2ನೇ ಏಕದಿನ ಪಂದ್ಯಕ್ಕೂ ಮಳೆ ಕಾಟ! 2-0 ಮುನ್ನಡೆ ಕನಸಿಗೆ ವರುಣನ ಅಡ್ಡಿ?

ಭಾರತವು ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 2-0 ಮುನ್ನಡೆ ಸಾಧಿಸುವ ಗುರಿ ಹೊಂದಿದೆ. ಆದರೆ ವೆಲ್ಲಿಂಗ್ಟನ್‌ನ ಸ್ಕೈ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ. ಹವಾಮಾನ ಮುನ್ಸೂಚನೆಯ ಪ್ರಕಾರ, ಪಂದ್ಯದ ಆರಂಭದಲ್ಲೇ ಮಳೆ ಸುರಿಯುವ ಸಂಭವವಿದ್ದು, ಓವರ್‌ಗಳ ಕಡಿತವಾಗಬಹುದು. ಅಭಿಮಾನಿಗಳಿಗೆ ಪೂರ್ಣ ಪಂದ್ಯ ವೀಕ್ಷಿಸಲು ಸಾಧ್ಯವಾಗುತ್ತದೆಯೇ ಎಂಬ ಕುತೂಹಲ ಮೂಡಿದೆ.

2ನೇ ಏಕದಿನ ಪಂದ್ಯಕ್ಕೂ ಮಳೆ ಕಾಟ! 2-0 ಮುನ್ನಡೆ ಕನಸಿಗೆ ವರುಣನ ಅಡ್ಡಿ?
ಭಾರತ Vs ನ್ಯೂಜಿಲೆಂಡ್

Updated on: Nov 06, 2026 | 8:50 PM

ಆಕ್ಲೆಂಡ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಟೀಂ ಇಂಡಿಯಾ, ಇದೀಗ ಸರಣಿಯಲ್ಲಿ 2-0 ಮುನ್ನಡೆ ಸಾಧಿಸುವ ಗುರಿ ಹೊಂದಿದೆ. ಈ ಗುರಿ ತಲುಪಬೇಕಾದರೆ ವೆಲ್ಲಿಂಗ್ಟನ್‌ನಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯವನ್ನು ಗೆಲ್ಲಲೇಬೇಕು. ಆದರೆ ಮೊದಲ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದಂತೆ, ಎರಡನೇ ಪಂದ್ಯಕ್ಕೂ ವರುಣನ ಕಾಟ ಎದುರಾಗುವ ಸಾಧ್ಯತೆ ಇದೆ. ವೆಲ್ಲಿಂಗ್ಟನ್‌ನ ಹವಾಮಾನ ಮುನ್ಸೂಚನೆಯೂ ಇದೇ ಸುಳಿವು ನೀಡಿದೆ. ಹಾಗಾದರೆ, ಎರಡನೇ ಪಂದ್ಯ ಸಂಪೂರ್ಣವಾಗಿ ಮಳೆಗೆ ಆಹುತಿಯಾಗುತ್ತಾ? ಅಥವಾ ಅಭಿಮಾನಿಗಳಿಗೆ ಸ್ವಲ್ಪವಾದರೂ ಕ್ರಿಕೆಟ್ ಆಟವನ್ನು ನೋಡುವ ಅವಕಾಶ ಸಿಗುತ್ತಾ?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯ ನವೆಂಬರ್ 7ರ ಶನಿವಾರ ವೆಲ್ಲಿಂಗ್ಟನ್‌ನ ಸ್ಕೈ ಸ್ಟೇಡಿಯಂನಲ್ಲಿ ನಡೆಯಲಿದೆ. ಇತ್ತೀಚೆಗೆ ಇದೇ ಮೈದಾನದಲ್ಲಿ ಉಭಯ ತಂಡಗಳು ಟಿ20 ಸರಣಿಯ ಪಂದ್ಯದಲ್ಲೂ ಮುಖಾಮುಖಿಯಾಗಿದ್ದವು. ಆ ಪಂದ್ಯಕ್ಕೆ ಮಳೆ ಅಡ್ಡಿಯಾಗಿರಲಿಲ್ಲ. ಆದರೆ ಈ ಬಾರಿ ಪರಿಸ್ಥಿತಿ ಬೇರೆಯೇ ಇರುವ ಸಾಧ್ಯತೆಯಿದೆ. ಹವಾಮಾನ ಮುನ್ಸೂಚನೆ ನೀಡುವ ಅಕ್ಯೂವೆದರ್ ವೆಬ್‌ಸೈಟ್ ಪ್ರಕಾರ, ಸ್ಥಳೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿರುವ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ಪಂದ್ಯದ ಆರಂಭದ ಸಮಯದಲ್ಲೇ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

Loading...

ಮಳೆಯಿಂದ ಪಂದ್ಯಕ್ಕೆ ಅಡ್ಡಿಯಾಗುತ್ತಾ?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯ ಸ್ಥಳೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. ಆದರೆ ಇದೇ ಸಮಯದಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಮಧ್ಯಾಹ್ನ 3ರಿಂದ 4 ಗಂಟೆಯವರೆಗೆ ಮಳೆಯಾಗುವ ಸಾಧ್ಯತೆ ಶೇ.60ರಷ್ಟಿದೆ ಎಂದು ಹವಾಮಾನ ವರದಿ ತಿಳಿಸಿದೆ. ಒಂದು ವೇಳೆ ಈ ಮುನ್ಸೂಚನೆ ನಿಜವಾದರೆ, ಪಂದ್ಯ ನಿಗದಿತ ಸಮಯಕ್ಕೆ ಆರಂಭವಾಗುವುದು ಅನುಮಾನ. ಅಷ್ಟೇ ಅಲ್ಲ, ಮಳೆಯಿಂದಾಗಿ ಪಂದ್ಯದ ಓವರ್‌ಗಳ ಸಂಖ್ಯೆಯನ್ನೂ ಕಡಿತಗೊಳಿಸಬೇಕಾದ ಅನಿವಾರ್ಯತೆ ಎದುರಾಗಬಹುದು.

ಆದರೆ ಅಭಿಮಾನಿಗಳಿಗೆ ಸ್ವಲ್ಪ ಸಮಾಧಾನಕರ ಸಂಗತಿಯೂ ಇದೆ. ಮಧ್ಯಾಹ್ನ 4 ಗಂಟೆಯ ನಂತರ ಮುಂದಿನ ಐದು ಗಂಟೆಗಳ ಕಾಲ ಮಳೆಯಾಗುವ ಸಾಧ್ಯತೆ ಇಲ್ಲ ಎಂದು ಮುನ್ಸೂಚನೆ ನೀಡಲಾಗಿದೆ. ಹೀಗಾಗಿ ಮಳೆ ನಿಂತರೆ ಪಂದ್ಯವನ್ನು ಮುಂದುವರಿಸಲು ಅವಕಾಶ ಸಿಗಬಹುದು. ಆದರೆ ರಾತ್ರಿ 10 ಗಂಟೆಯ ನಂತರ ಮತ್ತೆ ನಿರಂತರ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಪಂದ್ಯದ ಫಲಿತಾಂಶ ನಿರ್ಧಾರವಾಗುವ ವೇಳೆಗೆ ಮಳೆ ಮತ್ತೊಮ್ಮೆ ಅಡ್ಡಿಯಾಗುವ ಆತಂಕವಿದೆ. ಒಟ್ಟಿನಲ್ಲಿ, ಎರಡನೇ ಏಕದಿನ ಪಂದ್ಯಕ್ಕೂ ಮಳೆ ಅಡ್ಡಿಯಾಗುವ ಲಕ್ಷಣಗಳು ಕಾಣಿಸುತ್ತಿದ್ದು, ಅಭಿಮಾನಿಗಳು ಪೂರ್ಣ ಪ್ರಮಾಣದ ಪಂದ್ಯ ವೀಕ್ಷಿಸಲು ಸಾಧ್ಯವಾಗುತ್ತದೆಯೇ ಎಂಬ ಕುತೂಹಲ ಮೂಡಿದೆ.

ಬೆಳಗ್ಗೆ 7.30ಕ್ಕೆ ಭಾರತ-ನ್ಯೂಜಿಲೆಂಡ್ ಕದನ; ಲೈವ್ ಪಂದ್ಯ ವೀಕ್ಷಿಸುವುದು ಹೇಗೆ?

ವೆಲ್ಲಿಂಗ್ಟನ್‌ನಲ್ಲಿ ಭಾರತದ ದಾಖಲೆ ಹೇಗಿದೆ?

ವೆಲ್ಲಿಂಗ್ಟನ್‌ನ ಸ್ಕೈ ಸ್ಟೇಡಿಯಂನಲ್ಲಿ ಟೀಂ ಇಂಡಿಯಾದ ಹಿಂದಿನ ದಾಖಲೆ ಉತ್ತಮವಾಗಿದೆ. ಈ ಮೈದಾನದಲ್ಲಿ ಭಾರತ ತಂಡ ಈವರೆಗೆ ನಾಲ್ಕು ಪಂದ್ಯಗಳನ್ನು ಆಡಿದ್ದು, ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯದಲ್ಲಿ ಸೋಲು ಕಂಡಿದ್ದರೆ, ಮತ್ತೊಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಇದೀಗ ಭಾರತ ತಂಡ ಇದೇ ಮೈದಾನದಲ್ಲಿ ಐದನೇ ಏಕದಿನ ಪಂದ್ಯವನ್ನಾಡಲು ಸಜ್ಜಾಗಿದೆ. ಈ ಪಂದ್ಯ ಗೆದ್ದು ತನ್ನ ದಾಖಲೆಯನ್ನು ಮತ್ತಷ್ಟು ಉತ್ತಮಪಡಿಸಿಕೊಳ್ಳುತ್ತದೆಯೇ ಅಥವಾ ಮತ್ತೊಮ್ಮೆ ಮಳೆಯ ಕಾಟಕ್ಕೆ ಸಿಲುಕುತ್ತದೆಯೇ ಎಂಬುದು ನವೆಂಬರ್ 7ರಂದು ಗೊತ್ತಾಗಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us