಿ ಅವರನ್ನು ಮತ್ತೊಮ್ಮೆ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಇತ್ತ ಇಂಗ್ಲೆಂಡ್ ತಂಡದಲ್ಲೂ ಒಂದು ಬದಲಾವಣೆ ಮಾಡಲಾಗಿದ್ದು, ಕಳೆದ ಮ್ಯಾಚ್ನಲ್ಲಿ ಒಂದೇ ಓವರ್ನಲ್ಲಿ 3 ವಿಕೆಟ್ ಉರುಳಿಸಿದ್ದ ಸಾಕಿಬ್ ಮಹಮೂದ್ ಬದಲಿಗೆ ಮಾರ್ಕ್ ವುಡ್ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆದಿದ್ದಾರೆ.
ಎರಡೂ ತಂಡಗಳು
ಟೀಂ ಇಂಡಿಯಾ: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ.
ಇಂಗ್ಲೆಂಡ್ ತಂಡ: ಫಿಲ್ ಸಾಲ್ಟ್ , ಬೆನ್ ಡಕೆಟ್, ಜೋಸ್ ಬಟ್ಲರ್ (ನಾಯಕ), ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟನ್, ಜಾಕೋಬ್ ಬೆಥೆಲ್, ಬ್ರೈಡನ್ ಕಾರ್ಸೆ, ಜೇಮೀ ಓವರ್‌ಟನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ