KL Rahul: ತಪ್ಪು ಮಾಡಿದ ಕೆಎಲ್ ರಾಹುಲ್: ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾಗೆ ದಂಡದ ಬರೆ
288 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ಭಾರತ ಒಂದು ಹಂತದಲ್ಲಿ 6 ವಿಕೆಟ್ ಕಳೆದುಕೊಂಡು 210 ರನ್ ಗಳಿಸಿತ್ತು. ಈ ವೇಳೆ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ದೀಪಕ್ ಚಹರ್ ಟೀಮ್ ಇಂಡಿಯಾವನ್ನು ಗೆಲುವಿನತ್ತ ಕೊಂಡೊಯ್ದರು.
ಟೀಮ್ ಇಂಡಿಯಾ ವಿರುದ್ದ ಏಕದಿನ ಸರಣಿಯನ್ನು ದಕ್ಷಿಣ ಆಫ್ರಿಕಾ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಕೇಪ್ ಟೌನ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲೂ ಆತಿಥೇಯ ದಕ್ಷಿಣ ಆಫ್ರಿಕಾ ಜಯ ಸಾಧಿಸಿದೆ. ಈ ಮೂಲಕ ಏಕದಿನ ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡಿದೆ. ಈ ಹೀನಾಯ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾಗೆ ಐಸಿಸಿ ದಂಡ ವಿಧಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಸ್ಲೋ ಓವರ್ ರೇಟ್‌ಗಾಗಿ ಟೀಮ್ ಇಂಡಿಯಾಗೆ ಪಂದ್ಯದ ಶುಲ್ಕದ ಶೇಕಡಾ 40 ರಷ್ಟು ದಂಡ ವಿಧಿಸಲಾಗಿದೆ. ನಿಗದಿತ ಅವಧಿಯೊಳಗೆ 2 ಓವರ್ ಕಡಿಮೆ ಬೌಲಿಂಗ್ ಮಾಡಿದ್ದಕ್ಕಾಗಿ ಭಾರತ ತಂಡಕ್ಕೆ ಫೈನ್ ಹಾಕಲಾಗಿದೆ.
ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ ನಿಗದಿತ ಸಮಯದೊಳಗೆ ತಂಡವು ತನ್ನ ಓವರ್‌ಗಳ ಕೋಟಾವನ್ನು ಪೂರ್ಣಗೊಳಿಸದಿದ್ದರೆ ಪ್ರತಿ ಓಕ್ ಓವರ್‌ಗೆ ಪಂದ್ಯದ ಶುಲ್ಕದ ಶೇಕಡಾ 20 ರಷ್ಟು ದಂಡ ಅನ್ವಯಿಸಲಾಗುತ್ತದೆ. ಮೂರನೇ ಏಕದಿನ ಪಂದ್ಯದಲ್ಲಿ ನಾಯಕ ಕೆಎಲ್ ರಾಹುಲ್ ಬೇಗನೆ ಓವರ್ ಮುಗಿಸುವುದರಲ್ಲಿ ಎಡವಿದ್ದರು. ಇದರಿಂದ ಭಾರತ ತಂಡವು ನಿಗದಿತ ಅವಧಿಯೊಳಗೆ 2 ಓವರ್ ಕಡಿಮೆ ಬೌಲಿಂಗ್ ಮಾಡಿತ್ತು. ಹೀಗಾಗಿ ಶೇ 40ರಷ್ಟು ದಂಡ ವಿಧಿಸಲಾಗಿದೆ.
ಈಗಾಗಲೇ ಐಸಿಸಿ ಕೆಎಲ್ ರಾಹುಲ್ ಅವರಿಗೆ ಈ ಬಗ್ಗೆ ಸೂಚನೆ ನೀಡಿದ್ದು, ಸ್ಲೋ ಓವರ್ ರೇಟ್ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಈ ಬಗ್ಗೆ ಪ್ರತ್ಯೇಕ ವಿಚಾರಣೆ ಇರುವುದಿಲ್ಲ. ಒಟ್ಟಿನಲ್ಲಿ ನಾಯಕನಾಗಿ ಕೆಎಲ್ ರಾಹುಲ್ ಮೊದಲ ಸರಣಿಯಲ್ಲೇ ಸೋಲುಂಡಿದ್ದಾರೆ. ಅದರ ಜೊತೆಗೆ ಇದೀಗ ದಂಡವನ್ನು ಕೂಡ ಪಾವತಿಸಬೇಕಿದೆ.
ಕೇಪ್ ಟೌನ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 49.5 ಓವರ್‌ಗಳಲ್ಲಿ 287 ರನ್ ಕಲೆಹಾಕಿತು. ಸೌತ್ ಆಫ್ರಿಕಾ ಪರ ಕ್ವಿಂಟನ್ ಡಿ ಕಾಕ್ ಅದ್ಭುತ 124 ರನ್ ಗಳಿಸಿದರೆ, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ 52 ರನ್ ಬಾರಿಸಿದರು. ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಟೀಂ ಇಂಡಿಯಾ 49.2 ಓವರ್ ಗಳಲ್ಲಿ 283 ರನ್ ಗಳಿಗೆ ಆಲೌಟ್ ಆಯಿತು. ಭಾರತ ಪರ ವಿರಾಟ್ ಕೊಹ್ಲಿ 65 ರನ್ ಗಳಿಸಿದರೆ, ಶಿಖರ್ ಧವನ್ ಕೂಡ ಅರ್ಧಶತಕ ಬಾರಿಸಿದ್ದರು.
ದೀಪಕ್ ಚಹರ್ ಹೋರಾಟ ವ್ಯರ್ಥ: 288 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ಭಾರತ ಒಂದು ಹಂತದಲ್ಲಿ 6 ವಿಕೆಟ್ ಕಳೆದುಕೊಂಡು 210 ರನ್ ಗಳಿಸಿತ್ತು. ಈ ವೇಳೆ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ದೀಪಕ್ ಚಹರ್ ಟೀಮ್ ಇಂಡಿಯಾವನ್ನು ಗೆಲುವಿನತ್ತ ಕೊಂಡೊಯ್ದರು. ಜಸ್ಪ್ರೀತ್ ಬುಮ್ರಾ ಅವರೊಂದಿಗೆ 8ನೇ ವಿಕೆಟ್‌ಗೆ 55 ರನ್‌ಗಳ ಜೊತೆಯಾಟವಾಡಿದರು. ಆದರೆ 48ನೇ ಓವರ್‌ನಲ್ಲಿ ಲುಂಗಿ ಎನ್‌ಗಿಡಿ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಚಹರ್ ಔಟಾದರು. ಕೇವಲ 34 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 5 ಫೋರ್ನೊಂದಿಗೆ 54 ಬಾರಿಸಿ ದೀಪಕ್ ಚಹರ್ ಔಟಾಗುವುದರೊಂದಿಗೆ ಟೀಮ್ ಇಂಡಿಯಾ ಸೋಲಿನತ್ತ ಮುಖ ಮಾಡಿತು. ಅದರಂತೆ ಅಂತಿಮವಾಗಿ ಟೀಮ್ ಇಂಡಿಯಾ 283 ರನ್ಗಳಿಗೆ ಆಲೌಟಾಗುವ ಮೂಲಕ ಕೇವಲ 4 ರನ್ಗಳಿಂದ ಸೋಲನುಭವಿಸಿತು.
ಇದನ್ನೂ ಓದಿ: Ind vs SA: ಭರ್ಜರಿ ಶತಕ ಸಿಡಿಸಿ ಸಚಿನ್, ಸೆಹ್ವಾಗ್ ದಾಖಲೆ ಮುರಿದ ಕ್ವಿಂಟನ್ ಡಿಕಾಕ್
ಇದನ್ನೂ ಓದಿ: ICC Mens ODI Team: ಐಸಿಸಿ ಏಕದಿನ ತಂಡ ಪ್ರಕಟ: ಟೀಮ್ ಇಂಡಿಯಾದ ಆಟಗಾರರಿಗಿಲ್ಲ ಸ್ಥಾನ
ಇದನ್ನೂ ಓದಿ: IPL 2022: ಹೊಸ ಎರಡು ತಂಡಗಳು ಆಯ್ಕೆ ಮಾಡಿದ 6 ಆಟಗಾರರು ಇವರೇ..!
(India fined for slow over-rate in 3rd ODI)