India vs New Zealand: ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಟಿ20ಗೆ ಭಾರತದ ಪ್ಲೇಯಿಂಗ್ XI: ಯಾರಿಗೆಲ್ಲ ಅವಕಾಶ?
India Playing XI vs New Zealand 2nd T20I: ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಟಿ20 ಪಂದ್ಯಕ್ಕೆ ಭಾರತದ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ. ತಂಡದಲ್ಲಿ ಯಾರಿಗೆಲ್ಲ ಅವಕಾಶ?, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವೆ ಇಂದು ಮೌಂಟ್ ಮೌಂಗನು (Mount Maunganui) ಬೇ ಓವಲ್ ಮೈದಾನದಲ್ಲಿ ಎರಡನೇ ಟಿ20 ಪಂದ್ಯ ನಡೆಯಲಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿಯುತ್ತಿದ್ದು ಕಿವೀಸ್ ನಾಡಿನಲ್ಲಿ ಶುಭಾರಂಭ ಮಾಡುವ ತವಕದಲ್ಲಿದೆ. ವೆಲ್ಲಿಂಗ್ಟನ್ನಲ್ಲಿ ನಡೆಯಬೇಕಿದ್ದ ಮೊದಲ ಟಿ20 ಪಂದ್ಯ ಮಳೆಗೆ ಆಹುತಿಯಾದ ಕಾರಣ ಉಳಿದಿರುವ ಎರಡು ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಉಭಯ ತಂಡಗಳಲ್ಲೂ ಕೆಲ ಸ್ಟಾರ್ ಆಟಗಾರರು ಇಲ್ಲ ಎಂಬುದು ಗಮನಾರ್ಹ. ಭಾರತ ಪರ ರೋಹಿತ್ (Rohit Sharma), ಕೊಹ್ಲಿ, ಕಾರ್ತಿಕ್ ಹಾಗೂ ರಾಹುಲ್ಗೆ ವಿಶ್ರಾಂತಿ ನೀಡಿದ್ದರೆ ನ್ಯೂಜಿಲೆಂಡ್ ಪರ ಮಾರ್ಟಿನ್ ಗಪ್ಟಿಲ್, ಟಿಮ್ ಸೌಥೀ ಆಯ್ಕೆಯಾಗಿಲ್ಲ. ಹಾಗಾದರೆ ಇಂದಿನ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ ಇಲೆವೆನ್ ಹೇಗಿರಬಹುದು?.
ಶುಭ್ಮನ್ ಗಿಲ್, ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ಭಾರತದ ಟಿ20 ವಿಶ್ವಕಪ್ ತಂಡದಲ್ಲಿ ಇರಲಿಲ್ಲ. ಆದರೆ, ಈ ಸರಣಿಯಲ್ಲಿ ಇವರೇ ಟಾಪ್ ಆರ್ಡರ್ನಲ್ಲಿ ಮೊದಲ ಆಯ್ಕೆಯಾಗಿದ್ದಾರೆ. ಲೆಫ್ಟ್–ರೈಟ್ ಕಾಂಬಿನೇಶನ್ ಆಗಿರುವ ಗಿಲ್–ಕಿಶನ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಮೂರನೇ ಕ್ರಮಾಂಕದಲ್ಲಿ ಸ್ಯಾಮ್ಸನ್ ಆಡಲಿದ್ದಾರೆ. ನಾಲ್ಕನೇ ಕ್ರಮಾಂಕವನ್ನು ಸೂರ್ಯಕುಮಾರ್ ಯಾದವ್ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದರೆ, ರಿಷಭ್ ಪಂತ್ 5ನೇ ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 6ನೇ ಸ್ಥಾನದಲ್ಲಿ ಆಡಲಿದ್ದಾರೆ.
ಆಲ್ರೌಂಡರ್ ಜಾಗಕ್ಕೆ ವಾಷಿಂಗ್ಟನ್ ಸುಂದರ್ ಮತ್ತು ದೀಪಕ್ ಹೂಡ ಆಯ್ಕೆ ಕೂಡ ಇದೆ. ಇವರಲ್ಲಿ ಯಾರಿಗೆ ಸ್ಥಾನ ಎಂಬುದು ನೋಡಬೇಕಿದೆ. ಭುವನೇಶ್ವರ್ ಕುಮಾರ್ ಮತ್ತು ಅರ್ಷದೀಪ್ ಸಿಂಗ್ ಹೊಸ ಚೆಂಡಿನೊಂದಿಗೆ ದಾಳಿ ಆರಂಭಿಸುವ ನಿರೀಕ್ಷೆಯಿದೆ. ಉಮ್ರಾನ್ ಮಲಿಕ್, ಹರ್ಷಲ್ ಪಟೇಲ್ ಮತ್ತು ಮೊಹಮ್ಮದ್ ಸಿರಾಜ್ ಪೈಕಿ ಮಲಿಕ್ಗೆ ಅವಕಾಶ ಸಿಗುವ ಸಂಭವವಿದೆ. ಟಿ20 ವಿಶ್ವಕಪ್‌ನಲ್ಲಿ ಒಂದೂ ಪಂದ್ಯವನ್ನು ಆಡದ ಯುಜ್ವೇಂದ್ರ ಚಹಲ್ ಕೂಡ ಇಂದು ಕಣಕ್ಕಿಳಿಯಲಿದ್ದಾರೆ.
ನ್ಯೂಜಿಲೆಂಡ್ ತಂಡ ಸ್ಟಾರ್ ಬ್ಯಾಟರ್ ಮಾರ್ಟಿನ್ ಗಪ್ಟಿಲ್ ಮತ್ತು ಸ್ಟಾರ್ ಬೌಲರ್ ಟ್ರೆಂಟ್ ಬೌಲ್ಟ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿದೆ. ಆದರೂ ಬಲಿಷ್ಠವಾಗಿದೆ. ಕೇನ್ ವಿಲಿಯಮ್ಸನ್ ನಾಯಕತ್ವ ತಂಡದಕ್ಕಿದ್ದು, ಫಿನ್ ಅಲೆನ್, ಡೆವೊನ್ ಕಾನ್ವೇ, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್ರಂತಹ ಅಪಾಯಕಾರಿ ಬ್ಯಾಟರ್ಗಳಿದ್ದಾರೆ. ಟಿಮ್ ಸೌಥೀ, ಮಿಚೆಲ್ ಸ್ಯಾಂಟನರ್, ಆ್ಯಡಂ ಮಿಲ್ನೆ, ಲಾಕಿ ಫರ್ಗುಸನ್ರಂತಹ ಘಾತಕ ಬೌಲರ್ ಕೂಡ ಇದ್ದಾರೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟಿ20 ಪಂದ್ಯ ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿದೆ. ಬೆಳಗ್ಗೆ 11.30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ನೇರ ಪ್ರಸಾರವು ಡಿಡಿ ಸ್ಪೋರ್ಟ್ಸ್‌ನಲ್ಲಿ ಮಾತ್ರ ಇರುತ್ತದೆ. ಅಮೆಜಾನ್ ಪ್ರೈಮ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಕಾಣಲಿದೆ.
ಎರಡೂ ತಂಡಗಳ ಸಂಭಾವ್ಯ ಪ್ಲೇಯಿಂಗ್ XI:
ಭಾರತ: ಶುಭ್ಮನ್ ಗಿಲ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ದೀಪಕ್ ಹೂಡಾ/ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್.
ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್ (ನಾಯಕ), ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಇಶ್ ಸೋಧಿ, ಆಡಮ್ ಮಿಲ್ನೆ, ಲಾಕಿ ಫರ್ಗುಸನ್.
Published On - 10:12 am, Sun, 20 November 22