T20 World Cup 2025: ಟಿ20 ವಿಶ್ವಕಪ್ ಗೆದ್ದ ಭಾರತಕ್ಕೆ ನಯಾ ಪೈಸಾ ಬಹುಮಾನ ನೀಡದ ಐಸಿಸಿ
U19 Women's T20 World Cup 2025: ಭಾರತದ ಮಹಿಳಾ ಅಂಡರ್ 19 ತಂಡವು ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಟಿ20 ವಿಶ್ವಕಪ್ ಗೆದ್ದಿದೆ. ಆದರೆ, ವಿಶ್ವಚಾಂಪಿಯನ್ ಭಾರತ ತಂಡಕ್ಕೆ ಐಸಿಸಿ ಯಾವುದೇ ಬಹುಮಾನ ನೀಡಿಲ್ಲ. ಆದಾಗ್ಯೂ, ಬಿಸಿಸಿಐ ತಂಡಕ್ಕೆ ಭರ್ಜರಿ ಬಹುಮಾನ ನೀಡುವುದಾಗಿ ಘೋಷಿಸಿದೆ.

ಕೇವಲ 8 ತಿಂಗಳ ಅಂತರದಲ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿ ಸಿಕ್ಕಿದೆ. ಜೂನ್ 29, 2024 ರಂದು ಬಾರ್ಬಡೋಸ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಫೈನಲ್ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾವನ್ನು ಮಣಿಸಿ 2ನೇ ಬಾರಿಗೆ ಟಿ20 ವಿಶ್ವಕಪ್ ಎತ್ತಿಹಿಡಿದಿತ್ತು. ಇದೀಗ 2 ಫೆಬ್ರವರಿ 2025 ರಂದು ನಡೆದ ಅಂಡರ್ 19 ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನಿಕ್ಕಿ ಪ್ರಸಾದ್ ನಾಯಕತ್ವದ ಭಾರತ ಮಹಿಳಾ ತಂಡ, ದಕ್ಷಿಣ ಆಫ್ರಿಕಾ ಮಹಿಳಾ ತಂಡವನ್ನು ಮಣಿಸುವ ಮೂಲಕ ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದು ಇತಿಹಾಸ ಸೃಷ್ಟಿಸಿದೆ. ಆದರೆ ವಿಶ್ವಕಪ್ ಗೆದ್ದ ಪುರುಷ ತಂಡಕ್ಕೆ ಕೋಟ್ಯಾಂತರ ರೂ. ಬಹುಮಾನ ನೀಡಿದ್ದ ಐಸಿಸಿ, ಮಹಿಳಾ ತಂಡಕ್ಕೆ ಮಾತ್ರ ನಯಾ ಪೈಸಾ ಬಹುಮಾನ ನೀಡಿಲ್ಲ.
ಐಸಿಸಿಯಿಂದ ಸಿಗದ ಬಹುಮಾನ
ಫೆಬ್ರವರಿ 2 ರಂದು ಕೌಲಾಲಂಪುರದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ತಂಡವು ಏಕಪಕ್ಷೀಯ ರೀತಿಯಲ್ಲಿ ದಕ್ಷಿಣ ಆಫ್ರಿಕಾವನ್ನು 9 ವಿಕೆಟ್‌ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಮೂಲಕ 2023ರ ನಂತರ ಸತತ ಎರಡನೇ ಬಾರಿಗೆ ಟ್ರೋಫಿ ಗೆದ್ದ ಸಾಧನೆಯನ್ನು ಮಾಡಿತು. ವಾಸ್ತವವಾಗಿ ಐಸಿಸಿ ಈವೆಂಟ್ ಗೆಲ್ಲುವ ಪ್ರತಿಯೊಂದು ತಂಡಕ್ಕೂ ಐಸಿಸಿಯಿಂದ ಹಣದ ರೂಪದಲ್ಲಿ ಬಹುಮಾನ ನೀಡಲಾಗುತ್ತದೆ. ಆದರೆ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ಐಸಿಸಿಯಿಂದ ಯಾವುದೇ ಬಹುಮಾನ ಸಿಕ್ಕಿಲ್ಲ. ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಭಾರತ ಮಹಿಳಾ ತಂಡಕ್ಕೆ ಐಸಿಸಿ ಚೇರ್ಮನ್ ಜಯ್ ಷಾ ವಿಶ್ವಕಪ್ ಟ್ರೋಫಿಯನ್ನು ನೀಡಿದರು. ಇದರ ಜೊತೆಗೆ ಪ್ರತಿಯೊಬ್ಬ ಆಟಗಾರ್ತಿಯರಿಗೂ ಪದಕಗಳನ್ನು ನೀಡಿದರು. ಆದರೆ ವಿಶ್ವಚಾಂಪಿಯನ್ ತಂಡಕ್ಕೆ ಯಾವುದೇ ರೀತಿಯ ಬಹುಮಾನ ಸಿಕ್ಕಿಲ್ಲ. ವಾಸ್ತವವಾಗಿ ಅಂಡರ್-19 ವಿಶ್ವ ಚಾಂಪಿಯನ್ ತಂಡ ಯಾವುದೇ ಬಹುಮಾನವನ್ನು ಪಡೆಯದಿರುವುದು ಇದೇ ಮೊದಲಲ್ಲ. ಎರಡು ವರ್ಷಗಳ ಹಿಂದೆ ಭಾರತ ತಂಡ ಮೊದಲ ಬಾರಿಗೆ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಾಗಲೂ ನಗದು ಬಹುಮಾನ ಪಡೆದಿರಲಿಲ್ಲ. ವಾಸ್ತವವಾಗಿ, ಅಂಡರ್-19 ಮಟ್ಟದಲ್ಲಿ ಯಾವುದೇ ವಿಶ್ವಕಪ್‌ಗೆ ಬಹುಮಾನವಾಗಿ ಹಣವನ್ನು ನೀಡಲು ಐಸಿಸಿಯಿಂದ ಯಾವುದೇ ಅವಕಾಶವಿಲ್ಲ.
ಬಿಸಿಸಿಐನಿಂದ ಭರ್ಜರಿ ಬಹುಮಾನ
ಹಲವು ವರ್ಷಗಳಿಂದ ನಡೆಯುತ್ತಿರುವ 19 ವರ್ಷದೊಳಗಿನವರ ಪುರುಷರ ವಿಶ್ವಕಪ್ನಲ್ಲೂ ವಿಜೇತ ತಂಡಕ್ಕೆ ಹಣದ ರೂಪದಲ್ಲಿ ಯಾವುದೇ ಬಹುಮಾನ ನೀಡಲಾಗುವುದಿಲ್ಲ. ಆಟಗಾರರಿಗೆ ಟ್ರೋಫಿ ಜೊತೆಗೆ ಪದಕಗಳನ್ನು ಮಾತ್ರ ನೀಡಲಾಗುತ್ತದೆ. ಆದರೆ ಐಸಿಸಿಯಿಂದ ಯಾವುದೇ ಬಹುಮಾನ ಸಿಗದಿರಬಹುದು ಆದರೆ ಬಿಸಿಸಿಐನಿಂದ ವಿಶ್ವ ಚಾಂಪಿಯನ್ ಭಾರತ ತಂಡಕ್ಕೆ ಭರ್ಜರಿ ಬಹುಮಾನ ಸಿಗಲಿದೆ. ಕಳೆದ ಬಾರಿ ವಿಶ್ವಕಪ್ ಗೆದ್ದ ಅಂಡರ್-19 ತಂಡಕ್ಕೆ ಬಿಸಿಸಿಐಯೇ 5 ಕೋಟಿ ಬಹುಮಾನ ಘೋಷಿಸಿತ್ತು. ಅದೇ ರೀತಿ, 2022 ರಲ್ಲಿ 19 ವರ್ಷದೊಳಗಿನವರ ಪುರುಷರ ವಿಶ್ವಕಪ್ ಗೆದಿದ್ದ ಭಾರತ ತಂಡಕ್ಕೂ ಬಿಸಿಸಿಐ ದೊಡ್ಡ ಮೊತ್ತದ ಬಹುಮಾನವನ್ನು ಘೋಷಿಸಿತ್ತು. ಹೀಗಾಗಿ ಇದೀಗ ಚಾಂಪಿಯನ್ ಆಗಿರುವ ಮಹಿಳಾ ತಂಡಕ್ಕೂ ಭರ್ಜರಿ ಬಹುಮಾನ ಸಿಗುವುದು ಖಚಿತ.
Published On - 6:23 pm, Sun, 2 February 25