IND vs PAK: ‘ಒತ್ತಡವನ್ನು ನಿಭಾಯಿಸುವ ಕಲೆ ಟೀಂ ಇಂಡಿಯಾಕ್ಕೆ ಗೊತ್ತಿಲ್ಲ’: ಮಾಜಿ ಪಾಕ್ ನಾಯಕ
IND vs PAK: ಕ್ಯಾಂಡಿಯಲ್ಲಿ ನಡೆಯಲ್ಲಿರುವ ಈಮೆಗಾ ಪಂದ್ಯಕ್ಕೆ ಬಾಬರ್ ಆಝಂ-ರೋಹಿತ್ ಶರ್ಮಾ ಸಿದ್ಧರಾಗಿದ್ದಾರೆ. ಆದರೆ, ಈ ಪಂದ್ಯಕ್ಕೂ ಮುನ್ನ ಪಾಕಿಸ್ತಾನದ ಮಾಜಿ ನಾಯಕ ಮೊಹಮ್ಮದ್ ಹಫೀಜ್, ರೋಹಿತ್ ಶರ್ಮಾ ತಂಡದ ಸಮಸ್ಯೆಗಳನ್ನು ಎತ್ತಿ ತೋರಿಸಿದ್ದಾರೆ. ಏಷ್ಯಾಕಪ್ ನಂತರ ಏಕದಿನ ವಿಶ್ವಕಪ್ ಇರುವುದರಿಂದ ಟೀಂ ಇಂಡಿಯಾ ಇದೊಂದು ಸಮಸ್ಯೆಯಿಂದ ಹೊರಬರಬೇಕು ಎಂದಿದ್ದಾರೆ.

ಏಷ್ಯಾಕಪ್ 2023 ರ (Asia Cup 2023) ಮೂರನೇ ಹೈವೋಲ್ಟೇಜ್ ಪಂದ್ಯ ಇಂದು ನಡೆಯಲಿದೆ. ಈ ಪಂದ್ಯಕ್ಕಾಗಿ ಇಡೀ ಪ್ರಪಂಚವೇ ಕಾದು ಕುಳಿತಿದೆ. 2019ರ ನಂತರ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ (India vs Pakistan) ಏಕದಿನ ಮಾದರಿಯಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಈಗಾಗಲೇ ಪಾಕಿಸ್ತಾನ ತಂಡ ತನ್ನ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದೆ. ಆದರೆ ಟೀಂ ಇಂಡಿಯಾ (Team India) ಮಾತ್ರ ಟಾಸ್ ಬಳಿಕವೇ ತಂಡ ಪ್ರಕಟಿಸುವ ನಿರ್ಧಾರಕ್ಕೆ ಬಂದಿದೆ. ಇನ್ನು ಕ್ಯಾಂಡಿಯಲ್ಲಿ ನಡೆಯಲ್ಲಿರುವ ಈಮೆಗಾ ಪಂದ್ಯಕ್ಕೆ ಬಾಬರ್ ಆಝಂ-ರೋಹಿತ್ ಶರ್ಮಾ ಸಿದ್ಧರಾಗಿದ್ದಾರೆ. ಆದರೆ, ಈ ಪಂದ್ಯಕ್ಕೂ ಮುನ್ನ ಪಾಕಿಸ್ತಾನದ ಮಾಜಿ ನಾಯಕ ಮೊಹಮ್ಮದ್ ಹಫೀಜ್ (Mohammad Hafeez), ರೋಹಿತ್ ಶರ್ಮಾ (Rohit Sharma) ತಂಡದ ಸಮಸ್ಯೆಗಳನ್ನು ಎತ್ತಿ ತೋರಿಸಿದ್ದಾರೆ. ಏಷ್ಯಾಕಪ್ ನಂತರ ಏಕದಿನ ವಿಶ್ವಕಪ್ ಇರುವುದರಿಂದ ಟೀಂ ಇಂಡಿಯಾ ಇದೊಂದು ಸಮಸ್ಯೆಯಿಂದ ಹೊರಬರಬೇಕು ಎಂದಿದ್ದಾರೆ.
ಒತ್ತಡವನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ
ಶ್ರೀಲಂಕಾದಲ್ಲಿ ನಡೆಯಲಿರುವ ಭಾರತ-ಪಾಕ್ ಪಂದ್ಯಕ್ಕೂ ಮೊದಲು ಮಾತನಾಡಿದ ಪಾಕ್ ತಂಡದ ಮಾಜಿ ಅಟಗಾರ ಮೊಹಮ್ಮದ್ ಹಫೀಜ್, ‘ನಾಕೌಟ್ ಪಂದ್ಯಗಳಲ್ಲಿನ ಒತ್ತಡವನ್ನು ನಿಭಾಯಿಸಲು ಟೀಂ ಇಂಡಿಯಾ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದಿದ್ದಾರೆ. ಭಾರತ ಖಂಡಿತವಾಗಿಯೂ ಉತ್ತಮ ತಂಡವಾಗಿದೆ. ಆದರೆ ಹಲವಾರು ಐಸಿಸಿ ಈವೆಂಟ್‌ಗಳು ಮತ್ತು ಇತರ ಪ್ರಮುಖ ಪಂದ್ಯಾವಳಿಗಳ ನಾಕೌಟ್ ಹಂತಗಳಲ್ಲಿ ಅವರು ಒತ್ತಡವನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ ಎಂಬುದನ್ನು ನಾವು ಹಿಂದೆ ನೋಡಿದ್ದೇವೆ. ದ್ವಿಪಕ್ಷೀಯ ಸರಣಿಗಳಲ್ಲಿ ಭಾರತ ಉತ್ತಮ ಪ್ರದರ್ಶನ ನೀಡುತ್ತಿದೆ. ಆದರೆ ಭಾರತ ತಂಡವಾಗಿ ನಾಕೌಟ್ ಹಂತಗಳಲ್ಲಿ ಒತ್ತಡವನ್ನು ನಿಭಾಯಿಸಲು ಒಂದು ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಬುಮ್ರಾ ಟೀಂ ಇಂಡಿಯಾದ ಎಕ್ಸ್ ಫ್ಯಾಕ್ಟರ್
ಆದಾಗ್ಯೂ, ಜಸ್ಪ್ರೀತ್ ಬುಮ್ರಾ ಭಾರತ ತಂಡಕ್ಕೆ ಮರಳುವುದು ದೊಡ್ಡ ಬದಲಾವಣೆಯನ್ನು ಮಾಡಬಹುದು ಎಂದು ಹಫೀಜ್ ಅಭಿಪ್ರಾಯಪಟ್ಟಿದ್ದು, ‘ಬುಮ್ರಾ ತಂಡಕ್ಕೆ ಮರಳಿದ್ದಾರೆ, ಈ ಬಾರಿ ಅದು ಇಡೀ ಪಂದ್ಯಾವಳಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನೋಡೋಣ. ಅವರ ಫಿಟ್ನೆಸ್ ಮೇಲೆ ನಾವು ನಿಗಾ ಇಡಬೇಕು. ಅವರು ಪೂರ್ಣ ಫಾರ್ಮ್ನಲ್ಲಿದ್ದರೆ ಭಾರತ ಖಂಡಿತವಾಗಿಯೂ ಯಾವುದೇ ಪರಿಸ್ಥಿತಿಯಿಂದ ಪುಟಿದೇಳಬಹುದು ಎಂದಿದ್ದಾರೆ.
ಭಾರತ-ಪಾಕ್ ಪಂದ್ಯದ ಕುರಿತು ಮಾತನಾಡಿದ ಹಫೀಜ್, ‘ಈ ಪಂದ್ಯಗಳಲ್ಲಿ ಪ್ರದರ್ಶನ ನೀಡಲು ದೊಡ್ಡ ಅಂಶವೆಂದರೆ ಮೂಲತಃ ನಿಮ್ಮ ಮಾನಸಿಕ ಶಕ್ತಿ. ಏಕೆಂದರೆ ಈ ಹೈವೋಲ್ಟೇಜ್ ಭಾರತ ಮತ್ತು ಪಾಕಿಸ್ತಾನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ನಿಮ್ಮ ಮಾನಸಿಕ ಸ್ಥಿತಿ ನಿಮಗೆ ಸಾಕಷ್ಟು ಸಹಾಯ ಮಾಡುತ್ತದೆ’ ಎಂದಿದ್ದಾರೆ.
ಈ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಏಷ್ಯಾಕಪ್ ನಂತರ ಭಾರತ ಮತ್ತು ಪಾಕಿಸ್ತಾನ ಮತ್ತೆ ಮುಖಾಮುಖಿಯಾಗಲಿವೆ. ರೋಹಿತ್ ಶರ್ಮಾ ನೇತೃತ್ವದ ಭಾರತವು ಐಸಿಸಿ ಮೆಗಾ ಈವೆಂಟ್‌ಗೆ ಮುಂಚಿತವಾಗಿ ಏಷ್ಯಾಕಪ್‌ನಲ್ಲಿ ನಾಕೌಟ್‌ಗೆ ತಲುಪುವುದರೊಂದಿಗೆ ಅಲ್ಲಿ ಉತ್ತಮ ಪ್ರದರ್ಶನ ನೀಡಬೇಕಿದೆ. ಇದು ವಿಶ್ವಕಪ್ನಲ್ಲಿ ಟೀಂ ಇಂಡಿಯಾದ ಆತ್ಮವಿಶ್ವಾಸವನ್ನು ಇನ್ನಷ್ಟು ಇಮ್ಮಡಿಗೊಳಿಸಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:32 am, Sat, 2 September 23
